ಕಲಬುರಗಿ: ಹಳೆ ಜೇವರ್ಗಿ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಅಗೆದಿದ್ದ ಗುಂಡಿಯಲ್ಲಿ ನಿಂತಿದ್ದ ಮಳೆ ನೀರಲ್ಲಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಎಂಎಸ್‌ಕೆ ಮಿಲ್ ನಿವಾಸಿ ಅಸ್ಲಾಂ (42) ಮೃತರು. ಒಳಚರಂಡಿ (ಯುಜಿಡಿ) ಕಾಮಗಾರಿಗಾಗಿ ಪಿಡಬ್ಲ್ಯುಡಿ ಇಲಾಖೆಯು ಹಳೆ ಜೇವರ್ಗಿ ರಸ್ತೆಯ ಬದಿಯಲ್ಲಿ ಆಳವಾದ ಗುಂಡಿ ಅಗೆಸಿತ್ತು. ಸೋಮವಾರ ರಾತ್ರಿ ಜೋರು ಮಳೆ ಸುರಿದು, ಗುಂಡಿಯ ತುಂಬ ನೀರು ನಿಂತಿತ್ತು. ರಾತ್ರಿಯ ವೇಳೆ ಅಸ್ಲಾಂ ಅವರು ಕುಡಿದ ಅಮಲಿನಲ್ಲಿ ಗುಂಡಿಯಲ್ಲಿ ಬಿದ್ದು ಮೃತಪಟ್ಟಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆಯಲ್ಲಿ ಸುಮಾರು 6 ಅಡಿ ತಗ್ಗು ತೋಡಲಾಗಿದ್ದು, ಗುಂಡಿಯ ಬದಿಯಲ್ಲಿ ಬ್ಯಾರಿಕೇಡ್‌ಗಳ ಸಹ ಹಾಕಿರಲಿಲ್ಲ. ಮಳೆಯ ನೀರು ರಸ್ತೆ, ತಗ್ಗು ಗುಂಡಿ ಆವರಿಸಿ ನಿಂತಿತ್ತು. ತಗ್ಗಿನ ಬಗ್ಗೆ ಅರಿವಿರದೆ ಗುಂಡಿಯಲ್ಲಿ ಬಿದ್ದ ಅಸ್ಲಾಂ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಸ್ಥಳಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ, ಮೇಯರ್ ಯಲ್ಲಪ್ಪ ನಾಯ್ಕೋಡಿ, ಪೊಲೀಸರು ಭೇಟಿ ನೀಡಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.