ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಹರಸೂರಿನಲ್ಲಿ ಮನೆಮಾಡಿತು ಬೆಳಕಿನ ಹಬ್ಬದ ಸಡಗರ

ದೀಪಾವಳಿಗೆ ವಿಶಿಷ್ಟ ಸೋಗಿನ ಕುಣಿತ
Last Updated 18 ನವೆಂಬರ್ 2020, 6:08 IST
ಅಕ್ಷರ ಗಾತ್ರ
ADVERTISEMENT
"ಕಲಬುರ್ಗಿ ತಾಲ್ಲೂಕಿನ ಹರಸೂರಿನಲ್ಲಿ ಸೋಮವಾರ ದಿಪಾವಳಿ ಅಂಗವಾಗಿ ವಿಶಿಷ್ಟ ಕುಣಿತ"

ಕಲಬುರ್ಗಿ: ತಾಲ್ಲೂಕಿನ ಐತಿಹಾಸಿಕ ಹರಸೂರು ಗ್ರಾಮದಲ್ಲಿ ಸೋಮವಾರ ದೀಪಾವಳಿ ಸಡಗರ ಮನೆ ಮಾಡಿತು. ಬಲಿಪಾಡ್ಯಮಿ ವಿಶೇಷವಾಗಿ ಹಳ್ಳಿಯ ಯುವಕರು ವೈವಿಧ್ಯಮಯ ಸೋಗು ಹಾಕಿ ಕುಣಿದು ಕುಪ್ಪಳಿಸಿದರು.

ಹರಸೂರು ಜೈಭೀಮ ತರುಣ ಸಂಘದ ನೇತೃತ್ವದಲ್ಲಿ ಆಯೋಜಿಸಿದ್ದ ಈ ಸಾಂಪ್ರದಾಯಿಕ ಕುಣಿತದಲ್ಲಿ ಯುವಕರು ರಾಮ, ಕೃಷ್ಣ, ರಾವಣ, ಹನುಮಂತ, ಸೀತೆ, ಮಹೀಷಿ, ಲಕ್ಷ್ಮಿ, ಸರಸ್ವತಿ, ಶಿವ, ಪಾರ್ವತಿ, ಜೋಕುಮಾರಸ್ವಾಮಿ... ಹೀಗೆ ವೈವಿಧ್ಯಮಯ ಪೌರಾಣಿಕ ವೇಷ ಧರಿಸಿಕೊಂಡು ಕುಣಿದರು.

ದೇವಸ್ಥಾನದ ಅಂಗಳದ ಮುಂದೆ ಸುತ್ತಲೂ ಹಾಕಿದ ವಿಶಾಲ ರಂಗವಲ್ಲಿ ಮೇಲೆ ಕೋಲಾಟವಾಡಿದರು.

ತರುಣ ಸಂಘದ ಹಿರಿಯ ಮುಖಂಡರು ಡೋಲು ಬಾರಿಸುತ್ತ, ಜನಪದ ಗೀತೆಗಳನ್ನು ಹಾಡಿದರು. ಸಿಳ್ಳೆ- ಕೇಕೆ ಹಾಕುತ್ತ ವೇಷಧಾರಿ ಯುವಕರನ್ನು ಹುರುದುಂಬಿಸಿದರು.

‘ಬಂದೇನೋ ಗಣಪ ನಿನಗ ವಂದಿಸಾಕ...’
‘ಹಳ್ಳಿ ಹೆಣ್ಣೋ ಬಾಳಿನ ಕಣ್ಣೋ ಹೋಯ್ ಹೋಯ್ ಹೋಯ್...’ ಮುಂತಾದ ಜನಪದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ಅದಕ್ಕೆ ತಕ್ಕಂತೆ ಕಲಾವಿದರ ಇನ್ನೊಂದು ತಂಡ ಡೋಲು, ಮೃದಂಗ, ತಾಳಗನ್ನು ಬಾರಿಸಿತು. ಇತ್ತ ತಾಳಕ್ಕೆ ತಕ್ಕಂತೆ ಕೋಲು ಬಡಿಯುತ್ತ ಕಣವನ್ನು ಸುತ್ತುತ್ತ ಕುಣಿಯುವ ವೇಷಧಾರಿಗಳು. ಈ ಸಂಭ್ರಮ ನೋಡಲು ಪುಟಾಣಿಗಳಾದಿಯಾಗಿ ಮಹಿಳೆಯರು, ಹಿರಿಯರೂ ಸೇರಿದ್ದರು.

ಕಲಬುರ್ಗಿ ತಾಲ್ಲೂಕಿನ ಹರಸೂರಿನಲ್ಲಿ ಸೋಮವಾರ ದಿಪಾವಳಿ ಅಂಗವಾಗಿ ವಿಶಿಷ್ಟ ಕುಣಿತ

ಗರಿಗರಿ ಎನ್ನುವಂಥ ಬಣ್ಣಬಣ್ಣದ ಸೀರೆಗಳನ್ನು ಉಟ್ಟುಕೊಂಡು, ಉದ್ದುದ್ದ ಜಡೆ ಕಟ್ಟಿಕೊಂಡು, ಬೈತಲೆ ಬೊಟ್ಟು, ಕುಂಕುಮ ಧರಿಸಿ, ಬೆಂಡೋಲೆ, ಬಳೆ, ಸರಗಿಸರ, ಬೋರಮಾಳ, ನೆಕ್ಲೆಸ್, ಕಾಲ್ಗೆಜ್ಜೆ, ತೋಳ್ಭಂದಿ, ಸೊಂಟಪಟ್ಟಿ... ಅಬ್ಬಾ! ಒಂದೇ ಎರಡೇ... ಒಬ್ಬ ಹೆಣ್ಣು ಮಗಳು ಮಾಡಿಕೊಳ್ಳುವ ಎಲ್ಲ ಅಲಂಕಾರವನ್ನೂ ಕ್ರಮಬದ್ಧವಾಗಿ ಮಾಡಿಕೊಂಡು ಗಮನ ಸೆಳೆದರು.

ಹಳ್ಳಿಯ ಹುಡುಗರೇ ಮೇಕಪ್ ಮ್ಯಾನ್ಗಳು, ವ್ಯರ್ಥ ರಟ್ಟು ಪ್ಯಾರಿಸ್ ಪ್ಲಾಸ್ಟರಿನಿಂದ ಮಾಡಿದ ಕಿರೀಟ, ಬಟ್ಟೆ ಸುತ್ತಿ ಮಾಡಿದ ಹನುಮಂತನ ಬಾಲ, ಗದೆ, ರಟ್ಟಿನಿಂದ ಮಾಡಿದ ರಾವಣನ ಹತ್ತು ತಲೆಗಳು, ವ್ಯರ್ಥ ಸಿ.ಡಿ.ಗೊಂದು ಬೇರಿಂಗ್ ಅಳವಡಿಸಿ ಸದಾ ತಿರುಗುವಂತೆ ಮಾಡಿದ ವಿಷ್ಣುವಿನ ಚಕ್ರ... ವಾರೆ ವಾಹ್... ಎಲ್ಲವೂ ಸಂಪೂರ್ಣ ಹಳ್ಳಿಪ್ರಭೆ. ಒಂದೇ ಒಂದು ವಸ್ತುವನ್ನು ಹೊರಗಿನಿಂದ ಕೊಳ್ಳದೇ ತಮ್ಮಲ್ಲೇ ಇರುವ ವಸ್ತುಗಳನ್ನು ಬಳಸಿ ಶೃಂಗಾರ ಪ್ರಧಾನವಾಗಿ ಮೆರೆದಿದ್ದು ಮಾತ್ರ ಮನಸೋಲುವಂತೆ ಮಾಡಿತು.

ಲಕ್ಷ್ಮಿ ವೇಷ ಧರಿಸಿ ಕುಣಿಯುತ್ತಿದ್ದ ಅಳಿಯನೊಬ್ಬನಿಗೆ ಅವರ ಸೋದರತ್ತೆ ಚಿನ್ನದ ತಾಳಿ, ಬೋರಮಾಳ ಸರ, ನೆಕ್ಲೆಸ್ ಹಾಕಿ ಸಂಭ್ರಮಿಸಿದರು.

ಮನೆಯ ಹೆಣ್ಣು ಮಕ್ಕಳು ಸ್ವತಃ ಆಭರಣಗಳನ್ನು ಬಿಚ್ಚಿ ಕುಣಿಯುವ ಹುಡುಗರಿಗೆ ಹಾಕಿ ಖುಷಿಪಟ್ಟರು.

‘ಹರಸೂರು ಗ್ರಾಮದಲ್ಲಿ ಪ್ರತಿ ದೀಪಾವಳಿಗೂ ಈ ರೀತಿ ಪೌರಾಣಿಕ, ಐತಿಹಾಸಿಕ ಪಾತ್ರಗಳ ವೇಷ ಧರಿಸಿ ಕುಣಿಯುವುದು ವಾಡಿಕೆ. ನಾವು ಚಿಕ್ಕವರಾಗಿದ್ದಾಗಲೂ ಈ ರೀತಿ ವೇಷ ಧರಿಸಿ ಕುಣಿಯುತ್ತಿದ್ದೇವು. ಈಗ ಹುಡುಗರಿಗೆ ಪ್ರೋತ್ಸಾಹ ಕೊಡುತ್ತಿದ್ದೇವೆ. ಯಾವಾಗಿನಿಂದ ಈ ಸಂಪ್ರದಾಯ ಆರಂಭವಾಗಿದೆ ಎಂಬುದು ಗೊತ್ತಿಲ್ಲ. ನಾವು 50 ವಾರ್ಷಗಳಿಂದ ಹಿರಿಯರ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದ್ದೇವೆ’ಎಂದು ‘ಪ್ರಜಾವಾಣಿ’ಗೆಮಾಹಿತಿ ನೀಡಿದರು 70 ವರ್ಷದ ಕರಿಬಸಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT