ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಟೆ ಖರೀದಿ ಬಲು ಜೋರು

ದೀಪಾವಳಿ, ಮದುವೆಯ ಸೀಸನ್‌ ಆರಂಭ: ಮಾರುಕಟ್ಟೆಗೆ ಗ್ರಾಹಕರ ಲಗ್ಗೆ
ಅಕ್ಷರ ಗಾತ್ರ

ಕಲಬುರ್ಗಿ: ದೀಪಾವಳಿ ಹಬ್ಬ ಹೊಸ್ತಿಲಲ್ಲಿದೆ. ಎಲ್ಲೆಡೆ ಹಬ್ಬಕ್ಕೆ ಪೂರಕವಾಗಿ ಅಗತ್ಯಕ್ಕೆ ತಕ್ಕಂತೆ ಹೊಸ ಬಟ್ಟೆ, ಚಿನ್ನಾಭರಣ ಹಾಗೂ ಹೊಸ ವಸ್ತುಗಳ ಖರೀದಿಯ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಇಲ್ಲಿನ ಸೂಪರ್‌ ಮಾರ್ಕೆಟ್‌ ಪ್ರದೇಶದಲ್ಲಿನ ದೇವಾನಂದ್‌ ಸಿಲ್ಕ್ಷ್‌, ಲೆನಿನ್‌ ಶಾಪ್‌, ಶ್ರದ್ಧಾ ಸ್ಯಾರಿ ಸೆಂಟರ್‌, ಓಲ್ಗಾ ಡ್ರೆಸಸ್‌, ಲಕ್ಷ್ಮೀ ಸ್ಯಾರಿ ಸೆಂಟರ್‌, ಕಾಮಾಕ್ಷಿ ಸ್ಯಾರಿ ಸೆಂಟರ್‌, ಮೀರಾ ಸಿಲ್ಕ್‌ ಹೌಸ್‌, ಕಂಚಿ ಸಿಲ್ಕ್‌, ಶ್ರೀ ದರ್ಬಿ ಕಲೆಕ್ಷನ್ಸ್‌, ರೇಣುಕಾ ಡ್ರೆಸಸ್‌, ಶುಭಂ ಫ್ಯಾಷನ್‌ ಸೇರಿದಂತೆ ಹಲವು ಬಟ್ಟೆ ಅಂಗಡಿ, ಏಷಿಯನ್‌ ಮಾಲ್, ಆರ್ಚಿಡ್ ಮಾಲ್‌, ಶ್ರದ್ಧಾ ಮಾಲ್‌ ಹಾಗೂ ಸಿಟಿ ಸೆಂಟರ್‌ ಮಾಲ್‌ಗಳಲ್ಲಿನ ಎಲ್ಲ ಬಟ್ಟೆ ಅಂಗಡಿಗಳಲ್ಲಿಯೂ ಬಟ್ಟೆ ಖರೀದಿಗಾಗಿ ಈಗಾಗಲೇ ಮಹಿಳೆಯರು, ಪುರುಷರು ಮಕ್ಕಳ ಸಮೇತ ದಾಂಗುಡಿ ಇಡುತ್ತಿದ್ದಾರೆ.

ಅಂಗಡಿಗಳ ಮಾಲೀಕರು ಸಹ ಬಣ್ಣ ಬಣ್ಣದ ಆಕರ್ಷಕ ವಿನ್ಯಾಸದ ಬಟ್ಟೆಗಳ ಪ್ರದರ್ಶನ ಕೂಡ ಏರ್ಪಡಿಸಿದ್ದಾರೆ. ಸಿದ್ಧ ಉಡುಪುಗಳ ಮಾರಾಟದ ಕೆಲ ಅಂಗಡಿಗಳಲ್ಲಿ ಬಟ್ಟೆಗಳ ಟ್ರಯಲ್‌ ನೋಡುವುದಕ್ಕಾಗಿಯೇ ಬೇರೆಯಾದ ಬಟ್ಟೆಗಳನ್ನೇ ಇಟ್ಟಿರುತ್ತಾರೆ.

ಕೆಲವರು ದೀಪಾವಳಿ ಹಬ್ಬದ ಜೊತೆಗೆ ಮಕ್ಕಳ ಮದುವೆಯನ್ನೂ ಹಮ್ಮಿಕೊಂಡಿರುವುದರಿಂದ ಕೈಯಲ್ಲಿ ಹೆಚ್ಚು ಹಣವಿಲ್ಲದಿದ್ದರೂ ಅನಿವಾರ್ಯವಾಗಿ ಅಗತ್ಯಕ್ಕೆ ಅನುಗುಣವಾಗಿ ಜವಳಿ ಖರೀದಿಸುತ್ತಿದ್ದಾರೆ.

ಕೆಲ ಅಂಗಡಿಗಳ ಮಾಲೀಕರು ಬ್ರಾಂಡೆಡ್‌ ಕಂಪನಿಗಳ ಬಟ್ಟೆಯ ಖರೀದಿಯ ಮೇಲೆ ರಿಯಾಯ್ತಿಯನ್ನೂ ಘೋಷಿಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆಗಳನ್ನು ತೊಡಲೇಬೇಕು ಎಂದು ಎಲ್ಲರೂ ಹೊಸ ಬಟ್ಟೆಗಳನ್ನು ಖರೀದಿಸುತ್ತಿದ್ದಾರೆ.

ಕೈಯಲ್ಲಿ ಹೆಚ್ಚು ಹಣವಿಲ್ಲ:

‘ಕೊರೊನಾದಿಂದಾಗಿ ದುಡಿಮೆ ಇಲ್ಲವಾಗಿದೆ. ಕೈಯಲ್ಲಿ ಹೆಚ್ಚು ಹಣವೂ ಇಲ್ಲ. ಹಬ್ಬ ಬಂದಿದೆ. ಮಕ್ಕಳ ಮದುವೆಯನ್ನೂ ಹಮ್ಮಿಕೊಂಡಿದ್ದೇವೆ. ಆದರೂ ಅನಿವಾರ್ಯವಾಗಿ ಅಗತ್ಯಕ್ಕೆ ತಕ್ಕಂತೆ ಬಟ್ಟೆಗಳನ್ನು ಖರೀದಿಸುತ್ತಿದ್ದೇವೆ‘ ಎಂದು ಸೂಪರ್‌ ಮಾರ್ಕೆಟ್‌ನ ಅಂಗಡಿಯೊಂದರಲ್ಲಿ ಬಟ್ಟೆ ಖರೀದಿಸುತ್ತಿದ್ದ ಗೃಹಿಣಿ ಮಹಾದೇವಿ ಹೇಳಿದರು.

‘ಕಳೆದ ಏಪ್ರಿಲ್‌ನಲ್ಲಿ ಮಕ್ಕಳ ಮದುವೆ ಕಾರ್ಯಕ್ರಮ ನಿಗದಿ ಮಾಡಿದ್ದೇವು. ಆದರೆ, ಕೊರೊನಾ ಭಯದಿಂದಾಗಿ ಮದುವೆ ಕಾರ್ಯಕ್ರಮ ನಿಲ್ಲಿಸಿದ್ದೇವು. ನವೆಂಬರ್‌ ಕೊನೆಯಲ್ಲಿ ಮದುವೆ ಕಾರ್ಯ ಹಮ್ಮಿಕೊಂಡಿದ್ದೇವೆ. ಹೀಗಾಗಿ ಬಟ್ಟೆ ಖರೀದಿಸುತ್ತಿದ್ದೇವೆ‘ ಎಂದು ಬಟ್ಟೆ ಖರೀದಿಸುತ್ತಿದ್ದ ಗೃಹಿಣಿ ಕ್ರಾಂತಿ ಹೇಳಿದರು.

‘ಜನರಲ್ಲಿ ಹಣವಿಲ್ಲ. ಹಬ್ಬ ಇರುವುದರಿಂದ ತುಂಬಾ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ. ಕೆಲವರು ಕಡಿಮೆ ಬೆಲೆಯಲ್ಲಿ ಸಿಗುವ ಸಿದ್ಧ ಉಡುಪುಗಳ ಖರೀದಿಗೆ ಆಸಕ್ತಿ ವಹಿಸುತ್ತಿದ್ದಾರೆ. ಅವರಿಗಾಗಿಯೇ ನಾವು ಕೆಲ ಟ್ರಯಲ್‌ ಬಟ್ಟೆಗಳನ್ನು ಇಟ್ಟಿದ್ದೇವೆ. ಅವುಗಳನ್ನು ನಿತ್ಯ ತೊಳೆಯುತ್ತೇವೆ‘ ಎನ್ನುತ್ತಾರೆ ಶುಭಂ ಫ್ಯಾಷನ್‌ ಅಂಗಡಿಯ ಮಾಲೀಕ ದ್ವಾರಕೇಶ್‌.

‘ದಸರಾ ವೇಳೆಯಲ್ಲಿ ಹೆಚ್ಚು ಬಟ್ಟೆ ಮಾರಾಟವಾಗಲಿಲ್ಲ. ಆದರೆ, ದೀಪಾವಳಿ ಹಬ್ಬಕ್ಕಾಗಿ ಎಲ್ಲರೂ ಬಟ್ಟೆಗಳನ್ನು ಖರೀಸುತ್ತಿದ್ದಾರೆ. ಹೀಗಾಗಿ ಮೊದಲಿನಂತೆ ವ್ಯಾಪಾರ ನಡೆಯುತ್ತಿದೆ‘ ಎನ್ನುತ್ತಾರೆ ರೇಣುಕಾ ಡ್ರೆಸಸ್‌ನ ತುಳಸಿದಾಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT