ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ, ಮನಗಳಿಗೆ ಮರಳಿದ ದೀಪಚೈತನ್ಯ

Last Updated 3 ನವೆಂಬರ್ 2021, 7:32 IST
ಅಕ್ಷರ ಗಾತ್ರ

ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಈಗ ಬೆಳಕಿನ ಹಬ್ಬದ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ. ಎರಡು ವರ್ಷಗಳಿಂದಲೂ ಪದೇಪದೇ ಲಾಕ್‌ಡೌನ್‌, ಸೀಲ್‌ಡೌನ್‌, ಕರ್ಫ್ಯೂಗಳಿಂದ ಬಹುತೇಕ ಹಬ್ಬಗಳು ನಾಲ್ಕು ಗೋಡೆಗೆ ಮಾತ್ರ ಸೀಮಿತಗೊಂಡಿದ್ದವು. ಈ ಬಾರಿ ಕೋವಿಡ್‌ ಉಪಟಳ ಹತೋಟಿಗೆ ಬಂದ ಕಾರಣ ಹೊಸ ಹುಮ್ಮಸ್ಸು ಮೂಡಿದೆ. ಅದರಲ್ಲೂ ಜ್ಞಾನದ ಸಂಕೇತವಾದ ದೀಪಾವಳಿಗೆ ಬಿಡುವಿಲ್ಲದ ತಯಾರಿ ನಡೆದಿವೆ. ಎಲ್ಲ ಮನೆ, ಮಾರುಕಟ್ಟೆಗಳಲ್ಲೂ ಈಗ ಗಡಿಬಿಡಿ ಶುರುವಾಗಿದೆ.

ಮನೆ, ಮಳಿಗೆಗಳಲ್ಲಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ, ಪೂಜಿಸುವುದು ಹಬ್ಬದ ಮುಖ್ಯ ಆಚರಣೆ. ಅದಕ್ಕಾಗಿ ಮೂರ್ತಿಗಳ ಖರೀದಿ, ಪೂಜಾ ಸಾಮಗ್ರಿಗಳ ಪಟ್ಟಿ ಈಗಾಗಲೇ ಸಿದ್ಧಗೊಂಡಿದೆ. ಮನೆಗಳನ್ನು ಸ್ವಚ್ಛಗೊಳಿಸಿ, ಸುಣ್ಣ– ಬಣ್ಣ ಬಳಿದು, ತಳಿರು– ತೋರಣ ಕಟ್ಟುವ ಕೆಲಸದಲ್ಲಿ ಪುರುಷರು ನಿರತರಾಗಿದ್ದಾರೆ. ದೇವತೆಗೆ ಬೇಕಾದ ಮಂಟಪ, ಆಲಂಕಾರಿಕ ಸಾಮಗ್ರಿಗಳನ್ನು ಕೂಡಿಹಾಕುವಲ್ಲಿ ಗೃಹಿಣಿಯರು ಕ್ರಿಯಾಶೀಲರಾಗಿದ್ದಾರೆ.

ಹಬ್ಬದ ದಿನ ಎಣ್ಣೆಸ್ನಾನ ಮಾಡಿ ಮನೆಯ ಎಲ್ಲ ಹೆಣ್ಣುಮಕ್ಕಳೂ ಸೇರಿಕೊಂಡು ಗಂಡುಮಕ್ಕಳಿಗೆ ತಿಲಕವಿಟ್ಟು ಆರತಿ ಮಾಡುವುದು ಇದರ ಇನ್ನೊಂದು ವೈಶಿಷ್ಟ್ಯ. ರೈತ ಸಮುದಾಯದ ಕುಟುಂಬಗಳಲ್ಲಂತೂ ಮನೆಯ ಸದಸ್ಯರಷ್ಟೇ ಪ್ರಾಧಾನ್ಯತೆ ಜಾನುವಾರುಗಳಿಗೂ ಇದೆ. ಹಾಗಾಗಿ, ಎಲ್ಲ ಜಾನುವಾರುಗಳ ಮೈ ತೊಳೆದು, ಬಣ್ಣ ಬಳಿದು, ಪೂಜೆ ಮಾಡುವುದು ವಾಡಿಕೆ. ಇದಕ್ಕೆ ಬೇಕಾದ ಸಾಮಗ್ರಿಗಳ ಮಾರಾಟವೂ ಭರ್ಜರಿಯಾಗಿ ನಡೆದಿದೆ.

ವಾರದ ಹಿಂದಿನಿಂದಲೂ ಖರೀದಿ ಹಬ್ಬಗಳು ಹತ್ತಿರ ಬಂದಾಗ ಎಲ್ಲ ವಸ್ತುಗಳ ಬೆಲೆಯೂ ಗಗನಕ್ಕೇರುವುದು ಸಾಮಾನ್ಯ. ಹೀಗಾಗಿ, ಹಲವರು ವಾರದ ಹಿಂದಿನಿಂದಲೇ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿದ್ದಾರೆ. ಪೂಜೆಗೆ, ನೈವೇದ್ಯಕ್ಕೆ, ಅಲಂಕಾರಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ. ವಿಶೇಷವಾಗಿ, ಬಣ್ಣಬಣ್ಣದ– ವಿದ್ಯುತ್‌ ದೀಪಾಲಂಕಾರಗಳ ಸರ, ಆಕಾಶಬುಟ್ಟಿ, ಹಣತೆಗಳ ಖರೀದಿ ನಡೆದೇ ಇದೆ.

ಹೂ, ಹಣ್ಣು, ಕಬ್ಬು, ಬಾಳೆ ದಿಂಡು, ಮಹಿಳೆಯರಿಗೆ ಉಡಿ ತುಂಬುವ ಸಾಮಗ್ರಿ, ಮಣ್ಣಿನಮಡಿಕೆ, ತಟ್ಟೆ, ದೀಪ ಇವುಗಳೊಂದಿಗೆ ದಿನಸಿ ವಸ್ತುಗಳೂ ಈಗ ಸೂಪರ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಗುಲಾಬಿ, ಸಂಪಿಗೆ, ಚೆಂಡು ಹೂವುಗಳ ಬೆಲೆ ಈಗಾಗಲೇ ಏರತೊಡಗಿದೆ. ಅದೇ ರೀತಿ ಸೇಬು, ದಾಳಿಂಬೆ, ಬಾಳೆಹಣ್ಣು, ಚಿಕ್ಕು, ಸೀತಾಫಲ, ಮೊಸಂಬಿ, ಪಪ್ಪಾಯ, ಹತ್ತಿ ಹಣ್ಣುಗಳೂ ಲೋಡ್‌ಗಟ್ಟಲೇ ಮಾರುಕಟ್ಟೆಗೆ ಬರುತ್ತಿವೆ.‌

ನಿರೀಕ್ಷೆಯಂತೆಯೇ ಎಲ್ಲ ಧಾನ್ಯ, ತರಕಾರಿ, ಹಣ್ಣುಗಳ ಬೆಲೆಯೂ ಗಗನಮುಖಿಯಾಗಿದೆ. ಎರಡು ವಾರದ ಹಿಂದೆ ಕೆ.ಜಿಗೆ ₹40 ಇದ್ದ ಟೊಮೆಟೊ ಈ ವಾರ ₹55ರಂತೆ ಮಾರಾಟವಾಗುತ್ತಿದೆ. ₹30ರಂತೆ ಮಾರಾಟ ಆಗಿದ್ದ ಈರುಳ್ಳಿ ಬೆಲೆಯಲ್ಲಿ ಈ ವಾರ ₹ 20 ಹೆಚ್ಚಳವಾಗಿದೆ. ಬೀನ್ಸ್‌, ಚೌಳೆಕಾಯಿ, ಮೆಣಸಿನಕಾಯಿ, ಬೆಂಡೆಕಾಯಿ, ಕೊತ್ತಂಬರಿ ದರವೂ ₹ 5ರಿಂದ ₹ 10ರಷ್ಟು ಏರಿಕೆ ಕಂಡಿದೆ. ಆದರೂ ಹಬ್ಬದ ಖರೀದಿಯಿಂದ ಮಾತ್ರ ಜನ ಹಿಂದೆ ಸರಿದಿಲ್ಲ.

ಚೇತರಿಸಿಕೊಂಡ ವ್ಯಾಪಾರ ಕೊರೊನಾ ಎರಡನೇ ಅಲೆಯ ಕಾರಣ ಚಿನ್ನ– ಬೆಳ್ಳಿ ಆಭರಣಗಳು, ಬಟ್ಟೆಯ ಹಾಗೂ ವಾಹನಗಳ ವ್ಯಾಪಾರ ಮಂಕಾಗಿತ್ತು. ದಸರೆಯ ಹಬ್ಬಕ್ಕೆ ಮತ್ತೆ ಚೇತರಿಸಿಕೊಂಡಿತ್ತು. ಆದರೆ, ದೀಪಾವಳಿಗೆ ಹೊಸ ಬಟ್ಟೆ, ವಾಹನ, ಮೊಬೈಲ್‌, ಆಭರಣ ಖರೀದಿ ಮಾಡುವ ಹುಮ್ಮಸ್ಸಿನಲ್ಲಿದ್ದವರೇ ಹೆಚ್ಚು. ಹೀಗಾಗಿ, ಮಾರುಕಟ್ಟೆಯಲ್ಲಿ ಎಲ್ಲ ಮಾಲ್‌, ಅಂಗಡಿಗಳಲ್ಲೂ ಈಗ ಜನಜಂಗುಳಿ ಕಾಣಿಸುತ್ತಿದೆ.‌

ಪ್ರತಿ ದೀಪಾವಳಿಗೂ ಬದುಕನ್ನು ಹೊಸತಾಗಿ ಆರಂಭಿಸುವುದು ಭಾರತೀಯರ ಸಂಪ್ರದಾಯ. ಹಾಗಾಗಿ, ಒಂದಿಲ್ಲೊಂದು ಹೊಸ ವಸ್ತು ಖರೀದಿಸುವ ರೂಢಿ ಬೆಳೆದುಬಂದಿದೆ. ಅದಕ್ಕೆ ತಕ್ಕಂತೆ ಗ್ರಾಹಕರನ್ನು ಆಕರ್ಷಿಸಲು ವ್ಯಾಪಾರಿಗಳು ಕೂಡ ವೈವಿಧ್ಯಮಯ ವಸ್ತುಗಳ ಮೇಲೆ ರಿಯಾತಿಗಳನ್ನೂ ಘೋಷಿಸಿದ್ದಾರೆ.

ವಿಶೇಷವಾಗಿ ದೇವರ ಮೂರ್ತಿಗೆ ತೊಡಿಸುವ ಬೈತಲೆ ಬೊಟ್ಟು, ಬಳೆ, ಚೈನು, ಕಾಲ್ಗೆಜ್ಜೆ, ಬೆಂಡೋಲೆ, ನೆಕ್ಲೆಸ್‌ ಮುಂತಾದ ಒಡವೆಗಳನ್ನು ಖರೀದಿರುವವರೇ ಹೆಚ್ಚಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT