ಮಂಗಳವಾರ, ಸೆಪ್ಟೆಂಬರ್ 21, 2021
21 °C
ಪದವಿ, ಸ್ನಾತಕೋತ್ತರ ಪರೀಕ್ಷೆಯ ಕಾರಣ ಗು.ವಿ.ವಿ. ಎಲ್ಲ ಕಾಲೇಜುಗಳಿಗೂ ರಜೆ ಘೋಷಣೆ

ಕಲಬುರ್ಗಿ: ತರಗತಿ ಆರಂಭಿಸಿದ ಮಹಿಳಾ ಕಾಲೇಜುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸೋಮವಾರದಿಂದ (ಜುಲೈ 26) ಪದವಿ ಕಾಲೇಜುಗಳ ಆಫ್‌ಲೈನ್ ತರಗತಿ ಆರಂಭಿಸುವಂತೆ ಸರ್ಕಾರ ನಿರ್ದೇಶನ ನೀಡಿದ್ದರೂ ನಗರದ ಮಹಿಳಾ ಮಹಾವಿದ್ಯಾಲಯಗಳಲ್ಲಿ ಮಾತ್ರ ಪಾಠಗಳು ನಡೆದವು.

ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಇಡಿ ಪರೀಕ್ಷೆಗಳು ಜುಲೈ 28ರಿಂದ ಆರಂಭವಾಗಲಿವೆ. ಪದವಿ ಹಾಗೂ ಸ್ನಾತಕೋತ್ತರ 1, 3, 5ನೇ ಸೆಮಿಸ್ಟರ್‌ನ ಪರೀಕ್ಷೆಗಳನ್ನು ಆಗಸ್ಟ್‌ 2ರಿಂದ ಆರಂಭಿಸಲಾಗುತ್ತಿದೆ. ಈ ಸಿದ್ಧತೆಗಾಗಿ ಜುಲೈ 21ರಿಂದಲೇ ಎಲ್ಲ ಪದವಿ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.

ಹೀಗಾಗಿ, ಕಲಬುರ್ಗಿ, ಬೀದರ್, ಯಾದಗಿ, ಕೊಪ್ಪಳ ಜಿಲ್ಲೆಗಳಲ್ಲಿ ಪದವಿ ಕಾಲೇಜುಗಳು ಆರಂಭವಾಗಲಿಲ್ಲ. ಆದರೆ, ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಮಹಿಳಾ ಕಾಲೇಜುಗಳು ಮಾತ್ರ ಆರಂಭವಾದವು.

ನಗರದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ 2,300ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದು, ಮೊದಲ ದಿನವಾದ ಸೋಮವಾರ 700ರಷ್ಟು ಮಾತ್ರ ತರಗತಿಗಳಿಗೆ ಹಾಜರಾದರು. ಇನ್ನೊಂದಡೆ, ವಿ.ಜಿ. ಮಹಿಳಾ ಪದವಿ ಕಾಲೇಜಿನಲ್ಲಿ 1,318 ವಿದ್ಯಾರ್ಥಿನಿಯರಿದ್ದು, ಸೋಮವಾರ 750ರಷ್ಟು ಹಾಜರಾತಿ ಕಂಡುಬಂತು.

ತರಗತಿ, ಆವರಣದಲ್ಲಿ ಕಲರವ: ನಾಲ್ಕು ತಿಂಗಳ ಬಳಿಕ ಮಹಿಳಾ ಕಾಲೇಜುಗಳ ತರಗತಿಗಳಲ್ಲಿ ಪಾಠ– ಪ್ರವಚನಗಳ ಸದ್ದು ಕೇಳಿಬಂತು. ಕ್ಯಾಂಪಸ್‌ ಆವರಣದಲ್ಲಿ ವಿದ್ಯಾರ್ಥಿನಿಯರ ಕಲರವ ಮನೆ ಮಾಡಿತ್ತು.

ಬಿಎ., ಬಿಕಾಂ, ಬಿಎಸ್‌ಸಿ, ಬಿಬಿಎಂ ಪದವಿಯ ಎಲ್ಲ ಸೆಮಿಸ್ಟರ್‌ನ ತರಗತಿಗಳೂ ನಡೆದವು. ಇನ್ನೊಂದೆಡೆ, ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಪ್ರಯೋಗಾತ್ಮಕ ಲ್ಯಾಬ್‌ ತರಗತಿಗಳನ್ನು ಮಾತ್ರ ನಡೆಸಲಾಯಿತು.

ಲಸಿಕೆ ಕಡ್ಡಾಯ: ಪದವಿ ತರಗತಿಗಳಿಗೆ ಹಾಜರಾಗಲು ಒಂದು ಡೋಸ್‌ ಆದರೂ ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಹಾಗಾಗಿ, ಮಹಿಳಾ ಕಾಲೇಜುಗಳು ಆರಂಭವಾಗಿದ್ದರೂ ಹೆಚ್ಚಿನ ಹಾಜರಾತಿ ಕಂಡುಬರಲಿಲ್ಲ. ಲಸಿಕೆ ಪ್ರಮಾಣ ಪತ್ರ ತೋರಿಸದ ವಿದ್ಯಾರ್ಥಿನಿಯರನ್ನು ಮರಳಿ ಮನೆಗೆ ಕಳುಹಿಸಿ, ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿ ಹೇಳಲಾಯಿತು.

ಬೆಳಿಗ್ಗೆ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರಿಗೆ ಸ್ಯಾನಿಟೈಸರ್‌ ನೀಡಿ ಸ್ವಾಗತಿಸಲಾಯಿತು. ಒಂದು ಡೆಸ್ಕ್‌ನಲ್ಲಿ ಇಬ್ಬರು ಮಾತ್ರ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಿದ್ದು ಕಂಡುಬಂತು.

ವಿದ್ಯಾರ್ಥಿನಿಯರು ಏನಂತಾರೆ?

ಶಿಕ್ಷಣ ರಂಗದಲ್ಲೂ ಹೊಸ ಹೊಸ ಸವಾಲುಗಳು ಎದುರಾಗುತ್ತಿವೆ. ಶೈಕ್ಷಣಿಕವಾಗಿ ಸವಾಲಿನ ಜತೆಗೆ ಭವಿಷ್ಯದ ನಿರ್ಧಾರವನ್ನೂ ಮಾಡಬೇಕಾಗಿದೆ. ಈ ಎರಡೂ ಸವಾಲುಗಳನ್ನು ಮೆಟ್ಟಿ ನಿಂತು ನಾವು ಭವಿಷ್ಯ ಕಟ್ಟಿಕೊಳ್ಳಬೇಕಿದೆ. ಈ ವಿಚಾರ ಮಾಡಿ ಆಫ್‌ಲೈನ್‌ ತರಗತಿಗಳಿಗೆ ಹಾಜರಾಗಿದ್ದೇನೆ.
–ಶ್ರುತಿ ಎಸ್. ಪಾಟೀಲ ಅಷ್ಟಗಿ, ಬಿ.ಎಸ್ಸಿ, ವಿ.ಜಿ. ಮಹಿಳಾ ಮಹಾವಿದ್ಯಾಲಯ

*

ಬಹಳಷ್ಟು ದಿನಗಳ ನಂತರ ಖುದ್ದಾಗಿ ತರಗತಿಗೆ ಹಾಜರಾಗಿದ್ದು ಖುಷಿ ತಂದಿದೆ. ಆನ್‌ಲೈನ್‌ಗಿಂತ ಹೆಚ್ಚು ಪ್ರಭಾವಶಾಲಿ ಈ ಮಾರ್ಗ. ಅಲ್ಲದೇ ಪ್ರಯೋಗಾಲಯದ ಸಾಕಷ್ಟು ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಕಲಿಯಲು ಸಾಧ್ಯವಿಲ್ಲ. ಮೊದಲ ದಿನದಿಂದಲೇ ನಮ್ಮಲ್ಲಿ ಭೌತಿಕ ತರಗತಿ ಆರಂಭಿಸಿದ್ದಕ್ಕೆ ಮಾರ್ಗದರ್ಶಕರು, ಉಪನ್ಯಾಸಕರಿಗೆ ಧನ್ಯವಾದ ಸಲ್ಲಿಸುತ್ತೇನೆ.
–ಪೂಜಾ ಎಸ್‌.ತಳವಾರ, ಬಿಎಸ್‌ಸಿ, ವಿ.ಜಿ. ಮಹಿಳಾ ಮಹಾವಿದ್ಯಾಲಯ

*

ನಾನಾ ಈಗಾಗಲೇ ಒಂದು ಡೋಸ್‌ ಲಸಿಕೆ ಪಡೆದಿದ್ದೇನೆ. ಹಾಗಾಗಿ, ಮೊದಲ ದಿನದಿಂದಲೂ ಆಫ್‌ಲೈನ್‌ ತರಗತಿಗೆ ಹಾಜರಾಗಲು ಅವಕಾಶ ಸಿಕ್ಕಿದೆ. ನನ್ನ ಕೆಲವು ಸ್ನೇಹಿತೆಯರು ಲಸಿಕೆ ಪಡೆಯುವಲ್ಲಿ ನಿರ್ಲಕ್ಷ್ಯ ಮಾಡಿದ್ದರಿಂದ ಅವರು ಇನ್ನೂ ಕಾಲೇಜಿಗೆ ಬರಲು ಸಾಧ್ಯವಾಗಿಲ್ಲ.
–ಗಾಯತ್ರಿ ಜಮಾದಾರ, ಬಿಕಾಂ, ಸರ್ಕಾರಿ ಮಹಿಳಾ ಪದವಿ ಕಾಲೇಜು, ಕಲಬುರ್ಗಿ

*

ಕಾಲೇಜು ದಿನಗಳನ್ನು ಬಹಳಷ್ಟು ಮಿಸ್‌ ಮಾಡಿಕೊಳ್ಳುತ್ತಿದ್ದೆ. ಕೊರೊನಾ ಕಾರಣದಿಂದ ಈಗಾಗಲೇ ನಾವು ನಮ್ಮ ಸುಂದರ ಕ್ಷಣಗಳನ್ನು ಕಳೆದುಕೊಂಡಿದ್ದೇವೆ. ಇನ್ನು ಮುಂದಾದರೂ ಜಾಗರೂಕತೆಯಿಂದ ಇದ್ದು ಉಳಿದ ಕಾಲೇಜು ದಿನಗಳನ್ನು ಸಂತಸದಿಂದ ಕಳೆಯಬೇಕೆಂದುಕೊಂಡಿದ್ದೇನೆ.
–ಶಿವಲೀಲಾ ಗುರುಶಾಂತಪ್ಪ ಚಲಗೇರಿ, ಬಿಕಾಂ, ಸರ್ಕಾರಿ ಪದವಿ ಕಾಲೇಜು, ಕಲಬುರ್ಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.