ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆ ಪಡೆದು ಬಿಲ್ ನೀಡಲು ಜಿಲ್ಲಾಡಳಿತ ನಕಾರ: ಶರಣ ಐ.ಟಿ. ಆರೋಪ

ಆಮ್ ಆದ್ಮಿ ಪಕ್ಷದ ಮುಖಂಡ ಶರಣ ಐ.ಟಿ. ಆರೋಪ
Last Updated 26 ಜೂನ್ 2022, 13:32 IST
ಅಕ್ಷರ ಗಾತ್ರ

ಕಲಬುರಗಿ: ‘ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ನಮ್ಮ ಕಂಪನಿಯ ಸಹಾಯವಾಣಿಯ ಸೇವೆ ಪಡೆದಿರುವ ಜಿಲ್ಲಾಡಳಿತ ಇದೀಗ ಬಿಲ್ ಮೊತ್ತ ₹ 7.18 ಲಕ್ಷ ನೀಡಲು ನಿರಾಕರಿಸಿದೆ. ಬಿಲ್ ಕೊಡುವುದಿಲ್ಲವೆಂದಾದರೆ ಏಕೆ ಸೇವೆ ಪಡೆಯಬೇಕಿತ್ತು’ ಎಂದು ಇಐಎಚ್ ಬಿಪಿಒ ಸರ್ವಿಸಸ್ ಸಂಸ್ಥೆಯ ಮುಖ್ಯಸ್ಥರೂ ಆದ ಆಮ್ ಆದ್ಮಿ ಪಕ್ಷದ ಮುಖಂಡ ಶರಣ ಐ.ಟಿ. ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಏಪ್ರಿಲ್ 20ರಿಂದ ಜೂನ್ 8ರವರೆಗೆ ಬಿಪಿಒ ಸಹಾಯವಾಣಿ ಸೇವೆ ನೀಡಿದ್ದೆವು. ಏಪ್ರಿಲ್ ತಿಂಗಳಲ್ಲಿ ಕರೆ ಮಾಡಿದ್ದ ಅಂದಿನ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಪ್ಪ ವಣಿಕ್ಯಾಳ ಅವರು ತರಬೇತಿ ಪಡೆದು ಕೆಲಸ ಶುರು ಮಾಡುವಂತೆ ಸೂಚಿಸಿದ್ದರು. ಈ ಕೆಲಸ ಮಾಡಲು ಕಾರ್ಯಾದೇಶ ಕೇಳಿದಾಗ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಕೋವಿಡ್ ಕೆಲಸಗಳನ್ನು ಮೌಖಿಕವಾಗಿ ತಿಳಿಸಿ ಮಾಡಿಸಿಕೊಳ್ಳುತ್ತಿದ್ದೇವೆ. ಹಾಗಾಗಿ, ಬಿಲ್ ಕೊಟ್ಟ ಬಳಿಕ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಈ ಕೆಲಸ ಮಾಡುವಂತೆ ಕೆಕೆಆರ್‌ಡಿಬಿ ಅಧ್ಯಕ್ಷರೂ ಮೌಖಿಕ ಸೂಚನೆ ನೀಡಿದ್ದರು. ಹಿಂದಿನ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಕಾರ್ಯಕ್ರಮ ಉದ್ಘಾಟನೆಗೆ ಬಂದಿದ್ದರು. ಜಿಲ್ಲಾಧಿಕಾರಿ ಕೆಕೆಆರ್‌ಡಿಬಿಗೆ ನಮ್ಮ ಬಿಲ್ ಮೊತ್ತ ‍ಪಾವತಿಸಲು ಕೋರಿ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆಕೆಆರ್‌ಡಿಬಿ ಅಧಿಕಾರಿಗಳು ಈ ಬಗ್ಗೆ ಮಂಡಳಿಯಿಂದ ಯಾವುದೇ ಆದೇಶ ನೀಡದ್ದರಿಂದ ಜಿಲ್ಲಾಡಳಿತವೇ ಬಿಲ್ ಪಾವತಿಸಬೇಕು ಎಂದು ಹಿಂಬರಹ ನೀಡಿದ್ದರು’ ಎಂದರು.

‘ಇತ್ತೀಚಿನವರೆಗೂ ಬಿಲ್ ನೀಡುವುದಾಗಿ ಹೇಳಿದ್ದ ಜಿಲ್ಲಾಡಳಿತ ಈಗ ಹಣ ಬಿಡುಗಡೆ ಮಾಡುವುದಿಲ್ಲವೆಂದು ಪಟ್ಟು ಹಿಡಿದಿದೆ. ಈ ಬಗ್ಗೆ ಮನವಿ ಸಲ್ಲಿಸಲು ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರನ್ನು ಭೇಟಿ ಮಾಡಿದರೆ ಕಾರ್ಯಾದೇಶ ಇಲ್ಲದೇ ಇರುವುದರಿಂದ ಬಿಲ್ ಮಂಜೂರು ಮಾಡಲು ಬರುವುದಿಲ್ಲ ಎಂದಿದ್ದಾರೆ. ಮತ್ತೆ ಕಚೇರಿಗೆ ಬಂದರೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪದ ಮೇರೆಗೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಡಳಿತದಿಂದ ಬರಬೇಕಿರುವ ಬಿಲ್ ಕೇಳುವುದೂ ಕರ್ತವ್ಯಕ್ಕೆ ಅಡ್ಡಿ ಹೇಗಾಗುತ್ತದೆ’ ಎಂದು ಪ್ರಶ್ನಿಸಿದರು.

ಪಕ್ಷದ ಮುಖಂಡ ರಾಘವೇಂದ್ರ ಚಿಂಚನಸೂರ ಸೇರಿದಂತೆ ಇತರ ಮುಖಂಡರು ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT