ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನಗರ ಪಾಲಿಕೆ ಚುನಾವಣೆ: ಮತದಾರರನ್ನು ತಲುಪಲು ಅಂತಿಮ ಹಂತದ ಯತ್ನ

ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ; ಸಾರ್ವತ್ರಿಕ ರಜೆ ಘೋಷಣೆ
Last Updated 1 ಸೆಪ್ಟೆಂಬರ್ 2021, 16:41 IST
ಅಕ್ಷರ ಗಾತ್ರ

ಕಲಬುರ್ಗಿ: ಇದೇ 3ರಂದು ಕಲಬುರ್ಗಿ ಮಹಾನಗರ ಪಾಲಿಕೆಯ 55 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳು ಮತದಾರರನ್ನು ತಲುಪಲು ಅಂತಿಮ ಹಂತದ ಯತ್ನಗಳನ್ನು ನಡೆಸಿದ್ದಾರೆ. ಇತ್ತ ಜಿಲ್ಲಾಡಳಿತ ಸುಸೂತ್ರ, ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ವಿವಿಧ ಪಕ್ಷಗಳ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ನಾಯಕರು ನಗರವನ್ನು ತೊರೆದಿದ್ದು, ಅಭ್ಯರ್ಥಿಗಳು ಸ್ಥಳೀಯ ಶಾಸಕರು, ಮಾಜಿ ಶಾಸಕರು, ಚುನಾವಣಾ ಉಸ್ತುವಾರಿಗಳ ಮಾರ್ಗದರ್ಶನದಲ್ಲಿ ಮತದಾರರು, ವಿವಿಧ ಬಡಾವಣೆಗಳ ಮುಖಂಡರು, ಸಮುದಾಯದ ಮುಖಂಡರನ್ನು ಭೇಟಿ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ.

ಬುಧವಾರ ಬೆಳಿಗ್ಗೆಯಿಂದಲೇ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದರಿಂದ ಮನೆ ಮನೆಗೆ ಭೇಟಿ ನೀಡಿ ತಮ್ಮ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 531 ಬೂತ್‌ಗಳಿದ್ದು, ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನಂತಹ ಪ್ರಮುಖ ಪಕ್ಷಗಳು ಸಾಧ್ಯವಾದಷ್ಟು ಹೆಚ್ಚಿನ ಬೂತ್‌ಗಳಲ್ಲಿ ತಮ್ಮ ಕಾರ್ಯಕರ್ತರನ್ನು ನಿಯೋಜಿಸುತ್ತಿದ್ದಾರೆ.

ಮತಗಟ್ಟೆ ಏಜೆಂಟರ ಪಟ್ಟಿಯನ್ನು ಆಯಾ ವಾರ್ಡುಗಳ ಚುನಾವಣಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಮಾದರಿ ಮತಪತ್ರವನ್ನು ಸಿದ್ಧಪಡಿಸಿಕೊಂಡಿದ್ದು, ಮತದಾರರ ಮೊಬೈಲ್‌ ಸಂಖ್ಯೆಗಳಿಗೆ ಕರೆ ಮಾಡಿ ತಮಗೇ ಮತ ಹಾಕುವಂತೆ ಮನವೊಲಿಸುತ್ತಿದ್ದಾರೆ. ವಾಟ್ಸ್‌ಆ್ಯಪ್ ಮೂಲಕವೂ ಕರಪತ್ರಗಳನ್ನು ರವಾನಿಸುತ್ತಿದ್ದಾರೆ.

ಪ್ರತಿ ವಾರ್ಡ್‌ನಲ್ಲಿ ಸುಮಾರು 10 ಸಾವಿರ ಮತದಾರರಿದ್ದು, ಗೆಲ್ಲುವಷ್ಟು ಅಗತ್ಯವಾದ ಮತಗಳನ್ನು ಪಡೆಯುವ ನಿಟ್ಟಿನಲ್ಲಿ ಹಾಗೂ ಗೆಲುವಿನ ಸಾಧ್ಯತೆ ಹೆಚ್ಚಿರುವ ಅಭ್ಯರ್ಥಿಗಳು ಮನೆಗಳಿಂದ ಮತಗಟ್ಟೆಗೆ ಜನರನ್ನು ಕರೆತರಲು ಜೀಪ್, ಆಟೊ ರಿಕ್ಷಾ ವ್ಯವಸ್ಥೆ ಮಾಡುವಲ್ಲಿ ನಿರತರಾಗಿದ್ದಾರೆ. ವಿವಿಧ ಬಡಾವಣೆಗಳಲ್ಲಿ ತಾತ್ಕಾಲಿಕವಾಗಿ ಆರಂಭವಾಗಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳ ಚುನಾವಣಾ ಕಚೇರಿಗಳು ಈಗ ಕಾರ್ಯಕರ್ತರು, ಹಿಂಬಾಲಕರಿಂದ ತುಂಬಿವೆ.

ಪೊಲೀಸರಿಂದ ಪಥ ಸಂಚಲನ: ಚುನಾವಣೆ ಪ್ರಯುಕ್ತ ಕಮಿಷನರೆಟ್‌ ವ್ಯಾಪ್ತಿಯ ಒಂದು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಗರದ ವಿವಿಧ ಬಡಾವಣೆಗಳಲ್ಲಿ ಬುಧವಾರ ಪಥ ಸಂಚಲನ ನಡೆಸಿ ಜನರಲ್ಲಿ ಧೈರ್ಯ ತುಂಬಿದರು. ಮುಕ್ತವಾಗಿ, ಯಾರ ಭಯವೂ ಇಲ್ಲದೇ ಮತ ಚಲಾಯಿಸುವಂತೆ ಮನವಿ ಮಾಡಿದರು.

ಡಿಎಆರ್‌ ಮೈದಾನದಿಂದ ಆರಂಭವಾದ ಪಥ ಸಂಚಲನ ಸುಂದರ ನಗರ, ಮಾಂಗರವಾಡಿ, ಮುಸ್ಲಿಂ ಚೌಕ್, ಕಿರಾಣಾ ಬಜಾರ್‌ ಮೂಲಕ ಚೌಕ ವೃತ್ತದಲ್ಲಿ ಕೊನೆಗೊಂಡಿತು. ಡಿಸಿಪಿ ಅಡ್ಡೂರು ಶ್ರೀನಿವಾಸಲು, ಎಸಿಪಿಗಳಾದ ಅಂಶುಕುಮಾರ್, ಗಿರೀಶ ಎಸ್‌.ಬಿ., ಜೆ.ಎಂ. ಇನಾಮದಾರ, ವಿವಿಧ ಠಾಣೆಗಳ ಪೊಲೀಸ್ ಇನ್‌ಸ್ಪೆಕ್ಟರ್‌ಗಳು, ಪಿಎಸ್ಐ, ಎಎಸ್‌ಐ, ಹೆಡ್‌ ಕಾನ್‌ಸ್ಟೆಬಲ್‌, ಕಾನ್‌ಸ್ಟೆಬಲ್‌ಗಳು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಭಾಗವಹಿಸಿದ್ದರು.

ಸಾರ್ವತ್ರಿಕ ರಜೆ ಘೋಷಣೆ

ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆ ಹಾಗೂ ವಾಡಿ ಪುರಸಭೆಯ ವಾರ್ಡ್‌ ಸಂಖ್ಯೆ 4 ಹಾಗೂ 23 ಉಪ ಚುನಾವಣೆ ನಡೆಯುತ್ತಿರುವುದರಿಂದ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು, ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಮತದಾರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವಾರ್ಡ್‍ಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜುಗಳು (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ಸರ್ಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳಿಗೆ ಅಂದು ಸಾರ್ವತ್ರಿಕ ರಜೆಯನ್ನು ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT