ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನುದಾನ ಸಮಾನ ಹಂಚಿಕೆಗಾಗಿ ಡಿ.ಕೆ. ಸುರೇಶ್ ಧ್ವನಿ ಎತ್ತಿದ್ದಾರೆ: DK ಶಿವಕುಮಾರ್

Published 3 ಫೆಬ್ರುವರಿ 2024, 9:58 IST
Last Updated 3 ಫೆಬ್ರುವರಿ 2024, 9:58 IST
ಅಕ್ಷರ ಗಾತ್ರ

ಕಲಬುರಗಿ: ‘ಸಂಸದ ಡಿ.ಕೆ. ಸುರೇಶ್ ಅವರು ಭಾರತವನ್ನು ಒಗ್ಗಟ್ಟಾಗಿ ಇಡಬೇಕು, ದೇಶದ ಅನುದಾನ ಸಮಾನವಾಗಿ ಹಂಚಿಕೆಯಾಗಬೇಕು ಎಂದು ಧ್ವನಿ ಎತ್ತಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

‘ತೆರಿಗೆಯ ಪಾಲು ನ್ಯಾಯಯುತವಾಗಿ ಹಂಚದಿದ್ದರೆ ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇರಿಸಬೇಕಾಗುತ್ತಿದೆ’ ಎಂದ ಡಿ.ಕೆ. ಸುರೇಶ್ ಹೇಳಿಕೆಗೆ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಸಿಎಂ, ‘ಇಡೀ ಭಾರತ ಒಂದು. ಕಾಂಗ್ರೆಸ್ ಪಕ್ಷ ಭಾರತವನ್ನು ಸದಾ ಒಗ್ಗಟ್ಟಾಗಿ ಇರಿಸಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ನಮ್ಮ ನಾಯಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಂಕುಮ ಇಡಲ್ಲ ಎಂದು ಹೇಳಿದವರು ಯಾರು? ತಿಲಕವಿಟ್ಟುಕೊಳ್ಳಲು ಅವರು ಯಾವತ್ತೂ ನಿರಾಕರಿಸಿಲ್ಲ. ಹಾಗಂತ ಮಹಿಳೆಯರಂತೆ ಹಣೆತುಂಬ ಕುಂಕುಮ ಹಚ್ಚಿಕೊಳ್ಳಲ್ಲ. ಕೆಲವು ಸಂದರ್ಭದಲ್ಲಿ ಅಲರ್ಜಿಯ ಕಾರಣಕ್ಕೆ ತಿಲಕವಿಡಲು ನಿರಾಕರಿಸಿರಬಹುದು. ನನಗೆ ಸುಗಂಧ ರಾಜ ಹೂವು ಅಲರ್ಜಿ ಇದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನ್ಯಾಯ ಒದಗಿಸಲು ವಿಫಲವಾದ ಬಿಜೆಪಿಯ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ. ಮಾನ, ಮರ್ಯಾದೆ ಇದ್ದರೆ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ, ಕೇಂದ್ರ ಸರ್ಕಾರದಿಂದ ರಾಜ್ಯದ ಪಾಲು ತಂದುಕೊಡುವಂತಹ ಕೆಲಸ ಮಾಡಲಿ’ ಎಂದು ಕುಟುಕಿದರು.

‘ಕೇಂದ್ರ ಸರ್ಕಾರ ಬರ ಪರಿಹಾರವನ್ನು ಬಿಗಡೆ ಮಾಡದೆ ಇರುವುದು, ಬಜೆಟ್‌ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ, ಅನುದಾನ ಬಿಡುಗಡೆಯಲ್ಲಿನ ತಾರತಮ್ಯದ ವಿರುದ್ಧ ಫೆಬ್ರುವರಿ 7ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎಲ್ಲ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡು ಕರ್ನಾಟಕದ ಪರವಾಗಿ ಧ್ವನಿ ಎತ್ತುತ್ತೇವೆ’ ಎಂದು ಹೇಳಿದರು.

ಜಾತಿಯ ಕಾರಣಕ್ಕೆ ಈಶ್ವರಾನಂದಪುರಿ ಸ್ವಾಮೀಜಿಗೆ ಗರ್ಭಗುಡಿ ಪ್ರವೇಶ ನಿರಾಕರಣೆಗೆ ಪ್ರತಿಕ್ರಿಯಿಸಿದ ಡಿಸಿಎಂ, ‘ಸಾಮಾನ್ಯವಾಗಿ ಬೆಳಿಗ್ಗೆ ಮತ್ತು ಸಂಜೆ ವೇಳೆ ದೇವಸ್ಥಾನಗಳನ್ನು ಸ್ವಚ್ಛ ಮಾಡುವುದು ವಾಡಿಕೆ. ಈ ಪ್ರಕರಣದಲ್ಲಿ ಉದ್ದೇಶ ಏನಿದೆ ಎಂಬುದನ್ನು ಸಚಿವರು, ಮುಜರಾಯಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ದೇವಸ್ಥಾನಗಳಿಗೆ ಎಲ್ಲ ಧರ್ಮದವರಿಗೆ ಅವಕಾಶ ನೀಡಲಾಗುತ್ತಿದೆ. ನಾವೆಲ್ಲರೂ ಒಂದೇ ನಮ್ಮಲ್ಲಿ ಅಸ್ಪೃಶ್ಯತೆ ಇಲ್ಲ’ ಎಂದರು.

ಈ ವೇಳೆ ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಾಸಕ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡ ರೇವೂನಾಯಕ ಬೆಳಮಗಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT