ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಾವೆಲ್‌ ಹಿಸ್ಟರಿ ಕರಾರುವಕ್ಕಾಗಿರಲಿ: ಗೋವಿಂದ್‌ ಕಾರಜೋಳ

Last Updated 3 ಮೇ 2020, 11:16 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸೋಂಕಿತರ ಟ್ರಾವೆಲ್‌ ಹಿಸ್ಟರಿಯನ್ನು ಕರಾರುವಾಕ್ಕಾಗಿ ಪಡೆಯದೇ ಇದ್ದರೆ ಕೊರೊನಾ ವೈರಾಣುಉಪಟಳ ನಿಯಂತ್ರಣ ಸಾಧ್ಯವೇ ಇಲ್ಲ’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಶನಿವಾರ ಇಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು,ಜಿಲ್ಲೆಯಲ್ಲಿ ಈವರೆಗೆ ಪಾಸಿಟಿವ್‌ ಬಂದ ಪ್ರಕರಣಗಳ ಟ್ರಾವೆಲ್‌ ಹಿಸ್ಟರಿಯ ಮಾಹಿತಿ ಕೇಳಿದ ಅವರು, ಕೆಲವು ಸೋಂಕಿತರಿಗೆ ವೈರಾಣು ಹೇಗೆ ಅಂಟಿಕೊಂಡಿತು ಎಂಬ ಮೂಲವೇ ಇನ್ನೂ ಗೊತ್ತಾಗಿಲ್ಲ. ಯಾವುದೇ ಒಂದು ಸಣ್ಣ ಅಂಶವನ್ನೂ ನಿರ್ಲಕ್ಷ್ಯ ಮಾಡಬೇಡಿ. ಅದು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂದರು.

‘ಎಲ್ಲ ಸೋಂಕಿತರು, ನೇರ– ಪರೋಕ್ಷ ಸಂಪರ್ಕಿತರ ಸಂಚಾರವನ್ನು ಕೂಲಂಕಶವಾಗಿ ಪರಿಶೀಲಿಸಿ. ಇವರು ಭೇಟಿ ಮಾಡಿದ ಕಟ್ಟಕಡೆಯ ವ್ಯಕ್ತಿಯೂ ನಮ್ಮ ಕಣ್ಣಿಂದ ತಪ್ಪಿಸಿಕೊಳ್ಳಬಾರದು. ಯಾಮಾರಿದರೆ ನಮ್ಮ ಶ್ರಮದ ಕೊಂಡಿ ಕತ್ತರಿಸಿ, ಸೋಂಕು ಹಿಡಿತಕ್ಕೆ ಬರುವುದಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪಿ.ರಾಜಾ, ‘ಕಲಬುರ್ಗಿ ತಾಲ್ಲೂಕಿನ ಕಾವಲಗಾ ಗ್ರಾಮದ 14 ತಿಂಗಳ ಮಗುವಿಗೆ ಮಾತ್ರ ಸೋಂಕು ಎಲ್ಲಿಂದ ತಗುಲಿದೆ ಎಂದು ಪತ್ತೆಯಾಗಿರಲಿಲ್ಲ. ಆದರೆ, ಈ ಮಗುವಿನ ಸೋದರಮಾವ ಮಾರ್ಚ್‌ 24ರಂದು ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದಾರೆ. ಅವರಿಂದ ತಗುಲಿರುವ ಸಾಧ್ಯತೆ ಹೆಚ್ಚಿದೆ. ಬೆಂಗಳೂರಿನಿಂದ ಬಂದ ಯುವಕನಿಗೆ ಸೋಂಕು ಪತ್ತೆಯಾಗಿಲ್ಲ. ಕೆಲವೊಮ್ಮೆ ವೈರಾಣು ತನ್ನಷ್ಟಕ್ಕೆ ತಾನೇ ದೇಹ ಸೇರುವ ಮುನ್ನ ನಾಶವಾಗುತ್ತದೆ. ಆದರೆ, ಸಂ‍ಪ‍ರ್ಕಕ್ಕೆ ಬಂದವರ ದೇಹ ಸೇರುವ ಸಾಧ್ಯತೆ ಇರುತ್ತದೆ’ ಎಂದು ಮಾಹಿತಿ ನೀಡಿದರು.

ಆಹಾರ ಪರಿಶೀಲನೆ

ಕೊರೊನಾ ಶಂಕಿತರಿಗೆ ಚಿಕಿತ್ಸೆ ನೀಡುವ ಜಿಮ್ಸ್ ಮತ್ತು ಇಎಸ್ಐಸಿ ಅಸ್ಪತ್ರೆಯ ವೈದ್ಯರು, ಅರೋಗ್ಯ ಸಿಬ್ಬಂದಿ ಮತ್ತು ರೋಗಿಗಳು ಮತ್ತು ಕ್ವಾರಂಟೈನ್ ಆದವರಿಗೆ ಆಹಾರ ಪೂರೈಸುವ ಬಿಸಿಎಂ ವಸತಿ ನಿಲಯಕ್ಕೆ ಭೇಟಿ ನೀಡಿದ ಸಚಿವರು, ಆಹಾರ ಸಾಮಗ್ರಿ, ಸ್ವಚ್ಛತೆ ಹಾಗೂ ಪೌಷ್ಟಿಕಾಂಶ ಮುಂತಾದ ವಿಷಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಸಚಿವರ ಸಭೆಯಲ್ಲೇ ಇಲ್ಲ ‘ಅಂತರ

ಸಚಿವ ಗೋವಿಂದ ಕಾರಜೋಳ ಅವರು ಸಭೆ ನಡೆಸಿದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ಕನಿಷ್ಠ ಅಂತರ’ವನ್ನು ಯಾರೂ ಕಾಯ್ದುಕೊಳ್ಳಲಿಲ್ಲ!

ವೇದಿಕೆ ಮೇಲೆ ಸಚಿವರ ಅಕ್ಕಪಕ್ಕ ಕುಳಿತಿದ್ದ ಸಂಸದರು, ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಮಧ್ಯೆ ಕೂಡ ಕನಿಷ್ಠ ಒಂದು ಮೀಟರ್ ಅಂತರವಿರಲಿಲ್ಲ. ಇವರ ಮುಂದೆ ಕುಳಿತಿದ್ದ ಜಿಲ್ಲೆಯ ಬಹುಪಾಲು ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಪತ್ರಕರ್ತರ ಕೂಡ ಒಬ್ಬರಿಗೊಬ್ಬರು ಅಂಟಿಕೊಂಡೇ ಒಂದು ತಾಸು ಕುಳಿತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT