ಭಾನುವಾರ, ಸೆಪ್ಟೆಂಬರ್ 25, 2022
21 °C

ಹೋಮಿಯೋಪಥಿ ಉತ್ತಮ ಚಿಕಿತ್ಸಾ ಪದ್ಧತಿ: ಡಾ.ಬಿ.ಟಿ. ರುದ್ರೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಹೋಮಿಯೋಪಥಿಯ ನೆರವಿಲ್ಲದೆ ರೋಗಮುಕ್ತ ಭಾರತವನ್ನಾಗಿ ಮಾಡಲು ಸಾಧ್ಯವಿಲ್ಲ. ಭವಿಷ್ಯದ ಎಲ್ಲ ರೋಗಗಳಿಗೆ ಹೋಮಿಯೋಪಥಿಯೇ ಉತ್ತಮ ಚಿಕಿತ್ಸಾ ಪದ್ಧತಿಯಾಗಲಿದೆ’ ಎಂದು ಕರ್ನಾಟಕ ಹೋಮಿಯೋಪಥಿ ಮಂಡಳಿ ಅಧ್ಯಕ್ಷ ಡಾ.ಬಿ.ಟಿ. ರುದ್ರೇಶ್ ಹೇಳಿದರು.

ಹೈದರಾಬಾದ್ ಶಿಕ್ಷಣ ಸಂಸ್ಥೆಯ(ಎಚ್‌ಕೆಇ) ಡಾ.ಮಾಲಕರೆಡ್ಡಿ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ನಗರದ ಪಿಡಿಎ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇಂದಿನ ಲಸಿಕೆ ಪದ್ಧತಿಯು ಹೋಮಿಯೋಪಥಿ ಆಧಾರಿತವಾಗಿದೆ. ದುರಾದೃಷ್ಟವಶಾತ್ ಹೋಮಿಯೋಪಥಿ ಯನ್ನು ವೈಜ್ಞಾನಿಕ ಚಿಕಿತ್ಸಾ ವಿಧಾನ ಎಂದು ಯಾರೂ ಹೇಳುತ್ತಿಲ್ಲ. ಹೋಮಿ ಯೋಪಥಿ ಹೇಗೆ ಕೆಲಸ ಮಾಡುತ್ತದೆ ಎಂಬು ದನ್ನು ವೈಜ್ಞಾನಿಕತೆಯ ಬಗ್ಗೆ ಮಾತನಾ ಡುವವರು ಕಂಡು ಹಿಡಿಯಬೇಕು’ ಎಂದರು.

‘ಹೋಮಿಯೋಪಥಿ ತನ್ನ ಸ್ವಂತ ಸ್ಥಿರತೆ ಮತ್ತು ಯೋಗ್ಯತೆ ಮೇಲೆ ಬೆಳೆಯುತ್ತಿದೆ ಹೊರೆತು ಯಾವುದೇ ಕೃಪಾಪೋಷಿತ ನಾಟಕದಿಂದ ಅಲ್ಲ. ತುರ್ತು ಚಿಕಿತ್ಸೆಗೆ ಅಲೋಪಥಿ ಅಗತ್ಯ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ಕಡಿಮೆ ಖರ್ಚಿನಲ್ಲಿ ಗುಣಮುಖ ವಾಗುವ ಕಾಯಿಲೆಗಳಿಗೆ 180 ಮೆಡಿಸನ್‌ ಬರೆದು ಹಣ ವ್ಯಯ ಮಾಡುವುದು ಏಕೆ’ ಎಂದು ಪ್ರಶ್ನಿಸಿದರು.

‘ಜನರು ಫಲಿತಾಂಶ ಆಧಾರಿತ ಚಿಕಿತ್ಸೆ ಬಯಸುತ್ತಿದ್ದಾರೆ. ಹೀಗಾಗಿ, ನೀವು ಉತ್ತಮವಾದ ಚಿಕಿತ್ಸೆ ಕೊಟ್ಟರೇ ನಿಮಗೆ ಒಳ್ಳೆಯ ಗೌರವ ಸಿಗುತ್ತದೆ. ನಮ್ಮ ಚಿಂತನೆ ಮತ್ತು ಯೋಗ್ಯತೆಯು ಜೀವ ವಿರೋಧಿಯಾಗದೆ ಜೀವ ಸೆಲೆಯಾದಾಗ ಮಾತ್ರ ಜನರು ನಮ್ಮನ್ನು ಒಪ್ಪಿಕೊಳ್ಳುತ್ತಾರೆ. ಕಾಯಿಲೆಗೆ ಒಂದು ಔಷಧಿ ಕೊಡುವವನ್ನು ಹೋಮಿಯೋಪತಿ ವೈದ್ಯನಲ್ಲ, ಅವನೊಬ್ಬ
ವ್ಯಾಪಾರಿ. ನೀವು ಅಂತಹ ವ್ಯಾಪಾರಿ ಆಗಬಾರದು’ ಎಂದು ಅವರು ಆಶಿಸಿದರು.

ಜಿಮ್ಸ್ ಆಸ್ಪತ್ರೆ ಅಧೀಕ್ಷಕ ಹಾಗೂ ಜಿಲ್ಲಾ ಶಸ್ತ್ರಜ್ಞ ಡಾ.ಎ.ಎಸ್‌.ರುದ್ರವಾಡಿ ಮಾತನಾಡಿ, ‘ಹಣ, ಆಸ್ತಿ ಗಳಿಕೆಗಾಗಿ ವೈದ್ಯಕೀಯ ಕ್ಷೇತ್ರಕ್ಕೆ ಬರಬೇಡಿ. ಸೇವಾ ಮನೋಭಾವದ ಗುರಿ ಇರಿಸಿಕೊಂಡು ವೈದ್ಯರಾಗಿ. ನಿಮ್ಮ ಕಲಿಕೆ ಕೇವಲ ಚಿಕಿತ್ಸೆಗೆ ಸೀಮಿತವಾಗದೆ ಸಂಶೋಧನೆಗೂ ಮೀಸಲಾಗಿ ಇರಲಿ’ ಎಂದು ಸಲಹೆ ನೀಡಿದರು.

ಎಚ್‌ಕೆಇ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಸಿ. ಬಿಲಗುಂದಿ ಮಾತನಾಡಿ, ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ವೈದ್ಯಕೀಯ ಕಾಲೇಜು ಜತೆಗೆ 100 ಹಾಸಿಗೆಗಳ ಆಸ್ಪತ್ರೆಗಳನ್ನು ಎಚ್‌ಕೆಇ ಸಂಸ್ಥೆ ತೆರೆದಿದೆ. ಕೋವಿಡ್ ಕಾರಣದಿಂದ 2 ವರ್ಷಗಳ ಬ್ಯಾಚ್‌ಗಳ ಪದವಿ ಸಮಾರಂಭವನ್ನು ಒಂದೇ ಬಾರಿ ಆಯೋಜಿಸಿದ್ದೇವೆ’ ಎಂದರು.

ಡಾ.ಮೀನಾ ದೇಶಪಾಂಡೆ ಪದವೀಧರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. 2015 ಹಾಗೂ 2016ರ ಅಗ್ರ ಶ್ರೇಯಾಂಕಿತರಾದ ಶ್ರೇಯಾ ಕುಲಕರ್ಣಿ ಹಾಗೂ ತೃಪ್ತಿ ವಾರದ್ ಅವರಿಗೆ ಚಿನ್ನದ ಪದಕ ನೀಡಲಾಯಿತು.

ಎಚ್‌ಕೆಇ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಮಹಾದೇವಪ್ಪ ವಿ. ರಾಂಪೂರೆ, ಉಪಾಧ್ಯಕ್ಷ ಡಾ.ಶರಣಬಸಪ್ಪ ಆರ್.ಹರವಾಳ, ಎಚ್‌ಕೆಇ ಸಂಸ್ಥೆಯ ಕಾರ್ಯದರ್ಶಿ ಡಾ.ಜಗನ್ನಾಥ ಬಿ.ಬಿಜಾಪುರ, ಆಡಳಿತ ಮಂಡಿಯ ಸದಸ್ಯರಾದ ಡಾ.ಕೈಲಾಶ ಪಾಟೀಲ, ಸಾಯಿನಾಥ್ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು