ಮಂಗಳವಾರ, ಮಾರ್ಚ್ 2, 2021
31 °C
ಆಳಂದ ತಾಲ್ಲೂಕಿನ ಮಾಡಿಯಾಳದ ಗ್ರಾಮಸ್ಥರ ತೀರದ ಬವಣೆ; ಬಳಕೆಯೇ ಆಗದ ಶುದ್ಧ ಕುಡಿಯುವ ನೀರಿನ ಘಟಕ

ಕಲಬುರ್ಗಿ: ನೀರಿಗಾಗಿ ಹತ್ತಾರು ಹೊಲ ತಿರುಗಬೇಕು!

ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೆಲ ವರ್ಷಗಳ ಹಿಂದೆಯಷ್ಟೇ ಉತ್ತಮ ಗುಣಮಟ್ಟದ ಬಾಳೆ ಹಾಗೂ ವೀಳ್ಯದೆಲೆ ಬೆಳೆದು ವಿವಿಧ ರಾಜ್ಯಗಳಿಗೆ ರವಾನಿಸುತ್ತಿದ್ದ ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ಜನರು ಇದೀಗ ಕುಡಿಯಲು ಚರಿಗೆ ನೀರು ಪಡೆಯಲೂ ಸಹ ಊರ ಸುತ್ತಲಿನ ಹತ್ತಾರು ರೈತರ ಹೊಲಗಳನ್ನು ತಿರುಗಬೇಕಿದೆ.

17 ಸದಸ್ಯರನ್ನು ಹೊಂದಿರುವ ಮಾಡಿಯಾಳ ಗ್ರಾಮ ಪಂಚಾಯಿತಿ ಕೇಂದ್ರದ ಜನಸಂಖ್ಯೆ 15 ಸಾವಿರಕ್ಕೂ ಹೆಚ್ಚಿದೆ. ಆದರೆ, ಅದಕ್ಕೆ ತಕ್ಕಂತೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ನೀರು ಪೂರೈಕೆಗಾಗಿ ಗ್ರಾಮ ಪಂಚಾಯಿತಿಯು ಲಕ್ಷಾಂತರ ರೂಪಾಯಿ ಲಕ್ಷ ಖರ್ಚು ಮಾಡಿದೆ. ಎರಡು ವರ್ಷದ ಹಿಂದೆ ಸ್ಥಾಪನೆಯಾದ ಶುದ್ಧ ಕುಡಿಯುವ ನೀರಿನ ಘಟಕಗಳು ‘ಪಳಿಯುಳಿಕೆಯಂತೆ’ ನೀರು ಕೊಡದೇ ನಿಂತಿವೆ.

ಊರಿನಲ್ಲಿ ಪುರಾತನ ಕಾಲದಲ್ಲಿ ನಿರ್ಮಿಸಲಾದ ಬಾವಿಯ ನೀರು ಕುಡಿಯಲು ಯೋಗ್ಯವಿಲ್ಲ. ಬಾವಿ ಪಕ್ಕದ ಜಾಲಿ ಗಿಡದ ಕಾಯಿಗಳು, ಮುರಿದ ಪ್ಲಾಸ್ಟಿಕ್‌ ಕೊಡಗಳು, ಪ್ಲಾಸ್ಟಿಕ್‌ ತ್ಯಾಜ್ಯಗಳು ಬಾವಿಯ ನೀರನ್ನು ಕಲುಷಿತಗೊಳಿಸಿವೆ. ಆದರೂ ಗ್ರಾಮದ ಹೆಣ್ಣುಮಕ್ಕಳು ಬಟ್ಟೆ ಒಗೆಯಲು ತಳ ಕಾಣುವ ಹಂತದಲ್ಲಿರುವ ಇದೇ ಬಾವಿಯ ನೀರನ್ನು ಬಳಸುತ್ತಾರೆ.

ಮಧ್ಯಾಹ್ನ 1 ಗಂಟೆ ಆಗುತ್ತಿದ್ದಂತೆ ಗ್ರಾಮದಲ್ಲಿ ಎಲ್ಲಿ ನೋಡಿದರಲ್ಲಿ ಖಾಲಿ ಕೊಡಗಳೊಂದಿಗೆ ನೀರಿನ ಗುಮ್ಮಿಗಳು ಹಾಗೂ ಪೈಪ್‌ಲೈನ್‌ ಗ್ರಾಮದ ಮಹಿಳೆಯರು ಓಡುತ್ತಿರುವ ದೃಶ್ಯ ನೀರಿನ ಬವಣೆ ಬಿಂಬಿಸುತ್ತದೆ. ಮಧ್ಯಾಹ್ನ 1 ರಿಂದ ಸಂಜೆ 5ರವರೆಗೆ ತ್ರಿಫೇಸ್‌ ವಿದ್ಯುತ್ ಕೊಡುತ್ತಾರೆ. ಅದೇ ಸಂದರ್ಭದಲ್ಲಿಯೇ ಕೊಳವೆಬಾವಿಯಿಂದ ನೀರನ್ನು ಮೇಲೆತ್ತಿ ಪೂರೈಸಲಾಗುತ್ತದೆ. ಆದರೆ, ಇದು ಸವುಳು ನೀರು. ಬಳಕೆಗಷ್ಟೇ ಸೀಮಿತ. ಸಿಹಿ ನೀರನ್ನು ತರಲು ಊರಿನಿಂದ ಒಂದು ಕಿ.ಮೀ. ದೂರದಲ್ಲಿರುವ ರೈತರ ಹೊಲಗಳಿಗೆ ಹೋಗುವುದು ಅನಿವಾರ್ಯ ಎನ್ನುತ್ತಾರೆ ಗ್ರಾಮಸ್ಥರು.

‘ನೀರಿನ ಸಮಸ್ಯೆಯನ್ನು ಗ್ರಾಮ ಪಂಚಾಯಿತಿಯವರು ಕಿವಿಗೆ ಹಾಕಿಕೊಳ್ಳುವುದೇ ಇಲ್ಲ. ಈ ಬಗ್ಗೆ ಪಂಚಾಯಿತಿ ಸಾಮಾನ್ಯ ಸಭೆಯನ್ನೂ ಕರೆಯುವುದಿಲ್ಲ. ಊರಿನಲ್ಲಿ ಎರಡು ಗುಮ್ಮಿಗಳು ಹಾಗೂ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳು ನಿರುಪಯುಕ್ತವಾಗಿವೆ. 15 ಸಾವಿರ ಜನಸಂಖ್ಯೆಗೆ ಇರುವುದು ಒಂದೋ, ಎರಡೋ ಕೊಳವೆಬಾವಿ‌ಗಳಷ್ಟೇ. ಅದೂ ಕರೆಂಟ್‌ ಬಂದರಷ್ಟೇ. ಇಲ್ಲದಿದ್ದರೆ ನೀರೇ ಕಾಣುವುದಿಲ್ಲ’ ಎಂದು ಗ್ರಾಮಸ್ಥರಾದ ಭಾಗ್ಯಶ್ರೀ ಮತ್ತು ಕವಿತಾ ಅಳಲು ತೋಡಿಕೊಂಡರು.

ಪಶು ಆಸ್ಪತ್ರೆಯ ಆವರಣದಲ್ಲಿರುವ ಕೊಳವೆಬಾವಿ‌ಗೆ ಮೋಟಾರ್‌ ಅಳವಡಿಸಿ ಬಟ್ಟೆ ತೊಳೆಯಲು ಬಳಸುವ ಬಾವಿಗೆ ನೀರನ್ನು ಹರಿಸಬಹುದು. ಇಲ್ಲವೇ ಬಾವಿ ಪಕ್ಕದಲ್ಲಿ ನೀರಿನ ತೊಟ್ಟಿಯನ್ನು ಇರಿಸಿದರೆ ನೀರನ್ನು ಸೇದುವ ಬದಲು ಸಾರ್ವಜನಿಕರು ತೊಟ್ಟಿಯಿಂದಲೇ ನೀರನ್ನು ಎತ್ತಿ ಬಟ್ಟೆ ತೊಳೆಯಲು ಬಳಸಬಹುದು. ಗ್ರಾಮದಲ್ಲಿ ಮತ್ತೊಂದು ಹಳೆಯ ಕಾಲದ ಬಾವಿಯೂ ಇದೆ. ಆದರೆ, ಅಲ್ಲಿಯೂ ತ್ಯಾಜ್ಯವನ್ನು ಹಾಕಿದ್ದರಿಂದ ನೀರು ನಿಲ್ಲುತ್ತಿಲ್ಲ. ಆದರೆ, ಇದನ್ನು ಸ್ವಚ್ಛ ಮಾಡಲು ಇಚ್ಛಾಶಕ್ತಿ ಇಲ್ಲ. ಈ ಬಗ್ಗೆ ಮಾತಾಡೋಣವೆಂದರೆ ಸಭೆಯನ್ನೂ ಕರೆದಿಲ್ಲ ಎಂದು ಗ್ರಾ.ಪಂ. ಸದಸ್ಯ ಸೈಫನ್‌ ಹೇಳಿದರು.

ಎಲ್ಲಿ ಹೋಯ್ತು ಕೋಟ್ಯಂತರ ರೂಪಾಯಿ?

ಇಲ್ಲಿಯವರೆಗೆ  ₹ 2.50 ಕೋಟಿಗಿಂತಲೂ ಹೆಚ್ಚು ಹಣ ಪಂಚಾಯಿತಿಯಿಂದ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಖರ್ಚು ಮಾಡಲಾಗಿದೆ. ಅದರಲ್ಲಿ ಕುಡಿಯುವ ನೀರಿಗಾಗಿ ಪೈಪ್‌ಲೈನ್‌ ಎಳೆಯುವುದು, ಬೋರ್‌ವೆಲ್‌ ಕೊರೆಸುವುದೂ ಸೇರಿದೆ. ಅಷ್ಟಾಗಿಯೂ ನಮ್ಮೂರಿನ ಜನಕ್ಕೆ ಸಾಕಷ್ಟು ನೀರು ಪೂರೈಸಲು ಆಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕದಿಂದ ಒಂದು ಹನಿ ಶುದ್ಧ ನೀರನ್ನೂ ಕುಡಿದಿಲ್ಲ. ಆದರೂ ಅದಕ್ಕೆ ಲಕ್ಷಾಂತರ ರೂಪಾಯಿ ಬಿಲ್‌ ಮಾಡಲಾಗಿದೆ. ಇದನ್ನು ಅಳವಡಿಸಿದವರೂ ಪೂರ್ತಿ ಮಾಡದೇ ಹೋದರು. ಕಬ್ಬಿಣದ ಪೈಪ್ ಅಳವಡಿಸಲಾಗಿದೆ‌ ಎಂದು ನಮೂದಿಸಿ ಬಿಲ್‌ ಮಾಡಲಾಗಿದೆ. ಆದರೆ, ಪ್ಲಾಸ್ಟಿಕ್‌ ಪೈಪ್‌ ಹಾಕಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂಗಣ್ಣ ಮುದ್ದುಡಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು