ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಜನವರಿ 1ರಂದು ಭೀಮಾ ಕೋರೆಗಾಂವ್ ವಿಜಯೋತ್ಸವ

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಡಾ.ಡಿ.ಜಿ.ಸಾಗರ್ ಪತ್ರಿಕಾಗೋಷ್ಠಿ
Last Updated 28 ಡಿಸೆಂಬರ್ 2020, 9:23 IST
ಅಕ್ಷರ ಗಾತ್ರ

ಕಲಬುರ್ಗಿ: ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ನಗರದಲ್ಲಿ ಜನವರಿ 1ರಂದು ದಲಿತರ ಸ್ವಾಭಿಮಾನ ಜಾಗೃತಿ ದಿನ ಹಾಗೂ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ. ಸಾಗರ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘1818ರಲ್ಲಿ ಬ್ರಿಟಿಷ್‌ ಸೈನ್ಯದ ಮಹಾರ್‌ ರೆಜಿಮೆಂಟಿನಲ್ಲಿದ್ದ ದಲಿತ ಸಮುದಾಯದ 500 ಯೋಧರು ಪೇಶ್ವೆಯ 25 ಸಾವಿರ ಸೈನಿಕರನ್ನು ಸೋಲಿಸುವ ಮೂಲಕ ಅಸ್ಪೃಶ್ಯತೆಯಿಂದಾದ ಅವಮಾನಕ್ಕೆ ಸೇಡು ತೀರಿಸಿಕೊಂಡರು. ಯುದ್ಧದಲ್ಲಿ ಹೋರಾಡಿ ವೀರ ಮರಣ ಹೊಂದಿನ ಮಹಾರ್ ಸೈನಿಕರ ಸ್ಮರಣಾರ್ಥ ಭೀಮಾ ಕೋರೆಗಾಂವ್‌ನಲ್ಲಿ ವಿಜಯ ಸ್ಥಂಭವನ್ನು ಸ್ಥಾಪಿಸಿ ಅದರ ಮೇಲೆ ಬ್ರಿಟಿಷ್ ಸರ್ಕಾರ ಪೂರ್ವ ಭಾರತದ ಅತ್ಯಂತ ಯಶಸ್ವಿ ಯುದ್ಧ ಎಂದು ಬಣ್ಣಿಸಿದೆ. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಪ್ರತಿ ವರ್ಷ ಕುಟುಂಬ ಸಮೇತರಾಗಿ ಬಂದು ವಿಜಯ ಸ್ಥಂಭಕ್ಕೆ ಗೌರವ ಸಲ್ಲಿಸುತ್ತಿದ್ದರು’ ಎಂದರು.

ದಲಿತರಲ್ಲಿ ಸ್ವಾಭಿಮಾನವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಇದೇ ಜನವರಿ 1ರಂದು ದಲಿತ ಸಂಘರ್ಷ ಸಮಿತಿ ವತಿಯಿಂದ ವಿಜಯೋತ್ಸವ ಆಚರಿಸಲಾಗುತ್ತಿದೆ. ಮಧ್ಯಾಹ್ನ 2ಕ್ಕೆ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಮೆರವಣಿಗೆ ಹೊರಟು ಜಗತ್ ವೃತ್ತವನ್ನು ತಲುಪಲಿದೆ. ಸಂಜೆ 5ಕ್ಕೆ ಅಲ್ಲಿ ಬಹಿರಂಗ ಸಮಾವೇಶ ನಡೆಯಲಿದೆ. ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಸಮಾವೇಶ ಉದ್ಘಾಟಿಸಲಿದ್ದು, ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಶಾಸಕ ಬಸವರಾಜ ಮತ್ತಿಮಡು, ಪೊಲೀಸ್ ಕಮಿಷನರ್ ಸತೀಶಕುಮಾರ್ ಎನ್., ಡಿಸಿಪಿ ಡಿ. ಕಿಶೋರಬಾಬು, ಹೈ.ಕ. ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ, ಜಿ.ಪಂ. ಉಪಾಧ್ಯಕ್ಷೆ ಶೋಭಾ ಸಿರಸಗಿ, ಗುಲಬರ್ಗಾ ವಿ.ವಿ. ಕುಲಸಚಿವ ಪ್ರೊ. ಸಂಜೀವಕುಮಾರ ಎಂ, ಅಧೀಕ್ಷಕ ಎಂಜಿನಿಯರ್ ಸುರೇಶ ಶರ್ಮಾ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ರೈತ ಹೋರಾಟಕ್ಕೆ ಬೆಂಬಲ: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ಕಳೆದ ಒಂದು ತಿಂಗಳಿಂದ ಬೀಡು ಬಿಟ್ಟಿರುವ ರೈತರ ಹೋರಾಟವನ್ನು ಬೆಂಬಲಿಸುತ್ತೇವೆ. ರೈತ ಬದುಕಿದರೆ ಜಗತ್ತು ಇರುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೊಂಡುತನ ಬಿಟ್ಟು ರೈತರೊಂದಿಗೆ ತಾವೇ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಸುರೇಶ ಹಾದಿಮನಿ, ಕೃಷ್ಣಪ್ಪ ಕರಣಿಕ, ಜಿಲ್ಲಾ ಸಂಘಟನಾ ಸಂಚಾಲಕರಾದ ಉಮೇಶ ನರೋಣಾ, ರೇವಣಸಿದ್ದಪ್ಪ ಜಾಲಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT