ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಕೇಶ್ವಾರ ಗ್ರಾಮಕ್ಕೆ ಭೂಕಂಪನ ಅಧ್ಯಯನ ತಂಡ ಭೇಟಿ

ಗಡಿಕೇಶ್ವಾರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ತಜ್ಞರ ಪರಿಶೀಲನೆ
Last Updated 9 ನವೆಂಬರ್ 2021, 5:12 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಭೂಕಂಪನ ಪೀಡಿತ ಗಡಿಕೇಶ್ವಾರ ಹಾಗೂ ಸುತ್ತಲಿನ ಗ್ರಾಮಗಳಿಗೆ ಭೂವಿಜ್ಞಾನಿಗಳು ಹಾಗೂ ಭೂಕಂಪನ ತಜ್ಞರು ಸೋಮವಾರ ಭೇಟಿ ನೀಡಿ ವಿವಿಧೆಡೆ ಸ್ಥಳ ಪರಿಶೀಲಿಸಿದರು.

ತಾಲ್ಲೂಕಿನ ಗಡಿಕೇಶ್ವಾರದಲ್ಲಿ ಭೂಕಂಪನದಿಂದ ಮನೆಯ ಗೋಡೆಗಳು ಬಿರುಕು ಬಿಟ್ಟಿರುವುದನ್ನು ಪರಿಶೀಲಿಸಿದರು. ವಿಜ್ಞಾನಿಗಳು ಗೋಡೆಯ ದೃಢತೆಯನ್ನು ಸಾಧನವೊಂದರ ಮೂಲಕ ಪರೀಕ್ಷಿಸಿ ಸ್ಥಳೀಯರಿಂದ ಮಾಹಿತಿ ಪಡೆದರು.

ಕೊರವಿ ಗ್ರಾಮಕ್ಕೆ ಭೇಟಿ ನೀಡಿದ ವಿಜ್ಞಾನಿಗಳ ತಂಡ, ಕೊರವಂಜೇಶ್ವರಿ ದೇವಿಯ ಬಾವಿಯಲ್ಲಿ 6 ಕೊಡಗಳು ತೇಲಿರುವುದನ್ನು ವೀಕ್ಷಿಸಿದರು. ಈ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದರು. ಎಲ್ಲ ಕೊಡಗಳು ಬೋರಲಾಗಿ (ಬಾಳಿ) ಬಿದ್ದಿದ್ದವು. ಯಾವಾಗ ಬೇಕಾದರೂ ತೇಲುತ್ತವೆ ಯಾವಾಗ ಬೇಕಾದರೂ ಮುಳುಗುತ್ತವೆ. ಇವು ಭಕ್ತರು ಕೊರವಂಜೇಶ್ವರಿ ದೇವಿಗೆ ಹರಕೆ ಹೊತ್ತು ನೀರು ತುಂಬಿಸಿ ಬಿಡುತ್ತಾರೆ ಎಂದು ಗ್ರಾಮಸ್ಥರು ವಿಜ್ಞಾನಿಗಳಿಗೆ ಮಾಹಿತಿ ನೀಡಿದರು. ಬಾವಿಯಲ್ಲಿ ತೇಲಿದ ಕೊಡಗಳಲ್ಲಿ ಮಣ್ಣಿನ ಕೊಡಗಳು ಹಾಗೂ ತಾಮ್ರದ ಕೊಡಗಳು ಇವೆ ಎಂದು ತಿಳಿಸಿದರು.

ನೀರಿನ ಸಾಂದ್ರತೆ ಇದಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ ಎಂದು ವಿಜ್ಞಾನಿಯೊಬ್ಬರು ತಿಳಿಸಿದಾಗ, ನೀರು ಪರೀಕ್ಷಿಸಿ ಅದರ ಸಾಂದ್ರತೆಯ ವರದಿ ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಆಯುಕ್ತ ಡಾ.ಮನೋಜ ರಾಜನ್ ಅವರು ಗ್ರಾಮೀಣ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೂ ಮೊದಲು ಗಡಿಕೇಶ್ವಾರ ಗ್ರಾಮದ ಹೊಲವೊಂದರಲ್ಲಿ ಭೂಕಂಪನದ ಕೇಂದ್ರಬಿಂದು ದಾಖಲಾದ ಸ್ಥಳ ಪರಿಶೀಲಿಸಿ ಸುಣ್ಣದ ಕಲ್ಲಿನ ನಿಕ್ಷೇಪದ ಮೇಲೆ ಕಪ್ಪುಶಿಲೆ ಸರಿಯಾಗಿ ಕೂರದಿರುವುದು ಕಾರಣವಿರುವ ಬಗ್ಗೆ ವಿಜ್ಞಾನಿಗಳು ಸಂಶಯ ವ್ಯಕ್ತಪಡಿಸಿದರು. ಪ್ರಾಥಮಿಕ ಮಾಹಿತಿ ಪ್ರಕಾರ ಗಡಿಕೇಶ್ವಾರ ಜನ ಭಯ ಪಡುವ ಅಗತ್ಯವಿಲ್ಲ. ಇಲ್ಲಿ ಭಾರಿ ಭೂಕಂಪನ ಸಾಧ್ಯತೆ ಕಡಿಮೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ ಎಂದು ಮನೋಜ ರಾಜನ್ ಹೇಳಿದರು.

ನಂತರ ಚಿಂಚೋಳಿ ಪಟ್ಟಣದ ಹೊರ ವಲಯದಲ್ಲಿ ಕಲ್ಲುಗಣಿಗಾರಿಕೆಯ ಪ್ರದೇಶಕ್ಕೆ ಭೇಟಿ ನೀಡಿ ಸುಣ್ಣದ ಕಲ್ಲಿನ ಮಾದರಿ ಪರಿಶೀಲಿಸಿದರು.

ಡಾ. ಮನೋಜ ರಾಜನ್ ನೇತೃತ್ವದ ತಂಡದಲ್ಲಿ ಹೈದರಾಬಾದ್‌ನ ರಾಷ್ಟ್ರೀಯ ಭೂಭೌತಿಕ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಶಶಿಧರ, ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಸಂ (ಎನ್‌ಐಆರ್‌ಎಂ) ಸಂಸ್ಥೆಯ ಸಿಸ್ಮಾಲಜಿ ವಿಭಾಗದ ತಾಂತ್ರಿಕ ಮುಖ್ಯಸ್ಥ ಡಾ. ಬಾಲಸುಬ್ರಹ್ಮಣ್ಯಂ, ಬೆಂಗಳೂರಿನ ಸಿಎಸ್‌ಐಆರ್ ಸಂಸ್ಥೆಯ ಡಾ.ಚಿರಂಜೀವಿ ಜಿ ವಿವೇಕ, ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ)ನ ಲ್ಯಾಂಡ್‌ಸ್ಲೈಡ್‌ ಡಿವಿಜನ್ ಡೈರೆಕ್ಟರ್ ಆರ್. ಸಂಜೀವ, ನ್ಯಾಷನಲ್ ಸೆಂಟರ್ ಆಫ್ ಸಿಸ್ಮಾಲಜಿ ಸಂಸ್ಥೆಯ ವಿಜ್ಞಾನಿ ಡಾ. ಎ.ಪಿ. ಸಿಂಗ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಬೆಂಗಳೂರಿನ ಉಪ ನಿರ್ದೇಶಕ (ಯೋಜನೆ) ಹರೀಶ ಎಚ್‌ಪಿ, ಕಡಗಂಚಿಯ ಕೇಂದ್ರೀಯ ವಿಶ್ವ ವಿದ್ಯಾಲಯದ ಭೂವಿಜ್ಞಾನ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಪ್ರೊ.ಲಿಂಗದೇವರು, ಮೈಸೂರು ವಿ.ವಿ.ಯ ಭೂವಿಜ್ಞಾನ ವಿಭಾಗದ ಅತಿಥಿ ಬೋಧಕರಾದ ದರ್ಶನ ಎಂ.ಎಸ್, ಸಿದ್ದರಾಜು ಕೆ. ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಹಿರಿಯ ಭೂಕಂಪ ವಿಜ್ಞಾನಿಗಳಾದ ಎಸ್. ಜಗದೀಶ, ಅಭಿನಯ, ಎಸ್.ಇಮಿಲಿ ಪ್ರಭಾ ಜೋಶಿ, ಅಣವೀರಪ್ಪ ಬಿರಾದಾರ ಇದ್ದರು.

ತಹಶೀಲ್ದಾರ್ ಅಂಜುಮ ತಬಸ್ಸುಮ್, ಕಾಳಗಿ ತಹಶೀಲ್ದಾರ್ ನಾಗನಾಥ ತರಗೆ, ಇಒ ಅನಿಲ್ ಕುಮಾರ ರಾಠೋಡ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT