ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೇಡಂ: ಇಷ್ಟಾರ್ಥ ಪೂರೈಸುವ ಬೆನಕನಹಳ್ಳಿ ‘ಬೆನಕ’

ಪರಿಸರ ಸ್ನೇಹಿ ಪರಂಪರೆಗೆ ಗ್ರಾಮಸ್ಥರ ಸಹಕಾರ
Published : 28 ಸೆಪ್ಟೆಂಬರ್ 2024, 5:52 IST
Last Updated : 28 ಸೆಪ್ಟೆಂಬರ್ 2024, 5:52 IST
ಫಾಲೋ ಮಾಡಿ
Comments

ಸೇಡಂ: ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ‘ಪರಿಸರ ಸ್ನೇಹಿ ಬೆನಕ’ನ (ಮಣ್ಣಿನ ಗಣಪ) ಇಷ್ಟಾರ್ಥ ಪೂರೈಸುತ್ತಾನೆ ಎಂಬ ಪ್ರತೀತಿ ಇದೆ.

ಭಕ್ತರ ಭಕ್ತಿಯ ಪರಂಪರೆ ತಲೆ-ತಲಾಂತರಗಳಿಂದ ನಡೆದುಕೊಂಡು ಬಂದಿದ್ದು, ನೂರಾರು ವರ್ಷಗಳ ಐತಿಹ್ಯವಿದೆ. ಗ್ರಾಮದ ಭಕ್ತರೆಲ್ಲರೂ ಕೂಡಿಕೊಂಡು ಸ್ವತಃ ಮಣ್ಣಿನ ಬೆನಕನನ್ನು ತಯಾರಿಸಿ, 21 ದಿನಗಳ ಕಾಲ ಪ್ರತಿಷ್ಠಾಪಿಸಿ ಆರಾಧಿಸುತ್ತಾರೆ. ಭಕ್ತಿಯ ಒಮ್ಮತದ ಶಕ್ತಿ ಬೆನಕನ ಅನುಗ್ರಹಕ್ಕೆ ಕಾರಣವೆನ್ನುವುದು ಇಲ್ಲಿನವರ ವಾಡಿಕೆ.

ಬೆನಕನಹಳ್ಳಿ ಗಣೇಶ ಎಂದರೆ ಸೇಡಂ ಸೇರಿಂತೆ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪ್ರಸಿದ್ಧಿ. ಕಲ್ಯಾಣ ಕರ್ನಾಟಕ ಭಾಗದ ವಿವಿಧೆಡೆಯಿಂದ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. 21 ದಿನಗಳ ಕಾಲ ಪ್ರತಿಷ್ಠಾಪಿಸುವ ಪರಿಸರ ಸ್ನೇಹಿ ಬೆನಕನೇ ಗ್ರಾಮಸ್ಥರ ಆರಾಧ್ಯ ದೈವ. 21ನೇ ದಿನ ‘ಅರ್ಥಿ’ ಕಾರ್ಯಕ್ರಮ ಮಾಡಲಾಗುತ್ತದೆ. ಜೊತೆಗೆ ‘ಬೆನಕೋತ್ಸವ’ದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸತ್ಕರಿಸಲಾಗುತ್ತದೆ.

‘ಸಂತಾನ ಸಮಸ್ಯೆ, ಮದುವೆ, ಮನೆ ನಿರ್ಮಾಣ, ರೋಗ ರುಜಿನ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಭಕ್ತರು ಬೆನಕನ ಬಳಿ ಪ್ರಾರ್ಥಿಸಿಕೊಂಡಲ್ಲಿ ಸಿದ್ಧಿಸಿವೆ. ಜೊತೆಗೆ ಮನದಲ್ಲಿಯೇ ಇಷ್ಟಾರ್ಥಗಳನ್ನು ಬೇಡಿಕೊಂಡಲ್ಲಿ ಈಡೇರಿವೆ ಎನ್ನುತ್ತಾರೆ’ ಗ್ರಾಮಸ್ಥರು.

ಗ್ರಾಮದಲ್ಲಿ ಸಂಭ್ರಮ: ವರ್ಷದಲ್ಲಿ ಅನೇಕ ಹಬ್ಬಗಳಿದ್ದರೂ ಸಹ ಬೆನಕನಹಳ್ಳಿ ಗ್ರಾಮಸ್ಥರಿಗೆ ಬೆನಕೋತ್ಸವವೇ ಪ್ರಮುಖ ಹಬ್ಬ. ಗ್ರಾಮದಿಂದ ಬೇರೆ ಊರಿಗೆ ಮದುವೆ ಮಾಡಿಕೊಟ್ಟ ಮಹಿಳೆಯರೂ ಆಗಮಿಸಿ ಈ ಹಬ್ಬದಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ. ಬೆನಕನಳ್ಳಿ ಸೇರಿದಂತೆ ಸುತ್ತಲಿನ, ಕೋಡ್ಲಾ, ದಿಗ್ಗಾಂವ, ಕಲಕಂಭ, ಅಳ್ಳೊಳ್ಳಿ, ಸಿಂಧನಮಡು, ಡೋಣಗಾಂವ, ಸಾತನೂರ, ಊಡಗಿ, ಸೇಡಂ, ಕಲಬುರಗಿ, ಬೀದರ್‌, ರಾಯಚೂರು, ಆಂಧ್ರಪ್ರದೇಶ ಮತ್ತು ತೆಲಂಗಾಣದ ಕಡೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಆರಾಧಿಸುವ ಪರಂಪರೆ ಒಂದೆಡೆಯಾದರೆ, ಧಾರ್ಮಿಕ ಪರಂಪರೆಗೆ ಸಾವಿರಾರು ಜನ ಸಾಕ್ಷಿಯಾಗುತ್ತಿರುವುದು ಮತ್ತೊಂದು ಮೈಲಿಗಲ್ಲು.

18 ದಿನ ಮೂರ್ತಿ ತಯಾರಿ

ಗ್ರಾಮಸ್ಥರು 18 ದಿನಗಳವರೆಗೆ ಸಂಪೂರ್ಣ ಮೂರ್ತಿ ಸಿದ್ಧಪಡಿಸುತ್ತಾರೆ. ಸಿದ್ಧತೆಯಲ್ಲಿ ಕೋಲಿ ಸಮಾಜದವರು ಬೆನಕನ ದೇವಾಲಯ ಸ್ವಚ್ಛಗೊಳಿಸಿ ಸುಣ್ಣ ಬಣ್ಣ ಬಳಿದರೆ ಕುರುಬ ಸಮಾಜದವರು ಬೆನಕನ ತಯಾರಿಕೆಗೆ ಬೇಕಾದ ಕೆಂಪು ಮಣ್ಣು ತರುತ್ತಾರೆ. ವೀರಶೈವ ಲಿಂಗಾಯತ ಸಮಾಜದವರು ಮಣ್ಣನ್ನು ಸೋಸಿ ಹದ ಮಾಡುತ್ತಾರೆ. ಬ್ರಾಹ್ಮಣ ಸಮಾಜದವರು ಬೆನಕನ ಮೂರ್ತಿ ತಯಾರಿಸುತ್ತಾರೆ. ವಿವಿಧ ಸಮಾಜದವರು ಜವಾಬ್ದಾರಿಯಿಂದ ತಮ್ಮ ಕಾರ್ಯವನ್ನು ನಿಭಾಯಿಸುತ್ತಾರೆ. ‘ಪರಿಸರ ಸ್ನೇಹಿ ಬೆನಕ’ನನ್ನೆ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತಿರುವುದರಿಂದ ಈ ಗ್ರಾಮಕ್ಕೆ ‘ಬೆನಕನಹಳ್ಳಿ’ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ.

ಗ್ರಾಮದಲ್ಲಿ ಪಿಒಪಿ ಗಣೇಶ ಪ್ರತಿಷ್ಠಾಪನೆಗೆ ಗ್ರಾಮಸ್ಥರ ಸ್ವಯಂ ಪ್ರೇರಣೆಯಿಂದ ನಿಷೇಧವಿದೆ. ಊರಿನವರು ಸ್ವತಃ ಮಣ್ಣಿನ ಬೆನಕನನ್ನು 21 ದಿನಗಳವರೆಗೆ ತಯಾರಿಸಿ ಪ್ರತಿಷ್ಠಾಪಿಸುತ್ತಾರೆ. ಇದು ನಮ್ಮೂರಿನ ಮಹತ್ವದ ಹಬ್ಬ
-ಶಿವಲಿಂಗರೆಡ್ಡಿ ಪಾಟೀಲ, ಬೆನಕೋತ್ಸವ ಸಮಿತಿ ಸಂಚಾಲಕ
ಪರಿಸರ ಸ್ನೇಹಿ ಬೆನಕನನ್ನು ಗ್ರಾಮಸ್ಥರೆ ಸ್ವತಃ ತಯಾರಿಸಿ ತಲೆ ತಲಾಂತರದಿಂದ ಪ್ರತಿಷ್ಠಾಪಿಸಿಕೊಂಡು ಬರುತ್ತಿದ್ದಾರೆ. ಇದು ಕಲ್ಯಾಣ ಕರ್ನಾಕ ಭಾಗದಲ್ಲಿಯೇ ವಿಶೇಷ ಪ್ರಸಿದ್ಧಿ ಪಡೆದಿದೆ
-ದೇವಿಂದ್ರಪ್ಪ, ಆವಂಟಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT