ಮಂಗಳವಾರ, ಅಕ್ಟೋಬರ್ 20, 2020
21 °C
ಕೇಂದ್ರದ ನೀತಿಗಳ ಬಗ್ಗೆ ಚರ್ಚೆ, ಅತ್ಯಾಚಾರ– ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹ

ಸಂಘರ್ಷ ಸಪ್ತಾಹ; ಫೇಸ್‌ಬುಕ್‌ ಲೈವ್‌ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು ಮತ್ತು ಕಾರ್ಮಿಕರ ವಿರುದ್ಧ ಅನುಸರಿಸುತ್ತಿರುವ ಕ್ರಮಗಳನ್ನು ಖಂಡಿಸಿ ಎಐಡಿಎಸ್‌ಒ ಸಂಘಟನೆ ವತಿಯಿಂದ ಅ. 11ರಂದು ಬೆಳಿಗ್ಗೆ 11ಕ್ಕೆ ‘ಎಐಡಿಎಸ್‌ಒ ಕರ್ನಾಟಕ ಪೇಜ್‌’ ಮೂಲಕ ಫೇಸ್‌ಬುಕ್‌ ಲೈವ್‌ ಚರ್ಚೆ ಆಯೋಜಿಸಲಾಗಿದೆ. 

ಈ ಕಾರ್ಯಕ್ರಮದಲ್ಲಿ ಸಂಘಟನೆಯ ಆಖಿಲ ಭಾರತ ಅಧ್ಯಕ್ಷ ವಿ.ಎನ್.ರಾಜಶೇಖರ್ ಅವರು ಮಾತನಾಡುತ್ತಿದ್ದು, ಈ ‘ಸಂಘರ್ಷ ಸಪ್ತಾಹ’ದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಪಾಲ್ಗೊಳ್ಳಬೇಕು ಎಂದು ಎಐಡಿಎಸ್‌ಒ ಕರೆ ನೀಡಿದೆ.

ಈ ಬಗ್ಗೆ ನಗರದಲ್ಲಿ ಶನಿವಾರ ನಡೆದ ಗುಂಪು ಸಭೆಯಲ್ಲಿ ಮಾತನಾಡಿದ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಚ್. ಹಣಮಂತ, ‘ಕೋವಿಡ್‌ನಂಥ ಸಂಕಷ್ಟದ ದಿನಗಳಲ್ಲಿ ರೈತರು, ಕಾರ್ಮಿಕರ ಬದುಕು ದುಸ್ತರವಾಗಿದೆ. ಆದರೆ, ಇದೇ ಅವಧಿಯ ಲಾಭ ಪಡೆದುಕೊಂಡು ಕೇಂದ್ರ ಸರ್ಕಾರವು ಎಪಿಎಂಸಿ ಕಾಯ್ದೆ, ಅಗತ್ಯವಸ್ತುಗಳ ಕಾಯ್ದೆ, ವಿದ್ಯುತ್ ಕಾಯ್ದೆ, ಭೂಸುಧಾರಣೆ ಕಾಯ್ದೆಗಳಂಥ ಮಹತ್ವದ ಕಾಯ್ದೆಗಳಿಗೆ ಬೇಕಾಬಿಟ್ಟಿಯಾಗಿ ತಿದ್ದುಪಡಿ ತಂದಿದೆ. ಇದು ದುಡಿಯುವ ವರ್ಗವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ’ ಎಂದು ದೂರಿದರು.

‘ದೇಶದಲ್ಲಿ ಬಡತನ, ನಿರುದ್ಯೋಗಳಂತಹ ಹಲಾವಾರು ಸಮಸ್ಯೆಗಳು ತಾಂಡವಾಡುತ್ತಿವೆ. ಇದರ ಬಗ್ಗೆ ಚೆಕಾರ ಎತ್ತದ ಸರ್ಕಾರ ಇಂತಹ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ. ಇದರ ವಿರುದ್ಧ ದೇಶದಾದೇಂತ ರೈತ– ಕಾರ್ಮಿಕರು ಜಂಟಿಯಾಗಿ ಬಿದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟಕ್ಕೆ ಹಲಾವಾರು ಪ್ರಗತಿಪರ ಸಂಘಟನೆಗಳೂ ಬೆಂಬಲ ವ್ಯಕ್ತ ಪಡಿಸುತ್ತಿದ್ದು, ಸರ್ಕಾರ ಮಾತ್ರ ಕಣ್ಣು ತೆರೆಯುತ್ತಿಲ್ಲ. ಇನ್ನೊಂದೆಡೆ ಸರ್ಕಾರವನ್ನು ಎಚ್ಚರಿಸಬೇಕಾದ ವಿರೋಧ ಪಕ್ಷಗಳೂ ಬಂಡವಾಳ ಶಾಹಿಗಳ ಬಾಲ ಬಡಿಯುತ್ತಿವೆ’ ಎಂದು ಅವರು ಆಕ್ರೋಶ ಹೊರ ಹಾಕಿದರು.

‘ಇನ್ನೊಂದೆಡೆ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ದಿನೇದಿನೇ ಹೆಚ್ಚುತ್ತಿವೆ. ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅಮಾನುಷವಾಗಿ ಕೊಲೆ ಮಾಡಿದ ದುರುಳರನ್ನು ಸರ್ಕಾರವೇ ರಕ್ಷಿಸುತ್ತಿದೆ. ನಿರ್ಭಯಾ ಪ್ರಕರಣ ಮುಗಿದ ಮೇಲೆ ಇಲ್ಲಿಯವರೆಗೆ ನಡೆದ ಅತ್ಯಾಚಾರ, ಕೊಲೆ ಪ್ರಕರಣಗಳನ್ನು ಲೆಕ್ಕ ಹಾಕಿದರೆ ಇಡೀ ದೇಶವೇ ತಲೆ ತಗ್ಗಿಸುವಂತಾಗುತ್ತದೆ’ ಎಂದು ಸಂಘಟನೆ ಜಿಲ್ಲಾ ಘಟಕದ ಕಾರ್ಯದರ್ಶಿ ಈರಣ್ಣ ಇಸಬಾ ಬೇಸರ ವ್ಯಕ್ತಪಡಿಸಿದರು.

’ಎನ್‌ಸಿಆರ್‌ಬಿ ವರದಿ ಪ್ರಕಾರ 2019ರಲ್ಲಿ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿನ ಒಟ್ಟು ಅತ್ಯಾಚಾರ ಪ್ರಕರಣಗಳಲ್ಲಿ ಶೇ 89.5ರಷ್ಟು ವಿಚಾರಣೆಗೆ ಒಳಪಟ್ಟಿಲ್ಲ. 2019ವರೆಗೂ ನ್ಯಾಯಾಲಯದಲ್ಲಿ ದಾಖಲಾಗಿದ್ದ 1,62,741 ಪ್ರಕರಣಗಳಲ್ಲಿ 24,848 ಆ ವರ್ಷ ಹೊಸದಾಗಿ ದಾಖಾಲಾದ ಪ್ರಕರಣಗಳು. ಆದರೆ, 2019ರ ಅಂತ್ಯದೊಂದಿಗೆ ಕೇವಲ 17,109 ಪ್ರಕರಣಗಳು ಮಾತ್ರಾ ಇತ್ಯರ್ಥಗೊಂಡಿದೆ. ಇನ್ನು ನ್ಯಾಯಾಲಯವು ಇತ್ಯರ್ಥಪಡಿಸಿದ ಶೇ 70ಕ್ಕಿಂತ ಹೆಚ್ಚಿನ ಪ್ರಕರಣಗಳಲ್ಲಿ ಶಿಕ್ಷೆಯೇ ಆಗಿಲ್ಲ. ಇದು ದೇಶದ ನ್ಯಾಯ ವ್ಯವಸ್ಥೆಯ ಚಿತ್ರಣ. ಈ ಎಲ್ಲ ಘಟನೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅಶ್ಲೀಲ ಸಿನಿಮಾ, ಸಾಹಿತ್ಯ, ಹೆಣ್ಣುಮಕ್ಕಳನ್ನು ಮಾರಾಟದ ಸರಕಾಗಿ ನೋಡುವ ಕೀಳು ದೃಷ್ಟಿಕೋನವೇ ಕಾರಣವಾಗಿದೆ’ ಎಂದರು.

‘ಇಂಥದ್ದೇ ಗಂಭೀರ ಸಮಸ್ಯೆಗಳನ್ನು ನಾವು ಎತ್ತಿಹಿಡಿದು ಕೇಂದ್ರಕ್ಕೆ ಅದರ ನೈತಿಕ ಬಲವನ್ನು ತೋರಿಸಬೇಕಾಗಿದೆ. ಅದಕ್ಕಾಗಿ ಅ. 6ರಿಂದ 13ರವರೆಗೆ ರಾಜ್ಯದ್ಯಾಂತ ಸಂಘರ್ಷ ಸಪ್ತಾಹ ಚಳವಳಿಗೆ ಕರೆಕೊಡಲಾಗಿದೆ. ಜಿಲ್ಲಾ, ತಾಲ್ಲೂಕು, ಹಳ್ಳಿ ಮಟ್ಟಗಳಲ್ಲಿ ವಿದ್ಯಾರ್ಥಿಗಳು ಚರ್ಚೆ ನಡೆಸಲಿದ್ದಾರೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.