ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಹೋರಾಟ

ಸಂಯುಕ್ತ ಹೋರಾಟ– ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಮೂರು ತಾಸು ಧರಣಿ, ಕೇಂದ್ರದ ವಿರುದ್ಧ ಆಕ್ರೋಶ
Last Updated 26 ನವೆಂಬರ್ 2021, 15:32 IST
ಅಕ್ಷರ ಗಾತ್ರ

ಕಲಬುರಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ, ಸಂಯುಕ್ತ ಹೋರಾಟ– ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ತಾಲ್ಲೂಕಿನ ನಂದೂರು ಗ್ರಾಮದ ಬಳಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಯಿತು.

ರೈತ ಸಂಘ, ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ, ರೈತ ಕೃಷಿಕಾರ್ಮಿಕರ ಸಂಘ, ವಿವಿಧ ಯುವಜನ ಸಂಘಟನೆಗಳ ಸದಸ್ಯರೂ ಈ ಹೋರಾಟದಲ್ಲಿ ಪಾಲ್ಗೊಂಡರು. ಕೆಲವು ರೈತರು ಎತ್ತು– ಚಕ್ಕಡಿಗಳ ಸಮೇತ ಬಂದು ಅವುಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲೇ ನಿಲ್ಲಿಸಿದರು. ಮುಖಂಡರು ಹೆದ್ದಾರಿ ಮಧ್ಯದಲ್ಲೇ ಕುಳಿತು ಮೂರು ತಾಸು ಧರಣಿ ಮಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ನಿರಂತರ ಘೋಷಣೆ ಮೊಳಗಿಸಿದರು.

ಕಲಬುರಗಿ– ದೇವಸುಗೂರು ಮಾರ್ಗದ ಹೆದ್ದಾರಿ–150 ಬಂದ್‌ ಮಾಡಿದ್ದರಿಂದ ಕೆಲಕಾಲ ವಾಹನ ಸಂಚಾರದಲ್ಲಿ ಅಡಚಣೆ ಉಂಡಾಯಿತು. ನಂತರ ಪೊಲೀಸರು ಮಾರ್ಗ ಬದಲಾಯಿಸುವ ಮೂಲಕ ವಾಹನ ದಟ್ಟಣೆ ನಿಯಂತ್ರಿಸಿದರು. ನಗರದಿಂದ ಹೊರಹೋಗಬೇಕಿದ್ದ ವಾಹನಗಳನ್ನು ರಿಂಗ್‌ ರಸ್ತೆಯ ಮೂಲಕ ಸಂಚರಿಸುವಂತೆ ಸೂಚಿಸಲಾಯಿತು. ನಗರಕ್ಕೆ ಬರುವ ವಾಹನಗಳಿಗೆ ಮುಗಳನಾಗಾಂವ ಗ್ರಾಮದ ಬಳಿಯೇ ವಿಶ್ವವಿದ್ಯಾಲಯ ಮಾರ್ಗದ ರಸ್ತೆಗೆ ತಿರುವು ನೀಡಲಾಯಿತು.

ಮುಖಂಡರ ಆಕ್ರೋಶ: ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್‌ ಮುಖಂಡ ಬಿ.ಆರ್. ಪಾಟೀಲ, ‘ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪ‍ಡೆದಿದೆ ಎಂದು ಹೇಳಿದ ತಕ್ಷಣ ನಾವು ಹೋರಾಟ ನಿಲ್ಲಿಸುವುದಿಲ್ಲ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನು ಬೆಂಬಲ ನೀಡುವವರೆ ಹಾಗೂ ಸ್ವಾಮಿನಾಥನ್‌ ವರದಿಯನ್ನು ಪೂರ್ಣವಾಗಿ ಜಾರಿ ಮಾಡುವವರೆಗೂ ಹೋರಾಟ ಮುಂದುವರಿಯುತ್ತದೆ’ ಎಂದರು.

ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಚ್‌.ವಿ. ದಿವಾಕರ್‌ ಮಾತನಾಡಿ, ‘ರಾಜ್ಯದ 25 ಕಡೆ ಈ ರೀತಿ ಹೆದ್ದಾರಿ ತಡೆ ಮಾಡಲಾಗಿದೆ. ಸ್ವಾತಂತ್ರ್ಯ ಹೋರಾಟದ ನಂತರ ದೇಶದಲ್ಲಿ ಅಷ್ಟೇ ಪ್ರಬಲವಾದ ಹೋರಾಟ ನಡೆದಿದೆ. ಬ್ರಿಟಿಷ್‌ ಧೋರಣೆಯನ್ನೇ ಹೊಂದಿರುವ ಮೋದಿ ರೈತರ ಮುಂದೆ ಮಂಡಿಯೂರಿದ್ದಾರೆ. ರೈತರು ಕಾರ್ಮಿಕರು ಒಂದಾಗಿ ನಿಂತರೆ ಎಂಥದ್ದೇ ದೊಡ್ಡ ಬಂಡವಾಳಶಾಹಿ ಶಕ್ತಿ, ಪ್ರಬಲ ಸರ್ಕಾರ ಕೂಡ ಏನೂ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಈ ಹೋರಾಟ ನೀಡಿದೆ’ ಎಂದರು.

ಮುಖಂಡರಾದ ಮೌಲಾ ಮುಲ್ಲಾ, ಭೀಮಾಶಂಕರ ಮಾಡ್ಯಾಳ, ಎಸ್‌.ಬಿ.ಮಹೇಶ, ನಾಗೇಂದ್ರಪ್ಪ ತಂಭೆ, ಮಲ್ಲಣ್ಣಗೌಡ, ರಮೇಶ ರಾಗಿ, ಎಸ್.ಆರ್. ಕೊಲ್ಲೂರ, ಶೌಕತ್‌ಅಲಿ ಅಲಿಆಲೂರ, ಅರ್ಜುನ ಗೊಬ್ಬೂರ ಹಾಗೂ ನಂದೂರ–ಕೆ ಮತ್ತು ನಂದೂರ–ಬಿ ಗ್ರಾಮದ ಮುಖಂಡರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT