ಸೋಮವಾರ, ಮಾರ್ಚ್ 20, 2023
24 °C
ಜಿಲ್ಲಾಧಿಕಾರಿ ತಮ್ಮನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ

ಕಲಬುರಗಿ | ಕೆಐಎಡಿಬಿಗೆ ಭೂಮಿ: ಕಡಿಮೆ ದರಕ್ಕೆ ರೈತರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ನಗರದ ಹೊರವಲಯದ ನಂದೂರ (ಕೆ) ಗ್ರಾಮದ 506 ಎಕರೆ ಭೂಮಿ ಸ್ವಾಧೀನಕ್ಕೆ ಪರಿಹಾರ ನಿಗದಿ ಮಾಡುವ ಸಭೆಯಲ್ಲಿ ರೈತರು ಎಕರೆಗೆ ₹ 60 ಲಕ್ಷ ನೀಡುವಂತೆ ಪಟ್ಟು ಹಿಡಿದಿದ್ದರಿಂದ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲಿಲ್ಲ. ಸಭೆ ನಡೆಯುತ್ತಿದ್ದಾಗ ಜಿಲ್ಲಾಧಿಕಾರಿ ನಿಂದಿಸಿದ್ದಾರೆ ಎಂದು ಆರೋಪಿಸಿ ಕೆಲ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಸೋಮವಾರ 100ಕ್ಕೂ ಹೆಚ್ಚಿನ ರೈತರು ನಾಲ್ಕಾರು ವಾಹನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದರು. ಸಭೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಭೆ ವೇಳೆ ಮಾತನಾಡಿದ ರೈತರು, ‘ಈಗ ನಿಗದಿ ಮಾಡಿರುವ ದರ ಕಡಿಮೆಯಿದೆ. ನಮಗೆ ಎಕರೆಗೆ ₹ 60 ಲಕ್ಷ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟರು.

‘ಈ ವೇಳೆ ಜಿಲ್ಲಾಧಿಕಾರಿ ಅವರು ಅಸಂವಿಧಾನಿಕ ಪದ ಬಳಸಿ ರೈತರನ್ನು ಹೊರ ಹಾಕುವಂತೆ ತಮ್ಮ ಸಿಬ್ಬಂದಿಗೆ ತಿಳಿಸಿದ್ದಲ್ಲದೆ, ಕಾನೂನು ರೀತಿ ಭೂಮಿ ವಶಕ್ಕೆ ಪಡೆಯುತ್ತೇವೆ’ ಎಂದು ರೈತರು ಆರೋಪಿಸಿದರು.

ದಿಢೀರ್ ಪ್ರತಿಭಟನೆ: ಜಿಲ್ಲಾಧಿಕಾರಿ ಅವರು ರೈತರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಜನರ ಕಷ್ಟ ಆಲಿಸಬೇಕಾದ ಜಿಲ್ಲಾಧಿಕಾರಿ ತೋರಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲ ಕಾಲ ರೈತರು ದಿಢೀರ್ ಧರಣಿ ನಡೆಸಿದರು. ರೈತರ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ನಿಂದಿಸುತ್ತಾರೆ. ಅನ್ನ ನೀಡುವ ಜಮೀನನ್ನು ಕೆಐಎಡಿಬಿಗೆ ನೀಡಲಾಗುತ್ತಿದೆ ಎಂದು ರೈತರು ಕಿಡಿಕಾರಿದ್ದಾರೆ.

ನಂದೂರ ಬಳಿಯಿರುವ ಜಮೀನಿನ ಪಹಣಿಗಳಲ್ಲಿ ಈಗಾಗಲೇ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುತ್ತಿದೆ ಎಂದು ದಾಖಲಿಸಲಾಗಿದೆ. ಇದು ಅಕ್ಷರಶಃ ಅನ್ಯಾಯವಾಗಿದೆ. ನಾವು ಒಪ್ಪಿಗೆ ನೀಡದೆ ನಮ್ಮ ಜಮೀನು ಸ್ವಾಧೀನ ಮಾಡಿಕೊಂಡಿದ್ದಾದರೂ ಹೇಗೆ? ಇದರಿಂದ ನಮಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಅಲ್ಲದೇ ಬ್ಯಾಂಕುಗಳು ಸಾಲ ನೀಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

’ಅವಾಸ್ತವಿಕ ದರ ಕೇಳಿದರೆ ಹೇಗೆ?‘

ನಂದೂರ (ಕೆ) ಸುತ್ತಲಿನ ಭೂಮಿಗೆ ಮಾರ್ಗಸೂಚಿ ದರಕ್ಕಿಂತ ನಾಲ್ಕು ಪಟ್ಟು ಪರಿಹಾರ ನೀಡಲು ಅವಕಾಶವಿದೆ. ಅದರಂತೆ ಖುಷ್ಕಿ ಭೂಮಿ ಎಕರೆಗೆ ₹ 23 ಲಕ್ಷ, ರಸ್ತೆ ಪಕ್ಕದ ಭೂಮಿಗೆ ₹ 27 ಲಕ್ಷ ಪರಿಹಾರ ನೀಡಲು ಅವಕಾಶವಿದೆ. ಅದನ್ನು ಒಪ್ಪಿಕೊಳ್ಳುವಂತೆ ರೈತರಿಗೆ ಹೇಳಿದ್ದೆ. ಆದರೆ, ರೈತರು ಅವಕಾಶವಿಲ್ಲದಿದ್ದರೂ ತಮ್ಮೊಂದಿಗೆ ವಕೀಲರನ್ನು ಕರೆತಂದಿದ್ದರು. ಹೀಗಾಗಿ, ಸಭೆ ಮುಂದುವರೆಸಲಿಲ್ಲ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ಸ್ಪಷ್ಟಪಡಿಸಿದರು.

ಘಟನೆ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘₹ 60 ಲಕ್ಷ ಬೆಲೆ ನಿಗದಿಗೆ ರೈತರು ಒತ್ತಾಯಿಸಿದರು. ಅಷ್ಟು ಹಣ ನಿಗದಿ ಮಾಡಿದರೆ ಅದನ್ನು ಕೆಐಎಡಿಬಿ ಅಭಿವೃದ್ಧಿಪಡಿಸಿದಾಗ ಅದರ ಮೌಲ್ಯ ₹ 1 ಕೋಟಿ ದಾಟುತ್ತದೆ. ಅಷ್ಟೊಂದು ಹಣ ತೆತ್ತು ಉದ್ಯಮಿಗಳು ಬರುತ್ತಾರೆಯೇ? ಅದೇ ಬೆಲೆಯಲ್ಲಿ ತುಮಕೂರಿನಲ್ಲೇ ಭೂಮಿ ಸಿಗುತ್ತದೆ. ಅಲ್ಲದೇ, ಸರ್ಕಾರದ ಮಾರ್ಗಸೂಚಿದರಕ್ಕಿಂತ ನಾಲ್ಕು ಪಟ್ಟು ಹೆಚ್ಚಿಗೆ ಕೊಡಲು ಅವಕಾಶವಿದೆ. ಅದನ್ನು ಬಿಟ್ಟು ಕೇಳಿದಷ್ಟು ದರ ನಿಗದಿ ಮಾಡುವುದು ಅಸಾಧ್ಯ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು