ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರಕ್ಕೆ ಆಗ್ರಹಿಸಿ ಡಿಸಿ ಕಚೇರಿಗೆ ಮುತ್ತಿಗೆ

ಅಫಜಲಪುರ ತಾಲ್ಲೂಕು ಕಬ್ಬು ಬೆಳೆಗಾರರ ಪ್ರತಿಭಟನೆ, ರಜ್ಯ ಸರ್ಕಾರದ ವಿರುದ್ಧ ಕಿಡಿ
Last Updated 2 ನವೆಂಬರ್ 2020, 11:20 IST
ಅಕ್ಷರ ಗಾತ್ರ

ಕಲಬುರ್ಗಿ: ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾಳಾದ ಬೆಳೆಗಳಿಗೆ ಶೀಘ್ರ ಪರಿಹಾರ ನೀಡಬೇಕು ಹಾಗೂ ಬಾಧಿತ ಗ್ರಾಮಗಳಲ್ಲಿ ಶಾಶ್ವತವಾಗಿ ಸ್ಥಳಾಂತರಿಸಬೇಕು ಎಂಬುದೂ ಸೇರಿದಂತೆ ವಿವಿಧ ಭೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಫಜಲಪುರ ತಾಲ್ಲೂಕು ಘಟಕದ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.‌

ಇಡೀ ಜಿಲ್ಲೆಯ ರೈತರು ತತ್ತರಿಸಿಹೋಗಿದ್ದರೂ ರಾಜ್ಯ ಸರ್ಕಾರ ಬಿಡಿಗಾಸು ಪರಿಹಾರ ನೀಡಿಲ್ಲ. ತಕ್ಷಣ ನೆರವಿಗೆ ಬರಬೇಕು ಎಂದು ಆಗ್ರಹಿಸಿ ರೈತರು ಎರಡು ತಾಸು ಜಿಲ್ಲಾಧಿಕಾರಿ ಕಚೇರಿ ಎದುದು ಪ್ರತಿಭಟನೆ ನಡೆಸಿದರು. ಆದರೆ, ಯಾವ ಅಧಿಕಾರಿಯೂ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಲಿಲ್ಲ. ಇದರಿಂದ ರೊಚ್ಚಿಗೆದ್ದ ಪ್ರತಿಭಟನೆಕಾರರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಆಗ ಅಡ್ಡಬಂದ ಪೊಲೀಸರು ಬಾಗಿಲ ಬಳಿಯೇ ತಡೆದು ನಿಲ್ಲಿಸಿದರು.

ಈ ಸಂದರ್ಭದಲ್ಲಿ ರೈತರು ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.‌ ಮಧ್ಯಪ್ರವೇಶಿಸಿದ ಇನ್‌ಸ್ಪೆಕ್ಟರ್‌ ಸೋಮೇಶ ಗಡದೆ ಅವರು, ರೈತರನ್ನು ಸಮಾಧಾನ ಮಾಡಿದರು. ಜಿಲ್ಲಾಧಿಕಾರಿ ಅವರ ಭೇಡಿಗೆ ಐವರಿಗೆ ಅವಕಾಶ ಮಾಡಿಕೊಡಲಾಗುವುದು. ರೈತರು ಸಮಾಧಾನವಾಗಿ ವರ್ತಿಸಬೇಕು ಎಂದು ಮನವಿ ಮಾಡಿದರು.‌

ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ ಸ್ಥಳಕ್ಕೆ ಬಂದು ರೈತರ ಸಮಸ್ಯೆ ಆಲಿಸಿ, ಮನೆಗಳ ಹಾನಿ ಪರಿಹಾರ ಪ್ರತಿಕ್ರಿಯೆ ನಡೆಯುತ್ತಿದೆ ಎಂದು ಸಮಜಾಯಿಷಿ ನೀಡಿದರು.

ಇದಕ್ಕೆ ಸಮಾಧಾನಗೊಳ್ಳದ ರೈತರು, ಇಲ್ಲಿಯವರೆಗೆ ಯಾರಿಗೂ ಪರಿಹಾರ ತಲುಪಿಲ್ಲ. ಜಿಲ್ಲಾಧಿಕಾರಿಗಳೇ ಬಂದು ಭೇಟಿ ಮಾಡಬೇಕೆಂದು ಪಟ್ಟು ಹಿಡಿದರು.‌‌ ಕೊನೆಗೆ ಜಿಲ್ಲಾಧಿಕಾರಿಗಳೊಂದಿಗೆ ಕೆಲ ರೈತ ಮುಖಂಡರನ್ನು ಮಾತ್ರ ಭೇಟಿ ಮಾಡಿಸುವುದಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಬಳಿಕ ಶಾಂತರಾದ ರೈತರು, ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗೆ ತಲುಪಿಸಿದರು.

ಸಂಘದ ಅಫಜಲಪುರ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಹೂಗಾರ ಮಾತನಾಡಿ, ರೈತರ ಸಮಸ್ಯೆಯನ್ನು ಮೇಲಧಿಕಾರಿಗಳೇ ಆಲಿಸಬೇಕು ಹಾಗೂ ಮನವಿ ಪತ್ರವನ್ನು ಸ್ವೀಕರಿಸಬೇಕೆಂದು ಒತ್ತಾಯಿಸಿದರು.

ಭೀಮಾ ನದಿ ಪ್ರವಾಹದಿಂದ ಕಬ್ಬು, ಹತ್ತಿ, ತೊಗರಿ ಸೇರಿ ಎಲ್ಲ ಬೆಳೆಗಳಿಗೆ ಪರಿಹಾರ ನೀಡಬೇಕು ಮತ್ತು ಪ್ರವಾಹದಿಂದ ಮುಳುಗಡೆಯಾದ ಹಳ್ಳಿಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿದರು.

ರಾಜ್ಯ ಸರ್ಕಾರ ಸಲಹಾ ಬೆಲೆ (ಎಸ್‌ಎಪಿ) ನಿಯಮಾವಳಿ ಅಡಿಯಲ್ಲೇ ಕಬ್ಬಿಗೆ ಬೆಲೆ ನಿಗದಿ ಮಾಡಬೇಕು. ಆದರೆ, ಸರ್ಕಾರ ಇನ್ನು ಸಲಹಾ ಬೆಲೆ ನಿಗದಿ ಮಾಡಿಲ್ಲ. ಆದರೂ ಕಾರ್ಖಾನೆಗಳು ಕಬ್ಬು ನುರಿಸಲು ಆರಂಭಿಸಿವೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ತಕ್ಷಣವೇ ಜಿಲ್ಲಾಧಿಕಾರಿಗಳು ಎಚ್ಚೆತ್ತುಕೊಂಡು ರೈತರ ನೆರವಿಗೆ ಬರಬೇಕು ಎಂದೂ ಆಗ್ರಹಿಸಿದರು.

ಕೇಂದ್ರ ಸದ್ಯ ಸದ್ಯ ಘೋಷಿಸಿದ ಎಫ್‌ಆರ್‌ಪಿ ಅವೈಜ್ಞಾನಿಕವಾಗಿದೆ. ಅದನ್ನು ಮರುಪರಿಶೀಲಿಸಬೇಕು. ಸಕ್ಕರೆ ಕಾರ್ಖಾನೆಗಳು ಇಳುವರಿಯಲ್ಲಿ ರೈತರಿಗೆ ಮೋಸ ಮಾಡುತ್ತಿವೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆಗಳ ನಡುವೆ ದ್ವಿಪಕ್ಷೀಯ ಒಪ್ಪಂದ ಜಾರಿಗೆ ತಂದಿದ್ದರೂ ಕಾರ್ಖಾನೆಗಳು ಇದನ್ನು ಪಾಲಿಸುತ್ತಿಲ್ಲ. ಸರ್ಕಾರ ಅಂಥ ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಿದರು.

ಭೀಮಾನದಿ ಪ್ರವಾಹದಿಂದ ಮುಳುಗಡೆಯಾದ ಹವಳಗಾ, ಭಂಕಲಗಾ, ದೇ.ಕಲ್ಲೂರ, ಹಿಂಚಗೇರಾ, ಗುಡ್ಡೆವಾಡಿ, ಫಟ್ಟರಾಗ ಫತ್ತರಾಗ, ಸೊನ್ನ, ದೇವಲ ಗಾಣಗಾಪು ಸೇರಿದಂತೆ ವಿವಿಧ ಗ್ರಾಮಗಳ ಜನರೂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT