ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳ್ಳ ಅಮಾವಾಸ್ಯೆ ಸಂಭ್ರಮ; ‘ಹುಲ್ಲು ಹುಲ್ಲಿಗೋ, ಚೆಲ್ಲ ಚೆಲ್ಲಂಬರಿಗೋ’

ಭೂಮಿ ತಾಯಿಗೆ ಪೂಜೆ ಸಲ್ಲಿಸಿದ ರೈತರು
Published 12 ಜನವರಿ 2024, 5:53 IST
Last Updated 12 ಜನವರಿ 2024, 5:53 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಸಾರ್ವಜನಿಕ ಉದ್ಯಾನ ಗುರುವಾರ ಜನರಿಂದ ತುಂಬಿ ತುಳುಕುತ್ತಿತ್ತು. ಚಿಣ್ಣರ ಚಿಲಿಪಿಲಿ, ಹಿರಿಯರ ಉಭಯ ಕುಶಲೋಪರಿ, ಘಮ ಘಮ ಖಾದ್ಯಗಳು, ಆಟಿಕೆ ವ್ಯಾಪಾರಿಗಳು, ಸುಲಿಗಾಯಿ ಮಾರುವ ಅಜ್ಜಿ, ಎಲ್ಲವೂ ಜಾತ್ರೆಯ ಚಿತ್ರಣದಂತೆ ಕಾಣುತ್ತಿತ್ತು.

ಎಳ್ಳ ಅಮಾವಾಸ್ಯೆ ಅಂದಾಕ್ಷಣ, ಎತ್ತಿನ ಚಕ್ಕಡಿ ಕಟ್ಟಿಕೊಂಡು ಇಲ್ಲವೇ ಟ್ರ್ಯಾಕ್ಟರ್‌ನಲ್ಲಿ ಕುಟುಂಬಸ್ಥರೆಲ್ಲಾ ಸೇರಿ ಭೂರಿ ಭೋಜನದೊಂದಿಗೆ ಹೊಲಕ್ಕೆ ಹೋಗಿ ಚರಗ ಚೆಲ್ಲುವುದು ಸಂಪ್ರದಾಯ. ಆದರೆ ನಗರದ ಮಂದಿಗೆ ಗುರುವಾರ ಸಾರ್ವಜನಿಕ ಉದ್ಯಾವನವೇ ಹೊಲವಾಗಿ ಮಾರ್ಪಟ್ಟಿತ್ತು. ಹೊಲ ಇಲ್ಲದವರು, ಹೊಲಗಳು ದೂರದ ಊರುಗಳಲ್ಲಿ ಇರುವವರು, ಮಳೆ ಕೊರತೆಯಿಂದ ಬೆಳೆ ಕೈಕೊ‌ಟ್ಟು ಬೇಸರದಲ್ಲಿರುವವರು ಎಲ್ಲರೂ ಸಾರ್ವಜನಿಕ ಉದ್ಯಾನವನದಲ್ಲಿಯೇ ಎಳ್ಳ ಅಮಾವಾಸ್ಯೆ ಆಚರಿಸಿದರು.

ಸುಮಾರು 6 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಮಹಾನಗರದ ಬಹುತೇಕ ಮಂದಿ ಎಳ್ಳ ಅಮಾವಾಸ್ಯೆಗೆ ಉದ್ಯಾನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಪ್ರತಿವರ್ಷ ಇಲ್ಲಿ ಜಾಗದ ಸಮಸ್ಯೆ ಕಾಡುತ್ತದೆ. ಬೆಳಿಗ್ಗೆ 10 ಗಂಟೆ ಹೊತ್ತಿಗೆ ಕುಟುಂಬದವರೊಬ್ಬರು ಆಗಮಿಸಿ ಜಮಖಾನ ಹಾಸಿ ತಮ್ಮ ಜಾಗ ಭದ್ರಪಡಿಸಿಕೊಂಡಿರುತ್ತಾರೆ. ಬೆಳಿಗ್ಗೆ 11 ಗಂಟೆಗಾಗಲೇ ಬಂದು ಕುಳಿತಿದ್ದ ಆಳಂದ ತಾಲ್ಲೂಕಿನ ಸರಸಂಬಾ ಗ್ರಾಮದ ಹಿರಿಯರೊಂದಿಗೆ ‘ಪ್ರಜಾವಾಣಿ’ ಮಾತಿಗಿಳಿದಾಗ ‘ಜಾಗಕ್ಕಾಗಿ ಬಂದು ಕುಳಿತಿದ್ದು ತಿಳಿಯಿತು. ಈ ಬಾರಿ ತೊಗರಿ ಬಿತ್ತಿದ್ದ ಅವರು ಬರದಿಂದಾಗಿ ಬೇಸರವಾಗಿ ಜಮೀನಿನತ್ತ ಹೋಗುತ್ತಿಲ್ಲ’ ಎಂದು ಉತ್ತರಿಸಿದರು. ಇನ್ನು ಜಾಗ ಸಿಗದಿದ್ದರಿಂದ ಕೆಲವರು ಬುದ್ಧ ವಿಹಾರದೆಡೆ, ವಿಶ್ವವಿದ್ಯಾಲಯದ ಆವರಣದೆಡೆಗೆ ತೆರಳಿದ್ದರು.

ಧರ್ಮಾತೀತ ಆಚರಣೆ: ನಿಸರ್ಗ ಪ್ರತಿಯೊಬ್ಬರಿಗೂ ಬೇಕು. ಪ್ರಕೃತಿ ಮಡಿಲಲ್ಲಿ ಮನುಷ್ಯ ಮಗುವಾಗಿ ಬಿಡುತ್ತಾನೆ. ಹೀಗಾಗಿ ಭೂತಾಯಿಗೆ ನಮಿಸುವ ಎಳ್ಳ ಅಮಾವಾಸ್ಯೆಯನ್ನು ಜನ ಧರ್ಮಾತೀತವಾಗಿ ಆಚರಣೆ ಮಾಡುತ್ತಾರೆ. ಉದ್ಯಾನವನದಲ್ಲಿ ಹಿಂದೂಗಳಷ್ಟೆ ಅಲ್ಲದೇ, ಮುಸ್ಲಿಂ, ಕ್ರಿಶ್ಚಿಯನ್‌ ಸಮುದಾಯದವರೂ ಜಮಾವಣೆ ಆಗಿದ್ದರು. ಕುಟುಂಬದೊಂದಿಗೆ ಬುತ್ತಿ ಕಟ್ಟಿಕೊಂಡು ಬಂದು ಊಟ ಸವಿಯುತ್ತಿದ್ದರು.

ಬಗೆ ಬಗೆಯ ಖಾದ್ಯಗಳು: ಹಬ್ಬಕ್ಕಾಗಿ ಬಹುತೇಕರು ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿದ್ದರು. ಅದರಲ್ಲೂ ಕುಸನೂರು ನಿವಾಸಿ ಗೀತಾ ಕುಲಕರ್ಣಿ ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ಶೇಂಗಾ ಹೋಳಿಗೆ, ಮಾಲ್ದಿ, ಭಜ್ಜಿ ಪಲ್ಯೆ, ಜೋಳದ ಹಿಟ್ಟಿನ ಕಡುಬು. ಬದನೆಕಾಯಿ ಭರ್ತ, ಕಾಳು ಪಲ್ಯ, ಶೇಂಗಾ ಹಿಂಡಿ, ಈರುಳ್ಳಿ ಚಟ್ಟಿ, ಚಿತ್ರಾನ್ನ, ಮೊಸರನ್ನ, ಜೋಳದ ನುಚ್ಚು ಸೇರಿದಂತೆ ವಿಶೇಷ ಖಾದ್ಯಗಳನ್ನು ತಯಾರಿಸಿಕೊಂಡು ಬಂದಿದ್ದರು. ಅಕ್ಕ ಪಕ್ಕದವರಿಗೂ ಹಂಚಿ ಉಣ್ಣುತ್ತಿದ್ದರು.

ಭರ್ಜರಿ ವ್ಯಾಪಾರ: ಇನ್ನು ಮಕ್ಕಳು ಚೆಂಡು, ದಾಂಡು, ಶಟಲ್‌ ಕಾಕ್‌, ನೃತ್ಯ ಮಾಡಲು ಸಣ್ಣ ಟೇಪ್‌ ರೆಕಾರ್ಡರ್‌ ಸೇರಿದಂತೆ ಆಟಿಗೆ ಸಾಮಾನುಗಳನ್ನು ಹಿಡಿದು ಆಗಮಿಸಿದ್ದರು. ಆಟಿಗೆ ಸಾಮಾನು ತರದವರು ಅಲ್ಲೇ ಖರೀದಿಸುತ್ತಿದ್ದುದು ಕಂಡು ಬಂತು. ಹೀಗಾಗಿ ಆಟಿಗೆ ಸಾಮಾನುಗಳನ್ನು ಹೊತ್ತು ಮಾರುತ್ತಿದ್ದವರಿಗೂ ಭರ್ಜರಿ ವ್ಯಾಪಾರವಾಗಿ ಅಮಾವಾಸ್ಯೆ ಬೆಳಕು ಮೂಡಿಸಿತ್ತು.

ಕಳೆದ ಎರಡು ದಿನಗಳಿಂದ ಹಬ್ಬದ ಸಿದ್ಧತೆ ನಡೆಸಿದ್ದವು. ಹೊಲ ಶಹಾಪುರ ತಾಲ್ಲೂಕಿನಲ್ಲಿರುವುದರಿಂದ ಇಲ್ಲಿಯೇ ಹಬ್ಬ ಆಚರಿಸುತ್ತಿದ್ದೇವೆ. ಸಂಬಂಧಿಕರನ್ನು ಆಹ್ವಾನಿಸಿದ್ದೇವೆ.
–ಗೀತಾ ಕುಲಕರ್ಣಿ ಕುಸನೂರು ನಿವಾಸಿ

ಇದು ಈ ವರ್ಷದ ಮೊದಲ ಹಬ್ಬ. ವರ್ಷದ ಮೊದಲ ಹಬ್ಬವನ್ನು ಸಂಪ್ರದಾಯದಂತೆ ಸೂಕ್ತ ರೀತಿಯಲ್ಲಿ ಆಚರಿಸಿದರೆ ವರ್ಷ ಪೂರ್ತಿ ಎಲ್ಲವೂ ಸುಗಮವಾಗಿ ನಡೆಯುತ್ತದೆ ಪ್ರಿಯಾಂಕಾ ಶಹಬಜಾರ ನಿವಾಸಿ

ಹಬ್ಬದ ಸಡಗರ

ಕಲಬುರಗಿ ಜಿಲ್ಲೆಯ ಪ್ರತಿ ಹಳ್ಳಿಗಳಲ್ಲೂ ಎಳ್ಳ ಅಮಾವಾಸ್ಯೆ ಸಂಭ್ರಮ ಮನೆ ಮಾಡಿತ್ತು. ರೈತರು ಕುಟುಂಬದೊಂದಿಗೆ ಹೊಲಗಳಿಗೆ ತೆರಳಿ ಚೆರಗ ಚೆಲ್ಲಿ ಸಂಭ್ರದಿಂದ ಹಬ್ಬ ಆಚರಣೆ ಮಾಡಿದರು. ಎತ್ತಿನ ಗಾಡಿ ಟ್ರ್ಯಾಕ್ಟರ್ ಕಾರು ಜೀಪು ಬೈಕ್ ಟಂಟಂ ಆಟೊ ಮೂಲಕ ಹೊಲಗಳಿಗೆ ತೆರಳಿದ್ದರು. ಕಡುಬು ಹೋಳಿಗೆ ಅನ್ನ ವಿವಿಧ ಬಗೆಯ ಪಲ್ಯಗಳ ನೈವೇದ್ಯ ಮಿಶ್ರಣ ಮಾಡಿ ಭೂದೇವಿಗೆ ಚೆರಗ ಚೆಲ್ಲಿದರು. ಸಾಮೂಹಿಕವಾಗಿ ಹಬ್ಬದ ಭೋಜನ ಸವಿದು ಹೊಲಗಳಲ್ಲಿ ತಿರುಗಾಡಿದರು. ಸಂಜೆ ಜೋಳದ ಐದು ದಂಟುಗಳನ್ನು ಕಿತ್ತುಕೊಂಡು ಮನೆಗೆ ತಂದು ದೇವರ ಜಗುಲಿಯ ಮೇಲಿಟ್ಟು ನಮಸ್ಕರಿಸಿ ಹಬ್ಬದ ಸಂಭ್ರಮಕ್ಕೆ ತೆರೆ ಎಳೆದರು.

ಚೆರಗ ಚೆಲ್ಲುವುದಕ್ಕಿದೆ ಕಾರಣ!

ಹಿಂಗಾರು ಬೆಳೆಯಾಗಿ ರೈತರು ಅತಿ ಹೆಚ್ಚು ಜೋಳ ಮತ್ತು ಕಡಲೆಯನ್ನು ಬೆಳೆಯುತ್ತಾರೆ. ಎಳ್ಳ ಅಮಾವಾಸ್ಯೆ ಸಮಯಕ್ಕೆ ಹಿಂಗಾರು ಪೈರು ಬೆಳೆದು ನಿಂತಿರುತ್ತದೆ. ಜೋಳ ಹಾಲುಗಾಳು ತುಂಬಿರುತ್ತದೆ. ಕಡಲೆ ಸುಲಿಗಾಯಿಯಾಗಿರುತ್ತದೆ. ಈ ವೇಳೆ ಜೋಳಕ್ಕೆ ಹಕ್ಕಿಗಳ ಕಾಟ ಕಡಲೆಗೆ ಕೀಟಗಳ ಕಾಟ ಹೆಚ್ಚು. ಈ ಹೊತ್ತಲ್ಲಿ ‘ಹುಲ್ಲು ಹುಲ್ಲಿಗೋ ಚೆಲ್ಲ ಚೆಲ್ಲಂಬರಿಗೋ’ ಎಂದು ಚೆರಗ ಚೆಲ್ಲಿದ ಖಾದ್ಯ ತಿನ್ನಲು ಹಕ್ಕಿಗಳು ಜೋಳದ ಮಧ್ಯೆ ಕೆಳಗಿಳಿಯುತ್ತವೆ. ಆಗ ಖಾದ್ಯದ ಜತೆಗೆ ಕಡಲೆಗೆ ಬಿದ್ದಿರುವ ಕಾಯಿ ಕೊರಕ ಹುಳುಗಳನ್ನು ತಿನ್ನಲು ಶುರುಮಾಡುತ್ತವೆ. ಇದರಿಂದ ಹುಳುಗಳ ನಿಯಂತ್ರಣವಾಗುತ್ತದೆ. ಈ ಕಾರಣಕ್ಕಾಗಿ ಚರಗ ಚೆಲ್ಲುವ ಹಬ್ಬ ಆಚರಿಸಲಾಗುತ್ತದೆ.

ಉದ್ಯಾನ: ಸೌಲಭ್ಯಗಳ ಕೊರತೆ

ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಮೂಲ ಸೌಲಭ್ಯಗಳ ಕೊರತೆ ಎದ್ದುಕಾಣುತ್ತಿತ್ತು. ಜನರು ಬುತ್ತಿಯ ಜೊತೆಗೆ ನೀರಿನ ಕ್ಯಾನ್‌ಗಳನ್ನೂ ಹೊತ್ತು ಬರುತ್ತಿದ್ದರು. ಇನ್ನು ಶೌಚಾಲಯ ಇಲ್ಲದ್ದರಿಂದಲೂ ಮಹಿಳೆಯರು ಪರದಾಡುತ್ತಿದ್ದ ದೃಶ್ಯ ಕಂಡು ಬಂತು. ಶಾಶ್ವತವಾಗಿ ಅಲ್ಲದಿದ್ದರೂ ಇಂತಹ ಸಂದರ್ಭದಲ್ಲಿ ಪಾಲಿಕೆಯವರು ಇ–ಶೌಚಾಲಯಗಳನ್ನು ಸ್ಥಾಪಿಸಬೇಕು ಎಂಬ ಮಾತುಗಳು ಕೇಳಿ ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT