ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂ: ಕಾಗಿಣಾ ಪ್ರವಾಹಕ್ಕೆ ಕೊಚ್ಚಿ ಹೋದ ಬದುಕು

ಭಾರಿ ಮಳೆಯಿಂದ ಹಾನಿಗೊಳಗಾದ ದವಸ ಧಾನ್ಯ, ಸಾಮಗ್ರಿಗಳು, ಅತಂತ್ರ ಸ್ಥಿತಿಯಲ್ಲಿ ಮೀನುಗಾರರು
Last Updated 23 ಸೆಪ್ಟೆಂಬರ್ 2020, 1:06 IST
ಅಕ್ಷರ ಗಾತ್ರ

ಸೇಡಂ: ತಾಲ್ಲೂಕಿನ ಮಳಖೇಡ ಬಳಿ ಕಾಗಿಣಾ ನದಿಯಲ್ಲೇ ಮೀನು ಹಿಡಿದು ಜೀವನ ಸಾಗಿಸುತ್ತಿದ್ದ ಮೀನುಗಾರರ ಬದುಕು ಈಗ ಅಕ್ಷರಶಃ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ನಂಬಿದ್ದ ಕಾಯಕ ಮಾಡಲು ಸಾಮಗ್ರಿಗಳ ಕೊರತೆ, ಆಶ್ರಯ ಪಡೆಯಲು ಸೂಕ್ತ ಸ್ಥಳದ ಕೊರತೆಯನ್ನು ಮೀನುಗಾರರು ಎದುರಿಸುತ್ತಿದ್ದಾರೆ.

ಮಳಖೇಡ ಗ್ರಾಮದ ಸಂಗಾವಿ (ಎಂ) ರಸ್ತೆಗೆ ಹೊಂದಿಕೊಂಡಿರುವ ಮೀನುಗಾರರ ದಯನೀಯ ಸ್ಥಿತಿ ಇದು.

ಸುಮಾರು 10-15 ಕುಟುಂಬಗಳಿರುವ ಈ ಮೀನುಗಾರರಿಗೆ ಮೀನುಗಾರಿಕೆಯೇ ಮುಖ್ಯ ವೃತ್ತಿ. ಬೇರೆ ಕಾಯಕ ಗೊತ್ತಿರದೆ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ಇದ್ದು, ನೆರವಿನ ನಿರೀಕ್ಷೆಯಲ್ಲಿ ಇದ್ದಾರೆ.

‘ಕಟ್ಟಿದ್ದ ಜೋಪಡಿ (ಗುಡಿಸಲು)ಗಳು ಮಳೆ ನೀರಿನ ರಭಸಕ್ಕೆ ನುಚ್ಚುನೂರಾಗಿವೆ. ಗುಡಿಸಲಲ್ಲಿದ್ದ ಸಾಮಗ್ರಿಗಳು, ಬಟ್ಟೆ, ದಿನಸಿ ವಸ್ತು, ದವಸ ಧಾನ್ಯಗಳು ನದಿ ಪಾಲಾಗಿವೆ. ಸದ್ಯ ತಾತ್ಕಾಲಿಕವಾಗಿ ಸಿಕ್ಕ ಬೆಚ್ಚಗಿರುವ ಸ್ಥಳದಲ್ಲಿಯೇ ಮಲಗುತ್ತಿದ್ದೇವೆ. ಪರ್ಯಾಯ ಮಾರ್ಗವಿಲ್ಲದೆ ಸಾಮಗ್ರಿ ಜೋಡಿಸಿ ಮತ್ತೆ ಮೀನುಗಾರಿಕೆ ಮಾಡುವ ಪ್ರಯತ್ನದಲ್ಲಿದ್ದೇವೆ’ ಎನ್ನುತ್ತಾರೆ ಮೀನುಗಾರರು.

ನೆರವಿನ ಹಸ್ತ: ಈಚೆಗೆ ಸೇಡಂನ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮೀನುಗಾರರಿಗೆ ದಿನಸಿ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮರೆದರು. ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಭೇಟಿ ನೀಡಿ ಸಾಂತ್ವನ ಹೇಳಿದರು. ಅಲ್ಲದೆ ಮಾಜಿ ಸಚಿವರ ಆದೇಶದ ಮೇರೆಗೆ ಕಾಂಗ್ರೆಸ್ ಮುಖಂಡ ರಾಜಶೇಖರ ಪುರಾಣಿಕ ಪಡಿತರ ವ್ಯವಸ್ಥೆ ಕಲ್ಪಿಸಿದ್ದಾರೆ. ಹೀಗೆ ದಾನಿಗಳು ಮೀನುಗಾರರ ಕೈಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಇವರತ್ತ ಕಣ್ತೆರೆದು ನೋಡದಿರುವುದು ಬೇಸರ ತಂದಿದೆ ಎನ್ನುತ್ತಾರೆ ಸ್ಥಳೀಯರು.

‘ಪ್ರವಾಹದ ನಂತರ ನಮಗೆ ನೆಲೆಸಲು ಸೂಕ್ತ ಸ್ಥಳ ಇಲ್ಲ. ಸರ್ಕಾರ ವಸತಿ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎನ್ನುತ್ತಾರೆ’ ಮೀನುಗಾರ ಅಂಬ್ರಿಷ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT