ಬುಧವಾರ, ಏಪ್ರಿಲ್ 21, 2021
23 °C
ತಾಲ್ಲೂಕಿನ ವಿವಿಧ ಗ್ರಾ.ಪಂ.ಗಳಿಂದ ವಿಶಿಷ್ಟ ಯೋಜನೆ

ಕಲಬುರ್ಗಿ: ಪ್ಲಾಸ್ಟಿಕ್‌ ಕೊಟ್ಟರೆ ಸಕ್ಕರೆ ಉಚಿತ!

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

ಕಲಬುರ್ಗಿ ತಾಲ್ಲೂಕಿನ ಖಣದಾಳ ಗ್ರಾಮದಲ್ಲಿ ಪ್ಲಾಸ್ಟಿಕ್‌ ಚೀಲಗಳನ್ನು ಗ್ರಾ.ಪಂ. ಸಿಬ್ಬಂದಿ ತೂಕ ಮಾಡಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಇದ್ದಾರೆ

ಕಲಬುರ್ಗಿ: ಪ್ಲಾಸ್ಟಿಕ್‌ ಹಾವಳಿ ತಡೆಯಲು ಕಲಬುರ್ಗಿ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳು ವಿಶಿಷ್ಟ ಯೋಜನೆ ಅಳವಡಿಸಿಕೊಂಡಿದ್ದು, ಪ್ಲಾಸ್ಟಿಕ್ ಚೀಲ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ತಂದು ಕೊಟ್ಟರೆ ಅದಕ್ಕೆ ಪ್ರತಿಯಾಗಿ ಗ್ರಾಮಸ್ಥರಿಗೆ ಅಷ್ಟೇ ತೂಕದ ಸಕ್ಕರೆಯನ್ನು ಉಚಿತವಾಗಿ ನೀಡಲಾಗುತ್ತಿದೆ.

ತಾಲ್ಲೂಕಿನ ಎಲ್ಲ 28 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಸಂಗ್ರಹಿಸುವ ಅಭಿಯಾನ ಆರಂಭಿಸಲಾಗಿದೆ. ಮೊದಲ ಹಂತವಾಗಿ ಖಣದಾಳ, ನಂದಿಕೂರ, ಮಿಣಜಗಿ, ಶರಣ ಸಿರಸಗಿ, ಆಲಗೂಡ, ಹರಸೂರ, ಭೀಮಳ್ಳಿ, ತಾಜ್‌ ಸುಲ್ತಾನಪುರ, ಫಿರೋಜಾಬಾದ್‌ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಪಡೆದು ಸಕ್ಕರೆ ನೀಡುವುದನ್ನು ಆರಂಭಿಸಲಾಗಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ ಅವರು ಇತ್ತೀಚೆಗೆ ಎಲ್ಲ ಜಿಲ್ಲಾ ಪಂಚಾಯಿತಿಗಳ ಸಿಇಒಗಳು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫ್‌ರೆನ್ಸ್‌ ನಡೆಸಿ ಗ್ರಾಮೀಣ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಈ ಬಗ್ಗೆ ಚಿಂತನ–ಮಂಥನ ನಡೆದಾಗ ಹೊಳೆದದ್ದೇ ಪ್ಲಾಸ್ಟಿಕ್‌ ಪಡೆದು ಸಕ್ಕರೆ ನೀಡುವ ಯೋಜನೆ.

‘ಗ್ರಾ.ಪಂ.ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಿಡಿಒಗಳೊಂದಿಗೆ ಚರ್ಚಿಸಿದಾಗ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ಲಾಸ್ಟಿಕ್‌ಗೆ ಬದಲಾಗಿ ಅಕ್ಕಿ ನೀಡುವ ಚಿಂತನೆ ಇತ್ತು. ಆದರೆ, ಪಡಿತರದಲ್ಲಿ ಸಾಕಷ್ಟು ಅಕ್ಕಿ ಸಿಗುತ್ತಿದೆ. ಅದರ ಬದಲಾಗಿ ಸಕ್ಕರೆಯನ್ನೇ ಉಚಿತವಾಗಿ ನೀಡುವ ನಿರ್ಧಾರಕ್ಕೆ ಬಂದೆವು. ಗ್ರಾಮ ಪಂಚಾಯಿತಿಯಿಂದಲೇ ಸಕ್ಕರೆ ಖರೀದಿಸುತ್ತೇವೆ. ಗ್ರಾಮಸ್ಥರು ನೀಡಿದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮರು ಬಳಕೆ ಮಾಡುವ ಘಟಕಕ್ಕೆ ಪೂರೈಸುತ್ತೇವೆ’ ಎಂದು ಕಲಬುರ್ಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಹೇಳಿದರು.

‘ಒಂದು ಪಂಚಾಯಿತಿಯಿಂದ ಕನಿಷ್ಠ ಒಂದು ಕ್ವಿಂಟಲ್ ಪ್ಲಾಸ್ಟಿಕ್ ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದೇವೆ. ಅದಕ್ಕೆ ಪೂರಕವಾಗಿ ಸಕ್ಕರೆಯನ್ನೂ ಖರೀದಿಸುತ್ತೇವೆ. ಗ್ರಾಮದ ವಿವಿಧೆಡೆ ಬಿದ್ದಿರುವ, ತಮ್ಮ ಮನೆ–ಅಂಗಡಿಗಳಲ್ಲಿ ಸಂಗ್ರಹವಾಗಿರುವ ಪ್ಲಾಸ್ಟಿಕ್‌ ಚೀಲಗಳನ್ನು ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ತಲುಪಿಸಬಹುದು’ ಎನ್ನುತ್ತಾರೆ ಅವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು