ಸೋಮವಾರ, ಆಗಸ್ಟ್ 15, 2022
21 °C
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಘೋಷಣೆ

ನೌಕರರಿಗೆ ಏಪ್ರಿಲ್‌ನಿಂದ ಉಚಿತ ಚಿಕಿತ್ಸೆ: ಸಿ.ಎಸ್.ಷಡಾಕ್ಷರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ₹ 50 ಲಕ್ಷದವರೆಗೆ ಉಚಿತ ಚಿಕಿತ್ಸೆ ಕೊಡಿಸುವ ಉದ್ದೇಶವನ್ನು ಸರ್ಕಾರಿ ನೌಕರರ ಸಂಘ ಹೊಂದಿದ್ದು, ಈ ಸಂಬಂಧ ಹಣಕಾಸು ಇಲಾಖೆ ಯೋಜನೆಗೆ ತಗಲುವ ವೆಚ್ಚವನ್ನು ನೀಡಲು ಒಪ್ಪಿದೆ. ಅಗತ್ಯಬಿದ್ದರೆ ಸಂಘವು ವಂತಿಗೆಯನ್ನು ನೀಡಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಘೋಷಿಸಿದರು.

ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಸಂಘದ ಜಿಲ್ಲಾ ಘಟಕ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ–2020 ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಕುರಿತು ವಿಚಾರ ಸಂಕಿರಣ ಹಾಗೂ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಓಪಿಡಿ ಹಾಗೂ ಒಳರೋಗಿಗಳಾಗಿ ದಾಖಲಾಗುವವರಿಗೂ ಉಚಿತ ಚಿಕಿತ್ಸೆ ಸಿಗಲಿದೆ. ನೌಕರರಷ್ಟೇ ಅಲ್ಲದೇ ಅವರ ಕುಟುಂಬದ ಸದಸ್ಯರು ಸೇರಿದಂತೆ ಒಟ್ಟಾರೆ 20 ಲಕ್ಷ ಜನರಿಗೆ ವೈದ್ಯಕೀಯ ಸೌಲಭ್ಯ ದೊರೆಯಲಿದೆ. ಇದಕ್ಕಾಗಿ ವಾರ್ಷಿಕವಾಗಿ ₹ 1200 ಕೋಟಿ ಖರ್ಚಾಗಬಹುದು’ ಎಂದರು.

ಕೆಜಿಐಡಿ ವಿಮೆ ಬೆರಳ ತುದಿಯಲ್ಲೇ ಮಾಹಿತಿ: ರಾಜ್ಯದ ಕೆಜಿಐಡಿ ಪಾಲಿಸಿದಾರರ ಮಾಹಿತಿಯನ್ನು ಗಣಕೀಕರಣಗೊಳಿಸಲಾಗಿದೆ. ಇದರಿಂದ ನೌಕರರು ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಅಲ್ಲದೆ ತಮ್ಮ ಪಾಲಿಸಿಯ ಸಂಪೂರ್ಣ ಮಾಹಿತಿ ಮೊಬೈಲ್‌ಗೆ ಬರುತ್ತದೆ. ಸಾಲ ಪಡೆಯಬೇಕಾದರೆ ಮೊಬೈಲ್ ಮೂಲಕ ಅರ್ಜಿ ಸಲಿಸಿದರೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ’ ಎಂದು ಷಡಾಕ್ಷರಿ ತಿಳಿಸಿದರು.

ವಾಟ್ಸ್‌ಆ್ಯಪ್ ಮೂಲಕ ರಜೆ ಮನವಿ: ಸರ್ಕಾರಿ ನೌಕರರು ತಮಗೆ ರಜೆ ಬೇಕಾದರೂ ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್‌ ಕಳಿಸಿ ಅನುಮತಿ ಪಡೆದುಕೊಳ್ಳಬಹುದು. ಎಲ್ಲ ಸೇವೆ ಆನ್‍ಲೈನ್ ಮೂಲಕ ಪಡೆಯಬಹುದಾಗಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದ್ದು, ನೌಕರರಿಗೆ ಓಡಾಡುವುದು ತಪ್ಪುತ್ತದೆ. ಅಲ್ಲದೆ ಖರ್ಚು ಕೂಡ ಉಳಿಯಲಿದೆ. ಇಂಥದ್ದೊಂದು ಯೋಜನೆಯನ್ನು ಸರ್ಕಾರಿ ನೌಕರರ ಸಂಘರೂಪಿಸುತ್ತಿದೆ ಎಂದರು.

ಸಂಘದ ರಾಜ್ಯ ಉಪಾಧ್ಯಕ್ಷ ಜಗದೀಶಗೌಡ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಸುಮಾರು 1.5 ಲಕ್ಷ ಪ್ರಾಥಮಿಕ ಶಾಲಾ ನೌಕರರಿದ್ದು, ಅದರಲ್ಲಿ ಒಡಕುಂಟಾಗಿ ಹಲವು ಸಂಘಗಳಾಗಿರುವುದು ವಿಷಾದನೀಯ. ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಮಾತ್ರ ಸರ್ಕಾರ ಮಾನ್ಯತೆ ನೀಡಿದ್ದು, ಎಲ್ಲರೂ ಈ ಸಂಘದೊಳಗೆ ಒಂದಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಶ್ರೀಶೈಲ ಸಾರಂಗಮಠದ ಸಾರಂಗಧರಮಠದ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಪಾಟೀಲ, ಗೌರವಾಧ್ಯಕ್ಷ ಶಿವರುದ್ರಯ್ಯ, ಖಜಾಂಚಿ ಶ್ರೀನಿವಾಸ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ, ಸುರೇಶ ಷಡಶ್ಯಾಳ, ಬಿಸಿಎಂ ಇಲಾಖೆ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಸಂಗಾ, ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಮಹಿಪಾಲರೆಡ್ಡಿ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ ಕಟ್ಟಿಮನಿ, ವೆಂಕಟರಾವ ಇಟಗಿ, ಹಣಮಂತರಾವ ಗೋಳದ, ಸತೀಶ ಸಜ್ಜನ್, ಅಬ್ದುಲ್ ಅಜೀಮ್, ಗಣೇಶ ಕಮ್ಮಾರ, ಸಿದ್ದರಾಮ ಗುಣಾರಿ, ಪರಮೇಶ್ವರ ದೇಸಾಯಿ ಪಾಲ್ಗೊಂಡಿದ್ದರು.

ಎನ್‌ಪಿಎಸ್‌ ಹಠಾವೊ, ನೌಕರ ಬಚಾವೊ!

ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಸಂಘದ ಹಲವು ಸದಸ್ಯರು ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್)ಯನ್ನು ವಿರೋಧಿಸಿ ಎನ್‌ಪಿಎಸ್ ಹಠಾವೊ, ನೌಕರ ಬಚಾವೊ ಘೋಷಣೆಯನ್ನು ಮೊಳಗಿಸಿದರು. ಹಲವು ಸದಸ್ಯರು ಹೀಗೆ ಬರೆದ ಟೋಪಿಗಳನ್ನು ಧರಿಸಿ ಬಂದಿದ್ದರು. ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಮಾತನಾಡುವ ಸಂದರ್ಭದಲ್ಲಿಯೂ ಈ ಕುರಿತು ಪ್ರಸ್ತಾಪಿಸುವಂತೆ ಪಟ್ಟುಹಿಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಷಡಾಕ್ಷರಿ, ‘ಎನ್‌ಪಿಎಸ್‌ ಯೋಜನೆಯು ದೇಶದ ಎಲ್ಲ ರಾಜ್ಯಗಳಲ್ಲಿ ಜಾರಿಗೊಳಿಸಲಾಗಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಕೇಂದ್ರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ವಿವಿಧ ರಾಜ್ಯಗಳ ಸರ್ಕಾರಿ ನೌಕರರ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಈ ಬಗ್ಗೆ ಎಲ್ಲರೂ ಸೇರಿ ಒತ್ತಡ ಹಾಕಲಿದ್ದೇವೆ. ಎನ್‌ಪಿಎಸ್‌ ನೌಕರ ವಿರೋಧಿ ಪಿಂಚಣಿ ಯೋಜನೆಯಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು