ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಬೆಲೆ ಹೆಚ್ಚಳ: ಟ್ಯಾಕ್ಸಿ ಚಾಲಕರಿಗೆ ಬರೆ

ದಿನದ ದುಡಿಮೆಯೂ ಕೈಗೆ ದಕ್ಕದ ಪರಿಸ್ಥಿತಿ; ಪೆಟ್ರೋಲ್, ಡೀಸೆಲ್ ದರ ಇಳಿಕೆಗೆ ಆಗ್ರಹ
Last Updated 23 ಫೆಬ್ರುವರಿ 2021, 8:58 IST
ಅಕ್ಷರ ಗಾತ್ರ

ಕಲಬುರ್ಗಿ: ಪೆಟ್ರೋಲ್, ಡೀಸೆಲ್ ಹಾಗೂ ನೈಸರ್ಗಿಕ ಅನಿಲದ ಬೆಲೆ ನಿರಂತರವಾಗಿ ಹೆಚ್ಚುತ್ತಿರುವ ಪರಿಣಾಮ ಆಟೊ ಹಾಗೂ ಟ್ಯಾಕ್ಸಿಗಳನ್ನೇ ನಂಬಿಕೊಂಡು ಬದುಕು ನಡೆಸುತ್ತಿರುವ ಜಿಲ್ಲೆಯ ಸಾವಿರಾರು ಆಟೊ, ಟ್ಯಾಕ್ಸಿ ಚಾಲಕರು ಬೀದಿಗೆ ಬೀಳುವ ಸ್ಥಿತಿಗೆ ತಲುಪಿದ್ದಾರೆ. ದಿನದ ಕೂಲಿಯೂ ಸಿಗದ ಪರಿಸ್ಥಿತಿ ಅವರಿಗೆ ಎದುರಾಗಿದೆ.

ಲಾಕ್‌ಡೌನ್‌ ಭಾಗಶಃ ತೆರವುಗೊಂಡು ನಾಲ್ಕು ತಿಂಗಳು ಮುಗಿದಿದ್ದು, ಆ ಸಂದರ್ಭದಲ್ಲಿದ್ದ ಪ್ರತಿ ಲೀಟರ್‌ ಪೆಟ್ರೋಲ್, ಡೀಸೆಲ್‌ ಬೆಲೆಗೂ ಈಗಿನ ಬೆಲೆಗೂ ಸುಮಾರು ₹12ರಿಂದ ₹18 ಹೆಚ್ಚಳವಾಗಿದೆ. ಗ್ಯಾಸ್ ಬೆಲೆಯು ₹ 13 ಹೆಚ್ಚಳವಾಗಿದೆ. ಆದರೆ, ತೈಲ ಬೆಲೆ ಏರಿಕೆಗೆ ಅನುಗುಣವಾಗಿ ಗ್ರಾಹಕರಿಗೆ ಅದನ್ನು ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚುವರಿ ದರವನ್ನು ಪಡೆಯಲು ಮುಂದಾದರೆ ವಾಹನದಲ್ಲಿ ಕುಳಿತುಕೊಳ್ಳಲು ಗ್ರಾಹಕರು ಒಪ್ಪುತ್ತಿಲ್ಲ. ಹೀಗಾಗಿ, ಸಾರಿಗೆ ಉದ್ಯಮವನ್ನೇ ನಂಬಿಕೊಂಡ ತಮ್ಮ ಬದುಕು ಮೂರಾಬಟ್ಟೆಯಾಗುತ್ತಿದೆ ಎಂದು ಅವರೆಲ್ಲ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

‘ನಿರಂತರ ಹೋರಾಟದ ಬಳಿಕ ರಾಜ್ಯ ಸರ್ಕಾರ ಟ್ಯಾಕ್ಸಿ ಪ್ರಯಾಣದ ದರವನ್ನು ಹೆಚ್ಚಿಸಲು ಒಪ್ಪಿಕೊಂಡಿದೆಯಾದರೂ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ನಾಲ್ಕು ತಿಂಗಳಲ್ಲಿ ಹಿಂದೆಂದೂ ಕಂಡರಿಯಷ್ಟು ತೈಲ ಬೆಲೆ ಏರಿಕೆಯಾಗಿದ್ದರಿಂದ ಆಟೊಗಳನ್ನು ಮಾಲೀಕರಿಂದ ಬಾಡಿಗೆಗೆ ಪಡೆದು ಓಡಿಸುವ ಚಾಲಕರ ಪರಿಸ್ಥಿತಿ ಗಂಭೀರವಾಗುತ್ತಿದೆ. ಬಾಡಿಗೆ ಆಧಾರದ ಆಟೊ ಓಡಿಸುವ ಚಾಲಕರು ನಿತ್ಯವೂ ₹ 250 ಬಾಡಿಗೆಯನ್ನು ಮಾಲೀಕರಿಗೆ ಕೊಡಬೇಕು. ಅದರ ನಂತರ ಬಂದ ಹಣವನ್ನು ತಾವು ಇಟ್ಟುಕೊಳ್ಳಬಹುದು. ಇದರಲ್ಲಿ ಇಂಧನ ಖರ್ಚನ್ನೂ ಚಾಲಕರೇ ಭರಿಸಬೇಕು. ಎಷ್ಟೋ ಬಾರಿ ಇಡೀ ದಿನ ಕೆಲಸ ಮಾಡಿ ₹50 ಮಾತ್ರ ಉಳಿಸಿಕೊಂಡು ಮನೆಗೆ ಹೋದ ಉದಾಹರಣೆಗಳೂ ಇವೆ’ ಎನ್ನುತ್ತಾರೆ ಕೆಲ ಆಟೊ ಚಾಲಕರು.

‘ಮುಂಚೆ ಸಣ್ಣ ಕಾರುಗಳು ₹ 8ರಿಂದ ₹ 9ಕ್ಕೆ ಒಂದು ಕಿ.ಮೀ.ನಂತೆ ಬಾಡಿಗೆಗೆ ಸಿಗುತ್ತಿದ್ದವು. ಆ ಮೊತ್ತವನ್ನು ₹ 11ರಿಂದ ₹ 12ಕ್ಕೆ ಹಾಗೂ ಇನ್ನೋವಾ ಬಗೆಯ ದೊಡ್ಡ ಕಾರುಗಳಿಗೆ ಪ್ರತಿ ಕಿ.ಮೀ.ಗೆ ₹ 14ರಿಂದ ₹ 15 ನಿಗದಿಪಡಿಸಲಾಗಿತ್ತು. ಇದೀಗ ₹ 15ರಿಂದ ₹ 16 ಹೇಳಿದರೆ ಪ್ರವಾಸಿಗರು ಕಾರುಗಳನ್ನು ಬುಕ್‌ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಬಾಡಿಗೆ ಮೊತ್ತದಲ್ಲೇ ಕಾರಿನ ಸಾಲದ ಕಂತು, ಟೈರ್ ಸವೆದ ಖರ್ಚು, ಸರ್ವಿಸಿಂಗ್, ವಿಮಾ ಮೊತ್ತವನ್ನು ಪಾವತಿಸಬೇಕು’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕರ್ನಾಟಕ ರಾಜ್ಯ ಖಾಸಗಿ ಟ್ಯಾಕ್ಸಿ ವಾಹನ ಚಾಲಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರುಕ್ಮಣ್ಣ ಎ. ರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT