ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ತತ್ವಗಳೇ ಕಾಂಗ್ರೆಸ್‌ಗೆ ದಾರಿದೀಪ: ಸಚಿವ ಶರಣಪ್ರಕಾಶ

Published 2 ಅಕ್ಟೋಬರ್ 2023, 14:33 IST
Last Updated 2 ಅಕ್ಟೋಬರ್ 2023, 14:33 IST
ಅಕ್ಷರ ಗಾತ್ರ

ಕಲಬುರಗಿ: ‘ಮಹಾತ್ಮ ಗಾಂಧೀಜಿ ಅವರು ತೋರಿಸಿಕೊಟ್ಟ ಅಹಿಂಸಾ ತತ್ವ ಮತ್ತು ಸತ್ಯಾಗ್ರಹ ಚಳವಳಿ ಕಾಂಗ್ರೆಸ್ ಪಕ್ಷಕ್ಕೆ ದಾರಿದೀಪ. ಅವರ ಆದರ್ಶಗಳ ಮೇಲೆ ಪಕ್ಷ ಸಾಗಲಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಘಟಕ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಗಳಿಗೆ ನಮನ ಸಲ್ಲಿಸಿ ಅವರು ಮಾತನಾಡಿದರು.

‘ಜಗತ್ತಿನ ಹಲವು ರಾಷ್ಟ್ರಗಳು ಸ್ವಾತಂತ್ರ್ಯಕ್ಕಾಗಿ ರಕ್ತ ಕ್ರಾಂತಿಯನ್ನೇ ನಡೆಸಿದ್ದವು. ಆದರೆ, ಮಹಾತ್ಮ ಗಾಂಧೀಜಿ ಅವರು ಅಹಿಂಸಾ ತತ್ವದಲ್ಲಿ ನಂಬಿಕೆ ಇರಿಸಿ, ಸತ್ಯಾಗ್ರಹದ ಮೂಲಕ ಭಾರತವನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಮಾಡಿದರು. ಗಾಂಧಿ ಅವರ ಅಹಿಂಸಾ ತತ್ವ ಹಾಗೂ ಪ್ರಜಾಪ್ರಭುತ್ವವನ್ನು ವಿಶ್ವವೇ ಒಪ್ಪಿಕೊಂಡಿದೆ’ ಎಂದರು.

‘ಗಾಂಧೀಜಿ ಅವರ ಕೊಡುಗೆ ಕೇವಲ ದೇಶದ ಸ್ವಾತಂತ್ರ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಸಮಾಜದಲ್ಲಿನ ಹಲವು ಅನಿಷ್ಟ ಪದ್ಧತಿಗಳನ್ನು ತೊಲಗಿಸಲು ಅವುಗಳ ವಿರುದ್ಧ ಹೋರಾಟ ಮಾಡಿದ್ದರು. ಸಾರ್ವಜನಿಕರ ಹಿತ್ತಾಸಕ್ತಿ, ದೇಶದ ಸುಭದ್ರತೆ ಮತ್ತು ಸಮಾನತೆಗಾಗಿ ತಮ್ಮ ಜೀವನದ ಉದ್ದಕ್ಕೂ ಆದರ್ಶದಿಂದ ಬದುಕಿದರು’ ಎಂದು ಹೇಳಿದರು.

‘ಗಾಂಧೀಜಿ ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಅವರ ವಿಚಾರಧಾರೆಗಳ ಮೇಲೆ ದೇಶವನ್ನು ಕಟ್ಟುವ ನಂಬಿಕೆ ಇರಿಸಿಕೊಂಡಿದ್ದೇವೆ. ಆದರೆ, ಬಿಜೆಪಿಗೆ ಗಾಂಧಿ ಅವರ ತತ್ವಗಳಲ್ಲಿ ನಂಬಿಕೆ ಇಲ್ಲ ಎಂಬುದಕ್ಕೆ ಆ ಪಕ್ಷದ ನಡವಳಿಕೆಗಳು, ನಾಯಕರ ಹೇಳಿಕೆಗಳೇ ಸಾಕ್ಷಿ. ತಾವು ಗಾಂಧಿ ವಿರೋಧಿಗಳೆಂದು ಸ್ಪಷ್ಟವಾಗಿ ಹೇಳುತ್ತಾರೆ’ ಎಂದು ಆಪಾದಿಸಿದರು.

‘ಜೈ ಜವಾನ್ ಜೈ ಕಿಸಾನ್ ಎಂದು ದೇಶಕ್ಕೆಲ್ಲ ಸಾರಿದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು, ರೈತರು ಮತ್ತು ಸೈನಿಕರು ದೇಶದ ಬೆನ್ನೆಲುಬು ಎಂದರು. ರಾಜಕಾರಣದ ವ್ಯವಸ್ಥೆಯಲ್ಲಿ ಆದರ್ಶವಾದ ವ್ಯಕ್ತಿತ್ವ ಹೊಂದಿದ್ದವರು. ಈ ಇಬ್ಬರು ಮಹಾನ್ ಪುರುಷರ ಸಿದ್ಧಾಂತಗಳ ಮೇಲೆ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಜನಸಾಮಾನ್ಯರು ಹಾಗೂ ಬಡವರಿಗೆ ಸ್ವಾಭಿಮಾನದ ಬದುಕು ಕಲ್ಪಿಸುವುದೇ ನಮ್ಮ ಪಕ್ಷದ ಸಿದ್ಧಾಂತ’ ಎಂದು ಅವರು ಹೇಳಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ರೇವುನಾಯಕ ಬೆಳಮಗಿ,  ನೀಲಕಂಠ ಮೂಲಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT