ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ನಾಡಿನಲ್ಲಿ ‘ಖಾದಿ ಸಂತ’ನ ಸಭೆ

ಒಂದು ದಿನ ವಾಸ್ತವ್ಯ, ವಿವಿಧ ಸ್ಥಳಗಳಿಗೆ ಭೇಟಿ; ಪರಿಣಾಮಕಾರಿ ಭಾಷಣ
Last Updated 14 ಆಗಸ್ಟ್ 2022, 10:57 IST
ಅಕ್ಷರ ಗಾತ್ರ

ಕಲಬುರಗಿ: ಖಾದಿ ಬಟ್ಟೆಯ ಪ್ರಚಾರ‌ಕ್ಕಾಗಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಇಡೀ ದೇಶದ ಸುತ್ತಿದ ‘ಚರಕ ಋಷಿ’ ಗಾಂಧೀಜಿ ಪಯಣ 1927 ಫೆಬ್ರವರಿಯಲ್ಲಿ ಗುಲಬರ್ಗಾ ತಲುಪಿತ್ತು.

ಸೋಲ್ಲಾಪುರದಿಂದ ನಗರದ ರೈಲು ನಿಲ್ದಾಣಕ್ಕೆ ಬಂದಿಳಿದ ಗಾಂಧೀಜಿಯವರಿಗೆ ಶೇಠ ಹೀರಾಲಾಲ್ ಛೋಗಮಲ್ ಅವರ ಬಂಗಲೆಯಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು. ಊಟ, ವಿಶ್ರಾಂತಿ ಬಳಿಕ ಆಸಿಫ್‌ ಗಂಜ್‌ಗೆ (ಈಗಿನ ಕಪಡಾ ಬಜಾರ್‌, ತಹಶಿಲ್ದಾರ್‌ ಕಚೇರಿ ಸುತ್ತಮುತ್ತಲ ಪ್ರದೇಶ) ತೆರಳಿದ ಗಾಂಧೀಜಿ ವ್ಯಾಪಾರಸ್ಥರ ಸಭೆಯಲ್ಲಿ ಭಾಗಿಯಾಗಿದ್ದರು.

ನಂತರ ನೂತನ ವಿದ್ಯಾಲಯ ಶಾಲೆಯಲ್ಲಿ ಸಂಸ್ಥೆಯ ಆಡಳಿತ ವರ್ಗದಿಂದ ಸ್ವಾಗತ ಸಮಾರಂಭ ನಡೆಯಿತು. ಕಾರಿನಲ್ಲಿ ಬಂದ ಗಾಂಧೀಜಿಯವರಿಗೆ ಆಡಳಿತ ವರ್ಗದ ಪರವಾಗಿ ರಾಯ ಪಾಂಡುರಂಗರಾವಜೀ ದೇಶಮುಖ ಹೂ ಮಾಲೆ ಹಾಕಿ ಸ್ವಾಗತಿಸಿದ್ದರು.

ಮಹಿಳೆಯರ ಸಭೆಯಲ್ಲಿ ಖಾದಿ ಪ್ರಚಾರ: ನೂತನ ವಿದ್ಯಾಲಯ ಆವರಣದಲ್ಲಿ ನಡೆದ ಮಹಿಳೆಯರ ಸಭೆಗೆ ಡಾ.ಸುಶೀಲಾಬಾಯಿ ಕೇಸಕರ್ ಸ್ವಾಗತಿಸಿದರು. 200ಕ್ಕಿಂತ ಹೆಚ್ಚು ಮಹಿಳೆಯರಿದ್ದ ಸಭೆಯಲ್ಲಿ ಗಾಂಧೀಜಿ 20 ನಿಮಿಷ ಭಾಷಣ ಮಾಡಿದರು.

‘ನಾನು ಖಾದಿ ಪ್ರಚಾರಕ್ಕೆ ಹಣ ಕೂಡಿಸುವ ಉದ್ದೇಶದಿಂದ ಇಲ್ಲಿ ಬಂದಿದ್ದೇನೆ. ಪುರುಷರಂತೆ ಸ್ತ್ರೀಯರೂ ಇದಕ್ಕೆ ನೆರವಾಗಬೇಕು’ ಎಂದು ಹೇಳಿದ ಕೆಲ ನಿಮಿಷಗಳಲ್ಲಿ ಮಹಿಳೆಯರಿಂದ ಹಣ ಸಂಗ್ರಹಿಸಿ ಸುಶೀಲಾಬಾಯಿ ಕೇಸಕರ್‌ ಅವರು ಗಾಂಧೀಜಿಯವರಿಗೆ ಅರ್ಪಿಸಿದರು.

ಬಳಿಕ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲೂ ಗಾಂಧೀಜಿ ಖಾದಿ ಬಗ್ಗೆ ಪರಿಣಾಮಕಾರಿ ಭಾಷಣ ಮಾಡಿದ್ದರು. ಎತ್ತರದ ವೇದಿಕೆ ನಿರ್ಮಿಸಲಾಗಿತ್ತು. ರಾಮಚಂದ್ರಪ್ಪ ಜಾಜಿಯವರು ಖಾದಿ ಬಟ್ಟೆಯ ಮೇಲೆ ಬರೆದಿದ್ದ ಮಾನಪತ್ರವನ್ನು ಗಾಂಧೀಜಿಯವರಿಗೆ ನೀಡಿದರು. ಸಭೆಯಲ್ಲಿ ಡಾ.ಜಯದೇವರಾವ ದೇಶಮುಖ ಭಾಷಣ ಮಾಡಿದ್ದರು.

ಗಾಂಧಿಯವರಿಗೆ ಅರ್ಪಿಸಿದ್ದ ಬೆಳ್ಳಿ ತಟ್ಟೆ ಹರಾಜಿನಿಂದ ₹201, ಹೂ ಮಾಲೆಗಳ ಹರಾಜಿನಿಂದ ₹200 (ಆಗಿನ ಕಾಲದ) ಬಂದಿವು. ಸ್ಥಳದಲ್ಲೇ ಖಾದಿ ಬಟ್ಟೆಗಳನ್ನು ಮಾರಲಾಯಿತು.

ಶಿವಶರಣಪ್ಪ ಸ್ವಾಮಿ ಎಂಬುವರು ಗುಲಬರ್ಗಾದಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಒಂದು ದಿನ ನಗರದಲ್ಲೇ ಇದ್ದ ಗಾಂಧೀಜಿ ಮರುದಿನ ಎಕ್ಸ್‌ಪ್ರೆಸ್‌ ರೈಲಿನ ಮೂಲಕ ಹೊರಟರು.

ಶ್ರೀಮಂತರ ಸ್ವಾಗತ ಸಮಿತಿ, ಅಂಧ ಮಹಿಳೆಯಿಂದ ದೇಣಿಗೆ

ಗಾಂಧೀಜಿಯವರ ಆಶಯಗಳನ್ನು ಈಡೇರಿಸಲು ಮತ್ತು ಅವರ ಮಾತಿಗೆ ಸ್ಪಂದಿಸಲು ಎಲ್ಲರೂ ಪ್ರಯತ್ನಿಸಿದರು. ಹಣ ಕೊಡುವ ಶಕ್ತಿ ಶ್ರೀಮಂತರಿಗೆ ಇದ್ದಿದ್ದರಿಂದ ಸ್ವಾಗತ ಸಮಿತಿಯಲ್ಲಿನ ಬಹುತೇಕರು ವ್ಯಾಪಾರಿ ವರ್ಗಕ್ಕೆ ಸೇರಿದ್ದರು.

ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ವ್ಯಾಪಾರಸ್ಥರು ಗಾಂಧೀಜಿಯವರಿಗೆ ₹2,500 ದೇಣಿಗೆ ಸಲ್ಲಿಸಿದ್ದರು. ನೂತನ ವಿದ್ಯಾಲಯದಲ್ಲಿ ನಡೆದ ಮಹಿಳೆಯರ ಸಭೆಯಲ್ಲಿ ಅಂಧ ಮಹಿಳೆಯೊಬ್ಬರು ತಮ್ಮ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ನೀಡಿದ್ದರು.

‘ಸೊಲ್ಲಾಪುರದಂತೆಯೇ ಗುಲಬರ್ಗಾದಲ್ಲೂ ₹ 6 ಸಾವಿರ ಸಂಗ್ರಹಿಸಿ ಕೊಡಲಾಗುವುದು ಎಂದು ಹೇಳಲಾಗಿತ್ತು. ಈಗ ನನಗೆ ನಿರಾಸೆಯಾಗಿದೆ. ಯಾವ ಉದ್ದೇಶದಿಂದ ನಾನು ಈ ಪ್ರವಾಸ ಕೈಗೊಂಡಿದ್ದೇನೋ ಅದಕ್ಕೆ ಲಕ್ಷಾಂತರ ರೂಪಾಯಿ ಅವಶ್ಯಕತೆ ಇದೆ’ ಎಂದು ಗಾಂಧೀಜಿ ಹೇಳಿದರು.

ಆಧಾರ: ನಿಜಾಮ ವಿಜಯ ಪತ್ರಿಕೆ, ನೂತನ ವಿದ್ಯಾಲಯ ಪೋಟೋ ಗ್ಯಾಲರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT