ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಮನೆ ಮನೆಗೂ ಮಣ್ಣಿನ ಗಣೇಶ

Published 15 ಸೆಪ್ಟೆಂಬರ್ 2023, 5:13 IST
Last Updated 15 ಸೆಪ್ಟೆಂಬರ್ 2023, 5:13 IST
ಅಕ್ಷರ ಗಾತ್ರ

ವರದಿ: ಪ್ರಭು ಅಡವಿಹಾಳ

ಕಲಬುರಗಿ: ಗಣೇಶ ಬಂದ.. ಕಾಯಿ ಕಡಬು ತಿಂದ.. ಹೊಟ್ಟೆ ಮೇಲೆ ಗಂಧ.. ಚಿಕ್ಕ ಕೆರೆಲಿ ಎದ್ದ.. ದೊಡ್ಡ ಕೆರೆಲಿ ಬಿದ್ದ. ಮಕ್ಕಳ ನಾಲಿಗೆ ಮೇಲೆ ಈ ಪದಗಳು ನಲಿದಾಡಲು ದಿನಗಣನೆ ಶುರುವಾಗಿದೆ.

ಗಣೇಶ ಚತುರ್ಥಿ ಸಮೀಪಿಸುತ್ತಿದ್ದು, ಗೌರಿಸುತನನ್ನು ಬರಮಾಡಿಕೊಳ್ಳಲು ನಗರದ ಜನ ತುದಿಗಾಲ ಮೇಲೆ ನಿಂತಿದ್ದಾರೆ. ಕಲಾವಿದರು ವಿಘ್ನನಿವಾರಕನ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದು, ಮೂರ್ತಿಗಳ ಬುಕ್ಕಿಂಗ್‌ ಸಹ ಆರಂಭವಾಗಿದೆ. ಇದೆಲ್ಲದರ ಮಧ್ಯೆ ಪಿಒಪಿ (ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌) ಮೂರ್ತಿಗಳಿಗೆ ನಿಷೇಧವಿದ್ದರೂ ಮಾರಾಟ ಮತ್ತು ಖರೀದಿ ನಿರಾತಂಕವಾಗಿ ನಡೆದಿದೆ. ಮಣ್ಣಿನ ಗಣಪತಿ ಮೂರ್ತಿಗಳ ಮಾರಾಟವೂ ಭರದಿಂದ ಸಾಗಿದೆ.

ನಗರದ ಬ್ರಹ್ಮಪುರ ಬಡಾವಣೆ ಬಳಿಯ ವೆಂಕವ್ವ ಮಾರ್ಕೆಟ್‌ ಮತ್ತು ಹೊಸ ಜೇವರ್ಗಿ ರಸ್ತೆ ಬಳಿಯ ಸ್ವದೇಶಿ ಮಳಿಗೆ, ಬಸವ ಬುಕ್‌ಸ್ಟಾಲ್‌ನಲ್ಲಿ ವಿವಿಧ ಗಾತ್ರದ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟಕ್ಕೆ ಇಟ್ಟಿದ್ದಾರೆ. ಅಲ್ಲದೇ ಬೆಳಗಾವಿ, ಗೋಕಾಕ್‌ನಿಂದಲೂ ಮೂರ್ತಿಗಳನ್ನು ತರಿಸಿಕೊಂಡಿದ್ದು ಈಗಾಗಲೇ ಕೆಲವರು ಬುಕ್ಕಿಂಗ್‌ ಸಹ ಮಾಡಿದ್ದಾರೆ. ನಗರದ ವಿವಿಧ ಮಾರುಕಟ್ಟೆ, ಪ್ರಮುಖ ವೃತ್ತಗಳಲ್ಲೂ ಮಣ್ಣಿನ ಮೂರ್ತಿಗಳನ್ನು ಮಾರಲಾಗುತ್ತದೆ.

‘ನೈಜ ಮತ್ತು ಸಾಂಪ್ರದಾಯಿಕ ಗಣಪತಿ ಮೂರ್ತಿಗಳು ಎಂದರೆ ಮಣ್ಣಿನ ಮೂರ್ತಿಗಳೆ. ಆದರೆ ಪಿಒಪಿ ಹಾವಳಿಯಿಂದ ಬೇಡಿಕೆ ಕಡಿಮೆಯಾಗಿದೆ. ಅವುಗಳನ್ನು ಸಂಪೂರ್ಣ ನಿಷೇಧ ಮಾಡಿದರೆ ಮಣ್ಣಿನ ಮೂರ್ತಿಗಳ ಬೆಲೆಯೂ ಕಡಿಮೆಯಾಗುತ್ತದೆ, ಪರಿಸರಕ್ಕೂ ಒಳ್ಳೆಯದು’ ಎನ್ನುತ್ತಾರೆ ಕಲಾವಿದ ಮಲ್ಲಿಕಾರ್ಜುನ ಮುಗಳಿ.

‘ನಮ್ಮಲ್ಲಿ ಚೌತಿಗೂ ಮೂರು ತಿಂಗಳು ಮುಂಚಿನಿಂದ 12 ಜನ ಕೆಲಸ ಆರಂಭಿಸುತ್ತಾರೆ. ಒಂದು ಅಡಿಯಿಂದ ಮೂರು ಅಡಿ ಎತ್ತರದ ಮೂರ್ತಿಗಳನ್ನು ನಾವೇ ತಯಾರಿಸುತ್ತೇವೆ. ಅದಕ್ಕಿಂತ ಹೆಚ್ಚು ಎತ್ತರದ ಮೂರ್ತಿಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಇಲ್ಲಿಂದ ಯಾದಗಿರಿ, ಗುರುಮಠಕಲ್, ಸೇಡಂ ಸೇರಿದಂತೆ ವಿವಿಧೆಡೆ ಸಗಟು ದರದಲ್ಲಿ ಮೂರ್ತಿಗಳನ್ನು ಕೊಡುತ್ತೇವೆ. ಅಲ್ಲದೇ ನಗರದಲ್ಲೇ ಸುಮಾರು 12 ಸಾವಿರಕ್ಕೂ ಹೆಚ್ಚು ಮೂರ್ತಿಗಳು ಮಾರಾಟವಾಗುತ್ತವೆ’ ಎಂದು ಯಂಕವ್ವ ಮಾರ್ಕೆಟ್‌ನ ಸ್ವದೇಶಿ ಮಳಿಗೆ ಮಾಲೀಕ ಸಂಗಮೇಶ ತಿಳಿಸಿದರು.

ಗಣಪತಿ ಮಕ್ಕಳ ನೆಚ್ಚಿನ ಸ್ನೇಹಿತನಾಗಿದ್ದು, ಮೂರ್ತಿ ಖರೀದಿಸಲು ಮಾರುಕಟ್ಟೆಗೆ ಹೋದಾಗ ಬಹು ಆಕರ್ಷಣಿಯವಾಗಿ ಕಾಣುವ ಪಿಒಪಿ ಮೂರ್ತಿಗಳತ್ತಲೇ ಮಕ್ಕಳು ಹೊರಳುತ್ತಾರೆ. ಹೀಗಾಗಿ ಅವರ ಹಠಕ್ಕೆ ಮಣಿದು ಪೋಷಕರು ಪಿಒಪಿಗಳನ್ನೇ ಖರೀದಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಗ್ರಾಹಕರನ್ನು ಸೆಳೆಯಲು ನೈಸರ್ಗಿಕ ಬಣ್ಣಗಳನ್ನು ಬಳಸಿ ಅಲಂಕರಿಸಲಾಗುತ್ತದೆ ಎಂದು ಬಸವ ಬುಕ್‌ಸ್ಟಾಲ್‌ ಮಾಲೀಕ ಪ್ರಕಾಶ ದಾದಾಪುರ ತಿಳಿಸಿದರು.

ಮಣ್ಣಿನ ಮೂರ್ತಿಗಳು ಕರಕುಶಲತೆಯ ರೂಪಕವಾಗಿರುವುದರಿಂದ ತಯಾರಿಕೆಗೆ ತಾಳ್ಮೆ ಅಗತ್ಯ. ಪಿಒಪಿ ಮೂರ್ತಿಗೆ ಯಂತ್ರಗಳಿಂದ ಬಣ್ಣ ಬಳಿಯಲಾಗುತ್ತದೆ. ಹೀಗಾಗಿ 1 ಮೂರ್ತಿಗೆ ಬಣ್ಣ ಹಾಕಲು 10 ನಿಮಿಷ ಸಾಕು. ಆದರೆ, ಮಣ್ಣಿನ ಮೂರ್ತಿಗೆ ಕುಂಚದಿಂದ ಬಣ್ಣಬಳಿಯುವುದರಿಂದ ಸಮಯ ಹಿಡಿಯುತ್ತದೆ. ಒಟ್ಟಿನಲ್ಲಿ ಸಾರ್ವಜನಿಕರು ಪರಿಸರಕ್ಕೆ ಹಾನಿಕಾರಕವಲ್ಲದ ಮಣ್ಣಿನ ಮೂರ್ತಿಗಳನ್ನೇ ಖರೀದಿಸಿ ಹಬ್ಬ ಆಚರಿಸಲಿ ಎಂಬುದು ಕಲಾವಿದರ ಆಶಯ.

ಮಣ್ಣಿನ ಮೂರ್ತಿಗಳನ್ನು ಮನೆಯಲ್ಲೇ ನೀರಿನಲ್ಲಿ ವಿಸರ್ಜಿಸಿ ಆ ಮಣ್ಣನ್ನು ಗಿಡಗಳಿಗೆ ಬಳಸಬಹುದು. ಕುಂಡಗಳಲ್ಲಿ ಹಾಕಿ ಸಸಿಗಳನ್ನು ನೆಡಬಹುದು
- ಪ್ರಕಾಶ ದಾದಾಪುರ, ಬಸವ ಬುಕ್‌ಸ್ಟಾಲ್‌ ಮಾಲೀಕ
ಮಣ್ಣಿನ ಮೂರ್ತಿಗಳು ಕಲಾವಿದರ ತಾಳ್ಮೆಯನ್ನು ಕೇಳುವುದರಿಂದ ಪಿಒಪಿಗಿಂತ ದರ ಸ್ವಲ್ಪ ಹೆಚ್ಚೆನಿಸಬಹುದು. ಹಾಗಂತ ಪರಿಸರಕ್ಕೆ ವಿಷ ಹಾಕಬಾರದು
- ಸಂಗಮೇಶ, ಸ್ವದೇಶಿ ಮಳಿಗೆ ಮಾಲೀಕ
ಗಣೇಶ ಹಬ್ಬ ಶುರುವಾಗುವ ಮೂರು ತಿಂಗಳು ಮುಂಚೆಯೇ ನಾವು ಕೆಲಸಕ್ಕೆ ಅಣಿಯಾಗುತ್ತೇವೆ. ಅಲಂಕಾರಕ್ಕೆ ಜಲವರ್ಣ ನೈಸರ್ಗಿಕ ಬಣ್ಣಗಳನ್ನು ಬಳಸುತ್ತೇವೆ
ಮಲ್ಲಿಕಾರ್ಜುನ, ಕಲಾವಿದ
ಸಾರ್ವಜನಿಕ ಗಣಪಗೆ ಬೇಕು ಅನುಮತಿ
ಈ ಮೊದಲು ಮನೆಗೆ ಮಾತ್ರ ಸೀಮಿತವಾಗಿದ್ದ ಬೆನಕನನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ್ದು ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ ಅವರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹೋರಾಟಗಾರರು ಸಭೆ ಸೇರಲು ಬ್ರಿಟಿಷರು ಅವಕಾಶ ನೀಡದೇ ಇದ್ದಾಗ ಗಣೇಶನನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸಿ ಅಲ್ಲಿಯೇ ಸ್ವಾತಂತ್ರ್ಯ ಹೋರಾಟದ ರೂಪುರೇಷೆಗಳನ್ನು ಹೆಣೆಯುತ್ತಿದ್ದರು. ಹೀಗಾಗಿ ಇಂದಿಗೂ ಮಹಾರಾಷ್ಟ್ರದಲ್ಲಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕಲಬುರಗಿ ನಗರದಲ್ಲೂ ಹಲವೆಡೆ ಸಾರ್ವಜನಿಕವಾಗಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಅದಕ್ಕಾಗಿ ಪಾಲಿಕೆ ವತಿಯಿಂದ ಅನುಮತಿ ಪಡೆಯಬೇಕಾಗುತ್ತದೆ. ಈಗಾಗಲೇ ಅರ್ಜಿಗಳು ಬಂದಿವೆ ಎಂದು ಮಹಾನಗರ ಪಾಲಿಕೆ ಉಪ ಆಯುಕ್ತ(ಅಭಿವೃದ್ಧಿ) ಆರ್‌.ಪಿ.ಜಾಧವ ತಿಳಿಸಿದರು.
ಮೂರ್ತಿ ತಯಾರಿಸುವ ಪ್ರಕ್ರಿಯೆ
ಮೊದಲು ಮಣ್ಣನ್ನು ಸಂಗ್ರಹಿಸಿ ಸೋಸಲಾಗುತ್ತದೆ. ಬಳಿಕ ಅದನ್ನು ಯಂತ್ರಗಳಿಗೆ ಹಾಕಿ ಮತ್ತಷ್ಟು ಪುಡಿ ಮಾಡಲಾಗುತ್ತದೆ. ನಂತರ 1 ವಾರ ನೆನೆ ಹಾಕಿ ಅದಕ್ಕೆ ಹತ್ತಿ ತೆಂಗಿನಕಾಯಿ ನಾರು ಸೇರಿಸಲಾಗುತ್ತದೆ. ಮತ್ತೆ ಒಂದು ವಾರದ ಬಳಿಕ ಮೂರ್ತಿ ತಯಾರಿಕೆಗೆ ಅಣಿ ಮಾಡಲಾಗುತ್ತದೆ. ಬೇರೆ ಬೇರೆ ಅಂಗಗಳನ್ನು ತಯಾರಿಸಿ ಬಳಿಕ ಜೋಡಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT