ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಭರಣ ಮಾರುಕಟ್ಟೆ ಇನ್ನೂ ಭಣಭಣ

ಮದುವೆ, ಹಬ್ಬಗಳ ಸೀಜನ್‌ನಲ್ಲೇ ಸಮಸ್ಯೆ, ಶ್ರಾವಣ ಬಂದರೆ ಚಿನ್ನ ಖರೀದಿಸುವವರೂ ಕಡಿಮೆ
Last Updated 18 ಜೂನ್ 2021, 5:30 IST
ಅಕ್ಷರ ಗಾತ್ರ

ಕಲಬುರ್ಗಿ: ಲಾಕ್‌ಡೌನ್‌ ಕಾರಣ ಚಿನ್ನ– ಬೆಳ್ಳಿ ಆಭರಣ ವ್ಯಾಪಾರಿಗಳು ಮಾತ್ರವಲ್ಲ ಗ್ರಾಹಕರು ಕೂಡ ಪರದಾಡುತ್ತಿದ್ದಾರೆ!

ಹೌದು. ಮದುವೆ, ಮುಂಜಿ, ಹಬ್ಬ, ಅಕ್ಷಯ ತೃತೀಯಾ, ಗೃಹಪ್ರವೇಶ, ಸೀಮಂತ, ನಾಮಕರಣ, ಜನ್ಮದಿನ, ಹೊಸ ಮನೆಗಳ ನಿರ್ಮಾಣ, ವಾಸ್ತುಪೂಜೆ... ಮುಂತಾದ ಕಾರಣಗಳಿಗೆ ಚಿನ್ನಾಭರಣದ ವ್ಯವಹಾರ ಅನಿವಾರ್ಯವಾದವರೂ ಎಷ್ಟೋ ಜನ. ಈಗ ಗುಂಜಿಯಷ್ಟು ಚಿನ್ನಖರೀದಿಸಲು ಪರದಾಡುವಂತಾಗಿದೆ. ಕೊಳ್ಳುವವರು ಮಾತ್ರವಲ್ಲ; ತಮ್ಮ ಅಗತ್ಯಗಳಿಗೆ ಚಿನ್ನ ಮಾರಬೇಕಾದವರು, ಹಳೆಯ ಆಭರಣ ಮುರಿಸಿ ಹೊಸದಾಗಿ ಮಾಡಿಸುವವರು ಹೀಗೆ ಯಾರೆಲ್ಲರ ಅವಶ್ಯಕಗಳಿಗೂ ಈಗ ಬರ ಬಂದಿದೆ.

ಇದು ಗ್ರಾಹಕರ ಸಮಸ್ಯೆಯಾದರೆ, ವ್ಯಾಪಾರಿಗಳ ಗೋಳು ಇನ್ನೊಂದು ರೀತಿ.ಮಂಗಲ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವ ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲೇ
ಚಿನ್ನಾಭರಣ ವ್ಯಾಪಾರವೂ
ಹೆಚ್ಚಾಗಿ ನಡೆಯಬೇಕಿತ್ತು. ಅದರಲ್ಲೂ ಮದುವೆ ಸೀಜನ್‌ ಸಂದರ್ಭದಲ್ಲೇ ಪ್ರತಿ ದಿನ ಜಿಲ್ಲೆಯಲ್ಲಿ ಕನಿಷ್ಠ ₹ 9 ಕೋಟಿಯಿಂದ ₹ 10 ಕೋಟಿಯಷ್ಟು ಚಿನ್ನದ ವ್ಯವಹಾರ ನಡೆಯುತ್ತಿತ್ತು. ಆದರೆ, ಈ ಬಾರಿ ಎಲ್ಲವೂ ನಿಂತುಹೋಗಿದೆ ಎನ್ನುವುದು ಜಿಲ್ಲಾ ಚಿನ್ನದ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಮೈಲಾಪುರ ಅವರ ಹೇಳಿಕೆ.

‘ಆಗಾಗ ಚಿನ್ನ ಖರೀದಿ ಮಾಡುವ ಹಲವರು ನಮ್ಮ ಮನೆ ಹುಡುಕಿಕೊಂಡು ಬರುತ್ತಿದ್ದಾರೆ. ಪ್ರತಿ ದಿನ ಫೋನ್‌ ಮಾಡಿ ವಿಚಾರಿಸುವವರ ಸಂಖ್ಯೆಯೂ ದೊಡ್ಡದು. ಮಾಂಗಲ್ಯ, ಉಂಗುರ, ಕಾಲುಂಗುರ, ತಾಳಿಗುಂಡು...
ಸೇರಿದಂತೆ ಕೆಲವು ಅತ್ಯವಶ್ಯಕ ಆಭರಣಗಳನ್ನು ಮನೆಯಲ್ಲಿ ತಂದು ಇಟ್ಟುಕೊಂಡಿದ್ದೇವೆ. ಪರಿಚಯಸ್ಥರು ಬಂದಾಗ ಹಣ ಪಡೆಯದೇ ಭರವಸೆಯ ಮೇಲೆ ಕೊಡುತ್ತಿದ್ದೇವೆ. ಮುಂದೆ ಲಾಕ್‌ಡೌನ್‌ ತೆರವಾದ ಮೇಲೆ ಬಿಲ್‌ ಮಾಡಿ ಅವರಿಂದ
ಹಣ ಪಡೆಯಬೇಕಾಗಿದೆ’
ಎನ್ನುವುದು ವ್ಯಾಪಾರಿ ಕಾವೇರಿ ಪಿ. ಸೋನಾರ ಅವರ ಹೇಳಿಕೆ.

ಶ್ರಾವಣ ಬಂದರೆ ಖರೀದಿ ಬಂದ್‌: ಚಿನ್ನ ಖರೀದಿಸಲು ಬೆರಳೆಣಿಕೆಯಷ್ಟು ಜನ ಮಾತ್ರ ಬರುವುದು. ಹಾಗಿದ್ದ ಮೇಲೂ ವ್ಯಾಪಾರಕ್ಕೆ ಅವಕಾಶ ನೀಡದಿರುವುದು ಏಕೆ ಎಂದು ತಿಳಿಯುತ್ತಿಲ್ಲ. ಈಗಂತೂ ಮದುವೆ, ಹಬ್ಬಗಳು ಮುಗಿದವು. ಮುಂದೆ ಶ್ರಾವಣ ಮಾಸ ಬರುತ್ತದೆ. ಆಗ ಯಾರೂ ಚಿನ್ನ ಖರೀದಿಸುವುದಿಲ್ಲ. ಹೀಗಾಗಿ, ಈ ವರ್ಷ ಸಂಪೂರ್ಣ ನಷ್ಟ ಎಂದೇ ಅರ್ಥ ಎಂಬುದು ವ್ಯಾಪಾರಿಗಳ ಗೋಳು.

2 ದಿನ ಅವಕಾಶ ಕೊಡಿ

ಮದುವೆಗೆ ಅವಕಾಶ ನೀಡಿದ್ದಾರೆ. ಅದಕ್ಕೆ ಬೇಕಾದ ಆಭರಣ ವ್ಯಾಪಾರಕ್ಕೆ ಅನುವು ಮಾಡಿ ಕೊಟ್ಟಿಲ್ಲ. ಕನಿಷ್ಠ ವಾರದಲ್ಲಿ ಎರಡು ದಿನ ಅವಕಾಶ ನೀಡಿದರೂ ಸಾಕು. ಅಗತ್ಯವಿದ್ದವರಿಗೆ ಮಾರಾಟ ಮಾಡಬಹುದು. ವ್ಯಾಪಾರ ಇಲ್ಲದಿದ್ದರೂ ಅಂಗಡಿಗಳ ಬಾಡಿಗೆ, ಕೆಲಸಗಾರರ ಸಂಬಳ, ಸೆಕ್ಯೂರಿಟಿ, ವಿದ್ಯುತ್‌ ಬಿಲ್‌, ತೆರಿಗೆ ಎಲ್ಲವೂ ಅನಿವಾರ್ಯವಾಗಿವೆ.

– ಅಶೋಕಕುಮಾರ ಕಮರಡ್ಡಿ, ಚಿನ್ನದ ಅಂಗಡಿ ಮಾಲೀಕರು

ನಿರಂತರ ನಷ್ಟ

2018ರಲ್ಲಿ ಜಿಎಸ್‌ಟಿ ಕಾರಣ ಸರಿಯಾದ ವ್ಯಾಪಾರ ನಡೆಯಲಿಲ್ಲ. 2019ರಲ್ಲಿ ಚಿನ್ನಾಭರಣ ವ್ಯಾಪಾರಕ್ಕೆ ‘ಪಾನ್‌ ಕಾರ್ಡ್‌’‌ ಲಿಂಕ್‌ ಕಡ್ಡಾಯ ಮಾಡಲಾಯಿತು. ಅದರ ವಿರುದ್ಧ ಹೋರಾಟದಿಂದಾಗಿ ಮತ್ತೆ ನಷ್ಟ ಸಂಭವಿಸಿತು. 2020 ಹಾಗೂ 2021ರಲ್ಲಿ ಲಾಕ್‌ಡೌನ್‌ ಕಾರಣ ನಿರಂತರ ನಷ್ಟ ಅನುಭವಿಸುತ್ತಿದ್ದೇವೆ. ನಾಲ್ಕು ವರ್ಷಗಳಿಂದಲೂ ಲಾಭದ ಮಾತು ಅಷ್ಟಕ್ಕಷ್ಟೇ.

ಅಖಿಲ ಎಸ್‌.ಜೆ.,ಚಿನ್ನಾಭರಣ ವ್ಯಾಪಾರಿ

ಆನೆ ಹೊತ್ತ ಅನುಭವ

ಚಿನ್ನ– ಬೆಳ್ಳಿ ಕೆಲಸ ಮಾಡುವವರು ಹೆಚ್ಚು ಹಣ ಗಳಿಸುತ್ತಾರೆ ಎಂಬುದು ಎಲ್ಲರ ಕಲ್ಪನೆ. ಆದರೆ, ಆನೆ ಭಾರ ಆನೆಗೆ, ಇರುವೆ ಭಾರ ಇರುವೆಗೆ ಎಂಬ ಗಾದೆ ನಮಗೇ ಅನ್ವಯಿಸುತ್ತದೆ. ಕಳೆದ ಎರಡು ವರ್ಷಗಳಿಂದ ಸರಿಯಾದ ಕೆಲಸವಿಲ್ಲದೇ ಕುಳಿತಿದ್ದೇನೆ. ಮುಂದಿನ ವರ್ಷವೂ ಹೀಗೆ ಆದರೆ ನಮ್ಮ ಸ್ಥಿತಿ ಗಂಭೀರವಾಗಲಿದೆ.

ಸಿದ್ದಣ್ಣ,ಅಕ್ಕಸಾಲಿಗ

ಶೋ ರೂಮ್‌ಗಳ ಸಮಸ್ಯೆಯೂ ದೊಡ್ಡದು

ನಮ್ಮ ಶೋ ರೂಮ್‌ನಲ್ಲಿ 20 ಜನ ಕೆಲಸ ಮಾಡುತ್ತಾರೆ. ಈಗ ವ್ಯಾಪಾರ ಇಲ್ಲವೆಂದು ಯಾರಿಗೂ ಸಂಬಳವಿಲ್ಲ ಎನ್ನಲಾಗುವುದಿಲ್ಲ. ದೊಡ್ಡ ಕಾಂಪ್ಲೆಕ್ಸ್‌ನ ಬಾಡಿಗೆ ದರವೂ ದೊಡ್ಡದು. ಎಲ್ಲಕ್ಕಿಂತ ಹೆಚ್ಚಾಗಿ ಭದ್ರತಾ ವೆಚ್ಚ ಭರಸಬೇಕು. ಹೀಗಾಗಿ, ಕಳೆದ ಮೂರು ತಿಂಗಳಿಂದ ಶೋ ರೂಮ್‌ಗಳ ಸಮಸ್ಯೆಯೂ ಹೇಳತೀರದಾಗಿದೆ.

ಸಚಿನ್‌ ಮೆಹ್ತಾ,ತನಿಷ್ಕ್‌ ಪ್ರಾಂಚೈಸಿ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT