ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಡಿ: ಶಿಥಿಲಗೊಂಡ ಶಾಲೆ, ಮರು ಜೀವಕ್ಕೆ ಮೊರೆ

ಹಣ್ಣಿಕೇರಾ ಶಾಲೆಗೆ ಹೊಸ ಕೋಣೆಗಳ ನಿರ್ಮಾಣಕ್ಕೆ ಒತ್ತಾಯ
Published : 12 ಸೆಪ್ಟೆಂಬರ್ 2024, 6:08 IST
Last Updated : 12 ಸೆಪ್ಟೆಂಬರ್ 2024, 6:08 IST
ಫಾಲೋ ಮಾಡಿ
Comments

ವಾಡಿ: ಮಳೆ ಬಂದರೆ ಸೋರುವ ಕೋಣೆಗಳು, ಶಾಲೆ ಪಕ್ಕದಲ್ಲಿ ತಿಪ್ಪೆಗುಂಡಿಗಳು, ಮುಟ್ಟಿದರೆ ಬೀಳುವ ಬಾಗಿಲು ಕಿಟಕಿಗಳು, ಮುರಿದಿರುವ ಬೆಂಚುಗಳು...

ಅರ್ಧ ಶತಮಾನ ಪೂರೈಸಿರುವ ಚಿತ್ತಾಪುರ ತಾಲ್ಲೂಕಿನ ಹಣ್ಣಿಕೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ ಇದು.

ಸರ್ಕಾರಿ ಶಾಲೆಯ ಬಹುತೇಕ ಕೋಣೆಗಳು ಸೋರುತ್ತಿದ್ದು ಮಕ್ಕಳ ಕಲಿಕೆಗೆ ತೀವ್ರ ಅಡ್ಡಿಯಾಗುತ್ತಿದೆ. ‘ಶಿಥಿಲಗೊಂಡಿರುವ ಕೋಣೆಗಳಿಗೆ ಬದಲಾಗಿ ಹೊಸ ಸುಸಜ್ಜಿತ ಕೋಣೆಗಳು ಹಾಗೂ ತಡೆಗೋಡೆ ನಿರ್ಮಿಸಬೇಕು’ ಎನ್ನುವುದು ಸಾರ್ವಜನಿಕರ ಮೊರೆಯಾಗಿದೆ.

ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ 265 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 7 ಕೊಠಡಿಗಳು ಇದ್ದು ಅದರಲ್ಲಿ ಎರಡು ಮಾತ್ರ ಬಳಕೆಗೆ ಯೋಗ್ಯವಾಗಿವೆ. ಇನ್ನುಳಿದ 5 ಕೊಠಡಿಗಳು ಶಿಥಿಲಗೊಂಡಿದ್ದು ಮಳೆಗಾಲದಲ್ಲಿ ಅಪಾಯದ ಕರೆಗಂಟೆ ಬಾರಿಸುತ್ತಿದೆ.

ಹಣ್ಣಿಕೇರಾ, ಬೋಜುನಾಯಕ ತಾಂಡಾ, ರಾಮಾನಾಯಕ ತಾಂಡಾ, ವಾಚುನಾಯಕ ತಾಂಡಾದ ವಿದ್ಯಾರ್ಥಿಗಳು ಕಲಿಕೆಗೆ ಈ ಶಾಲೆಯನ್ನೇ ಅವಲಂಬಿಸಿದ್ದಾರೆ. 11 ಜನ ಶಿಕ್ಷಕರು ಇಲ್ಲಿ ಪಾಠದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಕೋಣೆಗಳ ಅವ್ಯವಸ್ಥೆಯಿಂದ ಕಲಿಕೆಗೆ ತೀವ್ರ ಹಿನ್ನಡೆಯಾಗಿದೆ.

ಒಂದು ಕೊಠಡಿ ಕಚೇರಿಗೆ, ಮತ್ತೊಂದು ಕೊಠಡಿ ದಾಸ್ತಾನು, ಬಿಸಿಯೂಟ ತಯಾರಿಸಲು ಬಳಸಿಕೊಳ್ಳಲಾಗುತ್ತಿದೆ. ಕೇವಲ ಎರಡು ಕೊಠಡಿಗಳಿಂದಲೇ ಈ ಶಾಲೆ ಉಸಿರಾಡುತ್ತಿದೆ.

‘ಶಾಲೆಯ ಹಳೆಯ ಕಟ್ಟಡದ ಐದೂ ಕೊಠಡಿಗಳು ಶಿಥಿಲಗೊಂಡಿವೆ. ಮಳೆ ನೀರು ಇಂಗಿ ಗೋಡೆಗಳು ಹಾಗೂ ಚಾವಣಿ ಪದರು ಕಳಚಿ ಬೀಳುತ್ತಿದೆ. ಮಳೆ ಬಂದರಂತೂ ಎಲ್ಲ ತರಗತಿಗಳ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಪಾಠ ಹೇಳಬೇಕಾದ ಸ್ಥಿತಿ ಇದ್ದು, ಕೂಡಲೇ ಹೊಸ ಕೋಣೆಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು’ ಎಂದು ಗ್ರಾ.ಪಂ ಸದಸ್ಯ ಶಿವಲಿಂಗಯ್ಯ ಸ್ವಾಮಿ ಹಾಗೂ ಸ್ಥಳೀಯ ಮುಖಂಡ ಜಗದೀಶ ಪಾಟೀಲ, ಕೊರಿಸಿದ್ದ ಗಂಜಿ ಹಾಗೂ ಶಿವರಾಜ ಬಳಗಾರ ಒತ್ತಾಯಿಸಿದ್ದಾರೆ.

ಶಾಲೆಯಲ್ಲಿ ಶಿಕ್ಷಕರ ಕೊರತೆ ಇಲ್ಲ. ಆದರೆ, ಕೂತು ಪಾಠ ಕೇಳಲು ಸುಸ್ಥಿತಿಯ ಕೊಠಡಿಗಳಿಲ್ಲ. ಅಪಾಯಕಾರಿಯಾಗಿರುವ ಕೊಠಡಿಗಳತ್ತ ಮಕ್ಕಳು ಹೋಗದಂತೆ ತಡೆಯುವುದೇ ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ.

ಶಿಕ್ಷಕರು ಉತ್ಸಾಹದಿಂದ ಪಾಠ ಮಾಡುತ್ತಾರೆ. ಆದರೆ ಮಳೆ ಬಂದರೆ ಕೋಣೆಗಳು ಸೋರಿ ಕಲಿಕೆಗೆ ಅಡ್ಡಿಯಾಗುತ್ತಿದೆ
ಮಹೇಶ್ವರಿ 6ನೇ ತರಗತಿ ವಿದ್ಯಾರ್ಥಿನಿ
ಶಾಲೆಗೆ ಹೊಸಕೋಣೆಗಳು ತಡೆಗೋಡೆ ಹಾಗೂ ಇನ್ನಿತರ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಬೇಕು
ಸುಜಾತಾ 6ನೇ ತರಗತಿ
ಹಣ್ಣಿಕೇರಾ ಸರ್ಕಾರಿ ಶಾಲೆಗೆ ಹೊಸ ಕೋಣೆಗಳ ನಿರ್ಮಾಣಕ್ಕೆ ಅನುದಾನ ಕೋರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಪಕ್ಕದಲ್ಲಿನ ತಿಪ್ಪೆಗಳಿಂದ ಕಲಿಕೆಗೆ ತೊಂದರೆಯಾಗುತ್ತಿದೆ
ಶಶಿಧರ ಬಿರಾದಾರ ಬಿಇಒ ಚಿತ್ತಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT