ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತಿಭಟನೆ ಭೀತಿ: ಪೊಲೀಸ್ ಭದ್ರತೆಯಲ್ಲಿ ಘಟಿಕೋತ್ಸವ!

Published : 12 ಆಗಸ್ಟ್ 2024, 16:06 IST
Last Updated : 12 ಆಗಸ್ಟ್ 2024, 16:06 IST
ಫಾಲೋ ಮಾಡಿ
Comments

ಕಲಬುರಗಿ: ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ವಿರುದ್ಧ ಪ್ರತಿಭಟನೆ ನಡೆಯಬಹುದು ಎಂಬ ಭೀತಿಯಿಂದ ಇದೇ ಮೊದಲ ಬಾರಿಗೆ ಗುಲಬರ್ಗಾ ವಿಶ್ವವಿದ್ಯಾಲಯದ 42ನೇ ಘಟಿಕೋತ್ಸವ ಸೋಮವಾರ ಪೊಲೀಸ್ ಸರ್ಪಗಾವಲಿನಲ್ಲಿ ನಡೆಯಿತು.

ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅವರ ಅಭಿಮಾನಿಗಳು ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ಗೆಹಲೋತ್ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಎರಡನೇ ಗೇಟ್, ಕುಸನೂರು ರಸ್ತೆಯ ಗೇಟ್‌ಗಳನ್ನು ಬಂದ್ ಮಾಡಲಾಗಿತ್ತು. ಮೊದಲನೇ ಗೇಟ್‌ನಲ್ಲಿ ನಿಂತಿದ್ದ ಪೊಲೀಸರು ಆಹ್ವಾನಿತರು, ವಿದ್ಯಾರ್ಥಿಗಳು, ಪೋಷಕರು, ಪ್ರಾಧ್ಯಾಪಕರ ಗುರುತಿನ ಚೀಟಿ ನೀಡಿ ಒಳಗೆ ಬಿಟ್ಟರು.

ಸ್ವತಃ ಈಶಾನ್ಯ ವಲಯ ಐಜಿಪಿ, ಪ್ರಭಾರ‌ ಪೊಲೀಸ್ ಕಮಿಷನರ್ ಅಜಯ್ ಹಿಲೋರಿ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಸಭಾಂಗಣದ ಒಳಗಡೆಯೂ ಪೊಲೀಸರು ನಿಂತಿದ್ದರು. ಕಪ್ಪು ಶರ್ಟ್, ಕರವಸ್ತ್ರ ಧರಿಸಿದವರನ್ನು ಒಳಗೆ ಬಿಡಲು ನಿರಾಕರಿಸಿದರು.

ಪೊಲೀಸ್ ಭದ್ರತೆಯ ಬಿಸಿ ಪ್ರಾಧ್ಯಾಪಕರು, ಮಾಧ್ಯಮ ಪ್ರತಿನಿಧಿಗಳನ್ನೂ ತಟ್ಟಿತು. ಉನ್ನತ ಪೊಲೀಸ್‌ ಅಧಿಕಾರಿಯೊಬ್ಬರು ಪತ್ರಕರ್ತರನ್ನು ತಳ್ಳಿ ಪಕ್ಕಕ್ಕೆ ಸರಿಸಿದ ಪ್ರಸಂಗವೂ ನಡೆಯಿತು.

ಚಿನ್ನದ ಪದಕ ನೀಡದೇ ಕೈಕೊಟ್ಟ ಗು.ವಿ.ವಿ!

ಇಂಗ್ಲಿಷ್ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾಗಿ ಹೇಳಿ ವಿದ್ಯಾರ್ಥಿನಿಯೊಬ್ಬರಿಗೆ ಪತ್ರ ಕಳುಹಿಸಿದ್ದ ವಿಶ್ವವಿದ್ಯಾಲಯವು ಆ ವಿದ್ಯಾರ್ಥಿನಿ ಬದಲು ಬೇರೆಯವರಿಗೆ ಪದಕ ನೀಡಿ ಯಡವಟ್ಟು ಮಾಡಿಕೊಂಡಿದ್ದರಿಂದ ವೇದಿಕೆಯಲ್ಲಿದ್ದ ರಾಜ್ಯಪಾಲರು ಉನ್ನತ ಶಿಕ್ಷಣ ಸಚಿವರು ಕುಲಪತಿ ಮುಜುಗರ ಅನುಭವಿಸುವಂತಾಯಿತು. ವಿಶ್ವವಿದ್ಯಾಲಯ ಕಳುಹಿಸಿದ್ದ ಪತ್ರವನ್ನು ಹಿಡಿದುಕೊಂಡು ಬಂದಿದ್ದ ಬೀದರ್ ಜಿಲ್ಲೆ ಭಾಲ್ಕಿಯ ಸಿ.ಬಿ. ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ರೋಷನಿ ಅವರು ತಮಗೆ ಪದಕ ತಪ್ಪಿದ ಬಗ್ಗೆ ಪ್ರಶ್ನಿಸಲು ಪೋಷಕರೊಂದಿಗೆ ವೇದಿಕೆ ಬಳಿ ಬಂದರು. ಇದರಿಂದಾಗಿ ಕೆಲ ಹೊತ್ತು ಗೊಂದಲ ಏರ್ಪಟ್ಟಿತು. ಸಚಿವ ಡಾ.ಎಂ.ಸಿ. ಸುಧಾಕರ್ ಸೂಚನೆ ಮೇರೆಗೆ ವಿದ್ಯಾರ್ಥಿನಿ ಬಳಿ ಬಂದ ಕುಲಪತಿ ಪ್ರೊ.ದಯಾನಂದ ಅಗಸರ ವಿದ್ಯಾರ್ಥಿನಿಯ ಅಹವಾಲು ಆಲಿಸಿದರು. ಆದರೆ ಯಾವುದೇ ಪರಿಹಾರ ದೊರೆಯದ್ದರಿಂದ ವಿ.ವಿ. ಪರೀಕ್ಷಾಂಗ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT