ಭೀಮಣ್ಣ ಬಾಲಯ್ಯ
ಕಲಬುರಗಿ: ಇಲ್ಲಿಯ ಗುಲಬರ್ಗಾ ವಿಶ್ವವಿದ್ಯಾಲಯದ ವಸತಿನಿಲಯಗಳು ಸಮಸ್ಯೆಗಳ ಉರುಳಿಗೆ ಉಸಿರುಗಟ್ಟಿವೆ. ಉನ್ನತ ಶಿಕ್ಷಣದ ಕನಸು ಹೊತ್ತು ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಸಮಸ್ಯೆಗಳ ನಡುವೆ ಕನಸುಗಳನ್ನು ಕನವರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಜ್ಞಾನಗಂಗಾ ಆವರಣದಲ್ಲಿ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಒಟ್ಟು ಹತ್ತು ವಸತಿನಿಲಯಗಳನ್ನು ನಿರ್ಮಿಸಲಾಗಿದೆ. ಆ ಪೈಕಿ ಐದು ಬಾಲಕರು ಹಾಗೂ ಐದು ಬಾಲಕಿಯರ ವಸತಿನಿಲಯಗಳು. ಇಲ್ಲಿ 1100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. 6 ಹಾಸ್ಟೆಲ್‌ಗಳನ್ನು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸುಪರ್ದಿಗೆ ನೀಡಲಾಗಿದೆ.
ವಸತಿನಿಲಯಗಳ ಹಳೆ ಕಟ್ಟಡಗಳೇ ಸಮಸ್ಯೆಗೆ ಮುನ್ನುಡಿ ಬರೆಯುತ್ತವೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಹಾಗೂ ಅಪ್ರಾಮಾಣಿಕತೆ ಸಮಸ್ಯೆಗಳಿಗೆ ಜಾಗ ಮಾಡಿಕೊಟ್ಟಿದೆ. ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎನ್ನುವ ಗಾದೆಗೆ ಈ ನಿಲಯಗಳು ರೂಪಕದಂತಿವೆ. ಸುಂದರವಾಗಿ ಕಾಣುವ ಕಟ್ಟಡಗಳನ್ನು ಪ್ರವೇಶಿಸಿದರೆ ದೂಳು ಮೆತ್ತಿದ ಕೊಠಡಿಗಳು ವಾಸ ಯೋಗ್ಯವಲ್ಲ ಎನ್ನುವುದನ್ನು ಸಾರಿ ಹೇಳುತ್ತವೆ.
ಸ್ನಾತಕೋತ್ತರ ತರಗತಿಗಳು ಆರಂಭವಾಗಿ ನಾಲ್ಕು ತಿಂಗಳು ಆಗುತ್ತ ಬಂದರೂ ವಿಶ್ವವಿದ್ಯಾಲಯ ನಿರ್ವಹಿಸುವ ಕೆಲವು ಹಾಸ್ಟೆಗಳಲ್ಲಿ ಊಟದ ವ್ಯವಸ್ಥೆ ಆರಂಭವಾಗಿಲ್ಲ. ಕೆಲವು ಕಟ್ಟಡಗಳು ತೊಟ್ಟಿಕ್ಕುತ್ತಿವೆ. ಮೂಲಸೌಕರ್ಯ ನೋಡಲೂ ಸಿಗುವುದಿಲ್ಲ. ಹಲವು ಬಾರಿ ಪ್ರತಿಭಟಿಸಿದರೂ ಚಿತ್ರಣ ಬದಲಾಗಿಲ್ಲ. ಅಡುಗೆ ಮೆನುವಿನಲ್ಲಿರುವ ಆಹಾರ ವಿದ್ಯಾರ್ಥಿಗಳ ತಟ್ಟೆಗೆ ಬಂದಿಲ್ಲ! ಶೌಚಾಲಯಗಳ ಕಿಟಕಿ–ಬಾಗಿಲುಗಳ ಸ್ವರೂಪ ಅಬಾಧಿತವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳೇ ರೋಗ ವಾಹಕಗಳನ್ನು ಪೋಷಿಸುತ್ತಿವೆ.
ವಸತಿನಿಲಯಗಳು ವಾಸ ಯೋಗ್ಯವಾಗಿಲ್ಲ. ಕೆಲವು ಕೊಠಡಿಗಳು ಸೋರುತ್ತವೆ. ಹಲವು ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲಮಹಾದೇವಸ್ವಾಮಿ, ಅಧ್ಯಕ್ಷ, ಸಂಶೋಧನಾ ವಿದ್ಯಾರ್ಥಿಗಳ ಸಂಘ
ಇಲ್ಲಿಯ ನೃಪತುಂಗ ವಸತಿ ನಿಲಯದಲ್ಲಿ 112ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಈ ನಿಲಯದ ಕಟ್ಟಡ ಎರಡು ಮಹಡಿ ಹೊಂದಿದೆ. ಮೂಲಸೌಕರ್ಯಗಳಿಲ್ಲ. ಅಡುಗೆ ಮನೆ ಸ್ವರೂಪ ಕಳೆದುಕೊಂಡಿದೆ. ಟಿ.ವಿ ರೂಮ್‌ಗೆ ಬೀಗ ಹಾಕಲಾಗಿದೆ.
‘ಎರಡನೇ ಮಹಡಿಯಲ್ಲಿ ಬಹುತೇಕ ಕೊಠಡಿಗಳು ಮಳೆಗಾಲದಲ್ಲಿ ತೊಟ್ಟಿಕ್ಕುತ್ತವೆ. ಇಡೀ ನಿಲಯ ದೂಳುಮಯವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಸರಿ ಇಲ್ಲ. ಬಲ್ಬ್‌ಗಳು ಹೋದರೆ ಅವುಗಳನ್ನು ಬದಲಿಸುವುದಿಲ್ಲ’ ಎನ್ನುತ್ತಾರೆ ಸಂಶೋಧನಾ ವಿದ್ಯಾರ್ಥಿಗಳು.
ಇಲ್ಲಿ ಕಟ್ಟಿಗೆಯಲ್ಲಿ ಅಡುಗೆ ಮಾಡಲಾಗುತ್ತದೆ. ಪಾತ್ರೆಗಳು ಹಾಗೂ ಗೋಡೆಗಳು ಕಪ್ಪಿಟ್ಟು ಹೋಗಿವೆ. ಅಡುಗೆ ಮನೆಯಲ್ಲಿ ಸ್ವಚ್ಛತೆ ನೋಡಲೂ ಸಿಗುವುದಿಲ್ಲ. ದೂಳಿನ ನಡುವೆ ಊಟ ಮಾಡಬೇಕಾದ ಸ್ಥಿತಿ ಇದೆ. ಗುಣಮಟ್ಟದ ಆಹಾರ ಮರೀಚಿಕೆಯಾಗಿದೆ ಎನ್ನುತ್ತಾರೆ ಅವರು.
ಗುಣಮಟ್ಟದ ಊಟ ನೀಡಬೇಕು. ಗ್ರಂಥಾಲಯ ವ್ಯವಸ್ಥೆ ಒದಗಿಸಬೇಕು. ವಸತಿ ನಿಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ವಚ್ಛ ಮಾಡಬೇಕು.ದೇವರಾಜ, ವಿದ್ಯಾರ್ಥಿ
ಸ್ನಾತಕೋತ್ತರ ವಿದ್ಯಾರ್ಥಿಗಳ ಅಂಬೇಡ್ಕರ್ ಹಾಗೂ ಕೃಷ್ಣಾ ವಸತಿ ನಿಲಯಗಳಿವೆ. ಇವುಗಳನ್ನು ಸಹ ವಿಶ್ವವಿದ್ಯಾಲಯ ನಿರ್ವಹಣೆ ಮಾಡುತ್ತದೆ. ಈ ವಸತಿನಿಲಯಗಳೂ ಇದಕ್ಕೆ ಹೊರತಾಗಿಲ್ಲ. ನಿಯತಕಾಲಿಕೆ ಹಾಗೂ ಪತ್ರಿಕೆ ನೀಡುವುದಿಲ್ಲ. ಮೆನುವಿನಲ್ಲಿರುವಂತೆ ಊಟ ನೀಡುವುದಿಲ್ಲ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಾತಾವರಣವಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಎರಡು ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಒಂದು ಬಾಲಕರ ವಸತಿನಿಲಯಗಳಿವೆ. ಇಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಇವುಗಳು ಸಹ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಸರ್ಕಾರದಿಂದ ಸಿಗುವ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ದೊರಕುತ್ತಿಲ್ಲ. ಸ್ವಚ್ಛತಾ ಕಿಟ್ ವಿತರಿಸಿಲ್ಲ. ಅಡುಗೆ ಗುಣಮಟ್ಟದಿಂದ ಕೂಡಿಲ್ಲ. ಸ್ಟಡಿ ಚೇರ್ ಹಾಗೂ ಟೇಬಲ್‌ಗಳಿಲ್ಲ. ನೆಲದ ಮೇಲೆ ಕುಳಿತುಕೊಂಡು ಓದಬೇಕಾದ ಸ್ಥಿತಿ ಇದೆ. ಸೊಳ್ಳೆ ಹಾವಳಿ ಇದ್ದರೂ ಪರದೆ ವಿತರಿಸಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಲವು ಬಾರಿ ಪ್ರತಿಭಟಿಸಿದ್ದಾರೆ. ಆದರೂ ಅಧಿಕಾರಿಗಳು ಸ್ಪಂದಿಸಿಲ್ಲ.
ಜ್ಞಾನಗಂಗಾ ಆವರಣದಲ್ಲಿ ಒಟ್ಟು ಐದು ಬಾಲಕಿಯರ ವಸತಿನಿಲಯಗಳಿವೆ. ಇವುಗಳಲ್ಲಿ ಒಂದು ಕಾರ್ಯನಿರತ ಮಹಿಳೆಯರ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ವಸತಿನಿಲಯವೂ ಸೇರಿದೆ. ಮೂರು ವಸತಿನಿಲಯಗಳನ್ನು ವಿವಿಧ ಇಲಾಖೆಗಳು ನೋಡಿಕೊಳ್ಳುತ್ತವೆ. ಉಳಿದವುಗಳನ್ನು ವಿಶ್ವವಿದ್ಯಾಲಯ ನೋಡಿಕೊಳ್ಳುತ್ತದೆ. ಇಲ್ಲಿಯೂ ಮೇಲಿನ ಸಮಸ್ಯೆಗಳು ವಿದ್ಯಾರ್ಥಿನಿಯರನ್ನು ಬಾಧಿಸುತ್ತಿವೆ.
ಆದಷ್ಟು ಬೇಗ ವಿಶ್ವವಿದ್ಯಾಲಯವು ವಸತಿನಿಲಯಗಳ ಸಮಸ್ಯೆ ಬಗೆಹರಿಸಿ ಅನುಕೂಲ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಾರೆ.
ಎರಡು ಹಾಸ್ಟೆಲ್‌ಗಳಲ್ಲಿಲ್ಲ ಊಟ!
ಸ್ನಾತಕೋತ್ತರ ತರಗತಿಗಳು ಆರಂಭವಾಗಿ ನಾಲ್ಕು ತಿಂಗಳು ಆಗುತ್ತ ಬಂದರೂ ಗುಲಬರ್ಗಾ ವಿಶ್ವವಿದ್ಯಾಲಯ ನಿರ್ವಹಿಸುವ ಅಂಬೇಡ್ಕರ್ ಹಾಗೂ ಕೃಷ್ಣಾ ಸ್ನಾತಕೋತ್ತರ ವಸತಿನಿಲಯಗಳಲ್ಲಿ ಊಟದ ವ್ಯವಸ್ಥೆ ಇನ್ನೂ ಆರಂಭವಾಗಿಲ್ಲ. ವಿಶ್ವವಿದ್ಯಾಲಯದವರನ್ನು ವಿಚಾರಿಸಿದರೆ ಟೆಂಡರ್ ಆಗಿಲ್ಲ ಎಂದು ತಿಳಿಸುತ್ತಾರೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ಆರು ತಿಂಗಳಿನಿಂದ ವಿದ್ಯಾರ್ಥಿಗಳು ಹಣ ನೀಡಿ ಹೊರಗಡೆ ಊಟ ಮಾಡುತ್ತಿದ್ದಾರೆ.
ಇದ್ದರೂ ಇಲ್ಲದಂತಿರುವ ಕ್ಷೇಮಪಾಲನಾ ಅಧಿಕಾರಿ
ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ನಿರ್ದೇಶನಾಲಯ ಇರುತ್ತದೆ. ವಿದ್ಯಾರ್ಥಿಗಳ ಪರವಾಗಿ ಇದು ಕೆಲಸ ಮಾಡುತ್ತದೆ. ವಸತಿನಿಲಯಗಳ ಸಮಸ್ಯೆಗಳನ್ನು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪರಿಹರಿಸಬೇಕು. ಇಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಇದ್ದೂ ಇಲ್ಲದಂತಿದ್ದಾರೆ. ಅವರು ವಸತಿನಿಲಯಗಳ ಕಡೆಗೆ ತಲೆ ಹಾಕುವುದಿಲ್ಲ. ಕಾರ್ಯಕ್ರಮಗಳ ಆಯೋಜನೆಗೆ ಸೀಮಿತವಾಗಿದ್ದಾರೆ. ವಾರ್ಡನ್‌ಗಳು ವಸತಿ ನಿಲಯಗಳನ್ನು ನೋಡಿಕೊಳ್ಳುತ್ತಾರೆ. ಇವರ ಮೇಲೆ ಪ್ರಾಧ್ಯಾಪಕರೊಬ್ಬರು ಮುಖ್ಯ ವಾರ್ಡನ್ ಆಗಿ ಕೆಲಸ ಮಾಡುತ್ತಾರೆ. ಅವರು ವಸತಿನಿಲಯಕ್ಕೆ ಬರುವುದಿಲ್ಲ ಎಂಬ ಆರೋಪ ಕೇಳಿಬಂದಿದೆ.
ಉತ್ತರಿಸದ ಕುಲಸಚಿವ
ಸಮಸ್ಯೆಗಳ ಕುರಿತು ಪ್ರತಿಕ್ರಿಯೆ ಪಡೆಯಲು ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಶರಣಪ್ಪ ಅವರನ್ನು ಸಂಪರ್ಕ ಮಾಡಿದಾಗ ‘ಎಲ್ಲ ವಸತಿ ನಿಲಯಗಳಲ್ಲಿಯೂ ಊಟದ ವ್ಯವಸ್ಥೆ ಆರಂಭಿಸಲಾಗಿದೆ. ಆರಂಭ ಮಾಡಿಲ್ಲ ಎನ್ನುವುದು ತಪ್ಪು. ಮಳೆ ನೀರಿನಿಂದ ಕೊಠಡಿಗಳು ಸೋರುತ್ತಿದ್ದರೆ ಮಾಧ್ಯಮದವರೇ ಅದಕ್ಕೆ ಪರಿಹಾರ ತಿಳಿಸಬೇಕು’ ಎಂದು ಇತರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.