ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿಯನ್ನು ಶಕ್ತಿಯಾಗಿಸುವ ಚೇತನವೇ ಗುರು: ಡಾ.ರೇವಣಸಿದ್ಧ ಶಿವಾಚಾರ್ಯ ಶ್ರೀ

ಡಾ.ರೇವಣಸಿದ್ಧ ಶಿವಾಚಾರ್ಯ, ಶಿವಾನಂದ ಶ್ರೀಗಳಿಗೆ ಗುರುವಂದನೆ
Last Updated 6 ಜುಲೈ 2020, 17:12 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸಮಾಜದಲ್ಲಿನ ಸಾಮಾನ್ಯ ವ್ಯಕ್ತಿಯನ್ನೂ ಇಡೀ ಸಮಾಜದ ಶಕ್ತಿಯಾಗಿ ಪರಿವರ್ತನೆ ಮಾಡಬಲ್ಲ ಶಕ್ತಿ ಒಬ್ಬ ಗುರುವಿಗೆ ಇದೆ. ಹೀಗಾಗಿ, ಪ್ರಾಚೀನ ಕಾಲದಿಂದಲೂ ಭಾರತೀಯರು ಗುರುವಿಗೆ ಪೂಜ್ಯನೀಯ ಸ್ಥಾನ ಕೊಟ್ಟಿದ್ದಾರೆ’ ಎಂದು ಶ್ರೀನಿವಾಸ ಸರಡಗಿ ಚಿಕ್ಕವೀರೇಶ್ವರ ಸಂಸ್ಥಾನ ಮಠದ ಡಾ.ರೇವಣಸಿದ್ಧ ಶಿವಾಚಾರ್ಯ ಶ್ರೀಗಳು ಹೇಳಿದರು.

ನಗರದಲ್ಲಿ ಭಾನುವಾರ ಕೆಎಚ್‍ಬಿ ಗ್ರೀನ್ ಪಾರ್ಕ್ ಗೆಳೆಯರ ಬಳಗ, ಬಸವೇಶ್ವರ ಸಮಾಜ ಸೇವಾ ಬಳಗ, ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘಗಳ ವತಿಯಿಂದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಭಕ್ತರಿಂದ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

‘ಈ ನೆಲದ ಶರಣಬಸವೇಶ್ವರರು ಗುರು– ಶಿಷ್ಯ ಪರಂಪರೆಗೆ ದೇಶದಲ್ಲಿಯೇ ಮಾದರಿ ಆಗಿದ್ದಾರೆ. ತಂದೆ– ತಾಯಿ, ಗುರು– ಹಿರಿಯರನ್ನು ಗೌರವಿಸುವ ಸಂಸ್ಕೃತಿಯನ್ನು ಮಕ್ಕಳಿಗೆ ಬಾಲ್ಯದಿಂದಲೇ ಬೆಳೆಸಬೇಕು’‌ ಎಂದರು.

ಮಕ್ತಂಪುರ ಗುರುಬಸವ ಮಠದ ಶಿವಾನಂದ ಶ್ರೀ ಮಾತನಾಡಿ, ‘ಪ್ರಸ್ತುತ ಸಂದರ್ಭಗಳಲ್ಲಿನ ಸಂಬಂಧದಲ್ಲಿ ಬದಲಾವಣೆ ಆಗುತ್ತಿರುವುದಕ್ಕೆ ಇಬ್ಬರೂ ಅವಲೋಕನ ಮಾಡಿಕೊಳ್ಳಬೇಕಾಗಿದೆ’ ಎಂದು ನುಡಿದರು.

ಸಂಗಮೇಶ್ವರ ಸರಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾಗಿ ಪದೋನ್ನತಿ ಹೊಂದಿದ ದತ್ತಾತ್ರೇಯ ಸಾಬಣೆ, ಸಂತೋಷ ಮಠ ಅವರನ್ನು ಸತ್ಕರಿಸಲಾಯಿತು. ಸೇವಾ ಬಳಗದ ಸಂಸ್ಥಾಪಕ ಅಧ್ಯಕ್ಷ ಪ್ರೊ.ಎಚ್.ಬಿ.ಪಾಟೀಲ, ಸೇವಾ ಸಂಘದ ಅಧ್ಯಕ್ಷ ಹಣಮಂತರಾಯ ಅಟ್ಟೂರ, ಗೆಳೆಯರ ಬಳಗದ ಸಂಜೀವ ಶೆಟ್ಟಿ, ಡಿ.ವಿ.ಕುಲಕರ್ಣಿ, ಸೂರ್ಯಕಾಂತ ಸಾವಳಗಿ, ಬಸವರಾಜ ಹೆಳವರ ಯಾಳಗಿ, ಮಲ್ಲಿನಾಥ ಮುನ್ನಳ್ಳಿ, ಚಂದ್ರಕಾಂತ ತಳವಾರ, ಪ್ರದೀಪ ಕುಂಬಾರ, ರಾಜಶೇಖರ ಬಿ.ಮರಡಿ, ದಿಲೀಪ ಬಕರೆ, ಶ್ರೀನಿವಾಸ ಬುಜ್ಜಿ, ಶ್ರೀಶೈಲ್ ಪಾಟೀಲ, ಶಿವಾನಂದ ಬುಜರಿ, ರವೀಂದ್ರ ಗುತ್ತೇದಾರ, ರಾಜೇಶ ನಾಗಭುಜಂಗೆ, ರಮೇಶ ಬಸ್ಕಾವರೆ, ಸಂಗಮೇಶ ಶಾಸ್ತ್ರೀ ಮಾಶಾಳ, ಶಿವಕಾಂತ ಚಿಮ್ಮಾ, ವೀರೇಶ ಬೋಳಶೆಟ್ಟಿ ನರೋಣಾ, ನರಸಪ್ಪ ಬಿರಾದಾರ ದೇಗಾಂವ ಇದ್ದರು.

‘ಕ್ಷಮೆಯ ರೂಪ ಗುರು’

‘ತಾಯಿಯನ್ನು ಬಿಟ್ಟರೆ ಕ್ಷಮೆ ನೀಡುವ ದೊಡ್ಡತನ ಇರುವುದು ಗುರುವಿಗೆ ಮಾತ್ರ. ಆತ್ಮಬಲ ವೃದ್ಧಿಸುವ ಗುಣ ಗುರುವಿನಲ್ಲಿ ಇರುತ್ತದೆ’ ಎಂದು ಸುಲಫಲ ಮಠದ ಪೀಠಾಧಿಪತಿ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಗುರುಪೂರ್ಣಿಮಾ ಅಂಗವಾಗಿ ಭಾನುವಾರ ಮಠದಲ್ಲಿ ಭಕ್ತರಿಗೆ ಆಶೀರ್ವಾದ ನೀಡಿದ ಅವರು, ಭಕ್ತರ ಏಳ್ಗೆಗೆ ಹಾಗೂ ಅವರ ಸಮಸ್ಯೆಗಳಿಗೆ ಪರಿಹಾರ ಮತ್ತು ಸಮಾಧಾನ ಹೇಳುವರೇ ನಿಜವಾದ ಗುರು ಎಂದರು.

ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಶ್ರೀಗಳನ್ನು ಸನ್ಮಾನಿಸಿದರು. ಇದಕ್ಕೆ ನಂತರ ಶ್ರೀಗಳು ಶಾಸಕರಿಗೆ ಆಶೀರ್ವಾದ ರೂಪದಲ್ಲಿ ಗೌರವಿಸಿದರು. ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ, ಪತ್ರಕರ್ತ ಹಣಮಂತರಾವ ಭೈರಮಡಗಿ, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ಸತೀಶ ಸಜ್ಜನಶೆಟ್ಟಿ, ಪ್ರಭವ ಪಟ್ಟಣಕರ್, ವರುಣ ಪಾಟೀಲ ಗುಳ್ಯಾಳ ಇದ್ದರು.

ಸರಳ ಆಚರಣೆ

ಕಲಬುರ್ಗಿಯ ಶಿವಾಜಿ ನಗರದ ಬಂಜಾರ ಕಾಲೊನಿಯ ಮಾತಾ ಮಾರಿಕಾಂಬ ಹಾಗೂ ಸೇವಾಲಾಲ್‌ ಮಹಾರಾಜ್‌ ಮಂದಿರದಲ್ಲಿ ಭಾನುವಾರ ಗುರು ಪೂರ್ಣಿಮಾ ಆಚರಿಸಲಾಯಿತು.

ಪ್ರತಿ ವರ್ಷ ಮಹಾರಾಷ್ಟ್ರದ ಡಾ.ರಾಮರಾವ ಮಹಾರಾಜ ಶಕ್ತಿಪೀಠಕ್ಕೆ ಭೇಟಿ ನೀಡಿ ಗುರು ಪೂರ್ಣಿಮಾ ಆಚರಿಸಲಾಗುತ್ತಿತ್ತು. ಈ ಬಾರಿ ಕೋವಿಡ್‌ ಉಪಟಳದ ಕಾರಣ, ಸರಳವಾಗಿ ನಗರದಲ್ಲೇ ಆಚರಿಸಲಾಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಆರ್‌.ಕೆ.ರಾಠೋಡ ಅವರು ಪೂಜ್ಯರ ಭಾವಚಿತ್ರಕ್ಕೆ ಮಾಲಾರ್ಪನೆ ಮಾಡಿದರು.

ಮುಖ್ಯಶಿಕ್ಷಕರಾದ ಶಂಕರರಾವ ಪ‍ವಾರ, ಗೇಮ್‌ಸಿಂಗ್‌ ಜಿ. ಚವ್ಹಾಣ, ಅಮಿತ ಪವಾರ, ಸಹ ಶಿಕ್ಷಕರಾದ ಬೋಜು ಚವ್ಹಾಣ, ಅಜಯದೇವ್‌ ಎನ್‌. ಪವಾರ, ಗುರುನಾಥ ಪವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT