ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಸರ್ಕಾರಿ ಶಾಲೆಗಳಲ್ಲಿ ಅರ್ಧದಷ್ಟು ಹಾಜರಾತಿ

ಪೂರ್ಣಾವಧಿ ತರಗತಿಗಳು ಆರಂಭ, ಭೌತಿಕ ತರಗತಿಗೆ ಕಳುಹಿಸಲು ಪಾಲಕರಿಗೆ ಮನವರಿಕೆ ಮಾಡುತ್ತಿರುವ ಶಿಕ್ಷಕರು
Last Updated 6 ಅಕ್ಟೋಬರ್ 2021, 6:28 IST
ಅಕ್ಷರ ಗಾತ್ರ

ಕಲಬುರ್ಗಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6, 7 ಹಾಗೂ 8ನೇ ತರಗತಿಗಳು ಪೂರ್ಣಪ್ರಮಾಣದಲ್ಲಿ ಭೌತಿಕವಾಗಿ ಆರಂಭವಾಗಿದ್ದು, ಹಾಜರಾತಿ ಸುಧಾರಿಸಿಲ್ಲ. ಜಿಲ್ಲೆಯ ಬಹುಪಾಲು ಶಾಲೆಗಳಲ್ಲಿ ಮಂಗಳವಾರ ಕೂಡ ಶೇ 42ರಷ್ಟು ಹಾಜರಾತಿ ಕಂಡುಬಂತು.

‘ಸೋಮವಾರದಿಂದಲೇ ಬೆಳಿಗ್ಗೆ 10ರಿಂದ ಸಂಜೆ 4ರವರೆಗೂ ತರಗತಿ ಆರಂಭಿಸಲಾಗಿದೆ. ಈ ಬಗ್ಗೆ ಆಯಾ ಶಿಕ್ಷಕರು, ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಹಾಗೂ ಪಾಲಕರಿಗೆ ನಿಖರ ಮಾಹಿತಿ ರವಾನಿಸಿದ್ದೇವೆ. ಪೂರ್ಣಾವಧಿ ಆರಂಭವಾದ ಮೊದಲ ದಿನ ಜಿಲ್ಲೆಯ ಒಟ್ಟಾರೆ ಹಾಜರಾತಿ ಶೇ 40ರಷ್ಟು ಕಂಡುಬಂದಿದೆ. ಮಂಗಳವಾರ ತುಸು ಸುಧಾರಿಸಿದೆ. ಭೌತಿಕ ತರಗತಿಗಳಿಗೆ ಮಕ್ಕಳನ್ನು ಕಳುಹಿಸುವಂತೆ ಪಾಲಕರ ಮನವೊಲಿಕೆ ಮಾಡಲಾಗುತ್ತಿದೆ. ಮಕ್ಕಳು ಇಷ್ಟಪಟ್ಟರೂ ಪಾಲಕರು ಹಿಂದೇಟು ಹಾಕುತ್ತಿರುವ ಕಾರಣ ಹಾಜರಾತಿ ಪೂರ್ಣವಾಗಿಲ್ಲ. ಹಾಗಾಗಿ, ಆನ್‌ಲೈನ್‌ ತರಗತಿಗಳನ್ನೂ ಮುಂದುವರಿಸಲಾಗಿದೆ’ ಎಂದು ಡಿಡಿಪಿಐ ಕಚೇರಿಯ ಮೂಲಗಳು ಮಾಹಿತಿ ನೀಡಿವೆ.

ಸುಧಾರಿಸಿದ ನಗರದ ಶಾಲೆಗಳು: ನಗರದ ವ್ಯಾಪ್ತಿಗೆ ಬರುವ ದಕ್ಷಿಣ ಹಾಗೂ ಉತ್ತರ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಿಂಗಳಿಂದ ಹಾಜರಾತಿ ಶೇ 50ರಷ್ಟಿದೆ. ಇಲ್ಲಿನ ಜೇವರ್ಗಿ
ಕಾಲೊನಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಮಕ್ಕಳ ಕಲರವ ಕಂಡುಬಂತು.

6ನೇ ತರಗತಿಯಲ್ಲಿ 18 (34 ಪ‍್ರವೇಶ), 7ನೇ ತರಗತಿಯಲ್ಲಿ 16 (33 ಪ್ರವೇಶ) ಹಾಗೂ 8ನೆ ತರಗತಿಯಲ್ಲಿ 21 (38 ಪ್ರವೇಶ) ಮಕ್ಕಳು ಭೌತಿಕ ತರಗತಿಗಳಿಗೆ
ಹಾಜರಾದರು.‌

ಉಳಿದಂತೆ, ದಕ್ಷಿಣ ಶೈಕ್ಷಣಿಕ ಕ್ಷೇತ್ರದಲ್ಲಿ ಬರುವ ರಾಜಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 210 ( 317 ಪ್ರವೇಶ), ಸುಂದರ ನಗರ ಶಾಲೆಯಲ್ಲಿ 50 (70 ಪ್ರವೇಶ), ಬಪುನಗರದಲ್ಲಿ ಶೇ 57ರಷ್ಟು ಹಾಜರಾತಿ ಕಂಡುಬಂದಿದೆ. ಉತ್ತರ ಶೈಕ್ಷಣಿಕ ಕ್ಷೇತ್ರದಲ್ಲಿ ಬರುವ ವಿಜಯನಗರ, ಆದರ್ಶನಗರ ಹಾಗೂ ಮಹಾಗಾಂವ್‌ ಕ್ರಾಸ್‌ನಲ್ಲಿ ಸರ್ಕಾರಿ ಶಾಲೆಗಳಿದ್ದು, ಅಲ್ಲಿಯೂ ಹಾಜರಾತಿ ಶೇ 55 ದಾಟಿದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದ್ದಾರೆ.

*

1ರಿಂದ 5ರವರೆಗೆ ಸ್ವಯಂ ಪ್ರೇರಿತ ಪಾಠ

1ರಿಂದ 5ನೇ ತರಗತಿಯವರೆಗಿನ ಮಕ್ಕಳಿಗೆ ಇನ್ನೂ ಭೌತಿಕ ತರಗತಿಗಳು ಆರಂಭವಾಗಿಲ್ಲ. ಆದರೆ, ಬಹುಪಾಲು ಮಕ್ಕಳು ಆನ್‌ಲೈನ್‌ ತರಗತಿಗೆ ಹಾಜರಾಗುವುದಿಲ್ಲ. ಮತ್ತೆ ಕೆಲವರಲ್ಲಿ ಮೊಬೈಲ್‌, ಇಂಟರ್‌ನೆಟ್‌ ಸೌಲಭ್ಯ ಇರುವುದಿಲ್ಲ. ಹೀಗಾಗಿ, ಪುಟ್ಟ ಮಕ್ಕಳು ಕಲಿಕೆಯಿಂದ ದೂರ ಉಳಿಯದಂತೆ ಕೆಲವು ಶಾಲೆಯ ಶಿಕ್ಷಕರೇ ವಾರಕ್ಕೆ ಎರಡು ದಿನ ಅವರನ್ನು ಕರೆಯಿಸಿ ವರ್ಕ್‌ಶೀಟ್‌, ಹೋಂವರ್ಕ್‌ಗಳನ್ನು ಹಾಕಿಕೊಟ್ಟು ಕಳುಹಿಸುತ್ತಾರೆ.

ಮಕ್ಕಳನ್ನು ಆಯಾ ಪಾಲಕರೇ ಶಾಲೆಗೆ ಕರೆದುಕೊಂಡು ಬಂದು ವರ್ಕ್‌ಶೀಟ್‌ ಪಡೆದು ಹೋಗುತ್ತಾರೆ. ಒಂದು ವಾರದ ಬಳಿಕ ಅದರ ಪರಿಶೀಲನೆ ಮಾಡಿ ಮತ್ತೆ ಮನೆಗೇ ಪಾಠ ಹಾಕಿಕೊಡಲಾಗುತ್ತಿದೆ ಎನ್ನುವುದು ಮುಖ್ಯಶಿಕ್ಷಕರ ಮಾಹಿತಿ

*

ಬಿಸಿಯೂಟ ಇಲ್ಲದಿರುವುದೂ ಕಾರಣ

ಕೋವಿಡ್‌ ನಂತರ ಆರಂಭವಾದ ಸರ್ಕಾರಿ ಶಾಲೆಗಳಲ್ಲಿ ಇನ್ನೂ ಬಿಸಿಯೂಟ ಆರಂಭಿಸಿಲ್ಲ. ಸದ್ಯಕ್ಕೆ ಮಕ್ಕಳೇ ತಮ್ಮ ಮನೆಯಿಂದ ಊಟ ತಂದು ಉಣಬೇಕಾಗಿದೆ. ಮಾತ್ರವಲ್ಲ; ಕುಡಿಯುವ ನೀರನ್ನೂ ತರಬೇಕು.

ಅಕ್ಟೋಬರ್‌ 21ರಿಂದ 1ರಿಂದ 5ನೇ ತರಗತಿಗಳನ್ನೂ ಭೌತಿಕವಾಗಿ ಆರಂಭವಾಗುವ ಸಾಧ್ಯತೆ ಇದೆ. ಆ ನಂತರ ಬಿಸಿಯೂಟವನ್ನೂ ಶುರು ಮಾಡುವ ನಿರೀಕ್ಷೆ ಇದೆ ಎನ್ನುವುದು ಅಫಜಲಪುರ, ಆಳಂದ, ಜೇವರ್ಗಿ, ಯಡ್ರಾಮಿ ತಾಲ್ಲೂಕಿನ ಕೆಲ ಮುಖ್ಯ ಶಿಕ್ಷಕರ ಹೇಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT