ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಾಲಿಸಿಸ್‌ಗೂ ತಟ್ಟಿದ ‘ಬಿಸಿ’

ಸೂರ್ಯನ ಶಾಖಕ್ಕೆ ಬಿಸಿಯಾಗುವ ಆರ್‌ಒ ಪ್ಲಾಂಟ್ ನೀರು: ಮಧ್ಯಾಹ್ನ ಡಯಾಲಿಸಿಸ್ ಸ್ಥಗಿತ
Published 7 ಏಪ್ರಿಲ್ 2024, 6:28 IST
Last Updated 7 ಏಪ್ರಿಲ್ 2024, 6:28 IST
ಅಕ್ಷರ ಗಾತ್ರ

ಕಲಬುರಗಿ: ನಿರ್ವಹಣೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಸರ್ಕಾರಿ ಆಸ್ಪತ್ರೆಗಳ ಡಯಾಲಿಸಿಸ್ ಕೇಂದ್ರಗಳಿಗೆ ಬೇಸಿಗೆಯ ಬಿಸಿಯೂ ತಟ್ಟಿದೆ. ತಾಪಮಾನದ ಹೆಚ್ಚಳದಿಂದಾಗಿ ಡಯಾಲಿಸಿಸ್ ಪ್ರಕ್ರಿಯೆ ಮಧ್ಯಾಹ್ನವೇ ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ ಡಯಾಲಿಸಿಸ್‌ ಸೇವೆ ಸಿಗದೆ ಬಡ ರೋಗಿಗಳು ಪರದಾಡುವಂತಾಗಿದೆ.

ಬಿರು ಬಿಸಿಲಿನಿಂದಾಗಿ ಜಿಲ್ಲೆಯಲ್ಲಿ 40ರಿಂದ 42 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರುತ್ತದೆ. ಸೂರ್ಯನ ಪ್ರಖರ ಶಾಖಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವೈದ್ಯಕೀಯ ಸೇವೆಯೂ ಇದರಿಂದ ಹೊರತಾಗಿಲ್ಲ.

ಸರ್ಕಾರಿ ಆಸ್ಪತ್ರೆಗಳಲ್ಲಿನ ಹಳೆಯ ಡಯಾಲಿಸಿಸ್ ಯಂತ್ರಗಳ ಕಾರ್ಯಕ್ಷಮತೆ ಈಗಾಗಲೇ ಕುಸಿದಿದೆ. ಇದರ ನಡುವೆ ಡಯಾಲಿಸಿಸ್‌ ಪ್ರಕ್ರಿಯೆಯಲ್ಲಿ ನಿರ್ಣಾಯಕವಾಗಿರುವ ಶುದ್ಧ ನೀರು ಸಹ ಬಿಸಿಯಾಗಿ ಬರುತ್ತಿದೆ. ಇದು ಡಯಾಲಿಸಿಸ್‌ ಕೇಂದ್ರಗಳ ನಿರ್ವಾಹಕರ ತಲೆ ಬಿಸಿ ಮಾಡಿದೆ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ (ಸಿಕೆಡಿ) ತುತ್ತಾಗಿ ನಿಯಮಿತವಾಗಿ ಡಯಾಲಿಸಿಸ್‌ಗೆ ಬರುವ ರೋಗಿಗಳನ್ನು ವಾಪಸ್ ಕಳುಹಿಸುವ ಅನಿವಾರ್ಯತೆ ಎದುರಾಗಿದೆ.

ಜಿಮ್ಸ್‌ ಆಸ್ಪತ್ರೆಯಲ್ಲಿ 14 ಡಯಾಲಿಸಿಸ್ ಯಂತ್ರಗಳ ಪೈಕಿ 7 ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ 7 ಕೇಂದ್ರಗಳಲ್ಲಿ 14 ಡಯಾಲಿಸಿಸ್ ಯಂತ್ರಗಳ ಪೈಕಿ ಕೆಲವು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಡಯಾಲಿಸಿಸ್ ಕೇಂದ್ರಗಳಲ್ಲಿ ನೋಂದಾಯಿತ 80ಕ್ಕೂ ಅಧಿಕ ರೋಗಿಗಳು ವಾರದಲ್ಲಿ ಮೂರು ಬಾರಿ ಡಯಾಲಿಸಿಸ್‌ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಮಧ್ಯಾಹ್ನದ ಬಿರುಬೇಸಿಗೆಯ ಬಿಸಿಲು ರೋಗಿಗಳ ಡಯಾಲಿಸಿಸ್‌ಗೂ ಅಡ್ಡಿಯಾಗಿದೆ. ಗಂಭೀರ ಸಮಸ್ಯೆ ಇದ್ದವರು ಖಾಸಗಿ ಡಯಾಲಿಸಿಸ್‌ ಕೇಂದ್ರಗಳ ಮೊರೆ ಹೋಗುತ್ತಿದ್ದಾರೆ.

‘ಆರ್‌ಒ ಘಟಕದ ಶುದ್ಧ ನೀರನ್ನು ಮಾತ್ರವೇ ಡಯಾಲಿಸಿಸ್‌ಗೆ ಬಳಸುತ್ತೇವೆ. ಒಂದು ಬಾರಿ ಒಬ್ಬ ರೋಗಿಗೆ ವಾಕಿಂಗ್, ರಿಸರ್ಕುಲೇಷನ್, ಕೆಮಿಕಲ್ ಶುದ್ಧೀಕರಣ ಸೇರಿ ಇತರೆ ಪ್ರಕ್ರಿಯೆಗೆ ಸುಮಾರು 250 ಲೀಟರ್ ನೀರು ಬೇಕಾಗುತ್ತದೆ. ನೀರು ಬಿಸಿಯಾಗಿದ್ದರೆ ಡಯಾಲಿಸಿಸ್ ಮಾಡುವಂತಿಲ್ಲ. ಬೆಳಿಗ್ಗೆ 8ಕ್ಕೆ ಒಬ್ಬರಿಗೆ ಡಯಾಲಿಸಿಸ್‌ ಶುರು ಮಾಡಿದರೆ ಪ್ರಕ್ರಿಯೆ ಮುಗಿಯುವ ಒಂದು ಗಂಟೆ ಮೊದಲೇ (ಬೆಳಿಗ್ಗೆ 11ಕ್ಕೆ) ಬಿಸಿ ನೀರಿನ ಎಚ್ಚರಿಕೆ ಬೆಲ್ ಬಾರಿಸುತ್ತದೆ. ಕೊನೆ ಗಳಿಗೆಯಲ್ಲಿ ತೀವ್ರ ಸಮಸ್ಯೆಯಾಗುತ್ತಿದೆ’ ಎನ್ನುತ್ತಾರೆ ಚಿತ್ತಾಪುರದ ತಾಲ್ಲೂಕು ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಹೊರ ಗುತ್ತಿಗೆ ನೌಕರ.

‘ಪ್ರತಿ ಬೇಸಿಗೆಯಲ್ಲಿ ನೀರು ಬಿಸಿಯಾಗಿ ಬರುವುದು ಸಾಮಾನ್ಯವಾಗಿದೆ. ಬೇರೆ ತಾಲ್ಲೂಕುಗಳ ಕೇಂದ್ರಗಳಲ್ಲಿ ಮಧ್ಯಾಹ್ನ 12ರ ನಂತರ ಬಿಸಿ ನೀರಿನ ಎಚ್ಚರಿಕೆಯ ಬೆಲ್ ಬಂದರೆ, ಚಿತ್ತಾಪುರ ಕೇಂದ್ರದಲ್ಲಿ ಬೆಳಿಗ್ಗೆ 11ಕ್ಕೆ ಬಾರಿಸುತ್ತದೆ. ಹೀಗಾಗಿ, ಮಧ್ಯಾಹ್ನ 12ಕ್ಕೆ ಡಯಾಲಿಸಿಸ್‌ ಸ್ಥಗಿತಗೊಳಿಸಿ, ಸಂಜೆ 4ಕ್ಕೆ ಆರಂಭಿಸುತ್ತಿದ್ದೇವೆ’ ಎಂದರು.

ಬಿಸಿ ನೀರಿನ ಸಮಸ್ಯೆ ಚಿತ್ತಾಪುರದಲ್ಲಿ ಕಂಡುಬಂದಿದೆ. ಬೇರೆ ಯಾವೆಲ್ಲ ಕೇಂದ್ರಗಳಲ್ಲಿ ಇಂತಹ ಸಮಸ್ಯೆ ಇದೆ ಎಂಬುದನ್ನು ತಿಳಿಕೊಂಡು ನೀರು ಬಿಸಿ ಆಗದಂತೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು.
ಡಾ.ರತಿಕಾಂತ ಸ್ವಾಮಿ, ಡಿಎಚ್‌ಒ

ಕುಸಿದ ಯಂತ್ರಗಳ ಕಾರ್ಯಕ್ಷಮತೆ ಒಬ್ಬ ರೋಗಿಗೆ ಒಂದು ಸಲ ಡಯಾಲಿಸಿಸ್ ಮಾಡಲು ನಾಲ್ಕು ಗಂಟೆಗಳು ಬೇಕಾಗುತ್ತದೆ. ಆರಂಭದಲ್ಲಿ ಒಂದು ಘಟಕದಲ್ಲಿ ದಿನಕ್ಕೆ 6 ಶಿಫ್ಟ್‌ಗಳಂತೆ 16 ಗಂಟೆಗಳಲ್ಲಿ 6 ರೋಗಿಗಳನ್ನು ಡಯಾಲಿಸಿಸ್‌ಗೆ ಒಳಪಡಿಸಲಾಗುತ್ತಿತ್ತು. ಯಂತ್ರಗಳು ಹಳೆಯದಾಗಿದ್ದು ಕಳೆದ ಮೂರು ವರ್ಷಗಳಿಂದ ಸಣ್ಣ ಪುಟ್ಟ ದುರಸ್ತಿಯೂ ಆಗಿಲ್ಲ. ಹೀಗಾಗಿ ದಿನಕ್ಕೆ 12 ಗಂಟೆಗಳಲ್ಲಿ 4 ರೋಗಿಗಳಿಗಷ್ಟೇ ಡಯಾಲಿಸಿಸ್ ಮಾಡಲಾಗುತ್ತಿದೆ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ. ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ರತಿಕಾಂತ ಸ್ವಾಮಿ ‘ಡಯಾಲಿಸಿಸ್ ಯಂತ್ರಗಳು ಬಂದು ಬಹಳ ವರ್ಷಗಳಾಗಿದ್ದು ದುರಸ್ತಿ ಮಾಡದಂತಹ ಸ್ಥಿತಿಯಲ್ಲಿವೆ. ಏಜೆನ್ಸಿ ಬದಲಾಗಿದ್ದು ಹೊಸ ಟೆಂಡರ್ ಅಂತಿಮವಾಗಿಲ್ಲ. ಟೆಂಡರ್ ಮುಗಿದ ನಂತರ ಹೊಸ ಯಂತ್ರಗಳು ಬರಲಿವೆ. ಚಿಕಿತ್ಸೆಯಲ್ಲಿನ ವ್ಯತ್ಯಯ ತಡೆಯಲು ಕೆಲವು ಕಡೆ ಖಾಸಗಿ ಡಯಾಲಿಸಿಸ್ ಕೇಂದ್ರಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT