ಗುರುವಾರ , ಜುಲೈ 29, 2021
20 °C
ಮೂರು ತಿಂಗಳ ಬಳಿಕ ‍‍ಪೂಜೆ, ಪ್ರಾರ್ಥನೆ, ಎಲ್ಲ ಮಸೀದಿಗಳಲ್ಲೂ ಸಾಮೂಹಿಕ ನಮಾಜ್‌

ದೇವಸ್ಥಾನ, ಮಸೀದಿಗಳಲ್ಲಿ ಭಕ್ತರ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ಬಹುಪಾಲು ದೇವಸ್ಥಾನಗಳಲ್ಲಿ ಸೋಮವಾರ ಭಕ್ತರು ಸಾಲುಗಟ್ಟಿ ನಿಂತು ದರ್ಶನ ಪ‍ಡೆದರು. ಮಸೀದಿಗಳಲ್ಲಿ ಕೂಡ ಅಪಾರ ಸಂಖ್ಯೆಯ ಮುಸ್ಲಿಮರು ಮಧ್ಯಾಹ್ನ 1.30ಕ್ಕೆ ಮೊದಲ ಸಾಮೂಹಿಕ ನಮಾಜ್‌ ಮಾಡಿದರು.

ಇಲ್ಲಿನ ಐತಿಹಾಸಿಕ ಶರಣಬಸವೇಶ್ವರ ದೇವಸ್ಥಾನ, ಕೋರಂಟಿ ಹನುಮಾನ್‌ ಮಂದಿರ, ರೇಣುಕಾದೇವಿ ಮಂದಿರಗಳ ಆವರಣದಲ್ಲಿ ನೂರಾರು ಭಕ್ತರು ಸೇರಿದರು. ಶಹಾಬಜಾರ್‌ನ ಅಂಬಾಭವಾನಿ ದೇವಸ್ಥಾನ, ರಾಮಮಂದಿರ, ಕೆಂಪು ಹನುಮಾನ್‌ ದೇವಸ್ಥಾನ, ದತ್ತ ದೇವಸ್ಥಾನ, ರಾಘವೇಂದ್ರ ಶ್ರೀಗಳ ಬೃಂದಾವನಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು.

ಬಹುಪಾಲು ಕಡೆ ಕಟ್ಟಿಗೆ ಬ್ಯಾರಿಕೇಡ್‌ ನಿರ್ಮಿಸಿ ಭಕ್ತರು ಸಾಲಾಗಿ ಬರುವಂತೆ ನೋಡಿಕೊಳ್ಳಲಾಯಿತು. ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ, ಅಂತರ ಕಾಯ್ದುಕೊಂಡು ಗರ್ಭಗುಡಿಗೆ ಪ್ರವೇಶ ನೀಡಲಾಯಿತು. ಅಭಿಷೇಕ, ಪೂಜೆ, ಕಾಯಿ– ಕರ್ಪೂರ ಅರ್ಪಣೆ ಮಾಡದಂತೆ ಸ್ವಯಂ ಸೇವಕರು ಮಾರ್ಗದರ್ಶನ ಮಾಡುತ್ತಿದ್ದುದು ಕಂಡುಬಂತು. ಅದಾಗಿಯೂ ಹಲವರು ಮಹಿಳೆಯರು ದೇವಸ್ಥಾನದ ಮುಂದಿನ ಫುಟ್‌ಪಾತ್‌ಗಳಲ್ಲೇ ಕಾಯಿ ಒಡೆದು ಕರ್ಪೂರ ಬೆಳಗಿಸಿದರು.

ಶರಣಬಸವೇಶ್ವರರ ಸಮಾಧಿ ದರ್ಶನಕ್ಕೆ ಮೂರು ತಿಂಗಳ ಬಳಿಕ ಅವಕಾಶ ಸಿಕ್ಕಿದ್ದರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಬರಿಗಾಲಲ್ಲಿ ಬೆಳಿಗ್ಗೆ 6ಕ್ಕೆ ದೇವಸ್ಥಾನದತ್ತ ಬಂದರು. ನಸುಕಿನ 5ರಿಂದಲೇ ಪೂಜಾ ಕೈಂಕರ್ಯಗಳು ಆರಂಭವಾದವು.

ಸಾಮೂಹಿಕ ನಮಾಜ್‌: ನಗರದ ಮುಸ್ಲಿಂ ಚೌಕ, ದರ್ಗಾ ರಸ್ತೆ, ಎಂಎಸ್‌ಕೆ ಮಿಲ್‌, ಸೂಪರ್‌ ಮಾರ್ಕೆಟ್‌, ಮೋಮಿನ್‌ಪುರ, ಖೂನಿ ಹವಾಲಾ, ಜೆಮ್‌ಶೆಟ್ಟಿ ನಗರ, ಬಹಮನಿ ಕೋಟೆ, ಇಸ್ಲಾಮಾಬಾದ್‌ ಕಾಲೊನಿಗಳಲ್ಲಿ ಇರುವ ದೊಡ್ಡ ಮಸೀದಿಗಳಲ್ಲಿ ನೂರಾರು ಜನ ಏಕಕಾಲಕ್ಕೆ ಸೇರಿ ನಮಾಜ್‌ ಮಾಡಿದರು.

ಮಸೀದಿಗಳಲ್ಲಿ ಮೂರು ತಿಂಗಳ ಬಳಿಕ ನಮಾಜ್‌ ಅವಕಾಶ ನೀಡಿದ್ದರಿಂದ ಬೆಳಿಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಮಸೀದಿಗಳತ್ತ ಬಂದರು. ಮಧ್ಯಾಹ್ನ 1.30ಕ್ಕೆ ಮೊದಲ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮಸೀದಿ ಮುಂಭಾಗದಲ್ಲಿ ಕೈ–ಕಾಲು, ಮುಖ ತೊಳೆದುಕೊಂಡ ನಂತರ ಸ್ಯಾನಿಟೈಸರ್‌ನಿಂದ ಮತ್ತೆ ಕೈ ತೊಳೆಸಲಾಯಿತು. ಎಲ್ಲರಿಗೂ ಗೇಟ್‌ ಬಳಿಯೇ ಸ್ಕ್ರೀನಿಂಗ್‌ ನಡೆಸಿ ಒಳಗೆ ಬಿಡಲಾಯಿತು. ಪ್ರತಿಯೊಬ್ಬರೂ ಕುಳಿತುಕೊಳ್ಳಲು ಒಂದು ಮೀಟರ್‌ ಅಂತರ ನೀಡಲಾಯಿತು. ಆದರೂ ಸೂಪರ್ ಮಾರ್ಕೆಟ್‌ ಬಳಿಯ ಮಸೀದಿಯಲ್ಲಿ ನಮಾಜ್‌ಗೆ ಗುಂಪು ಗುಂಪಾಗಿ ಸೇರಿದ್ದರು.

ತೀರ್ಥಪ್ರಸಾದ ಹೋಗಿ, ಸ್ಯಾನಿಟೈಸರ್‌ ಬಂತು!

ಇಷ್ಟು ದಿನ ದೇವಸ್ಥಾನದೊಳಗೆ ತೀರ್ಥಪ್ರಸಾದಕ್ಕೆ ಚಾಚುತ್ತಿದ್ದ ಕೈಗಳು ಈಗ ಸ್ಯಾನಿಟೈಸರ್‌ಗೆ ಚಾಚಬೇಕಾಗಿದೆ.

ದೇವರ ದರ್ಶನ ಪಡೆದ ತಕ್ಷಣ ತೀರ್ಥಪ್ರಸಾದ ಪಡೆದು ಸೇವನೆ ಮಾಡುವುದು ಭಕ್ತರ ರೂಢಿ. ಆದರೆ, ಭಕ್ತರು– ಅರ್ಚಕರ ಮಧ್ಯೆ ಅಂತರ ಕಾಯ್ದುಕೊಳ್ಳಬೇಕು ಎಂಬ ಉದ್ದೇಶದಿಂದ ತೀರ್ಥಪ್ರಸಾದ ನೀಡದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಅದೇ ರೀತಿ ಹಣೆಗೆ ಅಂಗಾರ, ವಿಭೂತಿ, ಕುಂಕುಮ, ತಿಲಕ ಹಚ್ಚುವುದನ್ನು ನಿಲ್ಲಿಸಲಾಗಿದ್ದು, ಅದೇ ಜಾಗಕ್ಕೆ ಥರ್ಮಲ್‌ ಗನ್‌ನಿಂದ ಸ್ಕ್ರೀನಿಂಗ್‌ ಮಾಡಲಾಗುತ್ತಿದೆ.

ದೇವರ ಪಾದೋದಕ ಸಿಂಪಡಣೆ ಬದಲು, ವೈರಾಣು ನಾಶಕ ದ್ರಾವಣ ಸಿಂಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ!

11ರ ನಂತರ ದರ್ಗಾ ಪ್ರವೇಶ

ಕಲಬುರ್ಗಿ: ಇಲ್ಲಿನ ಐತಿಹಾಸಿಕ ಖಾಜಾ ಬಂದಾ ನವಾಜ್‌ ದರ್ಗಾದಲ್ಲಿ ಜೂನ್‌ 11ರ ನಂತರ ಸಾರ್ವಜನಿಕರಿಗೆ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ ದರ್ಗಾದ ಮುಖ್ಯಸ್ಥರು ಮಾತ್ರ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಪ್ರವಾಸಿಗರು ಹಾಗೂ ನಮಾಜ್‌ ಮಾಡುವವರು; ಸೂಫಿ ಸಂತರ ದರ್ಶನಕ್ಕೆ ಇನ್ನಷ್ಟು ದಿನ ಕಾಯಬೇಕಾಗಿದೆ.

‘ಖಾಜಾ ಬಂದಾ ನವಾಜ್‌ ಅವರ ಬೃಹತ್‌ ಉರುಸ್‌ ಪ್ರತಿ ಬಾರಿ ಜುಲೈನಲ್ಲಿ ನಡೆಯುತ್ತದೆ. ಇದಕ್ಕೆ ಒಂದು ತಿಂಗಳು ಮುಂಚಿತವಾಗಿ ‘ಝೆಲಾ ಮುಬಾರಕ್‌ ಮೆರವಣಿಗೆ’ ಆಯೋಜಿಸುವುದು ವಾಡಿಕೆ. ಅದರಂತೆ ಈ ಬಾರಿಯ ಉರುಸ್‌ನ ಪೂರ್ವಭಾವಿಯಾಗಿ ಝೆಲಾ ಮುಬಾರಕ್‌ ಕಾರ್ಯಕ್ರಮಗಳು ಸೋಮವಾರದಿಂದ ಆರಂಭವಾಗಿವೆ. ಈ ಕಾರ್ಯಕ್ರಮಕ್ಕೂ ಹೆಚ್ಚಿನ ಸಂಖ್ಯೆಯ ಜನ ಸೇರುವ ಕಾರಣ ಸುರಕ್ಷತೆ ಕಷ್ಟವಾಗಲಿದೆ. ಆದ್ದರಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ಬಂದಾ ನವಾಜ್‌ ವಂಶಸ್ಥರು ಮಾತ್ರ ನೆರವೇರಿಸಲಿದ್ದಾರೆ. ಜತೆಗೆ, ಮುಬಾರಕ್‌ನ ಮೆರವಣಿಗೆ ಕೂಡ ದರ್ಗಾ ಆವರಣದಲ್ಲೇ ನಡೆಯಲಿದೆ’ ಎಂದು ದರ್ಗಾದ ಮುಖ್ಯಸ್ಥರಾದ ಡಾ.ಸಯ್ಯದ್ ಶಾ ಖುಸ್ರೋ ಹುಸೇನಿ ಅವರು ತಿಳಿಸಿದ್ದಾರೆ.

‘ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಬಂದಾ ನವಾಜರ ಭಕ್ತರು ಇದ್ದಾರೆ. ಈ ಬಾರಿಯ ಮುಬಾರಕ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು

11ರ ನಂತರ ದರ್ಗಾ ಪ್ರವೇಶ

ಇಲ್ಲಿನ ಐತಿಹಾಸಿಕ ಖಾಜಾ ಬಂದಾ ನವಾಜ್‌ ದರ್ಗಾದಲ್ಲಿ ಜೂನ್‌ 11ರ ನಂತರ ಸಾರ್ವಜನಿಕರಿಗೆ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ ದರ್ಗಾದ ಮುಖ್ಯಸ್ಥರು ಮಾತ್ರ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಪ್ರವಾಸಿಗರು ಹಾಗೂ ನಮಾಜ್‌ ಮಾಡುವವರು; ಸೂಫಿ ಸಂತರ ದರ್ಶನಕ್ಕೆ ಇನ್ನಷ್ಟು ದಿನ ಕಾಯಬೇಕಾಗಿದೆ.

‘ಖಾಜಾ ಬಂದಾ ನವಾಜ್‌ ಅವರ ಬೃಹತ್‌ ಉರುಸ್‌ ಪ್ರತಿ ಬಾರಿ ಜುಲೈನಲ್ಲಿ ನಡೆಯುತ್ತದೆ. ಇದಕ್ಕೆ ಒಂದು ತಿಂಗಳು ಮುಂಚಿತವಾಗಿ ‘ಝೆಲಾ ಮುಬಾರಕ್‌ ಮೆರವಣಿಗೆ’ ಆಯೋಜಿಸುವುದು ವಾಡಿಕೆ. ಅದರಂತೆ ಈ ಬಾರಿಯ ಉರುಸ್‌ನ ಪೂರ್ವಭಾವಿಯಾಗಿ ಝೆಲಾ ಮುಬಾರಕ್‌ ಕಾರ್ಯಕ್ರಮಗಳು ಸೋಮವಾರದಿಂದ ಆರಂಭವಾಗಿವೆ. ಈ ಕಾರ್ಯಕ್ರಮಕ್ಕೂ ಹೆಚ್ಚಿನ ಸಂಖ್ಯೆಯ ಜನ ಸೇರುವ ಕಾರಣ ಸುರಕ್ಷತೆ ಕಷ್ಟವಾಗಲಿದೆ. ಆದ್ದರಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ಬಂದಾ ನವಾಜ್‌ ವಂಶಸ್ಥರು ಮಾತ್ರ ನೆರವೇರಿಸಲಿದ್ದಾರೆ. ಜತೆಗೆ, ಮುಬಾರಕ್‌ನ ಮೆರವಣಿಗೆ ಕೂಡ ದರ್ಗಾ ಆವರಣದಲ್ಲೇ ನಡೆಯಲಿದೆ’ ಎಂದು ದರ್ಗಾದ ಮುಖ್ಯಸ್ಥರಾದ ಡಾ.ಸಯ್ಯದ್ ಶಾ ಖುಸ್ರೋ ಹುಸೇನಿ ಅವರು ತಿಳಿಸಿದ್ದಾರೆ.

‘ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಬಂದಾ ನವಾಜರ ಭಕ್ತರು ಇದ್ದಾರೆ. ಈ ಬಾರಿಯ ಮುಬಾರಕ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಅವರಿಗಾಗಿ, ಯುಟೂಬ್‌ ಚಾನೆಲ್‌ನಲ್ಲಿ ಇದರ ನೇರ ಪ್ರಸಾರವಾಗಲಿದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು