ಗುರುವಾರ , ಮೇ 6, 2021
25 °C
ಐತಿಒಹಾಸಿಕ ಸ್ತಂಭ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ‘ವಿಶ್ವ ಪರಂಪರೆ ದಿನಾಚರಣೆ’

ಪಾರಂಪರಿಕ ಕುರುಹುಗಳ ರಕ್ಷಣೆ ಅಗತ್ಯ: ಎಚ್.ಬಿ.ಪಾಟೀಲ

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ನಮ್ಮ ದೇಶ ತನ್ನದೇ ಆದ ಭವ್ಯವಾದ ಇತಿಹಾಸ, ಪರಂಪರೆ ಹೊಂದಿದೆ. ಇದನ್ನು ಯುವ ಪೀಳಿಗೆಗೆ ತಿಳಿಸಿಕೊಡುವುದು ಅವಶ್ಯಕ. ಈ ನಿಟ್ಟಿನಲ್ಲಿ ದೇಶದಲ್ಲಿರುವ ಐತಿಹಾಸಿಕ ಸ್ಮಾರಕಗಳು, ವಾಸ್ತುಶಿಲ್ಪಗಳ ಪಾರಂಪರಿಕ ಕಟ್ಟಡಗಳನ್ನು ರಕ್ಷಿಸಬೇಕು’ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ಶಹಾಬಜಾರ್‌ ನಾಕಾ ಸಮೀಪದಲ್ಲಿರುವ 2000 ವರ್ಷಗಳ ಪುರಾತನವಾದ ಸ್ತಂಭ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ಮತ್ತು ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ವಿಶ್ವ ಪರಂಪರೆ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ವಿಶ್ವ ಪರಂಪರೆಯು ಮನುಕುಲದ ಸಂಪತ್ತಾಗಿದೆ. ನಮ್ಮ ದೇಶದ ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಇದರ ಬಗ್ಗೆ ಎಲ್ಲೆಡೆ ವ್ಯಾಪಕವಾದ ಜಾಗೃತಿಯಾಗಬೇಕು. ಭವ್ಯವಾದ ತಾಣಗಳು, ಸ್ಮಾರಕಗಳು, ಸುಕೇತ್ರಗಳು ಇಂದು ಅವನತಿಯ ಅಂಚಿನಲ್ಲಿವೆ. ಇವು ನಾಶವಾದರೆ ಮುಂದಿನ ಪೀಳಿಗೆ ಕೇವಲ ಚಿತ್ರದಲ್ಲಿ ನೋಡಲು ಮಾತ್ರ ಸಾಧ್ಯವಿದೆ. ಆದ್ದರಿಂದ ಇವುಗಳನ್ನು ಸಂರಕ್ಷಿಸುವದರಿಂದ ಇತಿಹಾಸ ಮತ್ತು ಮಾನವನ ಸಂಸ್ಕೃತಿ, ಪರಂಪರೆ ಉಳಿಯುತ್ತದೆ’ ಎಂದರು.

‌ದೇವಸ್ಥಾನದ ನಾಗೇಶ ಮಹಾರಾಜ ಸ್ವಾಮೀಜಿ ಮಾತನಾಡಿ, ‘ಈ ದೇವಾಲಯವು ಸಾವಿರಾರು ವರ್ಷಗಳ ಹಿನ್ನಲೆ, ಇತಿಹಾಸವನ್ನು ಹೊಂದಿದೆ. ಅಮೂಲ್ಯವಾದ ವಾಸ್ತುಶಿಲ್ಪದಿಂದ ಕೂಡಿದ ಇದಕ್ಕೆ ಕಾಯಕಲ್ಪ ನೀಡುವ ಮೂಲಕ ಅಭಿವೃದ್ಧಿಗೊಳಿಸಬೇಕು. ಇದರ ಬಗ್ಗೆ ಸಂಬಂಧಿಸಿದ ಇಲಾಖೆ, ಸಂಸ್ಥೆ ಗಮನಹರಿಸಬೇಕು’ ಎಂದು ಹೇಳಿದರು.

ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಬಸಯ್ಯಸ್ವಾಮಿ ಹೊದಲೂರ, ಬಸವರಾಜ ಎಸ್.ಪುರಾಣೆ, ದೇವೇಂದ್ರಪ್ಪ ಗಣಮುಖಿ, ಮಹಾದೇವ ಜಾಲಾದಿ, ಈರಣ್ಣ ಅವರಾದಿ, ಬನ್ನಯ್ಯ ಹಿರೇಮಠ, ಹಣಮಂತರಾವ, ಶ್ರೀಜಿತ್ ತುಮಾರನಾವಿಸ್, ರಾಜು ಬರಾಡ್ ಸೇರಿದಂತೆ ಬಡಾವಣೆಯ ನಾಗರಿಕರು, ದೇವಾಲಯದ ಭಕ್ತರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು