ಶುಕ್ರವಾರ, ಅಕ್ಟೋಬರ್ 22, 2021
29 °C
ಮಹಿಷ ದಸರಾ ಉತ್ಸವ ಸಮಿತಿಯ ಸಮಾವೇಶದಲ್ಲಿ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಟೀಕೆ

ರಕ್ಷಕರನ್ನು ರಾಕ್ಷಸರೆಂದು ಇತಿಹಾಸ ರಚನೆ: ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಪಾಶ್ಚಾತ್ಯ ದೇಶಗಳಿಂದ ಬಂದ ಮೇಲ್ಜಾತಿಯ ಆರ್ಯರು ಈ ದೇಶದ ಮೂಲನಿವಾಸಿಗಳನ್ನು ರಾಕ್ಷಸರು ಎಂದು ಬಿಂಬಿಸಿ ಇತಿಹಾಸವನ್ನು ತಿರುಚಿದ್ದಾರೆ. ಈ ತಿರುಚಿದ ಇತಿಹಾಸದ ಮೂಲಕ ಧರ್ಮ, ಜಾತಿಯ ನಶೆಯನ್ನು ಏರಿಸುತ್ತಿದ್ದಾರೆ. ಈ ಬಗ್ಗೆ ಎಲ್ಲರೂ ಜಾಗೃತರಾಗಿ ಹುನ್ನಾರವನ್ನು ಬಯಲಿಗೆಳೆಯಬೇಕು. ನಿಜವಾದ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು' ಎಂದು ರಾಷ್ಟ್ರೀಯ ಲಿಂಗಾಯತ ಮೋರ್ಚಾ ಅಧ್ಯಕ್ಷ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಸಲಹೆ ನೀಡಿದರು.

ಮಹಿಷಾ ದಸರಾ ಉತ್ಸವ ಸಮಿತಿಯು ಇಲ್ಲಿನ ಹೀರಾಪುರ ಸಿದ್ಧಾರ್ಥ ನಗರದ ಶಾಖ್ಯ ಮುನಿ ಬುದ್ಧ ವಿಹಾರದಲ್ಲಿ ಬುಧವಾರ ಆಯೋಜಿಸಿದ್ದ ಮಹಿಷ ದಸರಾ ಅಂಗವಾಗಿ ಮಹಿಷನಿಗೆ ಪುಷ್ಪನಮನ ನೆರವೇರಿಸಿ ಅವರು ಮಾತನಾಡಿದರು.

‘ನಾಲ್ಕು ಸಾವಿರ ವರ್ಷಗಳ ಹಿಂದೆ ಆರ್ಯರು ಅಕ್ರಮಣ‌ ಮಾಡಿದರು. ಭಾರತದ ಸಂಪತ್ತು ಕೊಳ್ಳೆ ಹೊಡೆಯಲು ಬಂದಿದ್ದರು. ಮೂಲ ನಿವಾಸಿಗಳ ವಿರುದ್ಧ ವಿದೇಶಿ ಆರ್ಯರು ದಾಳಿ ಮಾಡುತ್ತಾರೆ. ಅಜ್ಞಾನದಿಂದ ಹೊರಬರಬೇಕು. ಅಸುರರೇ ನಮ್ಮ ಪೂರ್ವಜರು. ಸಮಾಜವನ್ನು ಗುಲಾಮರಾಗಿ ಮಾಡಿಕೊಳ್ಳಲು ಆ ಸಮಾಜದ ಇತಿಹಾಸವನ್ನೇ ಅಳಿಸಿ ಹಾಕುತ್ತಾರೆ. ಮಹಾಪುರುಷರ ಚರಿತ್ರೆಯನ್ನು ವಧೆ ಮಾಡುತ್ತಾರೆ. ಇತಿಹಾಸವನ್ನು ಕಲಬೆರಕೆ ಮಾಡುತ್ತಾರೆ' ಎಂದರು. 

‘ಶಿವಾಜಿ ಮಹಾರಾಜ ವಾಸ್ತವವಾಗಿ ಬಹುಜನರ ರಕ್ಷಕನಾಗಿದ್ದ. ಆದರೆ, ಬ್ರಾಹ್ಮಣ ಇತಿಹಾಸಕಾರರು ಶಿವಾಜಿ ಬ್ರಾಹ್ಮಣ ಗೋರಕ್ಷಕ ಶಿವಾಜಿ ಎಂದು ಬರೆಯುತ್ತಾರೆ. ಅಲ್ಲದೇ, ಮುಸ್ಲಿಮರ ವಿರುದ್ಧ ಶಿವಾಜಿ ಹೋರಾಟವನ್ನು ಮಾಡಿದ. ಹಿಂದುತ್ವ ರಾಷ್ಟ್ರಕ್ಕಾಗಿ ಶ್ರಮಿಸಿದ ಎನ್ನುತ್ತಾರೆ. ಆದರೆ, ಶಿವಾಜಿ ಧರ್ಮದ ಆಧಾರದ ಮೇಲೆ ಯುದ್ಧ ಮಾಡಲಿಲ್ಲ. ಶಿವಾಜಿ ಸೈನ್ಯದಲ್ಲಿ 600 ಜನ ಪಠಾಣ ಮುಸ್ಲಿಮರು ಇದ್ದರು. ಅಂಗರಕ್ಷಕರು ಮುಸ್ಲಿಮರಾಗಿದ್ದರು. ವಕೀಲನೂ ಮುಸ್ಲಿಮನಾಗಿದ್ದ’ ಎಂದರು.

ಪ್ರಬುದ್ಧ ಸಾಂಸ್ಕೃತಿಕ ವೇದಿಕೆಯ ಡಾ. ಅನಿಲಕುಮಾರ ಟೆಂಗಳಿ ಮಾತನಾಡಿ, ‘2000 ವರ್ಷಗಳ ಹಿಂದೆ ಇದ್ದ ಸಿಂಧೂ ನದಿ ನಾಗರಿಕತೆಗೂ ಮುನ್ನ ಮೂಲನಿವಾಸಿಗಳೇ ಆಳುತ್ತಿದ್ದರು. ವಿದೇಶದಿಂದ ಬಂದ ಆರ್ಯರು ಇಲ್ಲಿನ ಮೂಲನಿವಾಸಿ ರಾಜರನ್ನು ಸಂಚು ಮಾಡಿ ಸೋಲಿಸಿದರು. ಅಂದಿನಿಂದ ಅವರು ಬರೆದ ಇತಿಹಾಸವೇ ಅಧಿಕೃತವಾಗಿ ದಾಖಲಾಗಿದೆ. ಜನರು ತಿಳಿಯದ ಇತಿಹಾಸವನ್ನು ದಸರಾ ಸಂದರ್ಭದಲ್ಲಿ ತಿಳಿಸುವ ಕೆಲಸವನ್ನು ವಿವಿಧ ಸಮಾನ ಮನಸ್ಕ, ದಲಿತ ಸಂಘಟನೆಗಳು ಮಾಡುತ್ತಿವೆ’ ಎಂದು ಹೇಳಿದರು.

ಡಾ.ಹಣಮಂತ ಕೋಸಗಿ, ಡಾ. ಮನೋಜ ಗಂಗಾ, ಡಾ.ಅಶೋಕ ದೊಡ್ಡಮನಿ, ಡಾ.ಮಲ್ಲೇಶಿ ಸಜ್ಜನ, ಡಾ.ಪ್ರಶಾಂತ ಕಾಂಬಳೆ, ದೇವೇಂದ್ರಪ್ಪ ಕಪನೂರ, ಶಿವಶರಣಪ್ಪ ಮೈತ್ರಿ, ಲಿಂಗರಾಜ ಕಣ್ಣಿ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ.ಶಿವರಂಜನ್ ಸತ್ಯಂಪೇಟೆ ಮಾತನಾಡಿ, ಮಾನವ ಹಕ್ಕು ಮತ್ತು ಮೂಲಭೂತ ಹಕ್ಕುಗಳಿಂದ ವಂಚಿತರಾದ ಮೂಲನಿವಾಸಿಗಳನ್ನು 2,600 ವರ್ಷಗಳ ಹಿಂದೆ ಬುದ್ಧ ಸತ್ಯ, ಕರುಣೆ ಮತ್ತಿತರ ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಂಘಟಿಸಿದರು. 900 ವರ್ಷಗಳ ಹಿಂದೆ ಬಸವಣ್ಣ ಕಾಯಕ ದಾಸೋಹ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯಗಳ ಆಧಾರದ ಮೇಲೆ ಸಂಘಟಿಸಿದರು. ಇವರೆಲ್ಲರನ್ನೂ ಗಮನಿಸಿದ ಡಾ. ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಮೂಲಕ ಮೂಲನಿವಾಸಿಗಳಿಗೆ ಸಾರ್ವಭೌಮತ್ವ ಒದಗಿಸಿದರು‌’ ಎಂದರು.

ವಿಜಯಪುರದ ಬೋಧಿಪ್ರಗ್ಯ ಭಂತೇಜಿ, ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಬಿ. ರಾಂಪೂರೆ, ಡಾ.ಬಾಬಾಸಾಹೇಬ ಅಂಬೇಡ್ಕರ್‌ 130ನೇ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಪ್ರಕಾಶ ಔರಾದಕರ, ಎಚ್‌ಕೆಸಿಸಿಐ ಗೌರವ ಕಾರ್ಯದರ್ಶಿ ಶರಣು ಪಪ್ಪಾ, ಅಖಿಲ ಕರ್ನಾಟಕ ಟೋಕರೆ, ಕೋಲಿ ಕಬ್ಬಲಿಗ ಸುಧಾರಣಾ ಸಮಿತಿ ಅಧ್ಯಕ್ಷ ಲಚ್ಚಪ್ಪ ಜಮಾದಾರ ವೇದಿಕೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು