ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ‘ಕೈ’, ‘ಕಮಲ’ ಪ್ರಚಾರಕ್ಕೆ ಬಿಸಿಲೇ ಎದುರಾಳಿ!

ಅಭ್ಯರ್ಥಿಗಳ, ಚುನಾವಣೆ ಪ್ರಚಾರಕರ, ಕಾರ್ಯಕರ್ತರ ಬೆವರಿಳಿಸುತ್ತಿರುವ ಸುಡುಬಿಸಿಲು
Published 2 ಏಪ್ರಿಲ್ 2024, 4:43 IST
Last Updated 2 ಏಪ್ರಿಲ್ 2024, 4:43 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ‘ಕೈ’ ಮತ್ತು ‘ಕಮಲ’ ಪಡೆಗಳ ಚುನಾವಣೆಯ ಪ್ರಚಾರದ ‘ಕಾವು’ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಉಭಯ ಪಕ್ಷಗಳ ಮುಖಂಡರಿಗೆ ಹೋದಲೆಲ್ಲ ಕೆಂಡದಂತಹ ಬಿಸಿಲು ಎದುರಾಳಿಯಂತೆ ಕಾಡುತ್ತಿದೆ.

ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿ ನಡೆಯುತ್ತಿದೆ. ಸಂಸದ, ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು ತಮ್ಮ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಬೆಂಬಲಿಗರೊಂದಿಗೆ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಆಯಾ ಪಕ್ಷಗಳ ಮುಖಂಡರು ಸಹ ಬಿರುಬಿಸಿಲಿಗೆ ಮೈವೊಡ್ಡಿ ಬಿರುಸಿನ ಪ್ರಚಾರ ಮಾಡಿ, ಮೋನಚಾದ ಮಾತಿನ ಬಾಣಗಳ ಮೂಲಕ ಮತದಾರರ ಓಲೈಕೆಗೆ ಕಸರತ್ತು ನಡೆಸುತ್ತಿದ್ದಾರೆ.

ಚುನಾವಣೆ ಪ್ರಚಾರದ ಕಾವಿನಷ್ಟೇ ಪ್ರಖರವಾಗಿ ಸೂರ್ಯನೂ ತಾನೇನೂ ಕಡಿಮೆ ಇಲ್ಲ ಎಂಬಂತೆ ಕೆಂಡ ಕಾರುತ್ತಿದ್ದಾನೆ! ಕಳೆದ ಒಂದು ವಾರದ ಅವಧಿಯಲ್ಲಿ 40ರಿಂದ 43.3 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ನಿತ್ಯ 40ರಿಂದ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ಸಾಮಾನ್ಯವಾಗಿದೆ. ಜೂನ್‌ವರೆಗೂ ಹೀಗೆಯೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ಮನೆಯಿಂದ ಆಚೆ ಬಂದರೆ ಸಾಕು ಸುಡು ಬಿಸಿಲು ಜೀವ ಹಿಂಡುತ್ತಿದೆ. ಬಿಸಿಲಿನ ಕಾರಣದಿಂದಾಗಿ ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಹೆಚ್ಚಿನ ಜನರು ಹೊರ ಬರಲು ಹಿಂಜರಿಯುತ್ತಿದ್ದಾರೆ. ಬಿಸಿಲಿನಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಹೊರಡುವುದು, ತೆರೆದ ವೇದಿಕೆಯಲ್ಲಿ ನಿಂತು ಭಾಷಣ ಮಾಡುವುದು ಮುಖಂಡರಿಗೂ ಕಷ್ಟವಾಗುತ್ತಿದೆ. ಆದರೆ, ಇದರಿಂದ ಪಾರಾಗಲು ಸಾಧ್ಯವಿಲ್ಲ. ಮತದಾರ ಪ್ರಭುವಿನ ಮನ ಗೆಲ್ಲಲು ಕ್ಷೇತ್ರದ ಹಳ್ಳಿ–ಹಳ್ಳಿಗೂ ಹೋಗಿ ಮತ ಕೇಳಲೇಬೇಕಿದೆ.

‘ಕೆಂಡದಂತಹ ಬಿಸಿಲಿನ ವಾತಾವರಣದಲ್ಲಿ ಸುತ್ತಾಟ ನಡೆಸಿ, ಪ್ರಚಾರಕರ ಹಿಂದೆ, ಮುಂದೆ ಹೋಗುವುದು ಕಷ್ಟ. ಬೆಳಿಗ್ಗೆ 11ಕ್ಕೆ ಕಾರ್ಯಕ್ರಮ ಶುರು ಮಾಡುವುದಾಗಿ ಹೇಳಿ, ಮಧ್ಯಾಹ್ನ 1 ಗಂಟೆಯಾದರೂ ಶುರು ಮಾಡುವುದಿಲ್ಲ. ಪ್ಯಾನ್‌ ವ್ಯವಸ್ಥೆ ಇಲ್ಲದೆ, ಕುಡಿಯಲು ನೀರು ಸಿಗದೆ, ಗಂಟೆ ಗಟ್ಟಲೆ ಕೂರುವುದು ಕಷ್ಟ. ಸಂಜೆ ವೇಳೆ ಇದ್ದರೆ ಹೋಗುತ್ತೇವೆ. ಮಧ್ಯಾಹ್ನ ಕಾರ್ಯಕ್ರಮ ಇರುವುದು ಗೊತ್ತಾಗುತ್ತಿದ್ದಂತೆ ಪೋನ್‌ ಸ್ವಿಚ್ಡ್‌ಆಫ್ ಮಾಡಿ, ಸಂಜೆ ಆನ್ ಮಾಡುತ್ತೇವೆ’ ಎನ್ನುತ್ತಾರೆ ರಾಷ್ಟ್ರೀಯ ಪಕ್ಷವೊಂದರ ಕಾರ್ಯಕರ್ತರು.

‘ಕಲಬುರಗಿ ಲೋಕಸಭಾ ಮೀಸಲು ಕ್ಷೇತ್ರವು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಗುರುಮಠಕಲ್‌, ಕಮಲಾಪುರ, ವಾಡಿ, ಸೇಡಂ, ಅಫಜಲಪುರದಂತಹ ಪ್ರಮುಖ ಪಟ್ಟಣಗಳು ನೂರಾರು ಕಿ.ಮೀ. ದೂರದಲ್ಲಿವೆ. ಉರಿ ಬಿಸಿಲಿನಲ್ಲಿ ಇಡೀ ಕ್ಷೇತ್ರವನ್ನು ಸುತ್ತಿ ಪ್ರಚಾರ ಮಾಡುವುದು ಅನಿವಾರ್ಯವಾಗಿದೆ’ ಎನ್ನುತ್ತಾರೆ ರಾಜಕೀಯ ಮುಖಂಡರು.

ಇದು ಟ್ರೈಲರ್ ಮಾತ್ರ!

ಚುನಾವಣೆಯ ಪ್ರಚಾರದ ಕಾವು ಆರಂಭಿಕ ಹಂತದಲ್ಲಿದ್ದು ವಿಧಾನಸಭಾ ಕ್ಷೇತ್ರವಾರು ಪ್ರಚಾರ ಸಭೆಗಳು ಕಲ್ಯಾಣ ಮಂಟಪ ಸಭಾಂಗಣದಂತಹ ನಾಲ್ಕು ಗೋಡೆಗಳ ಮಧ್ಯೆಯೇ ನಡೆಯುತ್ತಿವೆ. ಆದರೆ ನಾಮಪತ್ರ ಸಲ್ಲಿಸಲು ಏಪ್ರಿಲ್ 19 ಕೊನೆಯ ದಿನವಾಗಿದೆ. ಆ ನಂತರ ಅಭ್ಯರ್ಥಿಗಳು ತೆರೆದ ವಾಹನಗಳಲ್ಲಿ ಊರೂರು ಸುತ್ತಬೇಕಾಗುತ್ತದೆ. ಆ ವೇಳೆಗೆ ಬಿಸಿಲಿನ ಪ್ರಖರತೆಯೂ ಹೆಚ್ಚಾಗುವ ಸಾಧ್ಯತೆ ಇದೆ. ‘ಇಷ್ಟು ದಿನ ಏಸಿ ರೂಮ್‌ ಏಸಿ ಕಾರು ವಿಮಾನದಲ್ಲಿ ಓಡಾಡಿದವರಿಗೆ ಕಡುಬಿಸಿಲಿನ ಕಷ್ಟ ಮತ ಕೇಳಲು ಬಂದಾಗ ಅರ್ಥವಾಗಬೇಕಿದೆ. ಏರ್‌ ಕಂಡೀಷನ್‌ ಕೋಣೆಯಲ್ಲಿ ಕುಳಿತು ಸಭೆ ಮಾಡಿ ದೊಡ್ಡ ವೇದಿಕೆಗಳ ಮೇಲೆ ಸುತ್ತಲೂ ದೊಡ್ಡ ಪ್ಯಾನ್‌ಗಳನ್ನು ಇರಿಸಿ ಪುಂಕಾನುಪುಂಕವಾಗಿ ಮಾತಾಡುವರಿಗೆ ಈ ಮೂಲಕವಾದರು ಜನರ ಸಂಕಷ್ಟಗಳು ಏನು ಎಂಬುದು ತಿಳಿಯಲಿ’ ಎನ್ನುತ್ತಾರೆ ಮತದಾರರು.

ಜನರನ್ನು ಹಿಡಿದಿಡಲು ಪರದಾಟ

ಶಾಖದ ಹೊಡೆತವು (ಹೀಟ್ ವೇವ್) ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋಗಾಗಿ ರಸ್ತೆ ಬದಿಯಲ್ಲಿ ನಿಂತವರ ಬೆವರು ಬಸಿಯುವಂತೆ ಮಾಡಿತ್ತು. ಬಹುತೇಕರು ಮರದ ನೆರಳನ್ನು ಆಶ್ರಯಿಸಿ ಹೆಚ್ಚಿನ ಸಂಖ್ಯೆಯಲ್ಲಿ ಒಂದೇ ಕಡೆ ನಿಂತಿದ್ದರು. ಅವರನ್ನು ಅಲ್ಲಿಂದ ಕರೆದೊಯ್ದು ಮಾರ್ಗದ ಉದಕ್ಕೂ ನಿಲ್ಲಿಸಲು ಕರೆ ತಂದಿದ್ದ ಮುಖಂಡರು ಗುಂಪು ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಸೋಮವಾರ ಕಲಬುರಗಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಜರುಗಿತ್ತು. ಸಭಾಂಗಣದಲ್ಲಿ ಸಾಕಷ್ಟು ಪ್ಯಾನ್‌ಗಳು ಇದ್ದರೂ ಬಿಸಿಲಿನ ಧಗೆಗೆ ಜನ ಪರದಾಡಿದರು. ಪ್ರಮುಖರ ಭಾಷಣ ಆರಂಭಕ್ಕೂ ಮೊದಲೇ ಆಸನಗಳಿಂದ ಒಬ್ಬೊಬ್ಬರಾಗಿ ಎದ್ದು ಹೊರಬಂದರು. ಧಗೆಗೆ ಬಸವಳಿದವರ ಮನವೊಲಿಸಿ ಒಳ ಕರೆತರಲು ಮುಖಂಡರು ಪರದಾಡಿದ್ದು ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT