ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಪದವಿ ಕಾಲೇಜಿನಲ್ಲಿ ಹೈಟೆಕ್ ಗ್ರಂಥಾಲಯ

Published 21 ಜೂನ್ 2023, 23:31 IST
Last Updated 21 ಜೂನ್ 2023, 23:31 IST
ಅಕ್ಷರ ಗಾತ್ರ

ಕಲಬುರಗಿ: ಕರ್ತವ್ಯದಲ್ಲಿ ಬದ್ಧತೆ ಜೊತೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎಂಬ ತುಡಿತ ಇರುವ ಪ್ರಾಂಶುಪಾಲರು, ಉಪನ್ಯಾಸಕರು, ಗ್ರಂಥಪಾಲಕರು ಇದ್ದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಜಿಲ್ಲೆಯ ಜೇವರ್ಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ಅತ್ಯುತ್ತಮ ಉದಾಹರಣೆ.

ಈ ಗ್ರಂಥಾಲಯ ಇತರೆ ಸರ್ಕಾರಿ ಕಾಲೇಜುಗಳಿಗಿಂತ ಭಿನ್ನವಾಗಿರಲು ಕಾರಣ ಇಲ್ಲಿ ಅಳವಡಿಸಿಕೊಂಡ ಕೆಲ ವಿದ್ಯಾರ್ಥಿ ಸ್ನೇಹಿ ರೂಢಿಗಳು. 2,913 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವ ಈ ಗ್ರಂಥಾಲಯದಲ್ಲಿ 29,213 ಪುಸ್ತಕಗಳಿವೆ. ಶೈಕ್ಷಣಿಕ, ಆರ್ಥಿಕವಾಗಿ ತೀರಾ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದ ಜೇವರ್ಗಿಯ ಈ ಕಾಲೇಜಿಗೆ ಸುತ್ತಲಿನ ತಾಲ್ಲೂಕುಗಳ ಬಡ ವಿದ್ಯಾರ್ಥಿಗಳು ಬರುತ್ತಾರೆ. ಅವರಿಗೆ ಜ್ಞಾನ ದಾಸೋಹ ನೀಡಬೇಕು ಎಂಬ ಕಾಲೇಜು ಆಡಳಿತ ಮಂಡಳಿಯ ಉತ್ಕಟ ಅಭಿಲಾಷೆಯು ಇಲ್ಲಿನ
ಗ್ರಂಥಾಲಯವನ್ನು ಸರ್ಕಾರಿ
ಕಾಲೇಜುಗಳಲ್ಲಿನ ಅತ್ಯುತ್ತಮ ಗ್ರಂಥಾಲಯವಾಗಿ ಮಾರ್ಪಡಿಸಲು ಕಾರಣವಾಗಿದೆ.

ಕಾಲೇಜಿನ ಪ್ರಾಂಶುಪಾಲ ಡಾ.ಕರಿಗೋಳೇಶ್ವರ ಹಾಗೂ ಗ್ರಂಥಪಾಲಕ ಡಾ. ವಿನೋದಕುಮಾರ್ ಅವರ ಸಮನ್ವಯದ ಕೆಲಸದಿಂದಾಗಿ
ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ನೀಡುವ ಗುರುತಿನ ಚೀಟಿಯಲ್ಲಿ ಕ್ಯೂಆರ್ ಕೋಡ್
ಅಳವಡಿಸಲಾಗಿದೆ. ಆ ಕೋಡ್ ವಿದ್ಯಾರ್ಥಿಗಳಿಗೆ ಕಾಲೇಜು ಹಾಗೂ ಗ್ರಂಥಾಲಯದ ಕೀಲಿ ಕೈ ಇದ್ದಂತೆ. ಅದನ್ನು ಸ್ಕ್ಯಾನ್ ಮಾಡಿದರೆ ಕಾಲೇಜಿನ ವಾರ್ಷಿಕ ಪರೀಕ್ಷೆಯ ಹಳೆಯ
ಪ್ರಶ್ನೆಪತ್ರಿಕೆಗಳು ದೊರೆಯುತ್ತವೆ. ಗ್ರಂಥಾಲಯಕ್ಕೆ ಬಂದ ಕೂಡಲೇ ಪುಸ್ತಕಗಳನ್ನು ಪಡೆಯಲು ಅನುವಾಗುವಂತೆ ಎರಡು
ಕಂಪ್ಯೂಟರ್‌ಗಳನ್ನು ಇರಿಸಲಾಗಿದೆ. ಅಲ್ಲಿ ಗುರುತಿನ ಕಾರ್ಡ್ ಸ್ಕ್ಯಾನ್ ಮಾಡಿದರೆ ಒಳಗೆ ಬಂದ ಸಮಯ, ಯಾವ ಪುಸ್ತಕವನ್ನು ಪಡೆದುಕೊಂಡರು ಎಂಬುದು ದಾಖಲಾಗುತ್ತದೆ. ಜೊತೆಗೆ, ವಿದ್ಯಾರ್ಥಿಗಳ ಮೊಬೈಲ್‌ಗೆ ಎಸ್‌ಎಂಎಸ್‌ ಹೋಗುತ್ತದೆ. ಹೊರ ಹೋಗುವಾಗ ಮತ್ತೆ ಸ್ಕ್ಯಾನ್
ಮಾಡಿದರೆ ಆ ಸಮಯವೂ ದಾಖಲಾಗುತ್ತದೆ.

ಸುಸಜ್ಜಿತ ಸ್ಟುಡಿಯೊ: ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಲು ಗ್ರಂಥಾಲಯದ ಒಳಗಡೆ ಪುಟ್ಟದಾದ, ಸುಸಜ್ಜಿತ ಸ್ಟುಡಿಯೊ ನಿರ್ಮಿಸಲಾಗಿದೆ. ಕೇವಲ ₹ 10,500 ವೆಚ್ಚದಲ್ಲಿ ಕ್ಯಾಮೆರಾ, ಲೈಟಿಂಗ್, ಗ್ರೀನ್ ಮ್ಯಾಟ್ ಖರೀದಿಸಿ ಸ್ಟುಡಿಯೊ ಸಿದ್ಧಪಡಿಸಲಾಗಿದೆ. ಇಲ್ಲಿ ಉಪನ್ಯಾಸಕರು ಪಾಠವನ್ನು ಲೈವ್ ಮಾಡಿ ವಿದ್ಯಾರ್ಥಿಗಳಿಗೆ ಬಿತ್ತರಿಸಬಹುದಾಗಿದೆ. ವಿದ್ಯಾರ್ಥಿಗಳು ಹಾಡು, ಕಥೆ, ಕವನ ವಾಚನ, ನೃತ್ಯ... ಹೀಗೆ ತಮ್ಮ ಪ್ರತಿಭೆಯನ್ನು ತೋರಿಸಬಹುದು. ಅದನ್ನು ಕಾಲೇಜಿನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ವಿದ್ಯಾರ್ಥಿಗಳನ್ನು ಏಕಕಾಲಕ್ಕೆ ಸಂಪರ್ಕಿಸಲು ಟೆಲಿಗ್ರಾಂ ಖಾತೆಯನ್ನೂ ತೆರೆಯಲಾಗಿದೆ.

‘ತರಗತಿಗಳು ಇಲ್ಲದ ಸಂದರ್ಭದಲ್ಲಿ ನೇರವಾಗಿ ಗ್ರಂಥಾಲಯಕ್ಕೆ ಬರುತ್ತೇವೆ. ನಮಗೆ ಬೇಕಾದ ಪುಸ್ತಕಗಳನ್ನು ನಾವೇ ಎರವಲು ಪಡೆಯಬಹುದು. ಮನೆಯಲ್ಲಿ ಕುಳಿತೇ ಯಾವ ಪುಸ್ತಕಗಳಿವೆ ಎಂಬುದನ್ನು ನೋಡಬಹುದಾಗಿದೆ’ ಎಂದು ಎಂ.ಕಾಂ ವಿದ್ಯಾರ್ಥಿನಿ ಕಾವ್ಯಾ ಕಾಲೇಜಿನ ಗ್ರಂಥಾಲಯದ ಕುರಿತು
ಪ್ರತಿಕ್ರಿಯಿಸಿದರು.

ಹೆಚ್ಚು ಪುಸ್ತಕ ಪಡೆದವರಿಗೆ ಬಹುಮಾನ!

ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ಸಲುವಾಗಿ ಗ್ರಂಥಪಾಲಕ ಡಾ. ವಿನೋದಕುಮಾರ್ ಅವರು ಒಂದು ಶೈಕ್ಷಣಿಕ ಅವಧಿಯಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಪಡೆದು ಅಧ್ಯಯನ ಮಾಡುವ ಹಾಗೂ ಗ್ರಂಥಾಲಯದಲ್ಲಿ ಹೆಚ್ಚು ಸಮಯ ಕಳೆಯುವ ಮೊದಲ 10 ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಬಹುಮಾನ ನೀಡುತ್ತಾರೆ.

‘ಗ್ರಂಥಾಲಯದ ಕಂಪ್ಯೂಟರ್‌ನಲ್ಲಿ ಯಾವ ವಿದ್ಯಾರ್ಥಿ ಎಷ್ಟು ಸಮಯ ಕಳೆದರು ಎಂಬ ದತ್ತಾಂಶ ಲಭ್ಯವಾಗುತ್ತದೆ. ಅದನ್ನು ಆಧರಿಸಿ ಬಹುಮಾನ ನೀಡುತ್ತೇನೆ. ಹೀಗಾಗಿ, ಗ್ರಂಥಾಲಯದಲ್ಲಿ ಕುಳಿತುಕೊಳ್ಳಲು ಪೈಪೋಟಿ ಇರುತ್ತದೆ’ ಎನ್ನುತ್ತಾರೆ ವಿನೋದಕುಮಾರ್.

ಅಲ್ಲದೇ, ಕಾಲೇಜಿನ ಹಳೆಯ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರಿಂದ ಪುಸ್ತಕಗಳನ್ನು ದೇಣಿಗೆಯಾಗಿ ಪಡೆದು, ಆ ಪುಸ್ತಕಗಳಿರುವ ವಿಭಾಗಕ್ಕೆ ಅವರ ಹೆಸರನ್ನೇ ಇಡುತ್ತಾರೆ. ಇದರಿಂದ ದಿನೇ ದಿನೇ ಪುಸ್ತಕಗಳ ಸಂಖ್ಯೆ ಹೆಚ್ಚುತ್ತಿದೆ.

ಸಿ.ಸಿ. ಟಿ.ವಿ. ಕ್ಯಾಮೆರಾ, ಕಂಪ್ಯೂಟರ್‌ಗಳನ್ನು ಖರೀದಿಸಲಾಗಿದೆ. ಏಕಕಾಲಕ್ಕೆ 130 ವಿದ್ಯಾರ್ಥಿಗಳು, 20 ಬೋಧಕ ಸಿಬ್ಬಂದಿ ಕೂರಲು ಅವಕಾಶವಿದೆ.
ಡಾ. ವಿನೋದಕುಮಾರ್, ಗ್ರಂಥಪಾಲಕ
ವಿದ್ಯಾರ್ಥಿಗಳಿಗೆ ಹೆಚ್ಚು ಖರ್ಚು ಬರಬಾರದೆಂದು ಎಲ್ಲಾ ಅಗತ್ಯ ಪುಸ್ತಕಗಳನ್ನು ಖರೀದಿಸಲಾಗಿದೆ. ನಿಯತಕಾಲಿಕೆ, ದಿನಪತ್ರಿಕೆಗಳೂ ಬರುತ್ತವೆ.
ಡಾ. ಕರಿಗೋಳೇಶ್ವರ, ಪ್ರಾಂಶುಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT