ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಆಸ್ಪತ್ರೆಯ 'ಬಿಲ್’ ವಿದ್ಯೆಗೆ ರೋಗಿಗಳು ಕಂಗಾಲು!

ಔಷಧಿಗೆ ಎಂಆರ್‌ಪಿ ದರಕ್ಕಿಂತ ಹೆಚ್ಚಿಗೆ ವಸೂಲಿ; ಬಿಲ್ ನೀಡಲೂ ನಿರಾಕರಣೆ
Last Updated 21 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ಖಾಸಗಿ ಆಸ್ಪತ್ರೆಯೊಂದು ಕೋವಿಡ್‌ ಬಳಲುತ್ತಿದ್ದ 56 ವರ್ಷದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ ₹ 4.80 ಲಕ್ಷ ಬಿಲ್ ಮಾಡಿದೆ.ಎಚ್‌ಡಿಯು (ಹೈ ಡಿಪೆಂಡೆನ್ಸಿ ಯೂನಿಟ್)ನ ಒಂದು ಬೆಡ್‌ಗೆ ನಿತ್ಯ ₹ 30 ಸಾವಿರದಂತೆ ಬಿಲ್ ಮಾಡಿದ್ದು, ಕೋವಿಡ್‌ ನೆಗೆಟಿವ್ ಬಂದ ಬಳಿಕ ಅವರದೇ ಆಸ್ಪತ್ರೆಯ ನಾನ್‌ ಕೋವಿಡ್‌ ವಾರ್ಡ್‌ಗೆ ಸ್ಥಳಾಂತರಿಸುವಾಗಲೂ ಕೋವಿಡ್ ಚಿಕಿತ್ಸೆಯ ಪೂರ್ಣ ಪ್ರಮಾಣದ ಬಿಲ್ ಕಟ್ಟಿಸಿಕೊಂಡು ಅಮಾನವೀಯವಾಗಿ ವರ್ತಿಸಿದೆ.

‘ಇದೇ ಆಸ್ಪತ್ರೆಯಲ್ಲಿ ರೋಗಿ ಆರೈಕೆ ಮುಂದುವರೆದಿದೆ. ಹಣ ಹೊಂದಿಸಲು ಅವಕಾಶ ಕೊಡಿ ಎಂದರೂ ಆ ಮನವಿಗೆ ಮನ್ನಣೆ ಕೊಡದೇ ದುಡ್ಡು ಹೊಂದಿಸಲು ತಡವಾದರೆ ಮತ್ತೆ ₹ 30 ಸಾವಿರ ರೂಪಾಯಿ ಕಟ್ಟಬೇಕಾಗುತ್ತದೆ ಎಂದು ಆಸ್ಪತ್ರೆ ಆಡಳಿತ ಮಂಡಳಿಯವರು ತಾಕೀತು ಮಾಡಿದ್ದಾರೆ. ಅನಿವಾರ್ಯವಾಗಿ ಸಂಬಂಧಿಕರಿಂದ ದುಡ್ಡು ಹೊಂದಿಸಿ ಕಟ್ಟಿದ್ದೇವೆ’ ಎಂದು ಚಿಕಿತ್ಸೆ ಪಡೆದ ವ್ಯಕ್ತಿಯ ಪುತ್ರಿ, ನಗರದ ಗುರಣ್ಣ ಚಾಳ್ ನಿವಾಸಿ ಅಶ್ವಿನಿ ಅವರು ಜಿಲ್ಲಾಧಿಕಾರಿ ಶರತ್ ಬಿ. ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ದೂರಿನ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಮಾಹಿತಿ ಕೊಡಲಿಲ್ಲ: ‘ಹಣ ಹೋದರೂ ಚಿಂತೆಯಿಲ್ಲ. ನಮ್ಮ ತಂದೆಯ ಆರೋಗ್ಯದ ವಿವರವನ್ನೂ ನಮಗೆ ಸರಿಯಾಗಿ ನೀಡುತ್ತಿರಲಿಲ್ಲ. ಎಕ್ಸ್‌ರೆ ವರದಿಯನ್ನು ಬೇರೊಬ್ಬ ರೋಗಿಗೆ ನೀಡಿದ್ದರು. ಇಂತಹ ಹಲವಾರು ಎಡವಟ್ಟುಗಳನ್ನು ಆಸ್ಪತ್ರೆ ಸಿಬ್ಬಂದಿ ಮಾಡುತ್ತಲೇ ಇದ್ದರು. ₹ 4.80 ಲಕ್ಷ ಬಿಲ್ ಕಟ್ಟಿಸಿಕೊಂಡರೂ ತಂದೆಗೆ ಇನ್ನೂ ಎದ್ದು ಕುಳಿತುಕೊಳ್ಳಲು ಸಾಧ್ಯವಾಗಿಲ್ಲ. ಸರ್ಕಾರ ನಿಗದಿಪಡಿಸಿದ ಬಿಲ್ ಮೊತ್ತವನ್ನಷ್ಟೇ ಪಡೆದುಕೊಳ್ಳಲು ಜಿಲ್ಲಾಧಿಕಾರಿ ಅವರು ಆಸ್ಪತ್ರೆಗೆ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿದರು.

ಮತ್ತೊಬ್ಬ ರೋಗಿಗೆ ₹ 2 ಲಕ್ಷ: ಉಸಿರಾಟದ ತೊಂದರೆ ಕಾರಣಕ್ಕೆ ನಗರದ ಮಾಕಾ ಲೇಔಟ್ ನಿವಾಸಿ ನಾರಾಯಣರೆಡ್ಡಿ ಅವರು ತಮ್ಮ ಮಗನನ್ನು ಅದೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ನಿತ್ಯ ₹ 30 ಸಾವಿರದಂತೆ ಐಸಿಯು ಬೆಡ್‌ ಚಾರ್ಜ್ ಮಾಡಿ ಒಟ್ಟಾರೆ ₹ 2 ಲಕ್ಷ ಬಿಲ್ ಮಾಡಿದ್ದಾರೆ. ಅಷ್ಟೊಂದು ಹಣವನ್ನು ಎಲ್ಲಿಂದ ತರುವುದು ಎಂದು ಪ್ರಶ್ನಿಸಿದರು. ಈ ಸಂಬಂಧ ಅವರೂ ಜಿಲ್ಲಾಧಿಕಾರಿ ಅವರಿಗೆ ಆಸ್ಪತ್ರೆಯ ವಿರುದ್ಧ ದೂರು ನೀಡಿದ್ದಾರೆ.

ಇಂಜೆಕ್ಷನ್‌ಗೆ ಹೆಚ್ಚಿನ ದರ ವಸೂಲಿ

ಕೋವಿಡ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೆ ‘ಕೋವಿಫಾರ್’ ಎಂಬ ಆಂಟಬಯಾಟಿಕ್ ಇಂಜೆಕ್ಷನ್ ನೀಡಲಾಗುತ್ತದೆ. ಈ ಔಷಧಿಯು ಕೆಲವೇ ಪ್ರಮುಖ ಔಷಧಿ ಅಂಗಡಿಗಳಲ್ಲಿ ಸಿಗುತ್ತದೆ. ಇದರ ಎಂಆರ್‌ಪಿ ದರ ₹ 4500 ಇದ್ದರೂ ಅದನ್ನು ₹ 5,500ರಿಂದ ₹ 6,500ರವರೆಗೆ ಮಾರಲಾಗುತ್ತದೆ. ಅದರ ಬಿಲ್ ಕೊಡಲು ಅಂಗಡಿಯವರು ನಿರಾಕರಿಸುತ್ತಾರೆ.

‘₹ 6,500 ಪಡೆದು, ಎಂಆರ್‌ಪಿ ಬೆಲೆಯ ಬಿಲ್ಲನ್ನೇ ಕೊಡಿ ಎಂದು ಸೂಪರ್‌ ಮಾರ್ಕೆಟ್‌ನ ಔಷಧಿ ಅಂಗಡಿಗೆ ಕೋರಿದರೂ ಬಿಲ್ ಕೊಡಲಿಲ್ಲ’ ಎಂದು ಕೋವಿಡ್ ಪೀಡಿತ ವ್ಯಕ್ತಿಯ ಸಂಬಂಧಿ ತಿಳಿಸಿದರು.

‘ಔಷಧಿ ದಾಸ್ತಾನು ಇದ್ದರೂ ಅದು ಇಲ್ಲ’ ಎಂದು ಹೇಳಿ ಕೃತಕ ಅಭಾವ ಸೃಷ್ಟಿಸುವ ಯತ್ನ ನಡೆದಿದೆ. ಜಿಲ್ಲಾಡಳಿತವು ಇದರ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಅವರು ಆರೋಪಿಸಿದರು.

ಕೋವಿಡ್: ಸರ್ಕಾರದ ಮಾರ್ಗಸೂಚಿ ದರ ಎಷ್ಟು

ಚಿಕಿತ್ಸಾ ಸೌಲಭ್ಯ ಆಯುಷ್ಮಾನ್ ಫಲಾನುಭವಿ ಫಲಾನುಭವಿ ಅಲ್ಲದ ರೋಗಿ

ಸಾಮಾನ್ಯ ವಾರ್ಡ್;₹ 5,200;₹ 10,000

ಎಚ್‌ಡಿಯು;₹ 7000;₹ 12,000

ಐಸಿಯು (ವೆಂಟಿಲೇಟರ್ ರಹಿತ);₹ 8500;₹ 15,000

ಐಸಿಯು (ವೆಂಟಿಲೇಟರ್ ಸಹಿತ);₹ 10,000;₹ 25,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT