ಸೋಮವಾರ, ಜೂನ್ 21, 2021
28 °C
ಗಡಿಕೇಶ್ವಾರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ಘಟನೆ

ಊಟ ಕೇಳಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ಊಟ ಕೇಳಿದ ವಸತಿ ನಿಲಯದ ವಿದ್ಯಾರ್ಥಿಗಳ ಮೇಲೆ ವಾರ್ಡನ್‌ ಕಡೆಯವರು ಎನ್ನಲಾದ ಇಬ್ಬರು ಹಲ್ಲೆ ನಡೆಸಿದ ಘಟನೆ ತಾಲ್ಲೂಕಿನ ಗಡಿಕೇಶ್ವಾರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಗುರುವಾರ ನಡೆದಿದೆ. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಗುರುವಾರ ದಿಢೀರ್ ಪ್ರತಿಭಟನೆ ನಡೆಸಿದರು.

‘ಬುಧವಾರ ಸಂಜೆ ಉಪಾಹಾರ ನೀಡಿಲ್ಲ, ರಾತ್ರಿ ಊಟವನ್ನೂ ಕೊಡಲಿಲ್ಲ. ಕೇಳಿದರೆ ರೇಷನ್ ಇಲ್ಲ ಎಂದಿದ್ದಾರೆ. ರೇಷನ್ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದ್ದಕ್ಕೆ ಗದರಿಸಿ ಕಳುಹಿಸಿದ್ದಾರೆ. ಗುರುವಾರ ಬೆಳಿಗ್ಗೆ ಇಬ್ಬರು ವ್ಯಕ್ತಿಗಳು ಬಂದು ನಮ್ಮನ್ನು ಕರೆಸಿ ಮನ ಬಂದಂತೆ ಥಳಿಸಿದ್ದಾರೆ, 7 ವಿದ್ಯಾರ್ಥಿಗಳಿಗೆ ಹೊಡೆದಿದ್ದಾರೆ’ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

‘ವಸತಿ ನಿಲಯದಲ್ಲಿ ಮೆನು ಚಾರ್ಟ್ ಪಾಲಿಸುವುದಿಲ್ಲ. ಸರಿಯಾಗಿ ಊಟ, ಉಪಾಹಾರ ನೀಡುವುದಿಲ್ಲ. ಬಿಸಿ ನೀರಿನ ಸೌಲಭ್ಯವೂ ಇಲ್ಲ, ವಿದ್ಯಾರ್ಥಿಗಳನ್ನು ಎರಡನೆ ದರ್ಜೆ ನಾಗರಿಕರಂತೆ ಕಾಣಲಾಗುತ್ತಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭುಲಿಂಗ ವಾಲಿ ಎದುರು ಅಳಲು ತೋಡಿಕೊಂಡರು.

ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ವಸತಿ ನಿಲಯದ ವಾರ್ಡನ್ ಬದಲಿಸಬೇಕು, ಅಡುಗೆ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ರಾತ್ರಿ ಕಾವಲುಗಾರರನ್ನು ನೇಮಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ಸ್ಥಳಕ್ಕೆ ಬಂದ ಸುಲೇಪೇಟ ಪಿಎಸ್‍ಐ ತಿಮ್ಮಯ್ಯ ಮಕ್ಕಳನ್ನು ಸಮಧಾನಪಡಿಸಿದರು. ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ಪ್ರಭುಲಿಂಗ ವಾಲಿ ಭರವಸೆ ನೀಡಿದರು.

ಘಟನೆ ಬಗ್ಗೆ ಪ್ರಕರಣ ದಾಖಲಾಗಿಲ್ಲ. ಠಾಣೆಯಲ್ಲಿ ಮಾತುಕತೆ ಮೂಲಕ ಬಗೆಹರಿಸಲಾಗಿದೆ.

ಗ್ರಾಮದ ಮುಖಂಡರಾದ ನಾಗರಾಜ ಚಕ್ರವರ್ತಿ, ಗುಂಡಯ್ಯ ಗುತ್ತೇದಾರ, ಮಾಳಪ್ಪ ಅಪ್ಪೋಜಿ, ಬಸವರಾಜ ಗುಂಪಾಲ, ನವೀನ ಹಡಪದ, ವೀರೇಶ, ಅರುಣಕುಮಾರ ರಂಗನೂರ್, ಶ್ರೀಮಂತ ಶಬ್ಬಿರಮಿಯ್ಯ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು