ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿಗೆ ಸಾಲ ಮಾಡಿ ತುಪ್ಪ ತಿನ್ನುವ ಚಾಳಿ: ಮಲ್ಲಿಕಾರ್ಜುನ ‌ಖರ್ಗೆ

Last Updated 3 ಅಕ್ಟೋಬರ್ 2021, 10:16 IST
ಅಕ್ಷರ ಗಾತ್ರ

ಕಲಬುರ್ಗಿ: ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಲ ಮಾಡಿ ತುಪ್ಪ ತಿನ್ನುವ ಚಾಳಿ ಇದೆ. ಅದಕ್ಕಾಗಿಯೇ ಇರುವ ಎಲ್ಲ ಸರ್ಕಾರಿ ಸ್ವಾಮ್ಯದ ‌ಸಂಸ್ಥೆಗಳನ್ನು ಮಾರಾಟ ಮಾಡುತ್ತಿದ್ದಾರೆ’ ‌ಎಂದುರಾಜ್ಯಸಭೆ ವಿರೋಧ ‌ಪಕ್ಷದ ನಾಯಕ ಮಲ್ಲಿಕಾರ್ಜುನ ‌ಖರ್ಗೆ ಟೀಕಿಸಿದರು.

ನಗರದ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರಕ್ಕೆ ಬರುವ ತೆರಿಗೆ ಹಣ, ಜಿಎಸ್ಟಿ ತೆರಿಗೆ ಸಾಕಷ್ಟು ಬಂದರೂ ಸರ್ಕಾರ ಆಸ್ತಿ ಮಾರಾಟ ಮಾಡಲು ಮುಂದಾಗಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆ ಖಾಸಗಿಯವರಿಗೆ ಕೊಟ್ಟರೆ ತಾವು ಭರವಸೆ ನೀಡಿದ್ದ ಉದ್ಯೋಗ ಸೃಷ್ಟಿ ಹೇಗೆ ಮಾಡುತ್ತಾರೆ’ ಎಂದರು.

‘ರೈತ ವಿರೋಧಿ ಕಾನೂನು ಜಾರಿ ಕುರಿತು, ಜನರ ವೈಯಕ್ತಿಕ ಸ್ವಾತಂತ್ರ್ಯ ‌ಹರಣ ಮಾಡುವ ಪೆಗಾಸಸ್ ಗೂಢಚರ್ಯೆ ಕುರಿತು ಚರ್ಚಿಸಲು ‌ಮುಂದಾದರೆ ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಚರ್ಚೆಗೇ ಬರುವುದಿಲ್ಲ‌ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿಯಾದವರು ಲೋಕಸಭೆ, ರಾಜ್ಯಸಭೆಯ ಕಲಾಪಗಳಿಗೆ ಬರಬೇಕು. ಆದರೆ ಮೋದಿ ಅವರು ತಮಗೂ ರಾಜ್ಯಸಭೆಗೂ ಸಂಬಂಧವಿಲ್ಲದಂತೆ ಇದ್ದಾರೆ. ಲೋಕಸಭೆಗೆ ಬಂದರೂ ‌ಕೆಲವೇ ಹೊತ್ತು ಇದ್ದು ಅಲ್ಲಿಂದ ಹೊರನಡೆಯುತ್ತಾರೆ. ಹೀಗಾದರೆ ಹಲವು ವಿಚಾರಗಳ ಬಗ್ಗೆ ಯಾರೊಂದಿಗೆ ಚರ್ಚೆ‌ ನಡೆಸಬೇಕು ‌ಎಂದು ಪ್ರಶ್ನಿಸಿದರು.

ಸರ್ಕಾರಿ ಸ್ವಾಮ್ಯದ ‌ಉದ್ಯಮಗಳನ್ನು ಮಾರಾಟ ಮಾಡಿ ₹ 6 ಲಕ್ಷ‌ ಕೋಟಿ ವರಮಾನ ಗಳಿಸಲು ಮೋದಿ ಸರ್ಕಾರ ಮುಂದಾಗಿದೆ. ಎಚ್ಎಎಲ್, ಬಿಎಚ್‌ಇಎಲ್, ಏರ್ ಇಂಡಿಯಾ, ಬಿಎಸ್‌ಎನ್‌ಎಲ್‌ , ಎನ್‌ಟಿಪಿಸಿಗಳನ್ನು ಮಾರಾಟ ಇಲ್ಲವೇ ಸುದೀರ್ಘ ಅವಧಿಗೆ ನಿರ್ವಹಿಸಲು ‌ಗುತ್ತಿಗೆ ನೀಡುತ್ತಿದ್ದಾರೆ. ಮತ್ತೆ 70 ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಈ 70 ವರ್ಷಗಳಲ್ಲಿ ಅವರದೇ ಪಕ್ಷದ ಅಟಲ್ ಬಿಹಾರಿ ವಾಜಪೇಯಿ ಆರು ವರ್ಷ ಆಡಳಿತ ನಡೆಸಿದ್ದರು. ಅಲ್ಲದೇ, ಐ.ಕೆ.ಗುಜ್ರಾಲ್, ಚರಣಸಿಂಗ್, ಎಚ್.ಡಿ.ದೇವೇಗೌಡ ಅವರು ಆಡಳಿತ ನಡೆಸಿದ್ದರು. ಕಾಂಗ್ರೆಸ್ 55 ವರ್ಷ ಅಧಿಕಾರದಲ್ಲಿದೆ. ಈ ಸಂದರ್ಭದಲ್ಲಿ ದೇಶಕ್ಕೆ ಆಸ್ತಿಗಳನ್ನು ಮಾಡಿಕೊಟ್ಟಿದೆಯೇ ಹೊರತು ಮೋದಿ ಅವರಂತೆ ಇದ್ದುದನ್ನೆಲ್ಲ ಮಾರಾಟ ಮಾಡಿಲ್ಲ ಎಂದು ಖರ್ಗೆ ಪ್ರತಿಪಾದಿಸಿದರು.

ದೇಶದ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ತಮಗೆ ಬೇಕಾದ ಆಯ್ದ ಉದ್ಯಮಿಗಳಿಗೆ ‌ಹಸ್ತಾಂತರಿಸುತ್ತಿದ್ದಾರೆ. ಹಾಗೆ ಸರ್ಕಾರಿ ಆಸ್ತಿಗಳನ್ನು ಪಡೆದವರು ಚುನಾವಣೆಯಲ್ಲಿ ‌ಬಿಜೆಪಿಗೆ‌ ಹಣಕಾಸು‌ ಸಹಾಯ ಮಾಡುತ್ತಾರೆ.‌ ಒಟ್ಟಾರೆ ಮೋದಿ ಅವರ ದುರಾಡಳಿತದಿಂದಾಗಿ ಜನರು ಮುಗಿಯದ ಆರ್ಥಿಕ ‌ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಧ್ಯಪ್ರದೇಶದಲ್ಲಿ ಪೆಟ್ರೋಲ್ ಬೆಲೆ ₹ 113 ಆಗಿದೆ. ‌ಡೀಸೆಲ್ ಬೆಲೆ ₹ 100ರ ಗಡಿ‌‌ ಸಮೀಪಿಸಿದೆ. ಅಡುಗೆ ಅನಿಲ‌ ಬೆಲೆ‌ ₹ 900 ಆಗಿದೆ. ಕಾಂಗ್ರೆಸ್ ಅವಧಿಯಲ್ಲಿ ‌ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗಿದ್ದರೂ ಜನರ ಮೇಲೆ ಹೆಚ್ಚು ಹೊರೆಯಾಗದಂತೆ ಸಬ್ಸಿಡಿ‌ ನೀಡಲಾಗುತ್ತಿತ್ತು.‌ ಮೋದಿ ಸರ್ಕಾರ ಅದನ್ನೂ ಕಿತ್ತು ಹಾಕಿದೆ ಎಂದರು.

ಸಹಕಾರ ವಲಯ ಕೈವಶ: ಗೃಹಸಚಿವ ಅಮಿತ್ ಶಾ‌ ಅವರು ಸಹಕಾರ ಕ್ಷೇತ್ರದ ಮೇಲೆ ಕಣ್ಣುಹಾಕಿದ್ದು, ಸಹಕಾರ ಇಲಾಖೆಯನ್ನು ಗೃಹಖಾತೆಯೊಂದಿಗೆ ಇಟ್ಟುಕೊಂಡಿದ್ದಾರೆ.‌ ಆ ಮೂಲಕ ಸಹಕಾರಿ ಬ್ಯಾಂಕುಗಳು, ಸಹಕಾರ ಸಂಘಗಳನ್ನು ‌ತಮ್ಮ ನಿಯಂತ್ರಣದಲ್ಲಿಡಲು ಮುಂದಾಗಿದ್ದಾರೆ ಎಂದರು.

ಹಣಕಾಸು ಇಲಾಖೆಯ ಅಧೀನದಲ್ಲಿದ್ದ ಜಾರಿ ನಿರ್ದೇಶನಾಲಯವನ್ನು ಅಮಿತ್ ಶಾ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ. ಗೃಹ ಸಚಿವ ಶಾ ಅವರಿಗೆ ಹಣಕಾಸು ಇಲಾಖೆಗೆ ಸಂಬಂಧಿಸಿದ ಇ.ಡಿ. ಬಗ್ಗೆ ಏಕೆ ಆಸಕ್ತಿ ಎಂದು‌ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಒಟ್ಟಾರೆ, ಮೋದಿ ಅಮಿತ್ ಶಾ ಅವರು ಇಡೀ ದೇಶದ ಆಡಳಿತವನ್ನು ತಾವಿಬ್ಬರೇ ನಡೆಸಬೇಕು‌ ಎಂದು ಹುನ್ನಾರ ನಡೆಸಿದ್ದಾರೆ. ಜನರು ಈ ಕುರಿತು ಜಾಗೃತರಾಗಬೇಕು ಎಂದರು.

ಶಾಸಕಿ ಕನೀಜ್ ಫಾತಿಮಾ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಮಾಜಿ ಶಾಸಕ ಬಿ.ಆರ್. ಪಾಟೀಲ, ವಿಧಾನಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಇದ್ದರು.

'ರಾಹುಲ್‌ ಧೈರ್ಯದ ಕೆಲಸ'
ಪಕ್ಷದ ವರಿಷ್ಠ ರಾಹುಲ್ ‌ಗಾಂಧಿ ಅವರು ಪಂಜಾಬ್‌ನಲ್ಲಿ‌ ದಲಿತ ‌ಮುಖ್ಯಮಂತ್ರಿಗೆ ಅವಕಾಶ ನೀಡುವ ಮೂಲಕ ಭಾರಿ ಧೈರ್ಯದ ಕೆಲಸ ಮಾಡಿದ್ದಾರೆ ಎಂದು‌ ಖರ್ಗೆ ಶ್ಲಾಘಿಸಿದರು.

'ಪರಮೇಶ್ವರ್ ಅವರನ್ನೇ ಕೇಳಿ'
ರಾಜ್ಯದಲ್ಲಿ ಕಾಂಗ್ರೆಸ್ ದಲಿತ ಮುಖ್ಯಮಂತ್ರಿ ಆಯ್ಕೆ ಮಾಡಬೇಕು ಎಂದು ಮಾಜಿ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೇಳಿಕೆಯ ಕುರಿತ ‌ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ ಅವರು, ಈ ವಿಚಾರದ ಕುರಿತು ಪರಮೇಶ್ವರ್ ಅವರನ್ನೇ ಕೇಳಿ ಎಂದರು.

ಚುನಾವಣೆ ಮುಗಿದು ಪಕ್ಷ ‌ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಶಾಸಕರು ತಮ್ಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT