ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಪೀಠಕ್ಕೆ ಸ್ಥಳ ಪರಿಶೀಲನೆ ನಡೆಸಿದ ಮುಖ್ಯ ಮಾಹಿತಿ ಆಯುಕ್ತ ಶ್ರೀನಿವಾಸ್

ಕಲಬುರ್ಗಿ ಎರಡು ತಿಂಗಳಲ್ಲಿ ಮಾಹಿತಿ ಆಯೋಗದ ಪೀಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಮುಂದಿನ ಎರಡು ತಿಂಗಳಲ್ಲಿ ಕಲಬುರ್ಗಿಯಲ್ಲಿ ಮಾಹಿತಿ ಆಯೋಗದ ಪೀಠವನ್ನು ಆರಂಭಿಸಲಾಗುವುದು’ ಎಂದು ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಎನ್‌.ಸಿ. ಶ್ರೀನಿವಾಸ್ ಅವರು ತಿಳಿಸಿದರು.

ನಗರದ ಸಾರ್ವಜನಿಕ ಉದ್ಯಾನದ ಬಳಿ ಇರುವ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಆಯೋಗದ ಪೀಠ ಆರಂಭಿಸುವ ನಿಟ್ಟಿನಲ್ಲಿ ಶನಿವಾರ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಯೋಗದ ಪೀಠವನ್ನು ಬೆಂಗಳೂರು, ಕಲಬುರ್ಗಿ, ಮೈಸೂರು ಹಾಗೂ ಬೆಳಗಾವಿಯಲ್ಲಿ ಆರಂಭಿಸಲು ಆದೇಶ ಹೊರಡಿಸಿತ್ತು. ಇದೀಗ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಪೀಠ ಆರಂಭವಾಗಿ ಕೆಲಸ ಮಾಡುತ್ತಿವೆ. ಕಲಬುರ್ಗಿ ವಿಭಾಗದ ಜನರು ಆಯೋಗದ ಪ್ರಧಾನ ಪೀಠವಿರುವ ಬೆಂಗಳೂರಿಗೇ ಅಲೆಯಬೇಕಾಗಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕಲಬುರ್ಗಿಯಲ್ಲೇ ಪೀಠ ಆರಂಭವಾಗಲಿದೆ’ ಎಂದರು.

ಮೊದಲಿಗೆ ಒಬ್ಬರು ಮಾಹಿತಿ ಆಯುಕ್ತರು ಹಾಗೂ 15 ಸಿಬ್ಬಂದಿಯೊಂದಿಗೆ ಪೀಠವು ಕಾರ್ಯಾರಂಭ ಮಾಡಲಿದೆ. ಕಲಬುರ್ಗಿಯಲ್ಲೇ ಇನ್ನು ಮುಂದೆ ಪೀಠ ಆರಂಭವಾಗುವುದರಿಂದ ಆಯೋಗಕ್ಕೆ ಮೇಲ್ಮನವಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಿದರು.

ಬೆಂಗಳೂರು ಬಳಿಕ ಅತಿ ಹೆಚ್ಚು ಪ್ರಕರಣ: ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸುವವರ ಸಂಖ್ಯೆ ಬೆಂಗಳೂರು ವಿಭಾಗದ ಬಳಿಕ ಕಲಬುರ್ಗಿ ವಿಭಾಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆಯೋಗದ ಬಳಿ ವಿಲೇವಾರಿಗೆ ಬಾಕಿ ಇರುವ 31,350 ಪ್ರಕರಣಗಳ ಪೈಕಿ 6257 ಪ್ರಕರಣಗಳು ಕಲಬುರ್ಗಿ ವಿಭಾಗಕ್ಕೇ ಸಂಬಂಧಪಟ್ಟಿವೆ. ಕಂದಾಯ ಇಲಾಖೆಯ ಮ್ಯೂಟೇಶನ್ ರಿಜಿಸ್ಟ್ರಿ ಸೇರಿದಂತೆ ತಹಶೀಲ್ದಾರ್‌ಗಳು ಸಾಮಾನ್ಯವಾಗಿ ಮಾಡಬೇಕಾದ ಕೆಲಸಗಳನ್ನೂ ಮಾಡದೇ ಇರುವುದರಿಂದ ಆಯೋಗದ ಬಳಿ ಮೇಲ್ಮನವಿಗಳು ಸಲ್ಲಿಕೆಯಾಗುತ್ತಿವೆ ಎಂದು ವಿಷಾದಿಸಿದರು.

6200 ಚದರ ಅಡಿ ಜಾಗ: ಹಳೇ ಜೇವರ್ಗಿ ರಸ್ತೆಯಲ್ಲಿರುವ ನೂತನ ಲೋಕೋಪಯೋಗಿ ಭವನಕ್ಕೆ ಮುಖ್ಯ ಎಂಜಿನಿಯರ್ ಕಚೇರಿ ಸ್ಥಳಾಂತರಗೊಂಡಿದ್ದರಿಂದ ಹಳೆ ಎಂಜಿನಿಯರ್ ಕಚೇರಿಯ 6200 ಚದರ ಅಡಿ ಜಾಗದಲ್ಲಿ ಆಯೋಗವು ಪೀಠವನ್ನು ಆರಂಭಿಸಲಿದೆ. ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಿದ್ದು, ಬಳಿಕ ಕಾರ್ಯಾರಂಭ ಮಾಡಲಾಗುವುದು ಎಂದರು.

ಐದು ಇಲಾಖೆಗಳು ಮುಂಚೂಣಿಯಲ್ಲಿ: ಅತಿ ಹೆಚ್ಚು ಮಾಹಿತಿ ಬಯಸುವ ಇಲಾಖೆಗಳ ಪೈಕಿ ಮುಂಚೂಣಿಯಲ್ಲಿ ಕಂದಾಯ, ಲೋಕೋಪಯೋಗಿ, ನಗರಾಭಿವೃದ್ಧಿ, ಜಲಸಂಪನ್ಮೂಲ ಇಲಾಖೆಗಳಿವೆ. ಇವುಗಳಲ್ಲಿರುವ ಸಾರ್ವಜನಿಕ ಮಾಹಿತಿ ಅಧಿಕಾರಿ ಅರ್ಜಿ ಸಲ್ಲಿಕೆಯಾದ 30 ದಿನಗಳಲ್ಲಿ ಮಾಹಿತಿಯನ್ನು ನೀಡಬೇಕು. ಆ ಅವಧಿಯ ಬಳಿಕವೂ ಸಲ್ಲಿಕೆಯಾಗದಿದ್ದರೆ ಅರ್ಜಿದಾರರು ಅದೇ ಕಚೇರಿಯ ಮುಖ್ಯಸ್ಥರಿಗೆ ಮೇಲ್ಮನವಿ ಸಲ್ಲಿಸಬಹುದು. ಅವರು 45 ದಿನಗಳ ಒಳಗಾಗಿ ಇತ್ಯರ್ಥಗೊಳಿಸಬೇಕು. ಆ ಅಧಿಕಾರಿಯೂ ಮಾಹಿತಿ ನೀಡಲು ವಿಫಲವಾದರೆ ಆಯೋಗದ ಬಳಿಕ ಎರಡನೇ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಶೇ 90ರಷ್ಟು ಸಂದರ್ಭಗಳಲ್ಲಿ ನಾವು ಆದೇಶ ಹೊರಡಿಸಿದ ತಕ್ಷಣ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಆಗಲೂ ಆಗದಿದ್ದರೆ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಬಹುದು ಎಂದು ವಿವರಿಸಿದರು.

ಆಯೋಗದ ಸದಸ್ಯ ಕಾರ್ಯದರ್ಶಿ ನರಸಿಂಹಪ್ಪ, ಲೋಕೋಪಯೋಗಿ ಇಲಾಖೆ ಕಲಬುರ್ಗಿ ವೃತ್ತದ ಮುಖ್ಯ ಎಂಜಿನಿಯರ್ ಜಗನ್ನಾಥ ಹಾಲಿಂಗೆ ಗೋಷ್ಠಿಯಲ್ಲಿದ್ದರು.

 

ಮಾಹಿತಿ ಬದಲು ದಂಡ ಕೊಡುವ ಪ್ರವೃತ್ತಿ!

ವಿವಿಧ ಇಲಾಖೆಯ ಅಧಿಕಾರಿಗಳು ಅರ್ಜಿದಾರರಿಗೆ ಮಾಹಿತಿ ಕೊಡುವ ಬದಲು ದಂಡ ಕೊಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಮುಖ್ಯ ಮಾಹಿತಿ ಆಯುಕ್ತ ಎನ್‌.ಸಿ. ಶ್ರೀನಿವಾಸ್ ವಿಷಾದಿಸಿದರು.

ಸಕಾಲಕ್ಕೆ ಮಾಹಿತಿ ಕೊಡದ ಅಧಿಕಾರಿಗಳಿಗೆ ದಿನಕ್ಕೆ ₹ 250ರಂತೆ ಗರಿಷ್ಠ ₹ 25 ಸಾವಿರ ದಂಡ ವಿಧಿಸಬಹುದಾಗಿದೆ. ವಿಚಾರಣೆ ವೇಳೆ ಹಲವರು ದಂಡ ಕೊಡುತ್ತಾರೆಯೇ ಹೊರತು ಮಾಹಿತಿ ನೀಡುತ್ತಿಲ್ಲ. ಇದು ಆರ್‌ಟಿಐ ಕಾಯ್ದೆಯ ಉದ್ದೇಶವನ್ನೇ ಬುಡಮೇಲು ಮಾಡಿದಂತಾಗುತ್ತದೆ. ಯೂರೋಪ್, ಅಮೆರಿಕ ದೇಶಗಳಲ್ಲಿ ಕಾಯ್ದೆ, ಕಾನೂನುಗಳಿಗೆ ಸಾಕಷ್ಟು ಬೆಲೆ ಕೊಡುತ್ತಾರೆ. ಅಂತಹ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಬೇಕು ಎಂದರು.

 

‘ಪ್ರಜಾವಾಣಿ’ ಅಚ್ಚುಮೆಚ್ಚಿನ ಪತ್ರಿಕೆ

ನಿಖರ ಸುದ್ದಿಗಳನ್ನು ಕೊಡುವುದರಲ್ಲಿ ‘ಪ್ರಜಾವಾಣಿ’ ಪತ್ರಿಕೆ ಮುಂಚೂಣಿಯಲ್ಲಿದೆ ಎಂದು ಮುಖ್ಯ ಮಾಹಿತಿ ಆಯುಕ್ತ ಶ್ರೀನಿವಾಸ್ ಅವರು ಶ್ಲಾಘಿಸಿದರು.

ಆಯೋಗದ ಕಲಬುರ್ಗಿ ಪೀಠಕ್ಕೆ ಸ್ಥಳ ಪರಿಶೀಲಿಸಲು ನಗರಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ‘1970ರ ದಶಕದಿಂದಲೂ ಪ್ರಜಾವಾಣಿ ಓದುತ್ತಿದ್ದೇನೆ. ನಮ್ಮ ಮೇಷ್ಟ್ರು ಈ ಪತ್ರಿಕೆ ಓದುವಂತೆ ಸಲಹೆ ನೀಡಿದ್ದರು. ಇದರಲ್ಲಿ ಬರುವ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಸುದ್ದಿಗಳು ಹಾಗೂ ಸಂಪಾದಕೀಯ ಪುಟದ ಬರಹಗಳು ಮೌಲಿಕವಾಗಿರುತ್ತವೆ. ಈಗಲೂ ಬೆಳಿಗ್ಗೆ ಪ್ರಜಾವಾಣಿ ಓದದಿದ್ದರೆ ಪತ್ರಿಕೆ ಓದಿದಂತಾಗುವುದಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.