ಯಡ್ರಾಮಿ: ಕಲಬುರಗಿ ಹೊರವಲಯದ ಕೋಟನೂರ (ಡಿ) ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲ್ಲೂಕಿನ ಇಜೇರಿ ಗ್ರಾಮದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಬಸ್ ನಿಲ್ದಾಣ ಎದುರು ಮಾನವ ಸರಪಳಿ ನಿರ್ಮಿಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಟೈರ್‌ಗೆ ಬೆಂಕಿ ಹಚ್ಚಿ ಪತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಿಗ್ಗೆಯೇ ಪ್ರತಿಭಟನೆ ನಡೆಸಿದ್ದರಿಂದ ಬಸ್ ಸಂಚಾರ ವ್ಯತ್ಯಯ ಉಂಟಾಗಿ ಪ್ರಯಾಣಿಕರಿಗೆ ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಯಿತು. ರಸ್ತೆ ಬಂದ್ ಮಾಡಿದ್ದರಿಂದ ಖಾಸಗಿ ವಾಹನಗಳ ಸಂಚಾರ ಕೆಲ ಹೊತ್ತು ಸ್ಥಗಿತಗೊಂಡಿತು.
ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜಿಲ್ಲಾ ಸಮಿತಿ ಸಂಚಾಲಕ ಮಲ್ಲಿಕಾರ್ಜುನ ಖುನ್ನಾ ಮಾತನಾಡಿ, ‘ಬಾಬಾಸಾಹೇಬರ ಪುತ್ಥಳಿಗೆ ಅಪಮಾನ ಮಾಡಿದ ಅಪರಾಧಿಗಳ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಿ ಅವರ ಆಸ್ತಿ ಮುಟ್ಟಗೋಲು ಹಾಕಿಕೊಳ್ಳಬೇಕು. ಗಡಿಪಾರು ಮಾಡಬೇಕು. ರಾಜ್ಯದಾದ್ಯಂತ ಡಾ.ಅಂಬೇಡ್ಕರ್ ಪ್ರತಿಮೆಗಳಿಗೆ ರಕ್ಷಣೆ ನೀಡಬೇಕು’ ಎಂದರು.
ಬಸವರಾಜ ಕಟ್ಟಿಮನಿ, ರವಿ ಶೃತಿ, ಮಾನಪ್ಪ ಕಟ್ಟಿಮನಿ, ಮಲ್ಲಪ್ಪ ಕಿಲದಮನಿ, ಶ್ರಾವಣ ಡಿ.ನಾಯಕ, ಮೈಬೂಬ ಸೌದಾಗರ್, ಹೊನ್ನಪ್ಪ ಬಡಿಗೇರ, ಸೈದಪ್ಪ ಶೃತಿ, ಅಶೋಕ ಕಟ್ಟಿಮನಿ, ಶರಣು ಮದರಿ, ತಾಯಪ್ಪ ಇಜೇರಿ, ರಾಜುಗಾಂಧಿ ಕಟ್ಟಿಮನಿ ಸೇರಿದಂತೆ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.