ಸೋಮವಾರ, ಅಕ್ಟೋಬರ್ 18, 2021
27 °C
ಭವಿಷ್ಯನಿಧಿ ಸಂಘಟನೆಯ ಅಧಿಕಾರಿಗಳೊಂದಿಗೆ

ಪ್ರಜಾವಾಣಿ ಫೋನ್-ಇನ್: ಪಿಎಫ್‌ ಪಾವತಿಸುವವರಿಗೆ ವಿಮೆ, ಪಿಂಚಣಿ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವವರು ಭವಿಷ್ಯನಿಧಿ ಯೋಜನೆಗೆ ಒಳಪಟ್ಟಿದ್ದರೆ ಎಲ್ಲರಿಗೂ ವಿಮಾ ಪರಿಹಾರ ಹಾಗೂ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಎಲ್ಲರಿಗೂ ಪಿಂಚಣಿ ಸೌಲಭ್ಯ ದೊರೆಯಲಿದೆ.

ಕೆವೈಸಿ ದಾಖಲೆಗಳಾದ ಆಧಾರ್‌, ಬ್ಯಾಂಕ್‌ ಖಾತೆಯನ್ನು ಭವಿಷ್ಯನಿಧಿಯ ಖಾತೆಯೊಂದಿಗೆ ಜೋಡಿಸಿದ್ದರೆ ಭವಿಷ್ಯನಿಧಿ ವಾಪಸ್ ಪಡೆಯುವ, ಮುಂಗಡ ಪಡೆಯುವ, ನಿವೇಶನ, ಮಕ್ಕಳ ಉನ್ನತ ವಿದ್ಯಾಭ್ಯಾಸ, ಮದುವೆ ಸೇರಿದಂತೆ ತುರ್ತು ಅಗತ್ಯಗಳಿಗೆ ಹಣವನ್ನು ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಪಡೆಯಬಹುದು.

–‘ಪ್ರಜಾವಾಣಿ’ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಫೋನ್‌ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭವಿಷ್ಯನಿಧಿ ಸಂಘಟನೆಯ ಕಲಬುರ್ಗಿ ಕ್ಷೇತ್ರೀಯ ಕಾರ್ಯಾಲಯದ ಪ್ರವರ್ತನಾಧಿಕಾರಿ ವಿಠಲ ಹಾಗೂ ಹಿರಿಯ ಸಾಮಾಜಿಕ ಸುರಕ್ಷಾ ಸಹಾಯಕ ಬಸವರಾಜ ಹೆಳವರ ಅವರು ಹೇಳಿದ ಪ್ರಮುಖ ಅಂಶಗಳಿವು.

‘ಪ್ರಜಾವಾಣಿ’ ಓದುಗರು ಮಹಾರಾಷ್ಟ್ರದ ಪುಣೆ, ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಯ ಅಥಣಿ, ಬಾಗಲಕೋಟೆ, ಬಳ್ಳಾರಿಯಿಂದಲೂ ಕರೆ ಮಾಡಿದ್ದರು.

ಫೋನ್‌ ಇನ್‌ನಲ್ಲಿ ಕೇಳಲಾದ ಪ್ರಶ್ನೆಗಳು ಹಾಗೂ ಅದಕ್ಕೆ ಉತ್ತರ ಈ ಕೆಳಗಿನಂತಿವೆ.

ವೈಜನಾಥ, ಐನಾಪುರ ಚಿಂಚೋಳಿ ತಾಲ್ಲೂಕು
* ಇಬ್ಬರು ಸದಸ್ಯರಿರುವ ಹಾಲು ಉತ್ಪಾದಕರ ಸಂಘದ ಸದಸ್ಯರು ಭವಿಷ್ಯನಿಧಿ ಸೌಲಭ್ಯ ಪಡೆಯಬಹುದೇ?
–20ಕ್ಕಿಂತ ಹೆಚ್ಚು ಸದಸ್ಯರಿರುವ ಸಂಸ್ಥೆಗಳಲ್ಲಿ ಆ ಸಂಸ್ಥೆಯ ಕಡೆಯಿಂದಲೇ ಭವಿಷ್ಯನಿಧಿ ಸದಸ್ಯತ್ಯ ಸಿಗುತ್ತದೆ. ಅದಕ್ಕಿಂತ ಕಡಿಮೆ ಸದಸ್ಯರಿದ್ದರೆ ಸ್ಪಯಂಪ್ರೇರಿತವಾಗಿ ಇಲಾಖೆಯ ಕಚೇರಿಗೆ ಬಂದು ಸದಸ್ಯತ್ವ ಪಡೆಯಬೇಕು.

ಸಿದ್ರಾಮಯ್ಯಸ್ವಾಮಿ, ಬೀದರ್
* 2013ರಲ್ಲಿ ನಾನು ನಿವೃತ್ತಿ ಹೊಂದಿದ್ದೇನೆ. ಆರಂಭದಲ್ಲಿ ನನಗೆ ₹ 1,685 ಪಿಂಚಣಿ ಬರುತ್ತಿತ್ತು. ನಂತರ ಪರಿಷ್ಕೃತ ಪಿಂಚಣಿ ₹ 5,137 ಸಿಗುತ್ತಿತ್ತು. 2020ರ ಡಿಸೆಂಬರ್‌ನಿಂದ ಮತ್ತೆ ₹ 1,871 ಸಿಗುತ್ತಿದೆ. ಇದಕ್ಕೆ ಕಾರಣ ಏನು?

–ಪರಿಷ್ಕೃತ ಪಿಂಚಣಿ ಬದಲಿಗೆ ಮೊದಲಿನಂತೆ ಪಿಂಚಣಿ ನೀಡುವಂತೆ ಇಲಾಖೆಯ ಆದೇಶ ಇದೆ. ಅಲ್ಲದೆ, ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಒಂದು ವೇಳೆ ಪಿಂಚಣಿದಾರರ ಪರವಾಗಿ ಕೋರ್ಟ್ ತೀರ್ಪು ನೀಡಿದರೆ ಪರಿಷ್ಕೃತ ಪಿಂಚಣಿ ಸಿಗಲಿದೆ.

ರಮೇಶ ಹೆಳವರ, ಯಾಳಗಿ

* ಯುಎಎನ್, ಆಧಾರ್ ಲಿಂಕ್ ಮಾಡಿಸುವುದರ ಬಗ್ಗೆ ತಿಳಿಸಿ

ಭವಿಷ್ಯನಿಧಿ ಸಂಘಟನೆಯಲ್ಲಿ ಯುಎಎನ್‌ ಸಂಖ್ಯೆಯು ಇಡೀ ಖಾತೆದಾರರ ವಿವರವನ್ನು ಹೊಂದಿರುತ್ತದೆ. ಈ ಸಂಖ್ಯೆಯೊಂದಿಗೆ ಆಧಾರ್ ಸಂಖ್ಯೆ, ಬ್ಯಾಂಕ್‌ ಖಾತೆಯ ವಿವರಗಳನ್ನು ನೀಡುವ ಮೂಲಕ ಕೆವೈಸಿ ಅಗತ್ಯಗಳನ್ನು ಪೂರ್ಣಗೊಳಿಸಬೇಕು. ಇದರಿಂದ ಆನ್‌ಲೈನ್‌ ಮೂಲಕವೇ ಪಿಎಫ್‌ ಖಾತೆಗೆ ಸಂಬಂಧಿಸಿದ ವಹಿವಾಟುಗಳನ್ನು ಮಾಡಬಹುದು.

ಮಲ್ಲಣ್ಣ, ಲಾಡ್ಲಾಪುರ, ಕಲಬುರ್ಗಿ
* 2004ರಿಂದ 2016ರವರೆಗೆ ಒಂದು ಕಂಪನಿಯಲ್ಲಿ ಕೆಲಸ ಮಾಡಿ ಆ ನಂತರ ನಾಲ್ಕು ವರ್ಷ ಬಿಟ್ಟು ಬೇರೆ ಕಂಪನಿ ಸೇರಿದ್ದೇನೆ. ಪಿಎಫ್ ಖಾತೆ ಮುಂದುವರಿಸಲು ಏನು ಮಾಡಬೇಕು

–ಫಾರಂ 10 (ಸಿ) ಮತ್ತು ಫಾರಂ 19 ಮೂಲಕ ಅರ್ಜಿ ಸಲ್ಲಿಸಿದ್ದರೆ ಪಿಎಫ್ ಖಾತೆ ಮುಂದುವರಿಸಲು ಬರುವುದಿಲ್ಲ. ಫಾರ್ಮ್ 13 ಭರ್ತಿ ಮಾಡಿದರೆ ನಿಮ್ಮ ಖಾತೆ ಆನ್‌ಲೈನ್ ಮೂಲಕ ವರ್ಗಾವಣೆ ಆಗುತ್ತದೆ. ಆಗ ಹಳೆ ಖಾತೆಯೇ ಮುಂದುವರಿಯುತ್ತದೆ.

ಭಗವಂತರಾಯ ಬೆಣ್ಣೂರ, ಜೇವರ್ಗಿ
* ಯಡ್ರಾಮಿ ತಾಲ್ಲೂಕಿನ ಒಂದು ಕಂಪನಿಯು ಕಾರ್ಮಿಕರಿಗೆ ನಿಯಮಾನುಸಾರ ಭವಿಷ್ಯನಿಧಿ ಪಾವತಿಸುತ್ತಿಲ್ಲ. ಅಲ್ಲದೆ, ನೂಲಿನ ಗಿರಣಿ, ಬೇಳೆ ಗಿರಣಿಗಳಲ್ಲಿ ಕೆಲಸ ಮಾಡುವ ಅಸಂಘಟಿತ ವಲಯದ ಕಾರ್ಮಿಕರಿಗೆ ಭವಿಷ್ಯ ನಿಧಿ ಸೌಲಭ್ಯ ಸಿಗುತ್ತಿಲ್ಲ.

–ಭವಿಷ್ಯನಿಧಿ ನಿಯಮಾವಳಿ ಅನ್ವಯ ಯಾವುದೇ ಕಂಪನಿ ಸಿಬ್ಬಂದಿಗೆ ಭವಿಷ್ಯನಿಧಿ ಸೌಲಭ್ಯವನ್ನು ನೀಡಬೇಕು. ಈ ನಿಯಮ ಪಾಲಿಸದ ಕಂಪನಿಗೆ ಸಂಬಂಧಿಸಿದಂತೆ ತಮ್ಮ ಬಳಿ ಮಾಹಿತಿ ಇದ್ದರೆ ನಮ್ಮ ಕಚೇರಿಗೆ ತಲುಪಿಸಿ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

 ಪಿಎಫ್‌ ಕಚೇರಿಯಿಂದ ದೊರೆಯುವ ಪಿಂಚಣಿ ವಿವರ

* ಪಿ.ಎಫ್ ಸದಸ್ಯರಿಗೆ ಮಾಸಿಕ ಪಿಂಚಣಿ (ಕನಿಷ್ಠ ₹ 1 ಸಾವಿರ)
* ವಿಧವಾ ಅಥವಾ ವಿಧುರ ಪಿಂಚಣಿ
* ಪಿ.ಎಫ್ ಸದಸ್ಯರು ಸೇವೆಯಲ್ಲಿರುವಾಗ ಮೃತಪಟ್ಟರೆ ಅವರ ಅವಲಂಬಿತ ಅರ್ಹ ಮಕ್ಕಳಿಗೆ 25 ವರ್ಷ ವಯಸ್ಸಿನವರೆಗೆ ಪಿಂಚಣಿ ಸೌಲಭ್ಯ
* ಉದ್ಯೋಗಸ್ಥ ತಂದೆ/ ತಾಯಿ ಮೃತಪಟ್ಟರೆ, ಮಕ್ಕಳಿಗೆ ಪಿಂಚಣಿ
* ಅವಿವಾಹಿತ ಇ.ಪಿ.ಎಫ್ ಸದಸ್ಯರು ಮರಣಹೊಂದಿದರೆ ಅವಲಂಬಿತ ಅರ್ಹ ತಂದೆ ಅಥವಾ ತಾಯಿಗೆ ‘ಅವಲಂಬಿತ ಪೋಷಕರ ಪಿಂಚಣಿ’ ಸಿಗುತ್ತದೆ.

ಭವಿಷ್ಯನಿಧಿ ಕುರಿತು ಮಾಹಿತಿ

* ಇಪಿಎಫ್ ಸದಸ್ಯರು ಕಡ್ಡಾಯವಾಗಿ ಇ-ನಾಮಿನೇಷನ್ ಮಾಡಿಸಬೇಕು.
* ಪಿ.ಎಫ್ ಖಾತೆಗೆ ಆಧಾರ್‌ ಲಿಂಕ್‌ ಕಡ್ಡಾಯ.
* ಯುಎಎನ್ ಜತೆ ಆಧಾರ್‌ ಸಂಖ್ಯೆ ಜೋಡಣೆ ಆಗದಿದ್ದರೆ ಉದ್ಯೋಗದಾತರು ನೌಕರರ ಪ್ರತಿ ತಿಂಗಳ ಇಪಿಎಫ್ ವಂತಿಗೆ ಕಟ್ಟುವುದು ಸ್ಥಗಿತವಾಗುತ್ತದೆ.
* ಇಪಿಎಫ್ ಸದಸ್ಯರು ಮೃತಪಟ್ಟರೆ ಕುಟುಂಬ ಸದಸ್ಯರಿಗೆ ₹ 7 ಲಕ್ಷದವರೆಗೆ ವಿಮಾ‌ ಸೌಲಭ್ಯ
* ಭವಿಷ್ಯನಿಧಿ ಪಿಂಚಣಿದಾರರು ಪ್ರತಿ ವರ್ಷ ತಪ್ಪದೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ ಅಥವಾ ಸಂಬಂಧಿಸಿದ ಬ್ಯಾಂಕ್‌ ಶಾಖೆಯಲ್ಲಿ ‘ಜೀವಿತ ಪ್ರಮಾಣ ಪತ್ರ’ (ಡಿಜಿಟಲ್‌) ಸಲ್ಲಿಸಬೇಕು.
* ಯುಎಎನ್ ಸಕ್ರಿಯಗೊಳಿಸಿದ ಸದಸ್ಯರು ತಮ್ಮ ಇತ್ತೀಚಿನ ಪಿಎಫ್ ಕೊಡುಗೆ ಮತ್ತು ಲಭ್ಯವಿರುವ ಶಿಲ್ಕು ತಿಳಿಯಲು ಇ.ಪಿ.ಎಫ್‌ನೊಂದಿಗೆ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 77382 99899ಗೆ ಎಸ್ಎಂಎಸ್‌ ಕಳುಹಿಸಿ ಪಡೆಯಬಹುದು.
* ಸದಸ್ಯರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406ಗೆ ಮಿಸ್ಡ್‌ ಕಾಲ್ ನೀಡುವ ಮೂಲಕ ಇಪಿಎಫ್‌ಒನಲ್ಲಿ ಲಭ್ಯವಿರುವ ತಮ್ಮ ವಿವರ ಪಡೆಯಬಹುದು.

ಪಿಎಫ್‌ ಖಾತೆಯಿಂದ ಮುಂಗಡ ಹಣ

ನೌಕರರು ಮನೆ ಕಟ್ಟಲು, ಮದುವೆ ಮತ್ತು ಮಕ್ಕಳ ಉನ್ನತ ಶಿಕ್ಷಣ, ಅನಾರೋಗ್ಯದ ಸಂದರ್ಭದಲ್ಲಿ ಭವಿಷ್ಯನಿಧಿಯಿಂದ ಮುಂಗಡ ಹಣದ ಪಡೆಯಲು ಅವಕಾಶ ಇದೆ.

ಮನೆ ಕಟ್ಟಲು ಮೂಲ ವೇತನದ 24 ಪಟ್ಟು ಹೆಚ್ಚು ಹಣ ಪಡೆಯಬಹುದು. ಇದಕ್ಕೆ ಕನಿಷ್ಠ ಐದು ವರ್ಷದ ಸೇವಾವಧಿ ಮಾಡಿರಬೇಕು. ಮದುವೆ ಮತ್ತು ಮಕ್ಕಳ ಉನ್ನತ ಶಿಕ್ಷಣಕ್ಕೆ ಪಿಎಫ್ ಖಾತೆಯಲ್ಲಿರುವ ಒಟ್ಟು ಶೇ 50ರಷ್ಟು ಹಣ ಮುಂಗಡವಾಗಿ ಪಡೆಯಬಹುದಾಗಿದೆ.

ಅನಾರೋಗ್ಯದ ಸಂದರ್ಭದಲ್ಲಿ ಮೂಲವೇತನದ ಆರುಪಟ್ಟು ಹಣವನ್ನು ಪಡೆಯಬಹುದು. ಇದಕ್ಕೆ ಸೇವಾವಧಿಯ ಮಿತಿ ಇಲ್ಲ.

ಪ್ರಯಾಸ ಯೋಜನೆ

ಸೇವೆಯಿಂದ ನಿವೃತ್ತಿ ಹೊಂದಿದ ಬಳಿಕ ನೌಕರರು ಪಿಂಚಣಿಗಾಗಿ ಭವಿಷ್ಯನಿಧಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಪ್ರಯಾಸ ಯೋಜನೆ ಜಾರಿಗೆ ತರಲಾಗಿದೆ.

ಇಪಿಎಫ್ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಂತೆ ‘ಪ್ರಯಾಸ’ ಯೋಜನೆ ಅಡಿ ಪಿಂಚಣಿದಾರರಿಗೆ ನಿವೃತ್ತಿಯ ದಿನದಂದೇ ಪಿಂಚಣಿ ಆದೇಶಪತ್ರ ನೀಡಲಾಗುತ್ತದೆ.

ಈ ಹಿಂದೆ 30–40 ವರ್ಷ ಸೇವೆ ಸಲ್ಲಿಸಿದವರು ನಿವೃತ್ತಿಯಾದ ನಂತರ ಪಿಂಚಣಿಗಾಗಿ ಅರ್ಜಿ ಸಲ್ಲಿಸಬೇಕಿತ್ತು. ಆ ನಂತರ ಅವರಿಗೆ ಒಂದು ಅಥವಾ ಎರಡು ತಿಂಗಳ ನಂತರ ಅವರಿಗೆ ಪಿಂಚಣಿ ಸಿಗುತ್ತಿತ್ತು. ಈ ಯೋಜನೆ ಅಡಿ ಸಂಸ್ಥೆಯು ಯಾವ ಸಿಬ್ಬಂದಿಯ ನಿವೃತ್ತಿಯ ದಿನ ಎಂದು ಎಂಬ ಬಗ್ಗೆ ಮಾಹಿತಿ ತರಿಸಿಕೊಂಡು ನಿವೃತ್ತಿಯ ದಿನವೇ ಪಿಂಚಣಿ ಆದೇ ಪತ್ರವನ್ನು ನೀಡಲಾಗುತ್ತದೆ.

78,131 ಪಿಎಫ್‌ ಸದಸ್ಯರು

ಕಲಬುರ್ಗಿಯ ಭವಿಷ್ಯನಿಧಿ ಸಂಘಟನೆಯ ಕ್ಷೇತ್ರೀಯ ಕಾರ್ಯಾಲಯದಲ್ಲಿ ಪ್ರಸ್ತುತ 78,131 ಪಿಎಫ್‌ ಸದಸ್ಯರಿದ್ದಾರೆ. ಅಲ್ಲದೇ, 28,590 ಜನ ಪಿಂಚಣಿದಾರರಿದ್ದಾರೆ.

ಪ್ರತಿ ಪಿಂಚಣಿದಾರರಿಗೆ ಅವರು ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸಿದ ವರ್ಷವನ್ನು ಲೆಕ್ಕಹಾಕಿ ಪಿಂಚಣಿಯನ್ನು ನಿಗದಿಪಡಿಸಲಾಗುತ್ತದೆ. ಗರಿಷ್ಠ ₹ 1 ಸಾವಿರದಂತೆ ₹ 4500ರವರೆಗೆ ಮಾಸಿಕ ಪಿಂಚಣಿ ಪಡೆಯುವವರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು