ಭಾನುವಾರ, ಜನವರಿ 26, 2020
31 °C
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ

‘ಪ್ರಧಾನಿ ಮೋದಿಯಿಂದ ರಾಜ್ಯದ ಜನತೆಗೆ ಅವಮಾನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇತ್ತೀಚೆಗೆ ರಾಜ್ಯ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪ್ರವಾಹ ಪರಿಹಾರ ಕುರಿತು ಮಾತುಕತೆಗೆ ಅವಕಾಶ ನೀಡದಿರುವ ಮೂಲಕ ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತುಮಕೂರಿನ ಪರಮ ಪವಿತ್ರವಾದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಮಕ್ಕಳ ಎದುರು ರಾಜಕೀಯ ಮಾತನಾಡಿದರು. ರೈತರ ಸಮಾವೇಶದಲ್ಲಿ ಸ್ವತಃ ಮುಖ್ಯಮಂತ್ರಿಯೇ ಕೇಂದ್ರದಿಂದ ನೆರೆ ಪರಿಹಾರ ನೀಡುವಂತೆ ಗೋಗರೆದರೂ ಪ್ರಧಾನಿ ಮನಸ್ಸು ಕರಗಲಿಲ್ಲ. ಈ ವಿಷಯ ಕುರಿತು ಚರ್ಚಿಸಲು ರಾಜಭವನಕ್ಕೆ ತೆರಳಿದಾಗಲೂ ತಮ್ಮದೇ ಪಕ್ಷದ ಮುಖ್ಯಮಂತ್ರಿಗೆ ಅವಕಾಶ ನಿರಾಕರಿಸಿದರು. ಇದು ರಾಜ್ಯದ ಬಗ್ಗೆ ಪ್ರಧಾನಿ ಹೊಂದಿರುವ ನಿರ್ಲಕ್ಷ್ಯ ಧೋರಣೆಯನ್ನು ತಿಳಿಸುತ್ತದೆ’ ಎಂದು ಹರಿಹಾಯ್ದರು.

ಸೋಮಶೇಖರ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳಿ

ಜಾತಿ, ಧರ್ಮದ ತಾರತಮ್ಯ ಮಾಡದೇ ಕೆಲಸ ಮಾಡುವುದಾಗಿ ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿರುವ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸುವ ಅಲ್ಪಸಂಖ್ಯಾತರಿಗೆ ಜೀವ ಬೆದರಿಕೆ ಹಾಕುವ ಮಾತನ್ನಾಡಿದ್ದಾರೆ. ಒತ್ತಡ ಹೆಚ್ಚಾದ ಕೂಡಲೇ ಪೊಲೀಸರು ರೆಡ್ಡಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಅದರೆ, ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಬಂಧಿಸಬೇಕು ಎಂದು ಖಂಡ್ರೆ ಒತ್ತಾಯಿಸಿದರು.

ಪೌರತ್ವ (ತಿದ್ದುಪಡಿ) ಕಾಯ್ದೆಗೆ ಸಂಬಂಧಿಸಿದಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಿಗೆ ತಮ್ಮ ಜವಾಬ್ದಾರಿಯ ಅರಿವೂ ಇದ್ದಂತಿಲ್ಲ. ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮಾಡುವಾಗಲೇ 19 ಲಕ್ಷ ಜನರು ಆ ಪಟ್ಟಿಯಿಂದ ಹೊರಗುಳಿದರು. ಅದರಲ್ಲಿ 12 ಲಕ್ಷ ಹಿಂದುಗಳೇ ಇದ್ದಾರೆ. ಇನ್ನು ಇಡೀ ದೇಶಕ್ಕೆ ಎನ್‌ಆರ್‌ಸಿ, ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ತಂದರೆ ಏನೇನು ಅನಾಹುತವಾಗಬಹುದೋ ಎಂದು ಆತಂಕ ವ್ಯಕ್ತಪಡಿಸಿದರು.

ತೊಗರಿಗೆ ₹ 1000 ಬೆಂಬಲ ಬೆಲೆ ನೀಡಿ

ಕೇಂದ್ರ ಸರ್ಕಾರ ತೊಗರಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ₹ 5800 ದರ ನಿಗದಿ ಮಾಡಿದೆ. ಆ ಮೊತ್ತಕ್ಕೆ ರಾಜ್ಯ ಸರ್ಕಾರ ಕೇವಲ ₹ 300 ನಿಗದಿ ಮಾಡುವ ಮೂಲಕ ರೈತ ವಿರೋಧಿ ಎಂದು ಸಾಬೀತುಪಡಿಸಿದೆ. ಕನಿಷ್ಠ ₹ 1000 ಬೆಂಬಲ ಬೆಲೆ ಘೋಷಿಸಬೇಕು. ಖರೀದಿ ಮಿತಿಯನ್ನು 10 ಕ್ವಿಂಟಲ್‌ಗೆ ಬದಲಾಗಿ 20 ಕ್ವಿಂಟಲ್‌ಗೆ ಹೆಚ್ಚಿಸಬೇಕು ಎಂದು ಖಂಡ್ರೆ ಒತ್ತಾಯಿಸಿದರು.

ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ‘ಕೇಂದ್ರ ಸರ್ಕಾರ ಸಿಎಎ ಕಾಯ್ದೆ ವಿರೋಧದ ಹಿಂದೆ ಕಾಂಗ್ರೆಸ್‌ ಇದೆ. ಬರೀ ಮುಸ್ಲಿಮರಿದ್ದಾರೆ ಎನ್ನುವ ಮೂಲಕ ಜನಗಳ ದಿಕ್ಕು ತಪ್ಪಿಸಲು ನೋಡುತ್ತಿದೆ. ಕಾಂಗ್ರೆಸ್‌ಗೆ ಅಷ್ಟೊಂದು ಸಂಘಟನಾ ಶಕ್ತಿ ಇದ್ದಿದ್ದರೆ ಕೇಂದ್ರದಲ್ಲಿ ನಾವೇ ಅಧಿಕಾರದಲ್ಲಿ ಇರುತ್ತಿದ್ದೆವು. ಆರು ವರ್ಷಗಳಿಂದ ಮೋದಿ ಅವರ ದುರಾಡಳಿತ ನೋಡಿಕೊಂಡು ರೋಸಿಹೋದ ಜನರು ಈಗ ಬೀದಿಗಿಳಿದಿದ್ದಾರೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು