ಭಾನುವಾರ, ಮಾರ್ಚ್ 26, 2023
24 °C
ಬೆಲೆ ಏರಿಕೆ ಖಂಡಿಸಿ ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ

ಮಣ್ಣಿನ ಉಂಡಿ, ಕರ್ಚಿಕಾಯಿ ಖಾದ್ಯ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಮಹಿಳೆಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಮಣ್ಣಿನಿಂದ ತಯಾರಿಸಿದ ಉಂಡಿ, ಕರ್ಚಿಕಾಯಿ, ಶಂಕರಪಾಳಿಯನ್ನು ತಟ್ಟೆಯಲ್ಲಿಟ್ಟುಕೊಂಡು ’ಬೆಲೆ ಏರಿಕೆಯೇ ಹಬ್ಬದ ಉಡುಗೊರೆಯೇ‘ ಎಂದು ಪ್ರಶ್ನಿಸಿ ಪ್ರತಿಭಟನೆ ನಡೆಸಿದರು.

ಕೋವಿಡ್ ಸಾಂಕ್ರಾಮಿಕ ಹಾಗೂ ನಂತರ ಹೇರಲಾದ ಲಾಕ್‌ಡೌನ್‌ಗಳಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಲಾಕ್‌ಡೌನ್‌ ಅವಧಿಯಲ್ಲಿ ಕೆಲಸ ಕಳೆದುಕೊಂಡು ಜೀವನ ನಿರ್ವಹಣೆಗೆಂದು ಮಾಡಿದ ಸಾಲಗಳನ್ನು ತೀರಿಸಲಾಗದೇ ಪರದಾಡುತ್ತಿರುವ ಇಂತಹ ಸಂದರ್ಭದಲ್ಲಿ ಜನರಿಗೆ ಆಸರೆಯಾಗಿ ನಿಲ್ಲಬೇಕಿದ್ದ ಬಿಜೆಪಿ ಸರ್ಕಾರಗಳು ಒಂದೇ ಸಮನೆ ಆಹಾರ ಪದಾರ್ಥಗಳ ಬೆಲೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ, ಅಡುಗೆ ಅನಿಲದ ಬೆಲೆಗಳನ್ನು ಏರಿಸುತ್ತಲೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನರ ಬದುಕು ಅಸಹನೀಯಗೊಂಡಿದ್ದು, ಜೀವನ ನಿರ್ವಹಣೆಯೇ ಹೋರಾಟವಾಗಿ ಹೋಗಿದೆ. ಇಂತಹ ಸಂದರ್ಭದಲ್ಲಾದರೂ ಬೆಲೆ ಏರಿಕೆಯನ್ನು ತಡೆಗಟ್ಟಿ ಸಾರ್ವಜನಿಕ ಪಡಿತರ ವ್ಯವಸ್ಥೆಯ ಮೂಲಕ ತೆರಿಗೆಯೇತರ ಎಲ್ಲ ಕುಟುಂಬಗಳಿಗೆ 35 ಕೆ.ಜಿ. ಆಹಾರ ಧಾನ್ಯ ಮತ್ತು ಆರೋಗ್ಯಪೂರ್ಣ ಜೀವನಕ್ಕೆ ಅಗತ್ಯ ಬೇಳೆ ಕಾಳುಗಳು, ಸಕ್ಕರೆ, ಅಡುಗೆ ಎಣ್ಣೆಯನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.

ಏಷ್ಯಾ ಖಂಡದಲ್ಲಿಯೇ ಭಾರತ ಅತಿ ಹೆಚ್ಚು ಬೆಲೆ ಏರಿಕೆ ಮಾಡಿದ ಕುಖ್ಯಾತಿಗೆ ಒಳಗಾಗಿದ್ದು, ಇದು ಕೇಂದ್ರ ಸರ್ಕಾರದ ವೈಫಲ್ಯವೇ ಆಗಿದೆ. ಬೆಳಕಿನ ಹಬ್ಬ ದೀಪಾವಳಿಗೆ ಔಪಚಾರಿಕವಾಗಿ ಶುಭಕೋರುವ ಪ‍್ರಧಾನಮಂತ್ರಿ ಸಾರ್ವಜನಿಕ ಪಡಿತರ ವ್ಯವಸ್ಥೆಯ ಮೂಲಕ ಜೀವನಾವಶ್ಯಕ ಆಹಾರ ಧಾನ್ಯಗಳು, ಬೇಳೆ ಕಾಳುಗಳು, ಬೆಲ್ಲ, ಎಳ್ಳು, ಅಡುಗೆ ಎಣ್ಣೆಯನ್ನು ನೀಡಿ ಬಡಬಗ್ಗರು ಹಬ್ಬವನ್ನು ಆಚರಿಸಲು ಅನುವು ಮಾಡಿಕೊಡಬೇಕು. ಸರ್ಕಾರಗಳು ಕನಿಷ್ಠ ತಮ್ಮ ಪಾಲಿನ ತೆರಿಗೆಯನ್ನಾದರೂ ಇಳಿಸಬೇಕು. ಅದಾವುದನ್ನೂ ಮಾಡದೇ ತಾನು ಹಿಂದಿನ ಸರ್ಕಾರಗಳಿಗೇನು ಕಡಿಮೆಯಲ್ಲವೆಂಬಂತೆ ತೀವ್ರವಾಗಿ ಬೆಲೆಗಳನ್ನು ಏರಿಸುತ್ತಲೇ ಇದೆ. ಕೇಂದ್ರ ಸರ್ಕಾರ ಅವಶ್ಯಕ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಬೆಲೆ ನಿಯಂತ್ರಣದ ಮೇಲಿದ್ದ ಸರ್ಕಾರದ ಪಾತ್ರವನ್ನು ಕಿತ್ತು ಹಾಕಿ ಕಾರ್ಪೊರೇಟ್ ಲೂಟಿಕೋರರಿಗೆ ಜನರ ರಕ್ತ ಜೀರಲು ಅವಕಾಶ ಮಾಡಿಕೊಡಲಿದೆ. ವಿಪರೀತವಾದ ಈ ಬೆಲೆ ಏರಿಕೆ ಬಡವರು, ಮಹಿಳೆ ಮತ್ತು ಮಕ್ಕಳು, ಅಂಚಿನ ಸಮುದಾಯದ ಜನತೆಯ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ‘ ಎಂದು ಟೀಕಿಸಿದರು.

ಸಂಘಟನೆಯ ಮುಖಂಡರಾದ ಪದ್ಮಿನಿ ಕಿರಣಗಿ, ಜಗದೇವಿ ನೂಲಕರ, ಸೈನಾಜ್ ಅಖ್ತರ್, ಅಶ್ವಿನಿ, ಅನ್ನಪೂರ್ಣ ಮಠದ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.