ಕಲಬುರಗಿ: ‘ಲೋಕಸಭೆ ಚುನಾವಣೆ ಪೂರ್ವದಲ್ಲಿ ನಡೆದ ಬಿಜೆಪಿ–ಜೆಡಿಎಸ್ ಮೈತ್ರಿ ಸಂದರ್ಭದಲ್ಲಿ ಒಪ್ಪಂದವನ್ನು ಉಲ್ಲಂಘಿಸಿ ಬಿಜೆಪಿಯ 9 ಪುರಸಭೆ ಸದಸ್ಯರನ್ನು ಜೆಡಿಎಸ್ ಸೆಳೆದುಕೊಂಡಿದೆ’ ಎಂದು ಜೇವರ್ಗಿಯ ಬಿಜೆಪಿ ಮುಖಂಡ ದೇವೇಂದ್ರ ಮುತಕೋಡ ದೂರಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಮೈತ್ರಿ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಜೆಡಿಎಸ್ ಸೇರಿಸಿಕೊಳ್ಳುವಂತಿಲ್ಲ. ಜೆಡಿಎಸ್ ಮುಖಂಡರು, ಕಾರ್ಯಕರ್ತರನ್ನು ಬಿಜೆಪಿ ಸೇರಿಸಿಕೊಳ್ಳುವಂತಿಲ್ಲ ಎಂದು ಒಪ್ಪಂದವಾಗಿತ್ತು. ಈ ಸಂಬಂಧ ಉಭಯ ಪಕ್ಷಗಳ ರಾಜ್ಯ ಮಟ್ಟದ ಮುಖಂಡರ ಸಮ್ಮುಖದಲ್ಲಿ ತೀರ್ಮಾನವಾಗಿತ್ತು. ಆದರೆ, ಇದೀಗ ಜೆಡಿಎಸ್ ಮೈತ್ರಿ ಒಪ್ಪಂದ ಉಲ್ಲಂಘಿಸಿದೆ’ ಎಂದು ಕಿಡಿಕಾರಿದರು.
‘ಲೋಕಸಭೆ ಚುನಾವಣೆಯಲ್ಲೂ ಜೆಡಿಎಸ್ ಕಾರ್ಯಕರ್ತರು ಕ್ಷೇತ್ರದಲ್ಲಿ ಬಿಜೆಪಿ ಪರ ಕೆಲಸ ಮಾಡಿಲ್ಲ. ಕಾಂಗ್ರೆಸ್ ಪರವಾಗಿ ದುಡಿದರು. ಆಗಲೂ ಪಕ್ಷದ ನಾಯಕರ ಗಮನಕ್ಕೆ ತರಲಾಗಿತ್ತು. ಇದೀಗ ನಮ್ಮ ಪಕ್ಷದ ಸದಸ್ಯರಿಗೆ ಆಸೆ ತೋರಿಸಿ, ಆಮಿಷವೊಡ್ಡಿ ಜೆಡಿಎಸ್ ಸೆಳೆದುಕೊಂಡಿದೆ’ ಎಂದು ದೂರಿದರು.
‘ಚುನಾವಣೆಯ ಪೂರ್ವದಲ್ಲೂ ಮೈತ್ರಿ ವೇಳೆ ನಮಗೆ ಅಪಸ್ವರವೇ ಇತ್ತು. ಆದರೆ, ನರೇಂದ್ರ ಮೋದಿ, ಅಮಿತ್ ಶಾ ಅವರ ಗೆಲುವಿಗಾಗಿ ನಾವು ಮೈತ್ರಿಗೆ ಸಹಮತ ವ್ಯಕ್ತಪಡಿಸಿದ್ದೆವು’ ಎಂದ ಅವರು, ‘ನಮ್ಮ ಸದಸ್ಯರನ್ನು ಜೆಡಿಎಸ್ ರಾಜ್ಯ ನಾಯಕರು, ತಂದು ಒಪ್ಪಿಸಲು ಕ್ರಮವಹಿಸಬೇಕು. ಇಲ್ಲದಿದ್ದರೆ ಮುಂದಿನ ಅನಾಹುತಗಳಿಗೆ ನೀವೇ ಜವಾಬ್ದಾರಿ’ ಎಂದು ಎಚ್ಚರಿಸಿದರು.
ಕಲಬುರಗಿ ಗ್ರಾಮೀಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿ, ‘ಮೈತ್ರಿ ಸಂದರ್ಭದಲ್ಲಿ ಯಾವುದೇ ಪಕ್ಷದವರು ಮತ್ತೊಂದು ಪಕ್ಷವನ್ನು ದುರ್ಬಲಗೊಳಿಸುವ ಕೆಲಸ ಮಾಡಬಾರದು ಎಂದು ಎರಡೂ ಪಕ್ಷಗಳ ರಾಜ್ಯ ನಾಯಕರು ಹೇಳಿದ್ದರು. ಅದು ಎರಡೂ ಪಕ್ಷಗಳಿಗೂ ಅನ್ವಯವಾಗುವಂಥದ್ದು. ಈ ಕಾರಣಕ್ಕಾಗಿ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗೆ ಬರಲು ಯತ್ನಿಸಿದ್ದ ಜೆಡಿಎಸ್‌ನ ಹಲವರನ್ನು ಪಕ್ಷಕ್ಕೆ ಸೇರಿಸಿಕೊಂಡಿರಲಿಲ್ಲ. ಆದರೆ, ಮೈತ್ರಿ ಧರ್ಮದ ನಿಯಮಗಳನ್ನು ಜೆಡಿಎಸ್ ಗಾಳಿಗೆ ತೋರಿದೆ. ನಮ್ಮ ಪಕ್ಷದ ಸದಸ್ಯರಿಗೆ ಆಮಿಷವೊಡ್ಡಿ ಸೆಳೆದುಕೊಂಡಿದೆ’ ಎಂದು ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಲ್ಯಾಣಪ್ಪ ಪಾಟೀಲ, ಶೋಭಾ ಬಾಣಿ, ಮಲ್ಲಿಕಾರ್ಜುನ, ದತ್ತು, ರಾಮು, ಮರೆಪ್ಪ, ಧರ್ಮಣ್ಣ ಇಟಗಾ, ಪ್ರಕಾಶ, ಬಸವರಾಜ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.