ಕಲಬುರಗಿ: ಇಲ್ಲಿನ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ‘ಡಿ’, ‘ಸಿ’ ದರ್ಜೆಯ ಕೆಲಸ ಕೊಡಿಸುವ ಆಮಿಷವೊಡ್ಡಿ 110ಕ್ಕೂ ಹೆಚ್ಚು ಜನರಿಂದ ಸುಮಾರು ₹70 ಲಕ್ಷ ಪಡೆದು ವಂಚಿಸಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ವಂಚನೆ ಆರೋಪದಲ್ಲಿ ಕಿರಾಣಿ ಅಂಗಡಿ ವ್ಯಾಪಾರಿ ಸಂತೋಷ ಕುಮಾರ, ರಾಜಶೇಖರ್ ಶಿವಪ್ಪ ವಿರುದ್ಧ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಲಭ್ಯ ಮಾಹಿತಿ ಆಧರಿಸಿ, ಮತ್ತೆ ಮೂವರನ್ನು ಬಂಧಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಕೊನೆ ಹಂತ ತಲುಪಿದೆ. ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಪಿಗಳು, ಉದ್ಯೋಗಾ ಕಾಂಕ್ಷಿಗಳನ್ನು ನಂಬಿಸಿದ್ದರು. ಕಂಪ್ಯೂಟರ್ ಆಪರೇಟರ್, ಸೂಪರ್‌ವೈಸರ್, ಡಾಟಾ ಎಂಟ್ರಿ ಆಪರೇಟರ್, ನರ್ಸಿಂಗ್ ಹುದ್ದೆಗಳ ಆಮಿಷವೊಡ್ಡಿದ್ದರು. ಪ್ರತಿಯೊಬ್ಬರಿಂದ ಸುಮಾರು ₹ 60 ಸಾವಿರ ಕಮಿಷನ್ ಪಡೆದಿದ್ದರು ಎಂದು ಅವರು ಮಾಹಿತಿ ನೀಡಿದರು.
ಆಮಿಷಕ್ಕೆ ಒಳಗಾಗಿ, 110ಕ್ಕೂ ಹೆಚ್ಚು ಜನರು ಆರೋಪಿಗಳಿಗೆ ಹಣ ಕೊಟ್ಟಿದ್ದಾರೆ. ಅದರ ಮೊತ್ತ ₹70 ಲಕ್ಷದಷ್ಟಿದೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆಯಿದ್ದು, ತನಿಖೆ ನಡೆದಿದೆ ಎಂದರು. ಬಂಧಿತರಾಗಿದ್ದ ಐವರೂ ಜಾಮೀನು ಪಡೆದು ಹೊರಬಂದಿದ್ದಾರೆ ಎಂದರು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?:
ವಂಚನೆಗೆ ಒಳಗಾಗಿದ್ದ ಸಂದೀಪ್, ಮಲ್ಲಿಕಾರ್ಜುನ ಲಕ್ಷ್ಮಿಕಾಂತ್ ಹಾಗೂ ಅಶೋಕ ರಾಠೋಡ್ ಅವರು ಆರೋಪಿಗಳು ನೀಡಿದ್ದ ‘ದಿಕ್ಷಾ ಪ್ಲೇಸ್‌ಮೆಂಟ್ ಆ್ಯಂಡ್ ಕನ್ಸಲ್ಟಂಟ್ ದಿ ಕ್ವೀಕರ್ ಜಾಬ್ ಎವರ್’ ಶೀರ್ಷಿಕೆಯ ಲೆಟರ್ ಹೆಡ್ ಹಿಡಿದು 2024ರ ಮಾ.16ರಂದು ಆಸ್ಪತ್ರೆಗೆ ಬಂದಿದ್ದರು. ಆಗ ವಂಚನೆ ಗೊತ್ತಾಗಿದ್ದು, ‘ಸೆನ್’ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.