ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗಿಣಾ ನದಿಯಲ್ಲಿ ಪ್ರವಾಹದ ರೌದ್ರಾವತಾರ

ಗುಂಡಗುರ್ತಿ ಜಲಾವೃತ; ಚಿತ್ತಾಪುರ– ಕಲಬುರ್ಗಿ ಸಂಪರ್ಕ ಕಡಿತ
Last Updated 14 ಅಕ್ಟೋಬರ್ 2020, 15:33 IST
ಅಕ್ಷರ ಗಾತ್ರ

ಚಿತ್ತಾಪುರ: ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರ ಹರಿಯುವ ಕಾಗಿಣಾ ನದಿಯಲ್ಲಿ ಬುಧವಾರ ಭಾರಿ ಪ್ರವಾಹ ಉಂಟಾಗಿದ್ದು, ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ದಂಡೋತಿ ಸೇತುವೆ ಮುಳುಗಡೆಯಾಗಿ ಈ ಮಾರ್ಗದಿಂದ ಚಿತ್ತಾಪುರ ಪಟ್ಟಣವು ಕಲಬುರ್ಗಿ, ಕಾಳಗಿ, ಸೇಡಂ ತಾಲ್ಲೂಕುಗಳಿಂದ ಸಂಪರ್ಕ ಕಡಿದುಕೊಂಡಿದೆ. ಮುಡಬೂಳ, ಮುತ್ತಗಾ, ಶಂಕರವಾಡಿ, ಗೋಳಾ ಮತ್ತು ಇಂಗಳಗಿ ಗ್ರಾಮಗಳ ಹತ್ತಿರ ನದಿಗೆ ಕಟ್ಟಿರುವ ಬಾಂದಾರ ಸೇತುವೆಗಳು ಮುಳುಗಿವೆ. ಶಹಾಬಾದ್ ಹತ್ತಿರ ಕಾಗಿಣಾ ಸೇತುವೆ ಮುಳಗಿ ಈ ಮಾರ್ಗದ ಕಲಬುರ್ಗಿ ಸಂಚಾರ ಸಂಪರ್ಕವೂ ಬಂದ್ ಆಗಿದೆ.

ಗುಂಡಗುರ್ತಿ ಗ್ರಾಮದಲ್ಲಿ ದೊಡ್ಡ ಹಳ್ಳದ ಪ್ರವಾಹದ ನೀರು ಗ್ರಾಮಕ್ಕೆ ನುಗ್ಗಿ 190 ಮನೆಗಳು ಜಲಾವೃತಗೊಂಡಿವೆ. ಜನರನ್ನು ಮನೆ ಖಾಲಿ ಮಾಡಿಸಿ ಪ್ರೌಢ ಶಾಲೆ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಗುಂಡಗುರ್ತಿ ತಾಂಡಾಕ್ಕೆ ಪ್ರವಾಹ ನುಗ್ಗಿ ಜನರು ತೊಂದರೆಗೆ ಸಿಲುಕಿದ್ದಾರೆ.

ಇವಣಿ ಹತ್ತಿರ ದೊಡ್ಡ ಹಳ್ಳದಲ್ಲಿ ಪ್ರವಾಹ ಬಂದು ಮತ್ತು ಕಾಗಿಣಾ ನದಿಯ ಪ್ರವಾಹ ಹಿನ್ನೀರಿನಿಂದ ಸೇತುವೆ ಮುಳುಗಿ ಗ್ರಾಮವು ಭಾಗೋಡಿ, ಬೆಳಗುಂಪಾ, ಪೇಠಶಿರೂರ ಗ್ರಾಮಗಳಿಂದ ಸಂಪರ್ಕ ಕಡಿದುಕೊಂಡಿದೆ.

ಗುಂಡಗುರ್ತಿ- ಭಾಗೋಡಿ ರಸ್ತೆ ಮಾರ್ಗದ ಹಳ್ಳಕ್ಕೆ ಪ್ರವಾಹ ನೀರು ಬಂದು ಎರಡು ಗ್ರಾಮಗಳ ಸಂಚಾರ ಸ್ತಬ್ಧಗೊಂಡಿದೆ. ಮತ್ತಿಮೂಡ-ಇಂಧನಕಲ್ ಗ್ರಾಮಗಳ ನಡುವೆ ಇರುವ ಸೇತುವೆ ಪ್ರವಾಹದಲ್ಲಿ ಮುಳುಗಿದೆ. ಇಂಧನಕಲ್ ಗ್ರಾಮದ 30 ಮನೆಗಳು, ಮತ್ತಿಮೂಡ ಗ್ರಾಮದ 40, ಇವಣಿ ಗ್ರಾಮದ 40 ಮನೆಗಳು ಜಲಾವೃತಗೊಂಡು ಜನರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ತಾಲ್ಲೂಕಿನ ಒಟ್ಟು 308 ಮನೆಗಳಿಗೆ ಮಳೆ ಮತ್ತು ಪ್ರವಾಹದ ನೀರು ನುಗ್ಗಿದೆ.

ಕಾಗಿಣಾ ನದಿ ಹಿನ್ನೀರು ಮುಡಬೂಳ ಗ್ರಾಮಕ್ಕೆ ಸುತ್ತುವರೆದು ಹಣುಮಾನ ದೇವರ ಮಂದಿರ ಹತ್ತಿರ ಮತ್ತು ಇತರೆ ಕೆಲವು ಮನೆಗಳಿಗೆ ನೀರು ನುಗ್ಗಿದೆ. ನಾಗಾವಿ ಹಳ್ಳದ ಸೇತುವೆ ಮುಳುಗಡೆಯಾಗಿ ಗ್ರಾಮವು ಚಿತ್ತಾಪುರದಿಂದ ಸಂಪರ್ಕ ಕಡಿದುಕೊಂಡಿದೆ. ಆಶ್ರಯ ಬಡಾವಣೆಯ ಮನೆಗಳು ಜಲಾವೃತಗೊಂಡಿವೆ. ಜನರು ಮನೆ ಖಾಲಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.

ದಂಡೋತಿ ಗ್ರಾಮಕ್ಕೆ ಬಂದಿರುವ ಕಾಗಿಣಾ ನದಿ ಪ್ರವಾಹದ ನೀರು ಹಳ್ಳದ ಬಸವೇಶ್ವರ ದೇವಸ್ಥಾನಕ್ಕೆ ಮತ್ತು ಅದರ ಪಕ್ಕದಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಮರಗಮ್ಮ ದೇವಿಯ ಗುಡಿ ಹತ್ತಿರದ ಮನೆಗಳನ್ನು ಖಾಲಿ ಮಾಡಿಸಿ ಪ್ರೌಢ ಶಾಲೆಯಲ್ಲಿ ಆಶ್ರಯ ಕಲ್ಪಿಸಲಾಗಿದೆ. ಪರಿಶಿಷ್ಟರ ಬಡವಾಣೆ ಕೆಲವು ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಜನರು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಭಾಗೋಡಿ ಗ್ರಾಮದ ಹತ್ತಿರ ಕಟ್ಟಿರುವ ಬೃಹತ್ ಬಾಂದಾರ ಸೇತುವೆ ಮುಳುಗಡೆ ಭೀತಿ ಶುರುವಾಗಿದೆ. ಗ್ರಾಮದ ಬಸ್ ನಿಲ್ದಾಣ, ಮಹೆಬೂಬ ಸುಬಹಾನಿ ದರ್ಗಾ, ಅಗಸಿ ಬಾಗಿಲ ಹತ್ತಿರ ನೀರು ನುಗ್ಗಿದೆ. ನದಿ ದಂಡೆ ಸಮೀಪ ಇರುವ ಪರಿಶಿಷ್ಟರ ಮನೆಗಳು ಜಲಾವೃತಗೊಂಡು ಜನರು ಮನೆ ಖಾಲಿ ಮಾಡಿದ್ದಾರೆ.

ಚಿತ್ತಾಪುರ ಪಟ್ಟಣದಲ್ಲಿ ಹರಿಯುವ ನಾಗಾವಿ ಹಳ್ಳದಲ್ಲಿ ಮಂಗಳವಾರ ರಾತ್ರಿ ಭಾರಿ ಪ್ರವಾಹ ತುಂಬಿ ಬಂದು ಬಸವನಗರ, ಬಹಾರಪೇಠ ಜನರ ಮನೆಗಳಿಗೆ ನೀರು ನುಗ್ಗಿದೆ. ಶಿಶುವಿಹಾರ ಶಾಲೆಯ ಹಿಂದುಗಡೆಯ ತಗ್ಗು ಪ್ರದೆಶದ ಮನೆಗಳಿಗೆ ನೀರು ಬಂದು ಜನರು ರಾತ್ರಿ ಪ್ರಾಣಭೀತಿಗೆ ಸಿಲುಕಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಸಾವಿರಾರು ಹೆಕ್ಟೇರ್ ತೊಗರಿ ಹಾನಿ: ಕಾಗಿಣಾ ನದಿಯಲ್ಲಿ ಕಳೆದ ನಾಲ್ಕು ದಶಕದಿಂದ ಬಾರದ ಭಾರಿ ಪ್ರವಾಹ ಬಂದು ನದಿ ದಂಡೆಯ ಹೊಲಗಳು ದಾಟಿ ಪ್ರವಾಹದ ನೀರು ನುಗ್ಗಿ ಹರಿಯುತ್ತಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ತೊಗರಿ ಬೆಳೆಯು ಪ್ರವಾಹಕ್ಕೆ ಕೊಚ್ಚಿ ಹೋಗಿದೆ.

ದಾಖಲೆ ಮಳೆ: ಚಿತ್ತಾಪುರ ಪಟ್ಟಣದಲ್ಲಿ 124 ಮಿ.ಮೀ ದಾಖಲೆ ಮಳೆಯಾಗಿದೆ. ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿ ಬಿರುಗಾಳಿ ಸಹಿತ ಬಾರಿ ಮಳೆ ಸುರಿದಿದೆ. ಕಂಡು ಕೆಳರಿಯದ ರೀತಿಯಲ್ಲಿ ಮಳೆ ಸುರಿದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT