ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಗ್ರಾಮೀಣ ಕ್ಷೇತ್ರ ಸ್ಥಿತಿ–ಗತಿ: ಒಡೆದ ಮನೆಯಂತಾದ ಬಿಜೆಪಿ

ಮತ್ತೆ ಗೆಲ್ಲುವ ಸಿದ್ಧತೆಯಲ್ಲಿ ಮತ್ತಿಮಡು; ಕ್ಷೇತ್ರ ಕಿತ್ತುಕೊಳ್ಳಲು ಕಾಂಗ್ರೆಸ್ ಯತ್ನ
Last Updated 9 ಫೆಬ್ರುವರಿ 2023, 5:55 IST
ಅಕ್ಷರ ಗಾತ್ರ

ಕಲಬುರಗಿ: ಎರಡನೇ ಬಾರಿ ಗೆಲುವು ಸಾಧಿಸುವ ತವಕದಲ್ಲಿರುವ ಗುಲಬರ್ಗಾ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಅವರ ಯತ್ನಕ್ಕೆ ಇತ್ತೀಚೆಗೆ ಪಕ್ಷದಲ್ಲಿ ನಡೆದ ಬೆಳವಣಿಗೆಗಳು ಅಡ್ಡಗಾಲು ಆಗುವ ಸಾಧ್ಯತೆಗಳಿವೆ. ಇದನ್ನು ಮತ್ತಿಮಡು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಅವರ ಗೆಲುವು–ಸೋಲು ನಿರ್ಧಾರವಾಗಲಿದೆ.

ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಓಡಾಡಿ ಅವರು ಆಹಾರದ ಕಿಟ್‌ಗಳನ್ನು ನೀಡಿದ್ದರು. ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷದಿಂದ ಕಮಲಾಪುರ ತಾಲ್ಲೂಕಿನ ಪಕ್ಷದ ಮುಖಂಡ ರವಿ ಬಿರಾದಾರ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.ಇದಕ್ಕೆ ಮತ್ತಿಮಡು ಅವರ ಚಿತಾವಣೆಯೇ ಕಾರಣ ಎಂಬ ಬಿರಾದಾರ ಅವರ ಬೆಂಬಲಿಗರು ಆರೋಪಿಸುತ್ತಾರೆ.

ಮತ್ತೊಂದೆಡೆ ಪಕ್ಷದ ಎಸ್‌ಸಿ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಅವರು ಗ್ರಾಮೀಣ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಪಕ್ಷದ ಹಾಲಿ ಶಾಸಕರಿದ್ದರೂ ತಮಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆಯನ್ನು ವರಿಷ್ಠರ ಮುಂದೆ ಇರಿಸಿದ್ದಾರೆ. ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಷ್ಠಗಿ ಹಾಗೂ ಪಕ್ಷದ ಇತರ ಮುಖಂಡರು ಕಲಬುರಗಿ ಗ್ರಾಮೀಣ ಕ್ಷೇತ್ರವನ್ನು ಗಮನದಲ್ಲಿರಿಸಿಕೊಂಡು ಜಿಲ್ಲೆಯಲ್ಲಿ ಕ್ಷೇತ್ರವೊಂದಕ್ಕೆ ಪರಿಶಿಷ್ಟ ಬಲಗೈ ಪಂಗಡದವರಿಗೆ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದ್ದಾರೆ.

ಮತ್ತೊಂದೆಡೆ ಕ್ಷೇತ್ರದಿಂದ ಆಯ್ಕೆಯಾಗಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ರೇವು ನಾಯಕ ಬೆಳಮಗಿ ಅವರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಬಂಜಾರ ಸಮುದಾಯದ ಮತಗಳು ನಿರ್ಣಾಯಕವಾಗಲಿವೆ.

ಹೀಗಾಗಿ ಈ ಬಾರಿ ಬೆಳಮಗಿ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಈ ಕ್ಷೇತ್ರದಿಂದ ಬೆಳಮಗಿ ಅವರಿಗೆ ಟಿಕೆಟ್ ಸಿಗುವುದೋ ಅಥವಾ ಕಳೆದ ಬಾರಿ ಪರಾಭವಗೊಂಡ ಅಭ್ಯರ್ಥಿ ವಿಜಯಕುಮಾರ್ ಜಿ. ರಾಮಕೃಷ್ಣ ಅವರಿಗೆ ಸಿಗುವುದೋ ಎಂಬ ಬಗ್ಗೆ ಪಕ್ಷ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಇದೇ ತಮ್ಮ ಕೊನೆಯ ಚುನಾವಣೆಯಾಗಲಿದ್ದು, ಒಂದು ಬಾರಿ ಅವಕಾಶ ನೀಡುವಂತೆ ಪಕ್ಷದ ವರಿಷ್ಠರಿಗೆ ದುಂಬಾಲು ಬಿದ್ದ ಕಾರಣ ಬೆಳಮಗಿ ಅವರಿಗೆ ಟಿಕೆಟ್ ಸಿಗಲಿದೆ ಎಂಬ ಭರವಸೆ ಇರುವ ಕಾರಣ ಅವರ ಬೆಂಬಲಿಗರು ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ. ವಿಜಯಕುಮಾರ್ ಸಹ ತಮ್ಮ ಪ್ರಯತ್ನ ನಡೆಸಿದ್ದಾರೆ.

ಜೆಡಿಎಸ್‌ಗೆ ಗ್ರಾಮೀಣ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ನೆಲೆ ಇಲ್ಲ. ಜೆಡಿಎಸ್, ಆಮ್ ಆದ್ಮಿ ಪಾರ್ಟಿ, ಬಿಎಸ್ಪಿ, ಎಡ‍‍ಪಕ್ಷಗಳಾದ ಸಿಪಿಐ, ಸಿಪಿಐಂ, ಎಸ್‌ಯುಸಿಐ ಕಮ್ಯುನಿಸ್ಟ್ ಸೇರಿದಂತೆ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿ ಯಾರೆಂದು ಇನ್ನೂ ಘೋಷಿಸಿಲ್ಲ.

ಬಸವರಾಜ ಮತ್ತಿಮಡು ಅವರು ಮೂಲತಃ ಚಿತ್ತಾಪುರ ತಾಲ್ಲೂಕಿನವರು. ಹಾಗಾಗಿ, ಬಿಜೆಪಿಗೆ ಸೂಕ್ತ ಅಭ್ಯರ್ಥಿಗಳು ಸಿಗದಿದ್ದಾಗ, ಪಕ್ಷದಲ್ಲಿ ಚಿತ್ತಾಪುರ ಕ್ಷೇತ್ರದಿಂದ ಪ್ರಿಯಾಂಕ್ ಖರ್ಗೆ ಅವರ ಎದುರು ಮತ್ತಿಮಡು ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಪಕ್ಷ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದು ಮಾಹಿತಿ ಪ್ರಕಾರ, ಕುಡಚಿ ಶಾಸಕ ಪಿ. ರಾಜೀವ್ ಸಹ ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸಿದ್ದು, ಕ್ಷೇತ್ರದಲ್ಲಿ ಯಾವ ಸಮುದಾಯ ಎಷ್ಟು ಸಂಖ್ಯೆಯಲ್ಲಿದೆ ಎಂಬ ಮಾಹಿತಿಯನ್ನು ತಮ್ಮ ಆಪ್ತರ ಮೂಲಕ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ಮತ್ತಿಮಡು ಅವರು ಕ್ಷೇತ್ರವನ್ನು ಬದಲಿಸುವ ಚಿಂತನೆ ಮಾಡುತ್ತಿಲ್ಲ ಎನ್ನುತ್ತವೆ ಅವರ ಆಪ್ತ ಮೂಲಗಳು.

ನಾಲ್ಕು ತಾಲ್ಲೂಕುಗಳಲ್ಲಿ ಹರಡಿದ ಕ್ಷೇತ್ರ

ಒಂದು ಕಾಲಕ್ಕೆ ಕಲಬುರಗಿ ಹಾಗೂ ಶಹಾಬಾದ್ ಕ್ಷೇತ್ರದಲ್ಲಿ ಹರಿದು ಹಂಚಿಹೋಗಿದ್ದ ಪ್ರದೇಶಗಳನ್ನು ಸೇರಿಸಿ 2008ರಲ್ಲಿ ಗುಲಬರ್ಗಾ ಗ್ರಾಮೀಣ ಕ್ಷೇತ್ರ ಎಂದು ನಾಮಕರಣ ಮಾಡಲಾಗಿದೆ. ಕಮಲಾಪುರ, ಆಳಂದ, ಕಲಬುರಗಿ ಹಾಗೂ ಶಹಾಬಾದ್ ತಾಲ್ಲೂಕಿನ ಹಲವು ಗ್ರಾಮಗಳು ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ. ಹೀಗಾಗಿ, ಇಲ್ಲಿ ಶಾಸಕರಾಗಿ ಆಯ್ಕೆಯಾದವರು ನಾಲ್ಕು ತಾಲ್ಲೂಕು ಪಂಚಾಯಿತಿಗಳ ಕೆಡಿಪಿ ಸಭೆಯನ್ನು ನಡೆಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT